

ಬೆಂಗಳೂರು: ಮೈಸೂರು ಮಹಾಸನೇ ಮತ್ತು ಚಾಲುಕ್ಯಸೇನೆ ಬಾಗಲಕೋಟೆ ತಂಡಗಳು ಕರ್ನಾಟಕ ಕಬಡ್ಡಿ ಪ್ರೀಮಿಯರ್ ಲೀಗ್‌ನ ತಮ್ಮ ಮೂರನೇ ಪಂದ್ಯಗಳಲ್ಲಿರೋಚಕ ಗೆಲುವಿನ ಸವಿ ಸವಿದವು. ಈ ಮಧ್ಯೆ, ಬೆಳಗಾವಿ ಬುಲ್ಸ್ ತಂಡವು ಉತ್ತರ ಕನ್ನಡ ವಿರುದ್ಧ ಭರ್ಜರಿ ಜಯ ದಾಖಲಿಸಿತು.
ಕೋರಮಂಗಲದ ಒಳಾಂಗಣ ಕ್ರೀಡಾಂಗಣದಲ್ಲಿನಡೆಯುತ್ತಿರುವ ಲೀಗ್‌ನ ಮೂರನೇ ದಿನ ಮೊದಲೆರಡು ಪಂದ್ಯಗಳು ರೋಚಕತೆಗೆ ಸಾಕ್ಷಿಯಾದರೆ, ಮೂರನೇ ಪಂದ್ಯ ಏಕಪಕ್ಷೀಯ ಆಟಕ್ಕೆ ವೇದಿಕೆಯಾಯಿತು.ನೂರಾರು ಕಬಡ್ಡಿ ಅಭಿಮಾನಿಗಳು ಮೂರು ಪಂದ್ಯಗಳ ರೋಚಕ ಹಣಾಹಣಿಯನ್ನು ವೀಕ್ಷಿಸಿ, ನೆಚ್ಚಿನ ತಂಡಗಳನ್ನು ಪ್ರೋತ್ಸಾಹಿಸಿದರು.
ಬೆಳಗಾವಿ ಬುಲ್ಸ್‌ಗೆ ಮಣಿದ ಉತ್ತರ ಕನ್ನಡ :
ದಿನದ ಮೂರನೇ ಪಂದ್ಯದಲ್ಲಿರೇಡಿಂಗ್ ಮತ್ತು ಟ್ಯಾಕಲ್ ಎರಡರಲ್ಲೂಅಮೋಘ ಪ್ರದರ್ಶನ ನೀಡಿದ ಬೆಳಗಾವಿ ಬುಲ್ಸ್ ತಂಡ ತನ್ನ ಮೂರನೇ ಪಂದ್ಯದಲ್ಲಿ39-29 ಅಂಕಗಳಿಂದ ಉತ್ತರ ಕನ್ನಡ ಸ್ಟಾಲಿಯಾನ್ಸ್ ಎದುರು ಜಯಭೇರಿ ಬಾರಿಸಿತು.
ಪಂದ್ಯದ ಆರಂಭದಿಂದಲೇ ಆಕ್ರಮಣಕಾರಿ ಆಟ ಪ್ರದರ್ಶಿಸಿದ ಬುಲ್ಸ್ ಆಟಗಾರರು ಎದುರಾಳಿ ತಂಡದ ಮೇಲೆ ಒತ್ತಡ ಹೇರುವ ಯತ್ನ ನಡೆಸಿದರು. ಆದರೆ ಇದಕ್ಕೆ ಪ್ರತಿತಂತ್ರ ರೂಪಿಸಿದ ಸ್ಟಾಲಿಯನ್ಸ್ ವಿರಾಮಕ್ಕೆ ಮುನ್ನ 12-13ರಲ್ಲಿಪ್ರಬಲ ಪ್ರತಿರೋಧ ಒಡ್ಡುವುದರೊಂದಿಗೆ ಪಂದ್ಯದ ರೋಚಕತೆಯನ್ನು ಹಿಡಿದಿಟ್ಟಿತು.
ದ್ವಿತೀಯಾರ್ಧದಲ್ಲಿಉಭಯ ತಂಡಗಳು ಮುನ್ನಡೆಗಾಗಿ ಯತ್ನಿಸಿದವು.ಈ ವೇಳೆ ಆಲ್‌ರೌಂಡ್ ಪ್ರದರ್ಶನ ನೀಡಿದ ಬುಲ್ಸ್ ಆಟಗಾರರು ನಿಯಮಿತವಾಗಿ ಅಂಕ ಗಳಿಸಿ ಉತ್ತರ ಕನ್ನಡ ತಂಡದ ಮೇಲೆ ಒತ್ತಡ ಹೇರಿದರು. ಕೊನೆಯ ಹತ್ತು ನಿಮಿಷ ಆಟ ಬಾಕಿ ಇರುವಂತೆಯೇ ಸ್ಪಷ್ಟ ಮುನ್ನಡೆ ಸಾಧಿಸಿದ ಬುಲ್ಸ್, ಅಂತಿಮವಾಗಿ ಹತ್ತು ಅಂಕಗಳ ಅಂತರದಿಂದ ಪಂದ್ಯವನ್ನು ವಶಪಡಿಸಿಕೊಂಡಿತು. ಸದ್ಯ 10 ಅಂಕಗಳನ್ನು ಕಲೆಹಾಕಿದ ಬುಲ್ಸ್, ದಿನದ ಕೊನೆಯ ಪಂದ್ಯ ನಡೆಯುವ ಮುನ್ನ ಅಂಕಪಟ್ಟಿಯಲ್ಲಿಮೊದಲ ಸ್ಥಾನ ಕಾಯ್ದುಕೊಂಡಿತು.
ಬೆಂಗಳೂರು ಬಿಸನ್ಸ್‌ಗೆ ಹ್ಯಾಟ್ರಿಕ್ ಸೋಲು:
ದಿನದ ಎರಡನೇ ಪಂದ್ಯದಲ್ಲಿಬೆಂಗಳೂರು ಬಿಸನ್ಸ್ ಮತ್ತು ಚಾಲುಕ್ಯ ಸೇನೆ ಬಾಗಲಕೋಟೆ ತಂಡಗಳು ಜಿದ್ದಾಜಿದ್ದಿನ ಹೋರಾಟ ತೋರಿದವು. ಆದರೆ ಕೊನೆಯ ಕ್ಷ ಣದ ಒತ್ತಡವನ್ನು ಸಮರ್ಥವಾಗಿ ನಿಭಾಯಿಸಿದ ಬಾಗಲಕೋಟೆ ತಂಡ 27-25 ಅಂಕಗಳ ಅಂತರದಿಂದ ಬೆಂಗಳೂರು ತಂಡಕ್ಕೆ ಆಘಾತ ನೀಡಿತು. ಇದರೊಂದಿಗೆ ಮತ್ತೆ ಗೆಲುವಿನ ಹಳಿಗೆ ಮರಳಿದ ಚಾಲುಕ್ಯ ಸೇನೆ ತಂಡ ಒಟ್ಟು 10 ಅಂಕಗಳನ್ನು ಕಲೆಹಾಕಿ ಅಂಕಪಟ್ಟಿಯಲ್ಲಿಅಗ್ರ ಮೂರರಲ್ಲಿಸ್ಥಾನ ಉಳಿಸಿಕೊಂಡಿತು.
ಪಂದ್ಯದ ಮೊದಲಾರ್ಧಕ್ಕೆ 11-10ರಲ್ಲಿಅಲ್ಪ ಮುನ್ನಡೆಯಲ್ಲಿದ್ದ ಬಾಗಲಕೋಟೆ, ದ್ವಿತೀಯಾರ್ಧದಲ್ಲಿಎದುರಾಳಿ ತಂಡದಿಂದ ಪ್ರಬಲ ಪ್ರತಿರೋಧ ಎದುರಿಸಿತು. ಉಭಯ ತಂಡಗಳು ಎಲ್ಲವಿಭಾಗದಲ್ಲೂಮಿಂಚಿದರು. ಆದರೆ ಕೊನೆಯ ಘಟ್ಟದಲ್ಲಿಬೆಂಗಳೂರು ತಂಡ ಎಚ್ಚರಿಕೆ ಆಟವಾಡುವಲ್ಲಿಎಡವಿತು. ಹೀಗಾಗಿ ಬಿಸನ್ಸ್ ಹ್ಯಾಟ್ರಿಕ್ ಸೋಲಿಗೆ ಒಳಗಾಯಿತು.
ಖಾತೆ ತೆರೆದ ಮೈಸೂರು ಮಹಾಸನೆ:
ಸಂಘಟಿತ ಹೋರಾಟ ನೀಡಿದ ಮೈಸೂರು ಮಹಾಸೇನೆ ತಂಡ ತನ್ನ ಮೂರನೇ ಪಂದ್ಯದಲ್ಲಿ29-27 ಅಂಕಗಳ ಅಂತರದಿಂದ ಹೊಯ್ಸಳ ಎಂಪೈರ್ ಹಾಸನ್ ತಂಡದ ವಿರುದ್ಧ ರೋಚಕ ಗೆಲುವು ದಾಖಲಿಸಿತು. ಪಂದ್ಯದ ಮೊದಲಾರ್ಧಕ್ಕೆ 11-15ರಲ್ಲಿಹಿನ್ನಡೆಯಲ್ಲಿದ್ದ ಮೈಸೂರು ತಂಡ ದ್ವಿತೀಯಾರ್ಧದಲ್ಲಿಟ್ಯಾಕಲ್ ಮತ್ತು ರೇಡಿಂಗ್ ಎರಡರಲ್ಲೂಸಂಘಟಿತ ಹೋರಾಟ ಪ್ರದರ್ಶಿಸಿತು. ಪಂದ್ಯದ ಕೊನೆಯ ಕ್ಷ ಣದಲ್ಲಿಹಾಸನ ತಂಡ ತಿರುಗೇಟು ನೀಡಲು ಯತ್ನಿಸಿತಾದರೂ ಒತ್ತಡ ಮೆಟ್ಟಿನಿಂತ ಮೈಸೂರು ತಂಡ ಸತತ ಎರಡು ಸೋಲುಗಳ ನಂತರ ಮೊದಲ ಗೆಲುವಿನ ಸವಿಯುಂಡಿತು. ಅತ್ತ ಹಾಸನ ತಂಡ ಸತತ ಎರಡು ಸೋಲುಗಳ ನಂತರ ಮೊದಲ ಸೋಲಿಗೆ ಗುರಿಯಾಯಿತು.
ಅಕ್ಟೋಬರ್ 4ರ ಪಂದ್ಯಗಳು: ಮಂಗಳೂರು ಇಂಡಿಯನ್ಸ್ ಮತ್ತು ಉತ್ತರ ಕನ್ನಡ ಸ್ಟಾಲಿಯಾನ್ಸ್ (ಸಂಜೆ 6ಕ್ಕೆ), ಬೆಂಗಳೂರು ಬಿಸನ್ಸ್ ಮತ್ತು ಹೊಯ್ಸಳ ಎಂಪೈರ್ ಹಾಸನ್(ಸಂಜೆ 7ಕ್ಕೆ), ಚಾಲುಕ್ಯಸೇನೆ ಬಾಗಲಕೋಟೆ ಮತ್ತು ವಿಜಯಪುರ ಲಯನ್ಸ್(ರಾತ್ರಿ 8ಕ್ಕೆ) ಮತ್ತು ಬೆಳಗಾವಿ ಬುಲ್ಸ್ ಮತ್ತು ಮೈಸೂರು ಮಹಾಸೇನೆ(ರಾತ್ರಿ 9ಕ್ಕೆ). ನೇರ ಪ್ರಸಾರ: ಟಿವಿ 5