More

    ಅಪಘಾತ, ತಮಿಳುನಾಡಿನಲ್ಲಿ ರಾಜ್ಯದ ಇಬ್ಬರು ಪೊಲೀಸರು ಸಾವು

    ಬೆಂಗಳೂರು: ತಮಿಳುನಾಡಿನ ಧರ್ಮಪುರಿಗೆ ಚುನಾವಣಾ ಕರ್ತವ್ಯಕ್ಕೆ ತೆರಳಿದ್ದ ಕರ್ನಾಟಕ ಮೀಸಲು ಪಡೆಯ ಹಿರಿಯ ಅಧಿಕಾರಿ ಮತ್ತು ಕಾನ್‌ಸ್ಟೆಬಲ್ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದು, ಮತ್ತೊಬ್ಬ ಹಿರಿಯ ಅಧಿಕಾರಿಯೊಬ್ಬರು ಗಾಯಗೊಂಡಿದ್ದಾರೆ.

    ಕರ್ನಾಟಕ ಮೀಸಲು ಪಡೆಯ ಕೋರಮಂಗಲದಲ್ಲಿರುವ ೩ನೇ ಬೆಟಾಲಿಯನ್‌ನ ೩ನೇ ಸಹಾಯಕ ಕಮಾಂಡೆಂಟ್ ಟಿ.ಪ್ರಭಾಕರ್ ಮತ್ತು ವಿಜಯಪುರದ ಇಂಡಿಯನ್ ರಿಸರ್ವ್ ಬೆಟಾಲಿಯನ್(ಐಆರ್‌ಬಿ) ಕಾನ್‌ಸ್ಟೆಬಲ್ ವಿಠಲ್ ಗಡಾಧರ್ ಎಂಬುವರು ಮೃತಪಟ್ಟಿದ್ದಾರೆ. ಜತೆಗೆ ವಿಜಯಪುರದ ಐಆರ್‌ಬಿ ಡೆಪ್ಯೂಟಿ ಕಮಾಂಡೆಂಟ್ ಯು.ಎನ್.ಹೇಮಂತ್ ಕುಮಾರ್ ಅವರಿಗೆ ಗಂಭೀರ ಗಾಯಗಳಾಗಿದ್ದು, ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.

    ತಮಿಳುನಾಡು ಕಾನ್‌ಸ್ಟೆಬಲ್ ಸಾವು:
    ಇದೇ ವೇಳೆ ತಮಿಳುನಾಡಿನ ಮೀಸಲು ಪಡೆಯ ಕಾನ್‌ಸ್ಟೆಬಲ್ ದಿನೇಶ್ ಎಂಬುವರು ಮೃತಪಟ್ಟಿದ್ದಾರೆ. ಪೊಲೀಸ್ ಕಾನ್‌ಸ್ಟೆಬಲ್ ಜಯಕುಮಾರ್ ಗಂಭೀರ ಗಾಯಗೊಂಡಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಕೆಎಸ್‌ಆರ್‌ಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ೧೦ ದಿನಗಳ ಹಿಂದೆ ಕೆಎಸ್‌ಆರ್‌ಪಿಯ ತುಕಡಿಯನ್ನು ತಮಿಳುನಾಡಿನ ಧರ್ಮಪುರಿಗೆ ನಿಯೋಜಿಸಲಾಗಿತ್ತು. ಅದಕ್ಕೆ ಹೇಮಂತ್ ಕುಮಾರ್ ಮುಂದಾಳತ್ವ ವಹಿಸಿದ್ದರು. ಗುರುವಾರ ಸಂಜೆ ೫.೩೦ರ ಸುಮಾರಿಗೆ ತಿರುವಣ್ಣಮಲೈನಿಂದ ದಿಂಡಿವಣ್ಣಂ ಕಡೆಗೆ ಜೀಪ್‌ನಲ್ಲಿ ಐವರು ಅಧಿಕಾರಿ ಮತ್ತು ಸಿಬ್ಬಂದಿ ತೆರಳುತ್ತಿದ್ದರು. ಪ್ರಭಾಕರ್ ಜೀಪ್‌ನ ಮುಂಭಾಗ ಕುಳಿತಿದ್ದರು. ಹಿಂಭಾಗದಲ್ಲಿ ವಿಠಲ್, ಹೇಮಂತ್ ಹಾಗೂ ತಮಿಳುನಾಡಿನ ಸಿಬ್ಬಂದಿ ಕುಳಿತಿದ್ದರು. ಮಾರ್ಗ ಮಧ್ಯೆ ಅತೀವೇಗವಾಗಿ ಬಂದ ತಮಿಳುನಾಡಿನ ಬಸ್ ಮುಖಾಮುಖಿ ಡಿಕ್ಕಿ ಹೊಡೆದಿದೆ. ಪರಿಣಾಮ ಪ್ರಭಾಕರ್, ವಿಠಲ್, ತಮಿಳುನಾಡಿನ ದಿನೇಶ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

    ಘಟನೆ ಬಗ್ಗೆ ಸಂಪೂರ್ಣ ಮಾಹಿತಿ ಸಂಗ್ರಹಿಸಲು ಕೆಎಸ್‌ಆರ್‌ಪಿಯ ಹಿರಿಯ ಅಧಿಕಾರಿ ಭೀಮಪ್ಪ ಎಂಬುವರನ್ನು ನಿಯೋಜಿಸಲಾಗಿದ್ದು, ಸ್ಥಳಕ್ಕೆ ತೆರಳಿದ್ದಾರೆ. ಬಳಿಕ ಅಧಿಕಾರಿ-ಸಿಬ್ಬಂದಿಯ ಮರಣೋತ್ತರ ಪರೀಕ್ಷೆ ಹಾಗೂ ಮೃತದೇಹಗಳನ್ನು ರಾಜ್ಯಕ್ಕೆ ತರುವ ವ್ಯವಸ್ಥೆ ಮಾಡಲಿದ್ದಾರೆ ಎಂದು ಕೆಎಸ್‌ಆರ್‌ಪಿಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts