More

    ದೌರ್ಜನ್ಯಕ್ಕೀಡಾಗಿದ್ದ ಮಕ್ಕಳಿಬ್ಬರ ರಕ್ಷಣೆ

    ಬೋರಗಾಂವ: ಸಮೀಪದ ಡೊಣೆವಾಡಿ ಗ್ರಾಮದ ಲಕ್ಷ್ಮೀ ನಗರದಲ್ಲಿ ತಂದೆ ಹಾಗೂ ಮಲತಾಯಿ ದೌರ್ಜನ್ಯಕ್ಕೀಡಾಗಿದ್ದ ಇಬ್ಬರು ಮಕ್ಕಳನ್ನು ಮಕ್ಕಳ ಸಹಾಯವಾಣಿ ಅಧಿಕಾರಿಗಳು ಹಾಗೂ ಸದಲಗಾ ಪೊಲೀಸರು ಶನಿವಾರ ರಕ್ಷಿಸಿದ್ದು, ಮಕ್ಕಳ ಕಲ್ಯಾಣ ಇಲಾಖೆಗೆ ಒಪ್ಪಿಸಿದ್ದಾರೆ. ಗ್ರಾಮದ ಅಪರಿಚಿತ ವ್ಯಕ್ತಿಯೊಬ್ಬ ಮಕ್ಕಳ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು, ಸಮರ್ಥ ತಾನಾಜಿ ಕಾಂಬಳೆ (8) ಹಾಗೂ ಸಂಸ್ಕಾರ ತಾನಾಜಿ ಕಾಂಬಳೆ (4) ಎಂಬ ಮಕ್ಕಳನ್ನು ರಕ್ಷಿಸಿದ್ದಾರೆ.

    ತಾನಾಜಿ ಕಾಂಬಳೆ ತನ್ನ ಎರಡನೇ ಪತ್ನಿ ಜತೆಗೆ ಡೊಣೆವಾಡಿಯಲ್ಲಿ ಜೀವನ ನಡೆಸುತ್ತಿದ್ದ. ಪ್ರತಿದಿನ ಸಾರಾಯಿ ಕುಡಿದು ಬಂದು ಮಕ್ಕಳಿಗೆ ಹೊಡೆಯುವುದು, ಕಚ್ಚುವುದು, ಬೆಂಕಿಯಿದ ಸುಡುವುದು ಮಾಡುತ್ತಿದ್ದ. ಮಲತಾಯಿ ಕೂಡ ಮಕ್ಕಳ ಮೇಲೆ ದೈಹಿಕ ದೌರ್ಜನ್ಯ ಎಸಗುತ್ತಿದ್ದಳು. ಈ ದೌರ್ಜನ್ಯ ನೋಡಿ ಬೇಸತ್ತಿದ್ದ ಸ್ಥಳೀಯರೊಬ್ಬರು ಮಕ್ಕಳ ಸಹಾಯವಾಣಿ (109)ಗೆ ಕರೆ ಮಾಡಿದ್ದರು.

    ಇಲಾಖೆ ಅಧಿಕಾರಿ ಎಸ್.ಎಸ್.ಹಿರೇಮಠ ಅವರು ಮಕ್ಕಳ ಅಜ್ಜಿ ರಂಜನಾ ಕಾಂಬಳೆ ಹೇಳಿಕೆ ಪಡೆದು, ಸದಲಗಾ ಪೊಲೀಸರ ಸಹಾಯದಿಂದ ಮಕ್ಕಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ನಂತರ ಸ್ಥಳೀಯ ಗ್ರಾಪಂನಲ್ಲಿ ಲಿಖಿತ ಹೇಳಿಕೆ ಪಡೆದು, ಬೆಳಗಾವಿಯ ಮಕ್ಕಳ ಸಮಿತಿಗೆ ಮಕ್ಕಳನ್ನು ಹಸ್ತಾಂತರಿಸಲಾಗಿದೆ. ಮಕ್ಕಳ ಸಮಿತಿ ಸಂಯೋಜಕ ಎಂ.ಕೆ. ಕುಂದರಗಿ ಪ್ರತಿಕ್ರಿಯಿಸಿ, ದೈಹಿಕ ಹಾಗೂ ಮಾನಸಿಕ ದೌರ್ಜನ್ಯಕ್ಕೆ ಒಳಗಾದ ಈ ಮಕ್ಕಳಿಗೆ ಶಿಕ್ಷಣ, ವಸತಿ, ಊಟದ ವ್ಯವಸ್ಥೆ ಮಾಡಲಾಗುತ್ತದೆ.

    ಡೊಣೆವಾಡಿ ಗ್ರಾಮದಲ್ಲಿ ಮಕ್ಕಳ ಮೇಲೆ ದೌರ್ಜನ್ಯ ನಡೆಯುತ್ತಿರುವ ಕುರಿತು ಮಾಹಿತಿ ಬಂದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿ ಮಕ್ಕಳನ್ನು ರಕ್ಷಿಸಿದ್ದೇವೆ ಎಂದು ತಿಳಿಸಿದರು. ಶಿವಲೀಲಾ ಹಿರೇಮಠ, ಪೊಲೀಸ್ ಅಧಿಕಾರಿ ಡಿ.ಡಿ. ನಾಗನಗೌಡರ, ಗ್ರಾಮ ಪಂಚಾಯಿತಿ ಸಹಾಯಕ ಬಬನ್ ಸುತಾರ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts