More

    ಅಧಿಕೃತವಾಗಿ 6-8ನೇ ತರಗತಿ ಆರಂಭ ; ಮೊದಲ ದಿನ ಬಹುತೇಕ ಮಕ್ಕಳು ಹಾಜರು

    ಚಿಕ್ಕಬಳ್ಳಾಪುರ: ಕರೊನಾ ಆತಂಕದ ನಡುವೆ ಹಲವು ತಿಂಗಳ ಬಳಿಕ ಶಾಲೆಗಳಲ್ಲಿ 6 ರಿಂದ 8ನೇ ತರಗತಿಗಳು ಸೋಮವಾರದಿಂದ ಅಧಿಕೃತವಾಗಿ ಪ್ರಾರಂಭವಾಗಿದ್ದು, ಬಹುತೇಕ ಮಕ್ಕಳು ಮೊದಲ ದಿನ ಹಾಜರಾಗಿದ್ದರು.

    ಈಗಾಗಲೇ ಸ್ನಾತಕೋತ್ತರ ಪದವಿ, ಪದವಿ, ಪಿಯು ಮತ್ತು ಎಸ್ಸೆಸ್ಸೆಲ್ಸಿ ಹಾಗೂ 9ನೇ ತರಗತಿಗಳು ಯಶಸ್ವಿಯಾಗಿ ನಡೆಯುತ್ತಿವೆ. ಇದೀಗ 6 ರಿಂದ 8 ನೇ ತರಗತಿಗಳು ಪ್ರಾರಂಭವಾಗಿದ್ದು, ರಜೆಯ ಬಳಿಕ ಶಾಲಾ ಕಾಲೇಜುಗಳಿಗೆ ಹಾಜರಾದ ವಿದ್ಯಾರ್ಥಿಗಳನ್ನು ಮೊದಲ ದಿನ ಶಿಕ್ಷಕರು ಆತ್ಮೀಯವಾಗಿ ಸ್ವಾಗತಿಸಿದರು.

    ತರಗತಿಗಳ ಪ್ರಾರಂಭಕ್ಕೆ ಮೊದಲು ಶಾಲಾ ಕೊಠಡಿಗಳನ್ನು ಸ್ವಚ್ಛಗೊಳಿಸಿ ಸ್ಯಾನಿಟೈಸೇಷನ್ ಮಾಡಲಾಗಿತ್ತು. ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಾಲೆಗಳಿಗೆ ಭೇಟಿ ನೀಡಿ ಸಿದ್ಧತೆ ಪರಿಶೀಲಿಸಿದರು. ಸಿಬ್ಬಂದಿಗೆ ಕಡ್ಡಾಯವಾಗಿ ಕರೊನಾ ಮಾರ್ಗಸೂಚಿ ನಿಯಮಗಳನ್ನು ಪಾಲಿಸಲು ಸಲಹೆ ನೀಡಿದರು. ಮೊದಲ ದಿನ ಬಹುತೇಕ ಶಾಲೆಗಳಲ್ಲಿ ಪಠ್ಯ ಬೋಧನೆಯ ಬದಲಿಗೆ ಗಾಯನ, ಅಭಿನಯ ಸೇರಿ ಪಠ್ಯೇತರ ಚಟುವಟಿಕೆಗೆ ಆದ್ಯತೆ ನೀಡಲಾಗಿದೆ. ಇನ್ನು ಮೊದಲಿನಿಂದಲೂ ಆನ್‌ಲೈನ್ ಶಿಕ್ಷಣದ ಮೂಲಕ ಕಲಿಕೆ ನೀಡುತ್ತಿರುವ ಕೆಲ ಖಾಸಗಿ ಶಾಲೆಗಳು ಮಕ್ಕಳಿಗೆ ಟಕ ಪರೀಕ್ಷೆ ನಡೆಸಿವೆ.

    53,524 ವಿದ್ಯಾರ್ಥಿಗಳು: ಜಿಲ್ಲೆಯಲ್ಲಿ 419 ಸರ್ಕಾರಿ, 50 ಅನುದಾನಿತ, 190 ಅನುದಾನರಹಿತ, ಇತರ ಇಲಾಖೆ 27 ಸೇರಿ 1 ರಿಂದ 7ನೇ ತರಗತಿಯ 686 ಶಾಲೆಗಳು ಮತ್ತು 1 ರಿಂದ 8ನೇ ತರಗತಿಯ 108 ಸರ್ಕಾರಿ ಶಾಲೆಗಳು ಇವೆ. 6ನೇ ತರಗತಿಯಲ್ಲಿ 17,333, 7ನೇ ತರಗತಿಯಲ್ಲಿ 18,130, 8ನೇ ತರಗತಿಯಲ್ಲಿ 17,661 ಸೇರಿ ಒಟ್ಟು 53,524 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ.

    ಪಾಲಕರೊಂದಿಗೆ ಶಿಕ್ಷಕರ ಸಂಪರ್ಕ: ಮಕ್ಕಳನ್ನು ಶಾಲೆಗೆ ಕಳುಹಿಸಲು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಶಿಕ್ಷಕರು ಪಾಲಕರ ಸಂಪರ್ಕದಲ್ಲಿದ್ದು, ಕರೊನಾ ಮಾರ್ಗಸೂಚಿ ಕ್ರಮಗಳ ಬಗ್ಗೆ ತಿಳಿ ಹೇಳಿ ಮನವೊಲಿಸುತ್ತಿದ್ದಾರೆ. ಗೈರಾದ ಪಾಲಕರಿಗೆ ಮೊಬೈಲ್ ಕರೆ ಮಾಡಿ ಸಮಸ್ಯೆಗಳನ್ನು ಆಲಿಸುತ್ತಿದ್ದಾರೆ.

    ನಿಯಮ ಉಲ್ಲಂಘನೆ: ಪ್ರಸ್ತುತ 6 ರಿಂದ 8ನೇ ತರಗತಿಯವರೆಗಿನ ಭೌತಿಕ ತರಗತಿಗಳನ್ನು ಕೈಗೊಳ್ಳಲು ಸರ್ಕಾರ ಅನುಮತಿ ನೀಡಿದೆ. ಆದರೆ, ಈಗಾಗಲೇ ನಿಯಮ ಮೀರಿ ಎಲ್‌ಕೆಜಿ, ಯುಕೆಜಿ, 1 ರಿಂದ 5ನೇ ತರಗತಿಗಳು ಆತಂಕವಿಲ್ಲದೆ ನಡೆಯುತ್ತಿವೆ. ಆದರೆ, ಶಿಕ್ಷಣ ಸಂಸ್ಥೆಯಿಂದ ಮಕ್ಕಳನ್ನು ಕರೆತರಲು ಕೆಲವೆಡೆ ಬಸ್ ಸೌಕರ್ಯ ಒದಗಿಸಿಲ್ಲ, ಪಾಲಕರ ಮೇಲೆ ಜವಾಬ್ದಾರಿ ಹೊರಿಸಲಾಗಿದೆ. ಪ್ರಸ್ತುತ ಬೆಳಗ್ಗೆ 9.30 ರಿಂದ ಮಧ್ಯಾಹ್ನ 3 ರವರೆಗೆ ತರಗತಿಗಳು ನಡೆಯುತ್ತಿವೆ. ಸರ್ಕಾರದ ಆದೇಶಕ್ಕೂ ಕಿಮ್ಮತ್ತು ನೀಡಿಲ್ಲ. ಇನ್ನು ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳು ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts