More

    ಕ್ರಾಂತಿ ಕವಿಯಿಂದಲೇ ಮಧುರ ಪ್ರೇಮ ಗೀತೆ!

    “…ಕನ್ನಡ ನಾಡಿನ ಎಲ್ಲ ಜನತೆಗೆ ಚೋಮನ ಹೆಸರು ಕಥೆ ಗೊತ್ತು; ಚೋಮನ ಮಕ್ಕಳು ಹೇಳುವ ಕಥೆಯನು ಕೇಳಿರಿ ಸ್ವಾಮಿ ಈ ಹೊತ್ತು’ ಎನ್ನುತ್ತ ನೊಂದ ವರ್ಗದ ಅಂತರಾಳವನ್ನು ಸಮಾಜದ ಕಣ್ಣಿಗೆ ರಾಚುವಂತೆ ಹಿಡಿದು “ಯಾರಿಗೆ ಬಂತು ಎಲ್ಲಿಗೆ ಬಂತು ನಲವತ್ತೇಳರ ಸ್ವಾತಂತ್ರ್ಯ?’ ಎಂದು ಪ್ರಶ್ನಿಸಿದ ಕ್ರಾಂತಿಕಾರಿ ಕವಿ ಡಾ. ಸಿದ್ಧಲಿಂಗಯ್ಯ. ರಾಜ್ಯದ ದಲಿತ ಚಳವಳಿ ಸಾಗಿಬಂದ ಸುದೀರ್ ಹಾದಿಯಲ್ಲಿ ಈ ಅಪರೂಪದ ಕವಿಯ ನಿಗಿ ನಿಗಿ ಕೆಂಡದಂಥ ಕವಿತೆಗಳ ಕೊಡುಗೆ ದೊಡ್ಡದು. ಸಮುದಾಯದಲ್ಲಿ ಕಿಚ್ಚು, ಸ್ವಾಭಿಮಾನದ ಜಾಗೃತಿ ಮೂಡಿಸಲು ಸತ್ವಪೂರ್ಣ ಕಾವ್ಯಾಭಿವ್ಯಕ್ತಿಯಿಂದ ಒಡಲಾಳದ ಸಿಟ್ಟು&ಸೆಡವುಗಳನ್ನು ಹೊರಹಾಕಿ, ದಲಿತರ ನೋವನ್ನು ಸಮರ್ಥವಾಗಿ ಅರ ರೂಪಕ್ಕಿಳಿಸಿದವರು. ಭೌತಿಕವಾಗಿ ಅವರಿಲ್ಲದ ಈ ಹೊತ್ತಿನಲ್ಲಿ ಅವರ ಒಡನಾಡಿಗಳು ಇಲ್ಲಿ ಅರ ನಮನ ಸಲ್ಲಿಸಿದ್ದಾರೆ.

    | ನಾಗತಿಹಳ್ಳಿ ಚಂದ್ರಶೇಖರ್​

    ತಾತ್ವಿಕವಾಗಿ ಇದನ್ನು ಒಪ್ಪದಿರಬಹುದು. ಕೆಲವು ಸತ್ಯಗಳು ಒಪ್ಪಿಗೆಗೆ ಕಾಯುವುದಿಲ್ಲ. ಪ್ರೀತಿಯ ದಲಿತ ಕವಿ ಸಿದ್ಧಲಿಂಗಯ್ಯನವರು ಎಲ್ಲರನ್ನೂ ಅಪ್ಪಿಕೊಂಡ, ಒಪ್ಪಿಕೊಂಡ ಮತ್ತು ಎಲ್ಲಕ್ಕೂ ತೆರೆದುಕೊಂಡ “ಒಳಗೊಳ್ಳುವಿಕೆಯ’ ವ್ಯಕ್ತಿ. ಹೊಲೆಮಾದಿಗರ ಹಾಡು ಬರೆದ ಈ ಕ್ರಾಂತಿಕಾರಿ ಹೀಗೆ “ಇಂಕ್ಲೂಸಿವ್​ನೆಸ್​’ ಗುಣ ಹೊಂದಿದ್ದರಿಂದ ಅವರ ಬಗ್ಗೆ ಪ್ರೀತಿ ಮತ್ತು ಸಿಟ್ಟನ್ನು ಏಕಕಾಲಕ್ಕೆ ವ್ಯಕ್ತಪಡಿಸುವವರಿದ್ದರು. ಇದನ್ನೇ ನಾನು ತಾತ್ವಿಕವಾಗಿ ಒಪ್ಪದವರು ಎಂದಿದ್ದು. “ಇಕ್ಕರ್ಲಾ, ಒದೀರ್ಲಾ’ ಎಂದ ಕವಿಯೇ “ಆ ಬೆಟ್ಟದಲ್ಲಿ ಬೆಳದಿಂಗಳಲ್ಲಿ ಸುಳಿದಾಡಬೇಡ ಗೆಳತಿ’ ಎಂಬ ಸುಕೋಮಲ ಯಾತನಾಮಯ ಮಧುರಪ್ರೇಮ ಗೀತೆಯನ್ನು ಬರೆಯುತ್ತಿದ್ದರು. ನಾಲ್ಕು ದಶಕಗಳ ನಮ್ಮ ನಂಟಲ್ಲಿ ಈ ಎರಡೂ ಮುಖಗಳನ್ನು ನಾನು ಕುತೂಹಲಿಯಾಗಿ ಗಮನಿಸಿದ್ದೇನೆ.

    ಹಲವು ಚಳವಳಿಗಳು ಮೈದುಂಬಿ ಮೆರೆಯುತ್ತಿದ್ದ ಕಾಲವದು. ನವ್ಯೋತ್ತರವಾಗಿ ಬಂದ ಬಂಡಾಯ ಮತ್ತು ದಲಿತ ಚಳವಳಿಗಳೆರಡರಲ್ಲೂ ಸಿದ್ಧಲಿಂಗಯ್ಯನವರನ್ನು ಗುರ್ತಿಸಬಹುದು. ಬಂಡಾಯದಲ್ಲಿ ಫ್ಯೂಡಲ್​ ವರ್ಗವೂ ತೂರಿದ್ದರಿಂದ ತಮ್ಮ ದನಿ ತಾವೇ ಸ್ಥಾಪಿಸಿಕೊಳ್ಳುವ ನಿಟ್ಟಿನಲ್ಲಿ ದಲಿತ ಸಾಹಿತ್ಯ ಪಂಥ ಐಡೆಂಟಿಟಿ ಕಂಡುಕೊಂಡಿತು. ರೈತ ಚಳವಳಿಯಿಂದಾಚೆಗೆ ದಲಿತರು ಹೊರನಡೆದದ್ದೂ ಇದೇ ಕಾರಣಕ್ಕಾಗಿ. ಸಾಮಾಜಿಕ ಬದಲಾವಣೆಗೆ ಕಾತರಿಸುತ್ತಿದ್ದ ಯುವಕರು ಚಳವಳಿಗಳಿಂದ ಪ್ರಭಾವಿತಗೊಂಡು ಅನುಸರಿಸುತ್ತಿದ್ದರು. 1986ರ ಆಗಸ್ಟ್​ 15ರಂದು ನಾನು ಸರಳ ಅಂತರ್​ಜಾತಿ ವಿವಾಹವನ್ನು ರಾಹುಕಾಲದಲ್ಲಿ ಮಾಡಿಕೊಂಡೆ. ಒಂದು ಪುಸ್ತಕ ಬಿಡುಗಡೆ, ಮಾಲಾರ್ಪಣೆ, ಸಿಹಿ ಹಂಚಿಕೆ ಇದಿಷ್ಟೇ ಕಾರ್ಯಕ್ರಮ. ಇದರ ಅಧ್ಯಕ್ಷತೆ ಸಿದ್ಧಲಿಂಗಯ್ಯನವರದು. ಅವರ ಕ್ರಾಂತಿಕಾರೀ ಭಾಷಣ ಈಗಲೂ ನನ್ನ ಕಿವಿಯಲ್ಲಿದೆ. ಆ ತಲೆಮಾರಿನ, ಪ್ರಗತಿಪರ ವಿಚಾರಧಾರೆಯುಳ್ಳ ಯುವಕರು, ಎಲ್ಲ ಜಾತಿ ಸಮುದಾಯಗಳಲ್ಲಿದ್ದವರು ಸಿದ್ಧಲಿಂಗಯ್ಯ, ಎಂಡಿಎನ್​, ಕುವೆಂಪು, ಕಾರಂತ ಈ ಬಗೆಯ ಮಾದರಿಗಳಿಗಾಗಿ ಅನ್ವೇಷಿಸುತ್ತಿದ್ದರು.

    “ಆ ಬೆಟ್ಟದಲ್ಲಿ…’ ಭಾವಗೀತೆ ನನಗೆ ಬಹಳ ಪ್ರಿಯವಾದ ಗೀತೆ. ನಾನೂ ಸಹ “ಬಾ ನಲ್ಲೆ ಮಧುಚಂದ್ರಕೆ’ ಎಂದು ಬರೆಯುತ್ತಿದ್ದ ಕಾಲ. ಶ್ರುತಿ ಸೇರುವುದು ಸುಲಭವಾಗಿತ್ತು. ಅದನ್ನು ಹಂಸಲೇಖಾ ಆಗಲೇ ಸಿದ್ಧಗೊಂಡಿದ್ದ ಟ್ಯೂನ್​ ಬಿಟ್ಟು ಹೊಸ ಟ್ಯೂನ್​ ಹಾಕಿದರು. ಸಿದ್ಧಗೊಂಡಿದ್ದ ಹಳೆಯ ಟ್ಯೂನನ್ನು ನಮ್ಮ ಗಾಯಕ ಮಿತ್ರರಾದ ಅಪ್ಪಗೆರೆ, ಜನ್ನಿ ಅದು ಪ್ರೇಮಗೀತೆಯಾಗಿದ್ದೂ ಕ್ರಾಂತಿಗೀತೆಯಂತೆ ಹಾಡುತ್ತಿದ್ದರು. ನನಗೆ ಮೆಲುದನಿಯ ಯಾತನೆ ಬೇಕಿತ್ತು. ಹಾಡು ಪುನರ್ಭವಗೊಂಡಿತು. ಸಿದ್ಧಲಿಂಗಯ್ಯನವರ ವ್ಯಕ್ತಿತ್ವದ ಎರಡು ಮುಖಗಳಂತೆಯೇ! ನನ್ನ ಹಳ್ಳಿಗೆ ಕವಿಗಳು ಅದೆಷ್ಟೋ ಸಲ ಬಂದರು. ಅದು ಅಸಂಖ್ಯ ಮತ್ತು ಅಮೂಲ್ಯ ನೆನಪಿನ ಭಂಡಾರ. ಕನ್ನಡ ಕಟ್ಟುವ ಕೆಲಸ, ಸಾಹಿತ್ಯದ ಚಟುವಟಿಕೆಗಳು, ಸಿನಿಮಾ ಕ್ಷೇತ್ರದ ಆಗುಹೋಗುಗಳು ಹೀಗೆ ನಾವು ಸೇರುತ್ತಲೇ ಇದ್ದೆವು. ನಮ್ಮ ಟೆಂಟ್​ ಸಿನಿಮಾ ಶಾಲೆಗೆ ಅವರು ಪ್ರತಿವಾರದ ಖಾಯಂ ಅತಿಥಿ. ಸಿದ್ಧಲಿಂಗಯ್ಯನವರ ವಿಡಂಬನಾ ಪ್ರವೃತ್ತಿ ಜನಜನಿತ. ಅವರು ತಮ್ಮನ್ನೂ, ಲೋಕವನ್ನೂ ವಿಡಂಬಿಸಿಕೊಳ್ಳುತ್ತಿದ್ದರು. ಅದೆಂಥ ಗಂಭೀರ ಚರ್ಚೆಯ ನಡುವೆಯೂ ಹಾಸ್ಯ ಸುಳಿಯುತ್ತಿತ್ತು. ಕೆಲವೊಮ್ಮೆ ವಸ್ತು ವಿಷಯದ ಗಾಂಭೀರ್ಯ ಮುಕ್ಕಾಗುತ್ತದೇನೋ ಎಂಬ ಆತಂಕ ಹುಟ್ಟುತ್ತಿತ್ತು. ಅವರ ಹಾಸ್ಯಪ್ರಜ್ಞೆ ಸವಿಯಲು ಎಲ್ಲ ಸುತ್ತುವರಿಯುತ್ತಿದ್ದರು. ಆ ಜೋಕುಗಳು ಜನಪದ ಕತೆಗಳಂತೆ ಲೋಕಪ್ರಸಿದ್ಧವೇ ಆಗಿವೆ. ಆ ರಾತ್ರಿ ರಂಗದೊರೈ ಆಸ್ಪತ್ರೆಯ ಐ.ಸಿ.ಯು.ಗಾಗಿ ಪರದಾಡಿದ್ದು ಈಗಲೂ ನೆನಪಿದೆ. ದೊರೆಯತನಕ ದೂರಿತ್ತ ಮೇಲೆ ಸರ್ಕಾರ ಕಣ್ಣು ತೆರೆಯಿತು. ಸಿದ್ಧಲಿಂಗಯ್ಯನವರ ಪುತ್ರಿ ಡಾ. ಮಾನಸಾ ಹೆತ್ತವರಿಬ್ಬರನ್ನೂ ಆಸ್ಪತ್ರೆಯಲ್ಲಿ ನಿರ್ವಹಿಸಿದ ರೀತಿ ಶ್ಲಾನೀಯ. ಕವಿಗಳು ಮಣಿಪಾಲ್​ ಆಸ್ಪತ್ರೆ ಸೇರಿ ವಾರಗಟ್ಟಲೆ ವೆಂಟಿಲೇಟರ್​ನಲ್ಲಿ ಸಾಹಸಪಡುವಾಗ “ಅವರಿನ್ನು ಮರಳಿ ಬರುವುದಿಲ್ಲ’ ಎಂದು ಮನಸ್ಸು ಹೇಳಿದರೂ ಆತಂಕವನ್ನು ಹಂಚದೆ ಎಲ್ಲರಿಗೂ “ಗುಣಮುಖರಾಗುತ್ತಿದ್ದಾರೆ’ ಎಂದೇ ಟ್ವೀಟ್​ ಮಾಡುತ್ತಿದ್ದೆ. ಜಾಫೆಟ್​, ಚಂದನ್​ಗೌಡ ಮುಂತಾದ ಅನೇಕ ಗಣ್ಯರು ಕವಿಗಳ ಅನಾರೋಗ್ಯ ಸಂದರ್ಭದಲ್ಲಿ ಹಗಲೂರಾತ್ರಿ ಶ್ರಮಿಸಿದ್ದಾರೆ. ಆದರೆ ಸಾವು ಪ್ರಶ್ನಾತಿತ. ಕವಿಗಳು ನಿರ್ಗಮಿಸಿದ್ದಾರೆ.

    “ಕವಿ’ ಎಂಬ ಪಟ್ಟ ಎಲ್ಲರಿಗೂ ದಕ್ಕುವಂಥದ್ದಲ್ಲ. ಅವರ ವಿಧಾನಸೌಧದ ಸಖ್ಯವನ್ನು ಎಷ್ಟೇ ಆಕ್ಷೇಪಿಸಿದರೂ ಸದನದಲ್ಲಿ ಸಿದ್ಧಲಿಂಗಯ್ಯನವರು ಬೆಲೆಯುಳ್ಳ ಮಾತನ್ನಾಡಿದ್ದಾರೆ. ನಾವೀಗ “ಮರಣೋತ್ತರ ಪ್ರಮಾಣಪತ್ರ’ ನೀಡುವ ಗೋಜಿಗೆ ಹೋಗದೆ ದಲಿತರು, ದಲಿತೇತರರು ಮತ್ತು ಸಾಮಾಜಿಕ ಪರಿವರ್ತನೆಗಳಲ್ಲಿ ನಂಬಿಕೆ ಇಟ್ಟ ಎಲ್ಲರೂ ಅವರ ಕೃತಿಗಳನ್ನು ಓದುವಂತವರಾಗಬೇಕು. ಓದಿನ ಹೊಸ ಹೊಳಪಲ್ಲಿ ಹೊಸ ಸಮಾಜವನ್ನು ಕನಸುವಂತಾಗಬೇಕು. ವ್ಯಕ್ತಿಯ ದೈಹಿಕ ನಿರ್ಗಮನ ಅನಿವಾರ್ಯ. ಆದರೆ ಉಳಿಯುವುದು ಅವನ ಕಾಣ್ಕೆ. ವಿಶೇಷವಾಗಿ ತರುಣರು ಅವರ ಕಾವ್ಯಾಭ್ಯಾಸ ಮಾಡಿ ಹೊಸ ಸಮಾಜಕ್ಕಾಗಿ ಕಾತರಿಸುವಂತಾಗಲಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts