More

    7ರಂದು ಹೆದ್ದಾರಿ ಬಂದ್​ಗೆ ನಿರ್ಧಾರ

    ಬ್ಯಾಡಗಿ: ಮೋಟೆಬೆನ್ನೂರು ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ (ಎನ್​ಎಚ್-4) ಸಂಪರ್ಕ ರಸ್ತೆಗಳನ್ನು ನಿರ್ವಿುಸದ ಹೆದ್ದಾರಿ ಪ್ರಾಧಿಕಾರದ ನಿರ್ಲಕ್ಷ್ಯ ಖಂಡಿಸಿ ಡಿ. 7ರಂದು ಹೆದ್ದಾರಿ ಬಂದ್ ಮಾಡುವ ಮೂಲಕ ಪ್ರತಿಭಟನೆ ನಡೆಸಲಾಗುವುದು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಎಚ್ಚರಿಸಿದರು.

    ಈ ಕುರಿತು ಉಪತಹಸೀಲ್ದಾರ್ ಆರ್.ಬಿ. ಬಂಕಾಪುರ ಅವರಿಗೆ ಬುಧವಾರ ಮನವಿ ಸಲ್ಲಿಸಿ ಬಳಿಕ ಮಾತನಾಡಿದರು.

    ತಾಲೂಕಿನ ಮಹಾದ್ವಾರದಂತಿರುವ ಮೋಟೆಬೆನ್ನೂರ ಗ್ರಾಮದ ಬಸ್ ನಿಲ್ದಾಣಕ್ಕೆ ನಿತ್ಯವೂ ಸಾವಿರಾರು ಜನ ಬಂದುಹೋಗುತ್ತಾರೆ. ಆದರೆ, ಹೆದ್ದಾರಿ ಕಾಮಗಾರಿಗಳು ಅಸಮರ್ಪಕವಾಗಿದ್ದು, ದುರಸ್ತಿ ಮಾಡಿಲ್ಲ. ಹೆದ್ದಾರಿಯಿಂದ ಸಾರ್ವಜನಿಕರಿಗೆ ಅನುಕೂಲಕ್ಕಿಂತ ತೊಂದರೆ ಹೆಚ್ಚಾಗಿದೆ. ಎರಡು ವರ್ಷಗಳಿಂದ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿದ್ದು, ಇಂಜಿನಿಯರ್​ಗಳ ವಿಳಂಬ ನೀತಿಯಿಂದ ಪ್ರಯಾಣಿಕರು ಹಾಗೂ ವಾಹನ ಚಾಲಕರು ಸಂಕಷ್ಟ ಎದುರಿಸುವಂತಾಗಿದೆ. ರಸ್ತೆ ದಾಟಲು ಎಲ್ಲ ರೈತರು ಹೆದ್ದಾರಿಯನ್ನು ಬಳಸಬೇಕಿದೆ.

    ಹಾವೇರಿ ಕಡೆಗೆ ತೆರಳುವ ಸಂಪರ್ಕ ರಸ್ತೆಯ ಡಾಂಬರು ಸಂಪೂರ್ಣ ಕಿತ್ತು ಹೋಗಿದೆ. ದ್ವಿಚಕ್ರ ವಾಹನ ಸವಾರರ ಸ್ಥಿತಿಯಂತೂ ಹೇಳತೀರದು. ತಾಲೂಕಿನ ಶಾಸಕರಿಂದ ಹಿಡಿದು, ಸಚಿವರು ಕೂಡ ಈ ರಸ್ತೆಯಲ್ಲೇ ಓಡಾಡುತ್ತಿದ್ದು, ಸಾರ್ವಜನಿಕರ ಕಾಳಜಿ ಇಲ್ಲದಂತಾಗಿದೆ ಎಂದರು.

    ತಾಲೂಕು ಅಧ್ಯಕ್ಷ ರುದ್ರಗೌಡ್ರ ಕಾಡನಗೌಡ್ರ ಮಾತನಾಡಿ, ತಾಲೂಕು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಜನಹಿತ ಮರೆತು ಆಡಳಿತ ನಡೆಸುತ್ತಿದ್ದಾರೆ. ತಾಲೂಕಿನ ಎಲ್ಲ ರಸ್ತೆಗಳ ಕಾಮಗಾರಿ ಕಳಪೆಯಾಗಿವೆ. ರಸ್ತೆ ಪಕ್ಕದಲ್ಲಿ ಜಂಗಲ್ ಬೆಳೆದು ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿ ಸಂಪರ್ಕ ರಸ್ತೆಗಳನ್ನು ಪೂರ್ಣಗೊಳಿಸಿಲ್ಲ. ಅಪಘಾತವಾದ ಬಳಿಕ ಅಧಿಕಾರಿಗಳು, ಅನುಕೂಲಕ್ಕೆ ತಕ್ಕಂತೆ ವರದಿ ನೀಡುತ್ತಾರೆ ಎಂದು ಆರೋಪಿಸಿದರು. ಅಧಿಕಾರಿಗಳ ನಿರ್ಲಕ್ಷ್ಯದಿಂದ ರಸ್ತೆಗಳು ನಿರ್ಮಾಣ ವಿಳಂಬವಾಗಿದ್ದು, ಇದನ್ನು ಖಂಡಿಸಿ ಡಿ. 7ರಂದು ಹೆದ್ದಾರಿ ತಡೆ ನಡೆಸುವುದಾಗಿ ತಿಳಿಸಿದರು. ರೈತ ಪದಾಧಿಕಾರಿಗಳಾದ ಗಂಗಣ್ಣ ಎಲಿ, ಮಲ್ಲೇಶಪ್ಪ ಡಂಬಳ, ಚಿಕ್ಕಪ್ಪ ಛತ್ರದ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts