More

    ನಗರದೆಲ್ಲೆಡೆ ರಾಜ್ಯೋತ್ಸವ, ಕನ್ನಡ ಕಲರವ : ರಾರಾಜಿಸಿದ ಹಳದಿ- ಕೆಂಪು ಭಾವುಟ

    ಬೆಂಗಳೂರು:ನಗರದಾದ್ಯಂತ ಸಂಭ್ರಮದಿಂದ ಕನ್ನಡ ರಾಜ್ಯೋತ್ಸವ ಆಚರಣೆಗೊಂಡಿತು. ಎಲ್ಲೆಡೆ ಹಳದಿ -ಕೆಂಪು ಬಾವುಟ ರಾರಾಜಿಸಿದವು. ನಾಡು-ನುಡಿ-ಸಂಸ್ಕೃತಿ ಬಿಂಬಿಸುವ ಕನ್ನಡ ಗೀತೆಗಳ ಕಲರವ. ದೇವಾಲಯಗಳಲ್ಲೂ ಮೊಳಗಿದ ಕನ್ನಡ ನಾದ. ರಸ್ತೆಗಳಲ್ಲಿ ಜಾನಪದ ಕಲಾಮೇಳಗಳ ಮೆರವಣಿಗೆ ಹೀಗೆ ಹಲವು ವಿಧಗಳಲ್ಲಿ ರಾಜ್ಯೋತ್ಸವ ಜರುಗಿತು.

    ಹೆಸರಾಯಿತು ಕರ್ನಾಟಕ- 50: ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ‘ಹೆಸರಾಯಿತು ಕರ್ನಾಟಕ-50’ ಶೀರ್ಷಿಕೆಯಡಿ ದಿನವಿಡೀ ಕನ್ನಡ ಕಾರ್ಯಕ್ರಮಗಳು ಆಚರಣೆಗೊಂಡವು. ಕನ್ನಡ ಧ್ವಜಾರೋಹಣ ಮಾಡಿದ ಪರಿಷತ್ತು ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಮಾತನಾಡಿ, ಕರ್ನಾಟಕ ಸುವರ್ಣ ಸಂಭ್ರಮದ ಅಂಗವಾಗಿ ವರ್ಷ ಪೂರ್ತಿ ಸಂಭ್ರಮಾಚರಣೆ ಮಾಡಲಾಗುವುದು ಎಂದು ಹೇಳಿದರು.

    ವಿದ್ವಾಂಸ ಡಾ.ಟಿ.ವಿ. ವೆಂಕಟಾಚಲಶಾಸೀ ಕಸಾಪ ಪತ್ರಿಕೆಯ ವಿಶೇಷ ಸಂಚಿಕೆ ಬಿಡುಗಡೆ ಮಾಡಿದರು. ಏಕೀಕರಣಕ್ಕಾಗಿ ಹುತಾತ್ಮರಾದ ರಂಸಾನ್‌ಸಾಬ್ ಅವರ ಮೊಮ್ಮಗ ಶರ್ಮಾಸ್ ವಲಿ ಅವರನ್ನು ಅಭಿನಂದಿಸಲಾಯಿತು. ಶಿಕ್ಷಣ ತಜ್ಞ ಗುರುರಾಜ ಕರಜಗಿ ‘ಒಂದೇ ಒಂದೇ ಕರ್ನಾಟಕ ಒಂದೇ’ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು. ಕವಯಿತ್ರಿ ಪಿ. ಚಂದ್ರಿಕಾ ಅಧ್ಯಕ್ಷತೆಯಲ್ಲಿ ‘ಚಿರಂತನ ಕರ್ನಾಟಕ’ ಕವಿಗೋಷ್ಠಿ ಜರುಗಿತು. ಭಾಗ್ಯಶ್ರೀ ಗೌಡ ಮತ್ತು ತಂಡದಿಂದ ‘ಹಚ್ಚೇವು ಕನ್ನಡದ ದೀಪ’ ಗೀತ ಗಾಯನ ನಡೆಯಿತು. ಸಾಹಿತಿ ದೊಡ್ಡರಂಗೇಗೌಡ ಸಮಾರೋಪ ಭಾಷಣ ಮಾಡಿದರು. ಮುಖ್ಯ ಮಾಹಿತಿ ಆಯುಕ್ತ ಎನ್.ಸಿ. ಶ್ರೀನಿವಾಸ ಇದ್ದರು.

    ದೇವಾಲಯಗಳಲ್ಲಿ ಕನ್ನಡ ನಾದ: ಬೆಂಗಳೂರಿನ ಶ್ರೀ ಬನಶಂಕರಿ ದೇವಾಲಯದಲ್ಲಿನ ಬನಶಂಕರಿ ದೇವಿಗೆ ರಾಜ್ಯೋತ್ಸವ ಪ್ರಯುಕ್ತ ವಿಶೇಷವಾಗಿ ಭುವನೇಶ್ವರಿ ಅಲಂಕಾರ ಮಾಡಲಾಗಿತ್ತು. ಬೆಳಗ್ಗೆ ದೇವಿಗೆ ವಿಶೇಷ ಪೂಜೆ ಬಳಿಕ ದೇವಾಲಯದ ಆವರಣದಲ್ಲಿ ಕನ್ನಡ ಧ್ವಜಾರೋಹಣ ನೆರವೇರಿಸಲಾಯಿತು. ರಾಷ್ಟ್ರಗೀತೆ, ನಾಡಗೀತೆ ಸೇರಿ ಕನ್ನಡ ಗೀತೆಗಳನ್ನು ಹಾಡಲಾಯಿತು. ಕಲಾವಿದರಿಂದ ಸಂಗೀತ ಹಾಗೂ ನೃತ್ಯ ಕಾರ್ಯಕ್ರಮಗಳು ನಡೆದವು. ರಾತ್ರಿ ದೇವಾಲಯದ ಆವರಣದಲ್ಲಿ ದೀಪಗಳನ್ನು ಬೆಳಗಿಸುವ ಮೂಲಕ ವಿಶಿಷ್ಠವಾಗಿ ರಾಜ್ಯೋತ್ಸವ ಆಚರಿಸಲಾಯಿತು.

    ಬಿಎಂಟಿಸಿಯಲ್ಲಿ ಕನ್ನಡ ಸ್ತಬ್ಧಚಿತ್ರ: ಶಾಂತಿನಗರದ ಬಿಎಂಟಿಸಿ ಕೇಂದ್ರ ಕಚೇರಿಯಲ್ಲಿ ಕನ್ನಡ ರಾಜ್ಯೋತ್ಸವ ಅಂಗವಾಗಿ ಸಿದ್ಧಪಡಿಸಲಾದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಭಾವಚಿತ್ರ, ಬಿಎಂಟಿಸಿಯ ರಜತ ಮಹೋತ್ಸವದ ಚಿತ್ರ ಹಾಗೂ ಶಕ್ತಿ ಯೋಜನೆಯ ಸಂದೇಶವಿರುವ ಕನ್ನಡ ಸ್ತಬ್ಧಚಿತ್ರವನ್ನು ಉದ್ಘಾಟಿಸಲಾಯಿತು. ಇದೇ ವೇಳೆ ಗೀತಗಾಯನ ಏರ್ಪಡಿಸಲಾಗಿತ್ತು. ಬಿಎಂಟಿಸಿ ಎಂಡಿ ಜಿ. ಸತ್ಯವತಿ, ನಿರ್ದೇಶಕಿ ಕಲಾ ಕೃಷ್ಣಸ್ವಾಮಿ, ಕೇಂದ್ರ ಕನ್ನಡ ಕ್ರಿಯಾ ಸಮಿತಿಯ ಗೌರವಾಧ್ಯಕ್ಷ ಡಾ. ಮನು ಬಳಿಗಾರ್ ಇತರರು ಇದ್ದರು.

    ಭುವನೇಶ್ವರಿಗೆ ಪುಷ್ಪ ನಮನ: ಕೆಎಸ್‌ಆರ್‌ಟಿಸಿ ಕೇಂದ್ರ ಕಚೇರಿಯಲ್ಲಿ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ರಾಜ್ಯೋತ್ಸವ ಆಚರಿಸಲಾಯಿತು. ಕರ್ನಾಟಕ ಸಂಭ್ರಮ 50ರ ಅಂಗವಾಗಿ ನೀಡಲಾದ ಐದು ಗೀತೆಗಳನ್ನು ಹಾಡುವ ಮೂಲಕ ಸಿಬ್ಬಂದಿ ಕನ್ನಡ ಪ್ರೇಮವನ್ನು ಮೆರೆದರು. ಕೆಎಸ್‌ಆರ್‌ಟಿಸಿ ಎಂಡಿ ವಿ. ಅನ್ಬುಕುಮಾರ್, ನಿರ್ದೇಶಕಿ ಡಾ. ನಂದಿನಿ ದೇವಿ ಇತರರಿದ್ದರು.

    ಚಾಮರಾಜಪೇಟೆಯಲ್ಲಿ ಕನ್ನಡ ಕಲರವ: ಚಾಮರಾಜಪೇಟೆ ನಾಡಹಬ್ಬದ ಕನ್ನಡ ರಾಜ್ಯೋತ್ಸವ ಸಮಿತಿ 3ನೇ ಮುಖ್ಯರಸ್ತೆಯಲ್ಲಿ ಹಮ್ಮಿಕೊಂಡಿದ್ದ ರಾಜ್ಯೋತ್ಸವದಲ್ಲಿ ಕನ್ನಡ ಕಲರವ ಮೊಳಗಿತು. ನಾಡದೇವಿ ಭುವನೇಶ್ವರಿ, ರಾಜರಾಜೇಶ್ವರಿ, ಮಲೆ ಮಹದೇಶ್ವರಸ್ವಾಮಿ, ಆದಿಶಕ್ತಿ ಚಿಕ್ಕಣ್ಣಮ್ಮ, ಗಂಗಮ್ಮ ಹಾಗೂ ಹೊನ್ನಾಳಮ್ಮ ದೇವಿ ಮೆರವಣಿಗೆಯಲ್ಲಿ ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ್ದ ಜಾನಪದ ಕಲಾತಂಡಗಳು ಪಾಲ್ಗೊಂಡಿದ್ದವು. ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮೊಹಮ್ಮದ್ ಹ್ಯಾರಿಸ್ ನಲಪಾಡ್, ಪಾಲಿಕೆ ಮಾಜಿ ಸದಸ್ಯರಾದ ಸುಜಾತಾ, ಬಿ.ವಿ. ಗಣೇಶ್ ಇತರರು ಇದ್ದರು.

    ಓದು ಕನ್ನಡ ಮಾತಾಡು ಅಭಿಯಾನ: ರಾಜ್ಯೋತ್ಸವ ಪ್ರಯುಕ್ತ ವೃಕ್ಷ ಸೇವಾ ಪ್ರತಿಷ್ಠಾನ ‘ಓದು ಕನ್ನಡ ಮಾತಾಡು’ ಅಭಿಯಾನ ಹಮ್ಮಿಕೊಂಡಿತ್ತು. ಕನ್ನಡ ಬರದವರಿಗೆ ಕನ್ನಡ ಕಲಿಸಿ, ಒದಿಸುವ, ಮಾತನಾಡಿಸುವ ಪ್ರಯತ್ನ ಮಾಡುವುದು ಇದರ ಉದ್ದೇಶವಾಗಿದೆ. ಈ ಜಾಥಾಗೆ ಕನ್ನಡ ಸಾಹಿತ್ಯ ಪರಿಷತ್ತಿನ ಭುವನೇಶ್ವರಿ ಪ್ರತಿಮೆ ಎದುರು ಡಾ. ಮಹೇಶ ಜೋಶಿ ಚಾಲನೆ ನೀಡಿದರು. ವಿವಿಧ ಕಾಲೇಜುಗಳ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡು ಕುವೆಂಪು ಅವರ ಕವನ ವಾಚಿಸಿದರು. ಇದೇ ವೇಳೆ ಕನ್ನಡ ಪುಸ್ತಕಗಳನ್ನು ವಿತರಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts