More

    ಎಚ್.ಡಿ.ಕೋಟೆ ತಾಲೂಕಿನಲ್ಲಿ 56 ಸೂಕ್ಷ್ಮಮತಗಟ್ಟೆಗಳು

    ಎಚ್.ಡಿ.ಕೋಟೆ: ಲೋಕಸಭಾ ಚುನಾವಣೆಯ ಮತದಾನಕ್ಕೆ ಸಕಲ ಸಿದ್ಧತೆಗಳೊಡನೆ ಮತಗಟ್ಟೆಗೆ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ತಾಲೂಕಿನ ಮತಗಟ್ಟೆಗಳಿಗೆ ಕಳುಹಿಸಲಾಗಿದೆ ಎಂದು ತಹಸೀಲ್ದಾರ್ ಶ್ರೀನಿವಾಸ್ ತಿಳಿಸಿದರು.


    ಪಟ್ಟಣದ ಸೇಂಟ್ ಮೇರಿಸ್ ಶಾಲಾ ಆವರಣದಲ್ಲಿ ಗುರುವಾರ ತೆರೆದಿದ್ದ ಮಸ್ಟರಿಂಗ್ ಕೇಂದ್ರದಲ್ಲಿ ಮಾತನಾಡಿದ ಅವರು, ತಾಲೂಕಿನಲ್ಲಿ 282 ಮತಗಟ್ಟೆಗಳು ಇದ್ದು 28 ಸೆಕ್ಟರ್‌ಗಳನ್ನು ರಚಿಸಿ ಅಧಿಕಾರಿಗಳನ್ನು ನಿಯೋಜಿಸಿ ಪ್ರತಿ ಸೆಕ್ಟರ್ ಅಧಿಕಾರಿಗೆ 10 ಮತಗಟ್ಟೆಗಳ ಜವಾಬ್ದಾರಿ ನೀಡಲಾಗಿದೆ ಎಂದರು.


    ಭದ್ರತಾ ದೃಷ್ಟಿಯಿಂದ 1 ಡಿವೈಎಸ್ಪಿ, 5 ಇನ್‌ಸ್ಪೆಕ್ಟರ್, 14 ಸಬ್ ಇನ್‌ಸ್ಪೆಕ್ಟರ್, 16 ಎಎಸ್‌ಐ, 242 ಪೊಲೀಸ್ ಕಾನ್‌ಸ್ಟೆಬಲ್, 16 ಪ್ಯಾರಾ ಮಿಲಿಟರಿ, 201 ಗೃಹರಕ್ಷಕ ದಳದ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. 45 ಸಾರಿಗೆ ಸಂಸ್ಥೆ ಬಸ್ ಹಾಗೂ 12 ಖಾಸಗಿ ವಾಹನಗಳನ್ನು ಸಂಚಾರ ವ್ಯವಸ್ಥೆಗೆ ಬಳಕೆ ಮಾಡಿಕೊಳ್ಳಲಾಗಿದೆ.


    56 ಸೂಕ್ಷ್ಮ ಮತಗಟ್ಟೆಗಳಿವೆ. ಮುಂಜಾಗ್ರತಾ ಕ್ರಮವಾಗಿ ಪ್ರತಿಯೊಂದು ಮತಗಟ್ಟೆ ಕೇಂದ್ರಕ್ಕೆ ವೆಬ್ ಕಾಸ್ಟಿಂಗ್ ಕ್ಯಾಮರಾ ಅಳವಡಿಸಲಾಗಿದೆ. ಮತಗಟ್ಟೆ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಸರ್ಕಾರಿ ಶಾಲೆಗಳಲ್ಲಿ ಅಕ್ಷರ ದಾಸೋಹ ಸಿಬ್ಬಂದಿ ಊಟ, ತಿಂಡಿ ವ್ಯವಸ್ಥೆ ಮಾಡಲಿದ್ದಾರೆ. ಮತದಾನದ ನಂತರ ಮತಯಂತ್ರಗಳನ್ನು ಸುರಕ್ಷಿತವಾಗಿ ಇಡಲು 6 ಭದ್ರತಾ ಕೊಠಡಿಗಳನ್ನು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.


    ತಾಲೂಕು ಪಂಚಾಯತಿ ಇಒ ಧರಣೀಶ್ ಮಾತನಾಡಿ, ತಾಲೂಕಿನಲ್ಲಿ ಹೆಚ್ಚು ಮತದಾನ ಆಗುವಂತೆ ಮಾಡಲು ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳಿಂದ ಹಾಗೂ ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ ಈಗಾಗಲೇ ಜಾಗೃತಿ ಮೂಡಿಸಲಾಗಿದೆ. ಕೆಲವು ಮತಗಟ್ಟೆಗಳನ್ನು ಆಕರ್ಷಿಸಲು 5 ಸಖಿ, 1 ಯುವ, 1 ಅಂಗವಿಕಲರ, 3 ಸಾಂಪ್ರದಾಯಿಕ, 1 ವಿಷಯಾಧಾರಿತ ಮತಗಟ್ಟೆಗಳನ್ನು ತೆರೆಯಲಾಗಿದೆ ಎಂದು ಮಾಹಿತಿ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts