More

    ಸವಿತಾ ಮಹರ್ಷಿ ಜಯಂತಿಯಲ್ಲಿ ಗಲಾಟೆ

    ಬೇಲೂರು: ಪಟ್ಟಣದ ತಾಲೂಕು ಸವಿತಾ ಸಮಾಜ ಸಂಘದ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಸವಿತಾ ಮಹರ್ಷಿ ಜಯಂತಿ ಕಾರ್ಯಕ್ರಮದಲ್ಲಿ ಸಂಘದ ಮಾಜಿ ಹಾಗೂ ಹಾಲಿ ಅಧ್ಯಕ್ಷರ ಬಣಗಳ ನಡುವೆ ಮಾತಿನ ಚಕಮಕಿ ನಡೆದು ಕೈಕೈ ಮಿಲಾಯಿಸಿದ ಪ್ರಸಂಗ ಶುಕ್ರವಾರ ನಡೆಯಿತು.

    ಬೆಳಗ್ಗೆ ಸವಿತಾ ಸಮಾಜ ಸಂಘದ ಮಾಜಿ ಅಧ್ಯಕ್ಷ ನರಸಿಂಹಸ್ವಾಮಿ ನೇತೃತ್ವದಲ್ಲಿ ಪ್ರತ್ಯೇಕವಾಗಿ ಸವಿತಾ ಮಹರ್ಷಿ ಜಯಂತಿ ಆಯೋಜಿಸಲಾಗಿತ್ತು. ಹೀಗಾಗಿ ಹಾಲಿ ತಾಲೂಕು ಅಧ್ಯಕ್ಷ ಪ್ರಕಾಶ್ ತಮ್ಮ ಬೆಂಬಲಿಗರೊಂದಿಗೆ ಸ್ಥಳಕ್ಕೆ ಆಗಮಿಸಿ ಆಕ್ಷೇಪ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಎರಡೂ ಬಣಗಳ ನಡುವೆ ಮಾತಿಗೆ ಮಾತು ಬೆಳೆದು ಸವಿತಾ ಸಮಾಜದ ಹಾಲಿ ಹಾಗೂ ಮಾಜಿ ಅಧ್ಯಕ್ಷರು ಸಮಾಜದ ಬಂಧುಗಳ ಎದುರಲ್ಲೇ ಪರಸ್ಪರ ಹೊಡೆದಾಡಿಕೊಂಡರು.

    ಇತ್ತ ಪ್ರಕಾಶ್ ಬಣದ ಕೆಲವರು ಕಚೇರಿಗೆ ಹಾಕಿದ್ದ ನಾಮಫಲಕ ಕಿತ್ತು ರಸ್ತೆಗೆ ಎಸೆದಿದ್ದರಿಂದ ಮುಖ್ಯರಸ್ತೆಯಲ್ಲಿ ವಾಹನಗಳ ದಟ್ಟಣೆ ಉಂಟಾಗಿ, ಕೆಲ ಸಮಯ ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಎಲ್ಲರನ್ನೂ ಚದುರಿಸಿದರು. ಕಾರ್ಯಕ್ರಮಕ್ಕೆ ಆಗಮಿಸಿದ್ದ ಗಣ್ಯರು ಗಲಾಟೆ ನಡುವೆಯೇ ಹೊರ ನಡೆದರು. ಹೀಗಾಗಿ ಸವಿತಾ ಮಹರ್ಷಿ ಜಯಂತಿ ಕಾರ್ಯಕ್ರಮ ಸ್ಥಗತಿಗೊಂಡಿತು.

    ಸವಿತಾ ಸಮಾಜದ ಸಂಘ ಬೇಲೂರಿನಲ್ಲಿ ಒಂದೇ ಇರಬೇಕೆಂಬ ಉದ್ದೇಶ ಮತ್ತು ಸಮಾಜದವರು ಎಲ್ಲರೂ ಒಟ್ಟಾಗಿ ಕಾರ್ಯಕ್ರಮ ರೂಪಿಸಬೇಕೆಂದು ನಮ್ಮ ಒತ್ತಾಯ. ಆದರೆ ನರಸಿಂಹಸ್ವಾಮಿ ಮಾತ್ರ ನಾನೇ ಅಧ್ಯಕ್ಷ ಎಂದು ಬೆರಳೆಣಿಕೆಯಷ್ಟು ಜನರೊಂದಿಗೆ ಪ್ರತ್ಯೇಕ ಕಾರ್ಯಕ್ರಮ ಮಾಡುತ್ತಿದ್ದರು. ಇದನ್ನು ನಾವು ಪ್ರಶ್ನಿಸಿದ್ದಕ್ಕೆ ಅವಾಚ್ಯ ಶಬ್ದದಿಂದ ನಿಂದಿಸಿದ್ದರಿಂದ ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಯಿಸುವಂತಾಯಿತು. ಈ ವಿಚಾರವಾಗಿ ಬೇಲೂರು ಪೊಲೀಸ್ ಠಾಣೆಗೆ ದೂರು ನೀಡಿದ್ದೇವೆ.
    ಪ್ರಕಾಶ್, ಸವಿತಾ ಸಮಾಜದ ತಾಲೂಕು ಅಧ್ಯಕ್ಷ, ಬೇಲೂರು

    ಪ್ರತಿ ವರ್ಷದಂತೆ ಈ ಬಾರಿಯೂ ನಮ್ಮ ಕಚೇರಿಯಲ್ಲಿ ಸವಿತಾ ಮಹರ್ಷಿ ಜಯಂತಿ ಆಚರಿಸುತಿದ್ದೆವು. ಆದರೆ ಇದ್ದಕ್ಕಿದ್ದಂತೆ ಆಗಮಿಸಿದ ಕೆಲವರು ನಮ್ಮ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ನಮ್ಮ ಮೇಲೆ ಹಲ್ಲೆ ನಡೆಸಿ ಸಂಘದ ನಾಮಫಲಕ ಕಿತ್ತೆಸೆದು ಗಲಾಟೆ ಮಾಡಿದ್ದಾರೆ. ಇವರು ನಮಗೆ ಕೆಟ್ಟ ಹೆಸರು ತರುವ ಉದ್ದೇಶದಿಂದ ಹೀಗೆ ಮಾಡಿದ್ದಾರೆ. ನಾವು ಪೊಲೀಸ್ ಠಾಣೆಗೆ ದೂರು ನೀಡಿದ್ದೇವೆ.
    ನರಸಿಂಹಸ್ವಾಮಿ, ಮಾಜಿ ಅಧ್ಯಕ್ಷ ಸವಿತಾ ಸಮಾಜ ಬೇಲೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts