More

    ಒಂದೇ ದಿನ 8 ಜನರಿಗೆ ಕಚ್ಚಿದ ಬೀದಿನಾಯಿ

    ಸಕಲೇಶಪುರ: ಪಟ್ಟಣದಲ್ಲಿ ಮಂಗಳವಾರ ಒಂದೇ ದಿನ ಎಂಟು ಜನರನ್ನು ಬೀದಿನಾಯಿ ಕಚ್ಚಿ ಗಾಯಗೊಳಿಸಿದೆ.

    ಪಟ್ಟಣದ ಅರೇಹಳ್ಳಿ ಬೀದಿಯ ಕುಡಗರವಳ್ಳಿ ವೃತ್ತದಿಂದ ಹೊಸ ಬಸ್ ನಿಲ್ದಾಣದವರೆಗೆ ದಾಳಿ ನಡೆಸಿದ ಬೀದಿನಾಯಿ ಸಿಕ್ಕಸಿಕ್ಕವರನ್ನು ಕಚ್ಚಿ ಗಾಯಗೊಳಿಸಿದೆ. ಮೊದಲಿಗೆ ಕುಡಗರಹಳ್ಳಿ ವೃತ್ತದಲ್ಲಿ ಬಡಾವಣೆಯ ಶಾಲಾ ಶಿಕ್ಷಕಿ ಸಾಜೀಯಾ ಹಾಗೂ ಅದೇ ಶಾಲೆಯ ಅಡುಗೆ ಸಹಾಯಕಿ ಅಲಿಶಾ, ಬಡಾವಣೆಯ ನಿವಾಸಿ ಈಶ್ವರ ಅವರನ್ನು ಕಚ್ಚಿ ಗಾಯಗೊಳಿಸಿತು.

    ನಂತರ ಅರೇಹಳ್ಳಿ ಬೀದಿಯ ತೇಜಸ್ವಿ ವೃತ್ತದ ಬಳಿ ಬಸ್‌ಗಾಗಿ ಕಾಯುತ್ತಿದ್ದ ಅಕ್ಷತಾ ಹಾಗೂ ಪಾಲಾಕ್ಷ ಎಂಬುವವರನ್ನು ಗಾಯಗೊಳಿಸಿತು. ನಂತರ ಹಳೇ ಬಸ್ ನಿಲ್ದಾಣ ಸಮೀಪದ ಪೆಟ್ರೋಲ್ ಬಂಕ್ ಸಮೀಪ ಕಾರಿನಿಂದ ಇಳಿಯುತ್ತಿದ್ದ ಸುಳ್ಳಕ್ಕಿ ಗ್ರಾಮದ ದಮಯಂತಿ ಅವರನ್ನು ಕಚ್ಚಿತು.

    ಈ ವೇಳೆ ಸ್ಥಳದಲ್ಲಿದ್ದವರು ಅಟ್ಟಾಡಿಸಿದ ಪರಿಣಾಮ ಪೇರಿಕಿತ್ತ ನಾಯಿ ಪಟ್ಟಣದ ಗಂಧರ್ವ ಬಾರ್ ಸಮೀಪ ಸ್ನೇಹಿತರ ಬಳಿ ಮಾತನಾಡುತ್ತಿದ್ದ ಜಯಂತ್ ಅವರನ್ನು ಕಚ್ಚಿ ಗಾಯಗೊಳಿಸಿದೆ. ಇದಾದ ಬಳಿಕ ಹೊಸಬಸ್ ನಿಲ್ದಾಣ ಸಮೀಪ ಆಟೋ ಚಾಲಕರೊಬ್ಬರನ್ನು ಕಚ್ಚಿ ಗಾಯಗೊಳಿಸಿ ಬಿಳಿ ಬಣ್ಣದ ನಾಯಿ ಯಾರ ಕೈಗೂ ಸಿಗದೆ ಪರಾರಿಯಾಗಿದೆ. ಈಗ ಬಿಳಿಬಣ್ಣದ ನಾಯಿ ಕಂಡರೆ ಜನರು ಹೌಹಾರುತ್ತಿದ್ದಾರೆ.

    ಆಸ್ಪತ್ರೆಗೆ ಭೇಟಿ: ನಾಯಿ ಕಡಿತಕ್ಕೆ ಒಳಗಾದ ಜನರು ಪಟ್ಟಣದ ಕ್ರಾಫರ್ಡ್ ಆಸ್ಪತ್ರೆಯಲ್ಲಿ ಹೊರರೋಗಿಗಳಾಗಿ ದಾಖಲಾಗಿದ್ದರು. ವಿಷಯ ತಿಳಿದು ಆಸ್ಪತ್ರೆಗೆ ಭೇಟಿ ನೀಡಿದ ಶಾಸಕ ಸಿಮೆಂಟ್ ಮಂಜು ನಾಯಿ ಕಡಿತಕ್ಕೆ ಒಳಗಾದ ಜನರ ಆರೋಗ್ಯ ವಿಚಾರಿಸಿದರು. ಪುರಸಭೆ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಸಂಜೆ ವೇಳೆಗೆ ನಾಯಿಯನ್ನು ಸೆರೆ ಹಿಡಿಯಬೇಕು. ಇನ್ನೊಂದು ವಾರದಲ್ಲಿ ಎಲ್ಲ ಬೀದಿನಾಯಿಗಳಿಗೂ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ನಡೆಸಬೇಕು ಎಂದು ತಾಕೀತು ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts