More

    ಶೋಷಕಿಯಾದ ಶಿಕ್ಷಕಿ: ಆ ಕ್ಷಣ..

    ಶೋಷಕಿಯಾದ ಶಿಕ್ಷಕಿ: ಆ ಕ್ಷಣ..ಮೂವತ್ತಾರು ವರ್ಷದ ಶೀಲಾ ಮಹಾನಗರವೊಂದರ ಖ್ಯಾತ ಖಾಸಗಿ ಶಾಲೆಯಲ್ಲಿ ಗಣಿತ ಮತ್ತು ವಿಜ್ಞಾನ ವಿಷಯಗಳ ಶಿಕ್ಷಕಿಯಾಗಿದ್ದಳು. ಆಕೆಯ ಗಂಡ ಸುಕುಮಾರ ಪ್ರವಾಸಿ ಸೇಲ್ಸ್​ಮನ್ ಆಗಿದ್ದು ತಿಂಗಳಿಗೆ 20 ದಿನಗಳ ಕಾಲ ಮನೆಯಿಂದ ಹೊರಗಿರುತ್ತಿದ್ದ. ಅವರಿಗೆ 10 ಮತ್ತು 8 ವರ್ಷ ವಯಸ್ಸಿನ ಇಬ್ಬರು ಹೆಣ್ಣು ಮಕ್ಕಳಿದ್ದು ಅವರಿಬ್ಬರೂ ಶೀಲಾಳಿದ್ದ ಶಾಲೆಯಲ್ಲೇ ಕಲಿಯುತ್ತಿದ್ದರು. ಶೀಲಾ ಮನೆಯಲ್ಲಿ ವಿದ್ಯಾರ್ಥಿಗಳಿಗೆ ಟ್ಯೂಷನ್ ಹೇಳುತ್ತಿದ್ದಳು. ಶೀಲಾಳ ಎದುರು ಮನೆಯಲ್ಲಿ ಶಾಂತಾರಾಮ್ ಎಂಬ ಬ್ಯಾಂಕ್ ಅಧಿಕಾರಿಯಿದ್ದು ಅವನ ಪತ್ನಿ ಸವಿತಾ ಗೃಹಿಣಿಯಾಗಿದ್ದಳು. ಅವರಿಗೂ ಇಬ್ಬರು ಮಕ್ಕಳಿದ್ದರು- 8ನೇ ತರಗತಿಯಲ್ಲಿದ್ದ 14 ವರ್ಷದ ವಿಜಯ್ ಮತ್ತು 6ನೇ ತರಗತಿಯಲ್ಲಿದ್ದ 12 ವರ್ಷದ ವಿಮಲಾ. ಸವಿತಾ ಮತ್ತು ಶೀಲಾ ಸನ್ಮಿತ್ರರಾಗಿದ್ದು ಬಿಡುವಾದಾಗ ಶಾಪಿಂಗ್, ಸಿನಿಮಾಕ್ಕೆ ಹೋಗುತ್ತಿದ್ದರು.

    ಒಂದು ದಿನ ಸವಿತಾ ‘ನನ್ನ ಮಗನಿಗೆ ಗಣಿತ ತಲೆಗೇ ಹತ್ತುತ್ತಿಲ್ಲ, ಅವನ ಶಾಲೆಯಲ್ಲಿ ಸರಿಯಾಗಿ ಪಾಠ ಹೇಳಿಕೊಡುತ್ತಿಲ್ಲ, ನೀನೇನಾದರೂ ಅವನಿಗೆ ಸಹಾಯ ಮಾಡುವೆಯಾ?’ ಎಂದು ಶೀಲಾಳನ್ನು ಕೇಳಿದಳು. ‘ಅದಕ್ಕೇನಂತೆ, ನಾನು ಇಷ್ಟೊಂದು ಮಕ್ಕಳಿಗೆ ಪಾಠ ಹೇಳಿಕೊಡುತ್ತೇನೆ, ವಿಜಯ್ನನ್ನೂ ಕಳಿಸು. ಆದರೆ 10ನೆಯ ತರಗತಿಯ ವಿದ್ಯಾರ್ಥಿಗಳು ಪಾಠಕ್ಕೆ ಬರುವುದರಿಂದ ಅವರ ಬ್ಯಾಚಿನ ಪಾಠವಾದ ನಂತರ ವಿಜಯನಿಗಾಗಿ ವಿಶೇಷವಾಗಿ ಪಾಠ ಹೇಳಬೇಕು, ಅಡ್ಜಸ್ಟ್ ಮಾಡಿಕೊಳ್ಳುವೆ’ ಎಂದಳು. ‘ಮಗನ ಜತೆಗೆ ಮಗಳನ್ನೂ ಕಳುಹಿಸಲೇ, ಅವಳಿಗೂ ವಿಜ್ಞಾನದ ವಿಷಯ ಸ್ವಲ್ಪ ಕಷ್ಟವಾಗುತ್ತಿದೆ’ ಎಂದು ಸವಿತಾ ಕೇಳಿದಾಗ, ‘ಆಗಲಿ ಕಳುಹಿಸು, ನಿನಗಾಗಿ ಶುಲ್ಕದ ಅರ್ಧದಷ್ಟನ್ನೇ ತೆಗೆದುಕೊಳ್ಳುತ್ತೇನೆ’ ಎಂದಳು ಶೀಲಾ. ಅವರ ಪಾಠಕ್ಕೆ ನಿಗದಿಪಡಿಸಿದ್ದ ಸಮಯ ರಾತ್ರಿ 7.30.

    ವಿಜಯ್ ಮತ್ತು ವಿಮಲಾ ಸಂಜೆ ಶಾಲೆಯಿಂದ ವಾಪಸಾದ ನಂತರ ಆಟವಾಡಿ ಆನಂತರ ಟ್ಯೂಷನ್ನಿಗೆ ಹೋಗಿ ರಾತ್ರಿ 9ಕ್ಕೆ ವಾಪಸಾಗತೊಡಗಿದರು. ಹೀಗೆ ಮೂರು ತಿಂಗಳು ಕಳೆದ ನಂತರ ಒಂದು ದಿನ ಶೀಲಾ ಸವಿತಾಳನ್ನು ಉದ್ದೇಶಿಸಿ, ‘ರಾತ್ರಿ ವೇಳೆಗೆ ವಿಮಲಾ ಸುಸ್ತಾಗಿರುತ್ತಾಳೆ. ಪಾಠದಲ್ಲಿ ಆಸಕ್ತಿಯನ್ನಿಡುವುದಲ್ಲ. ನನಗೂ ನಿನ್ನ ಇಬ್ಬರೂ ಮಕ್ಕಳಿಗೆ ಒಟ್ಟಿಗೆ ಪಾಠ ಹೇಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ವಿಮಲಾಳನ್ನು ಬೇರೆ ಕಡೆ ಟ್ಯೂಷನ್​ಗೆ ಕಳುಹಿಸು. ಆಗ ನಾನು ವಿಜಯ್ನ ಪಾಠದ ಬಗ್ಗೆ ಹೆಚ್ಚು ಗಮನ ಹರಿಸಲು ಸಾಧ್ಯವಾಗುತ್ತದೆ’ ಎಂದಳು. ಈ ಕಾರಣಕ್ಕಾಗಿ ವಿಜಯ್ ಒಬ್ಬನೇ ಟ್ಯೂಷನ್​ಗೆ ಹೋಗಿಬರಲಾರಂಭಿಸಿದ.

    2018ರ ಅಂತ್ಯ ಭಾಗದಲ್ಲಿ, ಅಂದರೆ ಟ್ಯೂಷನ್​ಗೆ ಹೋಗತೊಡಗಿ 6 ತಿಂಗಳ ನಂತರ, ವಿಜಯ್ಗೆ ಆಟಪಾಠಗಳಲ್ಲಿ ಆಸಕ್ತಿಯೇ ಇಲ್ಲದಂತಾಯಿತು. ಆತ ಅದೇಕೋ ಮಂಕಾಗಿರುತ್ತಿದ್ದ. ಸದಾಕಾಲ ಮೊಬೈಲ್ ನೋಡುವುದರಲ್ಲಿಯೇ ಮಗ್ನನಾಗಿರುತ್ತಿದ್ದ. ಎಷ್ಟು ಬುದ್ಧಿವಾದ ಹೇಳಿದರೂ ಆತ ಮೊಬೈಲ್ ಚಟ ಬಿಟ್ಟಿರಲಿಲ್ಲ. ಇದಲ್ಲದೇ ಆತ ರಾತ್ರಿ ಟ್ಯೂಷನ್ ಮುಗಿಸಿ ಮನೆಗೆ ವಾಪಸಾದ ನಂತರ ವಿಚಿತ್ರ ರೀತಿಯಲ್ಲಿ ವರ್ತಿಸುತ್ತಿದ್ದ. ಅವನ ವರ್ತನೆಗೆ ಕಾರಣ ಕೇಳಿದರೆ ಮೌನಕ್ಕೆ ಶರಣಾಗುತ್ತಿದ್ದ. ಆ ವರ್ಷ 8ನೇ ತರಗತಿಯ ಅಂತಿಮ ಪರೀಕ್ಷೆಗಳಲ್ಲಿ ವಿಜಯ್ ಗಣಿತ ಮತ್ತು ವಿಜ್ಞಾನ ಎರಡೂ ವಿಷಯಗಳಲ್ಲಿ ಫೇಲಾದ. ಟ್ಯೂಷನ್ ಹೇಳಿಸಿಯೂ ಮಗ ಫೇಲಾದದ್ದು ಶಾಂತಾರಾಮ್ ದಂಪತಿಗೆ ಗಾಬರಿ ತಂದಿತು. ‘ಈ ಎರಡೂ ವಿಷಯಗಳಲ್ಲಿ ವೀಕ್ ಆಗಿದ್ದೆ ಎಂದೇ ಇಷ್ಟು ಹಣ ಕೊಟ್ಟು ಪಾಠಕ್ಕೆ ಕಳುಹಿಸಿದ್ದು, ಆದರೂ ಫೇಲಾಗಿರುವೆಯಲ್ಲಾ’ ಎಂದು ಮಗನನ್ನು ತರಾಟೆಗೆ ತೆಗೆದುಕೊಂಡರು.

    ಸವಿತಾ ಶೀಲಾಳನ್ನು ವಿಚಾರಿಸಿದಾಗ, ‘ನಾನಂತೂ ಬಿಡುವಿಲ್ಲದಿದ್ದರೂ ಪಾಠ ಹೇಳಲು ಒಪ್ಪಿಕೊಂಡೆ. ಆದರೆ ಆತನಿಗೆ ಪಾಠದಲ್ಲಿ ಆಸಕ್ತಿಯೇ ಇಲ್ಲ. ಇನ್ನು ಮುಂದೆ ಹೆಚ್ಚಿನ ಮುತುವರ್ಜಿ ವಹಿಸಿ, ಅರ್ಧ ಗಂಟೆ ಹೆಚ್ಚಾಗಿ ಪಾಠ ಹೇಳುವೆ. ನಾಳೆಯಿಂದ 7 ಗಂಟೆಗೇ ಟ್ಯೂಷನ್ನಿಗೆ ಕಳಿಸು’ ಎಂದಳು ಶೀಲಾ. ಆದರೆ ವಿಜಯ್ ತಾನು ಇನ್ನು ಟ್ಯೂಷನ್ನಿಗೆ ಹೋಗುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿಬಿಟ್ಟ.

    ನೀನು ಫೇಲಾಗಿರುವ ಕಾರಣ ಪಾಠಕ್ಕೆ ಹೋಗದೆ ವಿಧಿಯಿಲ್ಲವಲ್ಲ ಎಂದಾಗ, ‘ಶೀಲಾ ಮೇಡಂ ಮನೆಗಂತೂ ಪಾಠಕ್ಕೆ ಹೋಗಲಾರೆ’ ಎಂದ. ‘ಬೇರೆ ಟೀಚರ್ ಮನೆಗೆ ಹೋದರೆ ಸಾವಿರಾರು ರೂ ಫೀಸ್ ತೆರಬೇಕು, ಶೀಲಾ ಬಳಿಯೇ ಟ್ಯೂಷನ್ನಿಗೆ ಹೋಗುವುದು ಒಳ್ಳೆಯದು’ ಎಂದರೂ ವಿಜಯ್ ಒಪ್ಪಲಿಲ್ಲ.

    ಮಗನ ಈ ವರ್ತನೆಯ ಬಗ್ಗೆ ಶಾಂತಾರಾಮ್ ಗೆಳೆಯರೊಬ್ಬರ ಬಳಿ ಪ್ರಸ್ತಾಪಿಸಿದಾಗ ಅವರು ವಿಜಯ್ನನ್ನು ಮಕ್ಕಳ ಆಪ್ತ ಸಮಾಲೋಚಕರ ಬಳಿ ಕಳಿಸಲು ಸೂಚಿಸಿದರು. ಮನಃಶಾಸ್ತ್ರಜ್ಞರೊಬ್ಬರ ಬಳಿ ಕರೆದೊಯ್ದಾಗ ಅವರ ಮುಂದೆ ವಿಜಯ್ ಹೀಗೆಂದ: ‘ಪಾಠಕ್ಕೆ ಹೋಗಲಾರಂಭಿಸಿದ ಕೆಲವು ವಾರಗಳ ನಂತರ ಶೀಲಾ ಮೇಡಂ ತಮ್ಮ ಮೈಯನ್ನು ನನ್ನ ಮೈಗೆ ತಾಕಿಸಿಕೊಂಡು ಪಾಠಹೇಳತೊಡಗಿದರು. ನನ್ನ ತಂಗಿಯನ್ನು ಪಾಠದಿಂದ ಬಿಡಿಸಿದ ಮೇಲೆ ಅವರು ನನ್ನ ಜೊತೆ ಇನ್ನೂ ವಿಚಿತ್ರವಾಗಿ ನಡೆದುಕೊಳ್ಳಲಾರಂಭಿಸಿದರು. ಮನೆಯ ಹಾಲ್​ನಲ್ಲಿ ಪಾಠಹೇಳಿದರೆ ನಾನು ಏಕಾಗ್ರತೆಯಿಂದ ಇರುವುದಿಲ್ಲವೆಂದು ನನ್ನನ್ನು ಬೆಡ್​ರೂಂಗೆ ಕರೆದೊಯ್ದು ಬಾಗಿಲನ್ನು ಹಾಕಿಕೊಂಡು ಪಾಠಹೇಳಲಾರಂಭಿಸಿದರು. ಅನೇಕ ಸಲ ಮೈ ನೋಯುತ್ತಿದೆ ಎಂದು ಹೇಳಿ ಮೈ ನೀವಲು ಹೇಳುತ್ತಿದ್ದರು. ಮೊಬೈಲ್ ಫೋನಿನಲ್ಲಿ ಅಶ್ಲೀಲ ವಿಡಿಯೋ ಕ್ಲಿಪ್​ಗಳನ್ನು ತೋರಿಸತೊಡಗಿದರು. ನಾನು ಪ್ರತಿಭಟಿಸಿದರೂ ಅವರು ಕೇಳುತ್ತಿರಲಿಲ್ಲ. ಮುಂದೆ ಅಂತಹ ವಿಡಿಯೋಗಳನ್ನು ನೋಡುತ್ತಾ ನನಗೆ ಪಾಠದಲ್ಲಿ ಆಸಕ್ತಿಯೇ ಇಲ್ಲವಾಯಿತು. ಒಂದು ದಿನ ಮೇಡಂ ಒಂದು ಸಿಮ್ ಕೊಟ್ಟು ಅದನ್ನು ಮನೆಯಲ್ಲಿ ನನ್ನ ಫೋನಿಗೆ ಅಳವಡಿಸಿ ನೋಡಲು ಹೇಳಿದರು. ಅದರಲ್ಲಿ ಅಶ್ಲೀಲ ಚಿತ್ರಗಳ ಹಲವಾರು ವಿಡಿಯೋಗಳಿದ್ದವು. ಈ ವಿಷಯವನ್ನು ತಂದೆತಾಯಿಗೆ ಹೇಳಬೇಕೆಂದು ಯೋಚಿಸಿದರೂ ಹೆದರಿಕೆಯಾಗಿ ಹೇಳಲಿಲ್ಲ. ಈ ಕಾರಣದಿಂದ ನನಗೆ ಪಾಠ ಕಲಿಯುವುದರಲ್ಲಿ ಆಸಕ್ತಿಯೇ ಹೊರಟುಹೋಯಿತು.’

    ಆಪ್ತಸಮಾಲೋಚಕರ ಮೂಲಕ ಈ ವಿಷಯವನ್ನರಿತು ಗಾಬರಿಗೊಂಡ ಶಾಂತಾರಾಮ್ ಮುಂದೇನು ಮಾಡಬೇಕು ಎಂದು ತೋಚದೆ ಪತ್ನಿ ಮತ್ತು ಸ್ನೇಹಿತರಿಗೆ ತಿಳಿಸಿದರು. ಈ ವಿಷಯವನ್ನು ಹೀಗೆಯೇ ಬಿಡುವುದು ಸರಿಯಲ್ಲ, ನೀವು ಶೀಲಾಳನ್ನು ತರಾಟೆಗೆ ತೆಗೆದುಕೊಳ್ಳಬೇಕು ಎಂದು ಅವರು ಸೂಚಿಸಿದರು. ಅಂತೆಯೇ ಶಾಂತಾರಾಮ್ ಮತ್ತು ಸವಿತಾ, ಶೀಲಾಳ ಮನೆಗೆ ಹೋಗಿ ವಿಚಾರಿಸಿದಾಗ, ಆಕೆ ರಂಪಾಟ ಮಾಡಿ ಆರೋಪಗಳನ್ನೆಲ್ಲ ಅಲ್ಲಗಳೆದಳು. ವಿಜಯ್ ತಾನೇ ದಾರಿ ತಪ್ಪಿದ್ದು ನನ್ನ ಮೇಲೆ ಸುಳ್ಳು ಆರೋಪ ಹೊರಿಸುತ್ತಿದ್ದಾನೆ ಎಂದು ಅವನನ್ನೇ ದೂರಿ ಅಲ್ಲೇ ನಿಂತಿದ್ದ ವಿಜಯ್ನನ್ನು ತನ್ನ ರೂಮಿಗೆ ಕರೆದುಕೊಂಡು ಹೋಗಿ ಕೂಡಿಹಾಕಿ ರೂಮಿಗೆ ಬೀಗ ಹಾಕಿಬಿಟ್ಟಳು.

    ಕಂಗಾಲಾದ ವಿಜಯ್ನ ಮಾತಾಪಿತರು ಬೀಗ ತೆಗೆಯಲು ಎಷ್ಟು ಕೋರಿದರೂ ಶೀಲಾ ಒಪ್ಪದೆ ಕೀಲಿಕೈಯನ್ನು ತನ್ನ ಬ್ಲೌಸಿನಲ್ಲಿ ಅಡಗಿಸಿದಳು. ಬೀಗ ತೆಗೆಯದಿದ್ದರೆ ಪೊಲೀಸರನ್ನು ಕರೆಸಬೇಕಾಗುತ್ತದೆ ಎಂದರೂ ಆಕೆ ಜಗ್ಗಲಿಲ್ಲ. ಅಷ್ಟರಲ್ಲಿ ಗಲಾಟೆ ಕಂಡ ನೆರೆಹೊರೆಯವರು ಬಂದು ಎಲ್ಲರನ್ನೂ ಸಮಾಧಾನ ಮಾಡಿ ವಿಜಯ್ನನ್ನು ಬಂಧನದಿಂದ ಬಿಡಿಸಿದರು.

    ಮಾರನೆಯ ದಿನ ಶೀಲಾ ಸವಿತಾಳ ಮನೆಗೆ ಬಂದು, ತನಗೆ ವಿಜಯ್ನನ್ನು ಬಿಟ್ಟಿರಲು ಆಗುತ್ತಿಲ್ಲ. ಅವನನ್ನು ತನ್ನ ಬಳಿ ಪಾಠಕ್ಕೆ ಕಳುಹಿಸದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದಳು. ಶಾಂತಾರಾಮ್ ಒಪ್ಪದಿದ್ದಾಗ ಶೀಲಾ ಟೇಬಲ್ಲಿನ ಮೇಲಿದ್ದ ಕೆಮ್ಮಿನ ಔಷಧಿಯ ಬಾಟಲೊಂದನ್ನು ಕಂಡು ಅದರಲ್ಲಿದ್ದ ಔಷಧಿಯನ್ನು ಗಟಗಟನೇ ಕುಡಿದು ಕುಸಿದು ಬಿದ್ದಳು. ಗಾಬರಿಗೊಂಡ ಶಾಂತಾರಾಮ್ ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಿದಾಗ ಅಲ್ಲಿಗೆ ಧಾವಿಸಿದ ಪೊಲೀಸರು ಆಂಬುಲೆನ್ಸ್​ನಲ್ಲಿ ಶೀಲಾಳನ್ನು ಆಸ್ಪತ್ರೆಗೆ ದಾಖಲಿಸಿದರು. ಒಂದು ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಶೀಲಾ ಬಿಡುಗಡೆ ಹೊಂದಿದ ನಂತರ ಅವಳ ವಿರುದ್ಧ ಆತ್ಮಹತ್ಯೆ ಪ್ರಯತ್ನದ ಪ್ರಕರಣ ದಾಖಲಾಯಿತು. ಏತನ್ಮಧ್ಯೆ ಶಾಂತಾರಾಮ್ ತನ್ನ ಮಿತ್ರರ ಸಲಹೆಯಂತೆ, ಶೀಲಾ ವಿಜಯ್ನನ್ನು ಲೈಂಗಿಕವಾಗಿ ಶೋಷಿಸಿದ ಬಗ್ಗೆ ಪೊಲೀಸರಿಗೆ ದೂರು ನೀಡಿದ. ಪೊಲೀಸರು ಬಾಲಕನನ್ನು ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರುಪಡಿಸಿದರು. ಸಮಿತಿಯ ಮುಂದೆಯೂ ನಡೆದ ವಿಷಯವನ್ನು ವಿಜಯ್ ತಿಳಿಸಿದಾಗ, ಶೀಲಾಳ ಮೇಲೆ ಪೋಕ್ಸೋ ಕಾಯಿದೆಯಡಿ ದೂರು ದಾಖಲಾಯಿತು. ಶೀಲಾಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಯಿತು. ಸುಮಾರು ಒಂದು ವರ್ಷ ಕಾಲ ಆಕೆ ಜೈಲಿನಲ್ಲಿ ಕಳೆದಳು. ನ್ಯಾಯಾಲಯದಲ್ಲಿ ವಿಚಾರಣೆಗೆ ಬಂದಾಗ ಸೂಕ್ತ ಸಾಕ್ಷ್ಯಾಧಾರಗಳಿಲ್ಲವೆಂದು ಪ್ರಕರಣ ವಜಾಗೊಂಡಿತು. ಈ ತೀರ್ಪಿನ ವಿರುದ್ಧ ಹೈಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಲಾಗಿದೆ.

    ‘ಒಳ್ಳೆಯದು ಮತ್ತು ಕೆಟ್ಟದರ ನಡುವಿನ ಗೆರೆ ಪ್ರತಿಯೊಂದು ಮಾನವ ಹೃದಯದ ನಡುವೆಯೇ ಸಾಗುತ್ತದೆ. ಈ ಗೆರೆ ಅತ್ತಿಂದತ್ತ ಸರಿಯುತ್ತಲೇ ಇರುತ್ತದೆ. ಕಾಲ ಬದಲಾದಂತೆ ಅದರ ಸ್ಥಾನವೂ ಬದಲಾಗುತ್ತದೆ’ ಎಂದಿದ್ದಾನೆ ರಷ್ಯನ್ ಕಾದಂಬರಿಕಾರ ಅಲೆಕ್ಸಾಂಡರ್ ಸೋಲ್ಜೆನಿತ್ಸಿನ್. ಇಂತಹ ಸರಿಯುವಿಕೆಯಿಂದಲೇ ಶಿಕ್ಷಕಿಯಾಗಿದ್ದ ಶೀಲಾ ಶೋಷಕಿಯಾಗಿ ಪರಿವರ್ತನೆಗೊಂಡಳೇನೋ!

    (ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts