More

    ತುಮಕೂರಲ್ಲಿ ಮುಂಡ, ಬಾಗಲಕೋಟೇಲಿ ರುಂಡ ಪತ್ತೆ! ಬಯಲಾಯ್ತು ಸೊಸೆ-ಬಿಎಂಟಿಸಿ ಬಸ್​ ಕಂಡಕ್ಟರ್​ ಅಸಲಿ ಮುಖವಾಡ

    ಬೆಂಗಳೂರು: ಮಂಡ್ಯ ಜಿಲ್ಲೆ ತೂಬಿನಕೆರೆ ಗ್ರಾಮದ ನಿವೃತ್ತ ಶಿಕ್ಷಕಿಯೊಬ್ಬರ ಶವ ರುಂಡ-ಮುಂಡ ಬೇರ್ಪಟ್ಟ ಸ್ಥಿತಿಯಲ್ಲಿ ರೈಲ್ವೆ ಹಳಿ ಮೇಲೆ ಪತ್ತೆಯಾಗಿದ್ದ ಪ್ರಕರಣ ಸಂಬಂಧ ತನಿಖೆ ಕೈಗೊಂಡ ಪೊಲೀಸರು ಭಯಾನಕ ರಹಸ್ಯ ಬಯಲು ಮಾಡಿದ್ದಾರೆ.

    ಮಂಡ್ಯ ಜಿಲ್ಲೆ ತೂಬಿನಕೆರೆ ಗ್ರಾಮದ ನಿವೃತ್ತ ಶಿಕ್ಷಕಿ ನಿಂಗಮ್ಮಗೆ ಇಬ್ಬರು ಗಂಡು ಮಕ್ಕಳು. ಮೊದಲ ಪುತ್ರ ಮೃತಪಟ್ಟಿದ್ದು, ಈತನ ಪತ್ನಿ ತುಮಕೂರಿನಲ್ಲಿ ವಾಸವಿದ್ದಳು. 2ನೇ ಮಗ ಟಿ.ಎಂ.ಸತೀಶ್ ಜತೆ ನಿಂಗಮ್ಮ ತೂಬಿನಕೆರೆ ಗ್ರಾಮದಲ್ಲಿ ನೆಲೆಸಿದ್ದರು. ಮೊದಲ ಮಗ ಸಾವಿಗೂ ಮುನ್ನ ತಮಕೂರಿನಲ್ಲಿ ಮನೆ ಕಟ್ಟಿಸಿದ್ದ. ಈತ ಮೃತಪಟ್ಟ ಹಿನ್ನೆಲೆಯಲ್ಲಿ ಈತನ ಸಂಪೂರ್ಣ ಆಸ್ತಿ ಸೊಸೆ ಲತಾಳ ಪಾಲಾಗಿದೆ. ಅತ್ತೆಗೆ 2 ಲಕ್ಷ ರೂ. ಕೊಡಬೇಕು. ಹಣ ಕೊಡುವವರೆಗೂ ತಿಂಗಳಿಗೆ 2 ಸಾವಿರ ರೂ. ಕೊಡುವಂತೆ ಹಿರಿಯರು ಇತ್ಯರ್ಥ ಮಾಡಿದ್ದರು. ಪ್ರತಿ ತಿಂಗಳು ತುಮಕೂರಿಗೆ ಬಂದು ಪಿಂಚಣಿ ಮತ್ತು ಸೊಸೆ ಬಳಿ 2 ಸಾವಿರ ರೂ. ಪಡೆದು ವಾಪಸ್ ಊರಿಗೆ ಹೋಗುತ್ತಿದ್ದರು. ಇದರ ನಡುವೆ ಲತಾಗೆ ಬಿಎಂಟಿಸಿ ಕಂಡಕ್ಟರ್ ಬಾಲಚಂದ್ರ ಜತೆ ಅಕ್ರಮ ಸಂಬಂಧ ಬೆಳೆದಿತ್ತು. ಈ ವಿಚಾರವನ್ನು ಎಲ್ಲರಿಗೂ ನಿಂಗಮ್ಮ ಹೇಳುತ್ತಿದ್ದರು.

    ತನ್ನ ವೈಯಕ್ತಿಕ ವಿಚಾರವನ್ನು ಎಲ್ಲರ ಬಳಿ ಅತ್ತೆ ಹೇಳಿಕೊಂಡು ಬರುತ್ತಿದ್ದಾರೆ ಎಂದು ಕುಪಿತಗೊಂಡ ಲತಾ, ಹಣ ಕೊಡುವುದಾಗಿ 2021ರ ಜುಲೈ 19ರಂದು ನಿಂಗಮ್ಮರನ್ನು ಕರೆದಿದ್ದರು. ಅದರಂತೆ ಬೆಳಗ್ಗೆ ತುಮಕೂರಿಗೆ ತೆರಳಿ ಪಿಂಚಣಿ ಪಡೆದ ನಿಂಗಮ್ಮ(70), ಅಲ್ಲಿಂದ ಲತಾಳ ಮನೆಗೆ ಹೋಗಿದ್ದರು. ಊಟ ಕೊಟ್ಟ ಸೊಸೆ, ತನ್ನ ಪ್ರಿಯಕರನ ಜತೆ ಸೇರಿ ಹಗ್ಗದಿಂದ ಅತ್ತೆಯ ಕತ್ತು ಬಿಗಿದು ಕೊಲೆ ಮಾಡಿದ್ದಳು. ಶವದ ಮೇಲಿದ್ದ ಚಿನ್ನಾಭರಣ ಮತ್ತು 6 ಸಾವಿರ ರೂ. ದೋಚಿದ್ದರು.

    ಅನಂತರ ಸಾಕ್ಷ್ಯಾಧಾರ ನಾಶ ಪಡಿಸುವ ಸಲುವಾಗಿ ಅಂದು ರಾತ್ರಿ ಶವವನ್ನು ನಿಡವಂದ ಮತ್ತು ಹಿರೇಹಳ್ಳಿ ರೈಲು ಹಳಿಯ ಮೇಲೆ ಬಿಸಾಡಿದ್ದರು. ರೈಲು ಹರಿದು ದೇಹ ಛಿದ್ರವಾಗಿತ್ತು. ತಲೆ ದೇಹದಿಂದ ಬೇರ್ಪಟ್ಟ ಕಾರಣ ಗುರುತು ಸಿಗಬಾರದು ಎಂದು ತಲೆಯನ್ನು ಕವರ್​ನಲ್ಲಿ ಹಾಕಿಕೊಂಡ ಬಾಲಚಂದ್ರ, ಬೈಕ್​ನಲ್ಲಿ ತುಮಕೂರಿನ ಜಾಸ್ ಟೋಲ್ ಬಳಿ ನಿಂತಿದ್ದ ಗ್ರಾನೈಟ್ ಲಾರಿಗೆ ಎಸೆದ್ದಿದ್ದ.

    ತಾಯಿ ಮನೆಗೆ ವಾಪಸ್ ಬಾರದೆ ಇದ್ದಾಗ ಅನುಮಾನ ಬಂದು ಎಲ್ಲೆಡೆ ಹುಡುಕಾಟ ನಡೆಸಿದ 2ನೇ ಮಗ ಸತೀಶ್, ಜುಲೈ 23ಕ್ಕೆ ತುಮಕೂರು ನಗರ ಠಾಣೆಗೆ ದೂರು ನೀಡಿದ್ದ. ಮತ್ತೊಂದೆಡೆ ಹಳಿಯ ಮೇಲೆ ಪತ್ತೆಯಾದ ಅಪರಿಚಿತ ಶವವನ್ನು ತುಮಕೂರು ರೈಲ್ವೆ ಪೊಲೀಸರು ಶವಗಾರಕ್ಕೆ ಸಾಗಿಸಿದ್ದರು. ವಿಷಯ ತಿಳಿದ ಸತೀಶ್, ಆಸ್ಪತ್ರೆಗೆ ಬಂದು ತಾಯಿಯ ಬಟ್ಟೆ ಮತ್ತು ಕೈ ಮೇಲಿದ್ದ ಅಚ್ಚೆ ಆಧಾರದ ಮೇಲೆ ಗುರುತು ಪತ್ತೆಹಚ್ಚಿ ಶವವನ್ನು ಪಡೆದಿದ್ದ.

    ಸುಳಿವು ನೀಡಿದ ಸಿಸಿ ಕ್ಯಾಮರಾ: ರೈಲು ಹಳಿಯ ಮೇಲೆ ಪತ್ತೆಯಾದ ಮುಂಡ ಭಾಗದ ರುಂಡ ನಾಪತ್ತೆ ಆಗಿರುವ ಬಗ್ಗೆ ಪೊಲೀಸ್ ಕಂಟ್ರೋಲ್ ರೂಂ ಮತ್ತು ರೈಲ್ವೆ ಸಹಾಯವಾಣಿಗೆ ಮಾಹಿತಿ ನೀಡಿದ್ದರು. ಬಾಗಲಕೋಟೆ ಜಿಲ್ಲೆ ಇಳಕಲ್ ಶಹರ ಪೊಲೀಸ್ ಠಾಣೆಗೆ ಲಾರಿ ಚಾಲಕ ರುಂಡ ಸಿಕ್ಕಿರುವ ಬಗ್ಗೆ ದೂರು ನೀಡಿದ್ದ. ಇದನ್ನು ಅರಿತ ಪೊಲೀಸರು, ಚಾಲಕನನ್ನು ಕರೆದು ‘ಅಂದಾಜು ಯಾವ ಸಮಯದಲ್ಲಿ ತುಮಕೂರು ಟೋಲ್​ನಲ್ಲಿ ಇದ್ದೆ’ ಎಂದು ಪ್ರಶ್ನಿಸಿದ್ದರು. ಆತ ಕೊಟ್ಟ ಸಮಯದ ಹಿಂದೆ ಮುಂದೆ ಸಿಸಿ ಕ್ಯಾಮರಾ ಪರಿಶೀಲನೆ ನಡೆಸಿದಾಗ ಬೈಕ್​ನಲ್ಲಿ ಕವರ್ ಹಿಡಿದು ಬಂದ ಸವಾರ, ಎಲ್ಲೆಡೆ ಸುತ್ತಾಡಿ ಲಾರಿ ಮೇಲೆ ಕವರ್ ಎಸೆದ ದೃಶ್ಯ ಸೆರೆಯಾಗಿತ್ತು. ಬೈಕ್ ನಂಬರ್ ಆಧರಿಸಿ ಸವಾರನ ಬೆನ್ನಟ್ಟಿದಾಗ ಕಂಡಕ್ಟರ್ ಎಂ.ಟಿ.ಬಾಲಚಂದ್ರ(42) ಸೆರೆ ಸಿಕ್ಕಿದ್ದಾನೆ. ಮೃತರ ಸೊಸೆ ಲತಾ ತಲೆಮರೆಸಿಕೊಂಡಿದ್ದಾಳೆ.

    VIDEO| ಪ್ರಾಣವನ್ನೇ ಪಣಕ್ಕಿಟ್ಟು ಜಲಾವೃತಗೊಂಡ ಗ್ರಾಮಗಳಲ್ಲಿ ಬೆಳಕು ಹರಿಸಿದ ಪವರ್​ಮನ್​!

    ಬಿಎಸ್​ವೈ ಅಭಿಮಾನಿ ಆತ್ಮಹತ್ಯೆ: ಅಭಿಮಾನ ಅತಿರೇಕಕ್ಕೆ ಹೋಗದಿರಲಿ ಎಂದು ಕೈಮುಗಿದ ಯಡಿಯೂರಪ್ಪ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts