More

    ಬಿಎಸ್ಸಿ ಅರಣ್ಯಶಾಸ್ತ್ರ ಪದವಿ ಕನಿಷ್ಠ ವಿದ್ಯಾರ್ಹತೆಯಾಗಲಿ

    ಗೋಣಿಕೊಪ್ಪ: ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ವಲಯ ಅರಣ್ಯಾಧಿಕಾರಿ ಮತ್ತು ಉಪ ವಲಯ ಅರಣ್ಯಾಧಿಕಾರಿ ಹುದ್ದೆಗೆ ಬಿಎಸ್ಸಿ ಅರಣ್ಯ ಶಾಸ್ತ್ರ ಪದವಿಯನ್ನು ಕನಿಷ್ಠ ವಿದ್ಯಾರ್ಹತೆಯನ್ನಾಗಿ ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕ ಅರಣ್ಯ ಪದವೀಧರರು ಮತ್ತು ವಿದ್ಯಾರ್ಥಿಗಳ ಸಂಘ ಒತ್ತಾಯಿಸಿದೆ.

    ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯ ಮುಂಭಾಗ ಶುಕ್ರವಾರ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು, ಟಿ.ಎಂ.ವಿಜಯ ಭಾಸ್ಕರ್ ಅವರು ಸಲ್ಲಿಸಿರುವ 6ನೇ ಆಡಳಿತ ಸುಧಾರಣೆ ವರದಿಯ ಅಧ್ಯಾಯ 4ರ ಅಧಿಸೂಚನೆ ಸಂಖ್ಯೆ 81 ಅನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು.

    ವೃತ್ತಿಪರ (ಅರಣ್ಯಶಾಸ್ತ್ರ) ಪದವೀಧರರ ಸಾಮರ್ಥ್ಯ ಮತ್ತು ಅಗತ್ಯವನ್ನು ಅರಿತು 2003ರಲ್ಲಿ ರಾಜ್ಯ ಸರ್ಕಾರ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ವಲಯ ಅರಣ್ಯಾಧಿಕಾರಿ ಹುದ್ದೆಗೆ ಶೇ.50ರಷ್ಟು ಮೀಸಲಾತಿ ಒದಗಿಸಿತ್ತು. ಬಳಿಕ 2012ರಲ್ಲಿ ವಲಯ ಅರಣ್ಯಾಧಿಕಾರಿ ಹುದ್ದೆಗೆ ಶೇ.75ರಷ್ಟು ಮೀಸಲಾತಿ ಹೆಚ್ಚಿಸಲಾಯಿತು. ಕರ್ನಾಟಕ ಅರಣ್ಯ ಇಲಾಖೆಯ ಸೇವೆಗಳ (ನೇಮಕಾತಿ) ತಿದ್ದುಪಡಿ ನಿಯಮದಡಿ 2018 ರಲ್ಲಿ ಪ್ರಸ್ತಾಪಿಸಲಾದ ಹೊಸ ನಿಯಮದಂತೆ ಬಿ.ಎಸ್ಸಿ ಅರಣ್ಯಶಾಸ್ತ್ರ ಪದವೀಧರರಿಗೆ ವಲಯ ಅರಣ್ಯ ಅಧಿಕಾರಿ ಹುದ್ದೆಯ ನೇರ ನೇಮಕಾತಿಯಲ್ಲಿ ಈ ಹಿಂದೆ ಇದ್ದ ಶೇ.75ರಷ್ಟು ಮೀಸಲಾತಿಯನ್ನು ಶೇ.50ಕ್ಕೆ ಕಡಿತಗೊಳಿಸಲಾಯಿತು. ಹಾಗಾಗಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ವಲಯ ಅರಣ್ಯಾಧಿಕಾರಿ ಮತ್ತು ಉಪ ವಲಯ ಅರಣ್ಯಾಧಿಕಾರಿ ಹುದ್ದೆಗಳಿಗೆ ಬಿ.ಎಸ್ಸಿ ಅರಣ್ಯಶಾಸ್ತ್ರ ಪದವೀಧರರನ್ನೇ ನೇರ ನೇಮಕಾತಿ ಮಾಡುವ ಮೂಲಕ (ಅರಣ್ಯಶಾಸ್ತ್ರ) ವಿಶೇಷ ಪರಿಣತಿ ಹೊಂದಿರುವ ಪದವೀಧರರ ಜ್ಞಾನ ಮತ್ತು ಅನುಭವವನ್ನು ರಚನಾತ್ಮಕವಾಗಿ ಬಳಸಿಕೊಳ್ಳಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.

    ಬಿ.ಎಸ್ಸಿ (ಅರಣ್ಯಶಾಸ್ತ್ರ) ಪದವೀಧರರನ್ನು ಅರಣ್ಯ ಇಲಾಖೆ ಪರಿಗಣಿಸುತ್ತಿಲ್ಲ. ಅಲ್ಲದೆ ಹಾಲಿ ಇರುವ ನೇರ ನೇಮಕಾತಿಯನ್ನು ರದ್ದು ಗೊಳಿಸಿದರೆ ಬಿ.ಎಸ್ಸಿ (ಅರಣ್ಯಶಾಸ್ತ್ರ) ಮತ್ತು ಇತರ ವಿಜ್ಞಾನ ಪದವೀಧರರಿಗೆ ಅನ್ಯಾಯವಾಗುತ್ತದೆ. ಈ ಎಲ್ಲ ಕಾರಣಗಳಿಂದಾಗಿ ವಿಜಯ ಭಾಸ್ಕರ್ ಅವರು ಸಲ್ಲಿಸಿದ ವರದಿಯ ಅಧ್ಯಾಯ ನಾಲ್ಕರ ಕ್ರಮ ಸಂಖ್ಯೆ 81 ಅನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.

    ಅರಣ್ಯ ವಿದ್ಯಾಲಯದ ವಿದ್ಯಾರ್ಥಿಗಳಾದ ನವನೀತ್, ಆಕಾಶ್, ಆನಂದ್, ಮನೋಜ್, ಚೇತನ್ ಮತ್ತಿತರ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts