More

    ಬೈಕ್ ಸವಾರರಿಗೆ ಬಿಸಿ ಮುಟ್ಟಿಸಿದ ಡಿವೈಎಸ್ಪಿ

    ರಾಣೆಬೆನ್ನೂರ: ಲಾಕ್​ಡೌನ್ ನಿಯಮ ಉಲ್ಲಂಘಿಸಿ ಅನಗತ್ಯವಾಗಿ ಬೈಕ್ ಮೇಲೆ ಹೊರಬಂದಿದ್ದ ಸವಾರರಿಗೆ ಸೋಮವಾರ ಪೊಲೀಸರು ಬರೋಬ್ಬರಿ ಪಾಠ ಕಲಿಸಿದರು.
    ಬೆಳಗ್ಗೆ ರಸ್ತೆಗಿಳಿದ ಡಿವೈಎಸ್ಪಿ ಟಿ.ವಿ. ಸುರೇಶ ನೇತೃತ್ವದ ಪೊಲೀಸರ ತಂಡ, ಅನಗತ್ಯವಾಗಿ ಬೈಕ್ ಮೇಲೆ ಬಂದವರ ಬೈಕ್ ಕೀ ಪಡೆದರು. ನಂತರ ಬೈಕ್​ಗಳ ಮಾಲಿಕರೇ ತಮ್ಮ ಬೈಕ್​ಗಳನ್ನು ತಳ್ಳಿಕೊಂಡು ಪೊಲೀಸ್ ಠಾಣೆಗೆ ತೆರಳುವಂತೆ ಸೂಚಿಸಿದರು. ನಂತರ 4 ಗಂಟೆಗೂ ಅಧಿಕ ಕಾಲ ನಿಲ್ಲಿಸಿ ದಂಡ ಕಟ್ಟಿಸಿಕೊಂಡರು.
    ವಾಗ್ವಾದಕ್ಕಿಳಿದವರಿಗೆ ಲಾಠಿಯೇಟು: ನಿಯಮ ಉಲ್ಲಂಘಿಸಿದವರನ್ನು ತಡೆದು ವಿಚಾರಿಸಿದಾಗ, ಕುಂಟು ನೆಪ ಹೇಳುವುದಲ್ಲದೆ ಪೊಲೀಸರೊಂದಿಗೆ ಕೆಲವರು ವಾಗ್ವಾದಕ್ಕಿಳಿದರು. ಅಂಥವರಿಗೆ ಹಿರಿಯ ಪೊಲೀಸ್ ಅಧಿಕಾರಿಗಳು ಲಾಠಿ ರುಚಿ ತೋರಿಸಿ ಠಾಣೆಗೆ ಕಳುಹಿಸಿದರು. ನಗರದಲ್ಲಿ ಒಂದು ವಾರದಿಂದ 478 ಬೈಕ್ ಸವಾರರಿಗೆ ದಂಡ ವಿಧಿಸಲಾಗಿದೆ. ಅದರಲ್ಲಿ ಸೋಮವಾರ ಒಂದೇ ದಿನ 212 ಬೈಕ್ ಹಿಡಿದು ದಂಡ ವಿಧಿಸಲಾಗಿದೆ. 4 ಆಟೋ ಜಪ್ತಿ ಮಾಡಲಾಗಿದೆ. ಒಟ್ಟು 65 ಸಾವಿರ ರೂಪಾಯಿ ದಂಡ ವಸೂಲಿ ಮಾಡಲಾಗಿದೆ. ಮಾಸ್ಕ್ ಹಾಕದ 375 ಜನರಿಗೆ ದಂಡ ವಿಧಿಸಲಾಗಿದೆ. ನಿಯಮ ಉಲ್ಲಂಘಿಸಿ ಬಟ್ಟೆ, ಸ್ಟೆಷನರಿ, ಹೋಟೆಲ್ ಮತ್ತಿತರ ವ್ಯಾಪಾರ-ವಹಿವಾಟು ನಡೆಸುತ್ತಿದ್ದ 60 ಅಂಗಡಿಗಳ ಮಾಲೀಕರ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಡಿವೈಎಸ್ಪಿ ಟಿ.ವಿ. ಸುರೇಶ ‘ವಿಜಯವಾಣಿ’ಗೆ ತಿಳಿಸಿದರು.
    ದಂಡ ಕಟ್ಟಿದ ಸ್ಥಾಯಿ ಸಮಿತಿ ಅಧ್ಯಕ್ಷ: ರಾಣೆಬೆನ್ನೂರ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸಿದ್ದಪ್ಪ ಬಾಗಲರ ನಗರದ ಹಲಗೇರಿ ವೃತ್ತದ ಬಳಿ ಬೈಕ್ ಮೇಲೆ ತೆರಳುತ್ತಿದ್ದರು. ಈ ಸಮಯದಲ್ಲಿ ಪೊಲೀಸರು ಅವರನ್ನು ತಡೆದು ವಿಚಾರಿಸಿದಾಗ, ಕೂಡಲೆ ಅವರು ಬೈಕ್ ತಳ್ಳಿಕೊಂಡು ಸಂಚಾರ ಠಾಣೆಗೆ ಹೋಗಿ ದಂಡ ಕಟ್ಟಿ ವಾಪಸ್ ಬರುವ ಮೂಲಕ ಇತರರಿಗೆ ಮಾದರಿಯಾದರು.
    ಪ್ರೆಸ್ ಬೋರ್ಡ್ ವಾಹನಕ್ಕೂ ದಂಡ: ರಾಣೆಬೆನ್ನೂರ ನಗರದ ಬಸ್ ನಿಲ್ದಾಣದ ಬಳಿ ಪ್ರೆಸ್ ಎಂದು ನಾಮಫಲಕ ಹಾಕಿಕೊಂಡು ಬಂದಾಗ ಪೊಲೀಸರು ಆತನನ್ನು ಪರಿಶೀಲಿಸಿದರು. ಆಗ ಆತನ ಬಳಿ ಪ್ರೆಸ್ ಕುರಿತು ಯಾವುದೇ ದಾಖಲೆ ಇಲ್ಲದ ಕಾರಣ ಆತನನ್ನು ಪೊಲೀಸ್ ಠಾಣೆಗೆ ಕಳುಹಿಸಿ 200 ರೂಪಾಯಿ ದಂಡ ವಿಧಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts