More

    ಕನಕಾಚಲಪತಿ ಸನ್ನಿಧಾನದಲ್ಲಿ ಸಪ್ತಪದಿ ತುಳಿದ 50 ನವಜೋಡಿ; ಶುಭ ಹಾರೈಸಿದ ಸಾವಿರಾರು ಜನರು

    ಕನಕಗಿರಿ: ಮುಜರಾಯಿ ಇಲಾಖೆಯ ಮಹತ್ವಾಕಾಂಕ್ಷಿ ಯೋಜನೆಯಾದ ಎರಡನೇ ಹಂತದ ಸಪ್ತಪದಿ ಸಾಮೂಹಿಕ ವಿವಾಹ ಕಾರ್ಯಕ್ರಮವು ಪಟ್ಟಣದ ಐತಿಹಾಸಿಕ ಕನಕಾಚಲಪತಿ ದೇವಸ್ಥಾನದಲ್ಲಿ ಗುರುವಾರ ಜರುಗಿದ್ದು, 50 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟವು.

    ಐವರು ರಾಜಪುರೋಹಿತರ ಪೌರೋಹಿತ್ಯದಲ್ಲಿ ನೆರವೇರಿದ ಸಪ್ತಪದಿ ಕಾರ್ಯಕ್ರಮದಲ್ಲಿ, ಸಾವಿರಾರು ಜನರು ಭಾಗವಹಿಸಿ ನವ ವಧು-ವರರನ್ನು ಆಶೀರ್ವದಿಸಿದರು. ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಶಾಸಕ ಬಸವರಾಜ ದಢೇಸುಗೂರು ಮಾತನಾಡಿ, ಸಪ್ತಪದಿ ಕಾರ್ಯಕ್ರಮ ಬಡವರಿಗೆ ಅನುಕೂಲವಾಗಿದೆ. ಈ ಯೋಜನೆ ಜಾರಿಗೊಂಡ ವರ್ಷವೇ ಕನಕಾಚಲ ದೇವಸ್ಥಾನದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲು 300ಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದವು. ಆದರೆ, ಕರೊನಾ ಕಾರಣ ಮುಂದೂಡಿದಾಗ 11 ಜೋಡಿಗಳು ಕಾಲಿರಿಸಿದ್ದವು. ಇದರಂತೆ ಬೇರೆ ಬೇರೆ ದೇವಸ್ಥಾನಗಳಲ್ಲೂ ಯೋಜನೆ ಯಶಸ್ವಿಗೊಂಡಿದೆ. ಜೀವನವೆಂಬ ಬಂಡಿಗೆ ಗಂಡ ಹೆಂಡತಿಯೇ ಚಕ್ರಗಳು. ಇದರಂತೆ ಗಂಡ ಹೆಂಡತಿಯೂ ಸಾಗಬೇಕು. ಸಣ್ಣ ಪುಟ್ಟ ಸಮಸ್ಯೆಗಳನ್ನು ಬದಿಗೊತ್ತಿ ಜೀವನ ಸಾಗಿಸಬೇಕು ಎಂದು ಕಿವಿಮಾತು ಹೇಳಿದರು.

    ತಹಸೀಲ್ದಾರ್ ಹಾಗೂ ದೇವಸ್ಥಾನ ಇಒ ಧನಂಜಯ ಮಾಲಗಿತ್ತಿ ಮಾತನಾಡಿ, ಕನಕಾಚಲ ದೇವಸ್ಥಾನ ಆರ್ಥಿಕವಾಗಿ ಹಿಂದುಳಿದಿದ್ದರೂ 2ನೇ ಹಂತದ ಕಾರ್ಯಕ್ರಮದಲ್ಲಿ 50 ಜೋಡಿ ನವ ಜೀವನಕ್ಕೆ ಕಾಲಿರಿಸಿದ್ದು ದಾಖಲೆಯಾಗಿದೆ ಎಂದರು.

    ಸುಳೇಕಲ್ ಬೃಹನ್ಮಠದ ಪದ್ಮಾಕ್ಷರಯ್ಯ ತಾತ, ಮಾಜಿ ಶಾಸಕ ಜಿ.ವೀರಪ್ಪ ಕೇಸರಹಟ್ಟಿ, ಪಪಂ ಮಾಜಿ ಅಧ್ಯಕ್ಷ ರವೀಂದ್ರ ಸಜ್ಜನ್, ಪ್ರಮುಖರಾದ ಬಿ.ಕನಕಪ್ಪ, ಜಿ.ತಿಮ್ಮನಗೌಡ, ಮುದಿಯಪ್ಪ ಮಲ್ಲಿಗೆವಾಡ, ವೀರೇಶ ಸಾಲೋಣಿ, ಮಹಾಂತೇಶ ಸಜ್ಜನ್, ಸಣ್ಣ ಕನಕಪ್ಪ, ವೀರೇಶ ಕಡಿ, ರಂಗಪ್ಪ ಕೊರಗಟಗಿ, ದುರುಗಪ್ಪ ದೊಡ್ಡಮನಿ ಬೈಲಕ್ಕುಂಪುರ, ಎಸಿಡಿಪಿಒ ವಿಮಲಪ್ಪ, ದೇವಸ್ಥಾನದ ನೌಕರ ಸಿದ್ದಲಿಂಗಯ್ಯಸ್ವಾಮಿ ಇತರರಿದ್ದರು.

    ಕನಕಾಚಲಪತಿ ಸನ್ನಿಧಾನದಲ್ಲಿ ಸಪ್ತಪದಿ ತುಳಿದ 50 ನವಜೋಡಿ; ಶುಭ ಹಾರೈಸಿದ ಸಾವಿರಾರು ಜನರು
    ಚಿದಾನಂದ ಮಠದ ಆವರಣದಲ್ಲಿ ಪ್ರಸಾದ ಸವಿದ ಜನರು.


    ಹುಗ್ಗಿ, ಅನ್ನ, ಸಾರು ಸವಿದ ಭಕ್ತರು
    ಸಪ್ತಪದಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಲು ಬಂದಿದ್ದ ವಧು-ವರರು ಹಾಗೂ ಸಂಬಂಧಿಕರಿಗಾಗಿ ಸುಳೇಕಲ್‌ನ 50 ಜನ ಬಾಣಸಿಗರ ತಂಡ 10 ಕ್ವಿಂಟಾಲ್ ಹುಗ್ಗಿ, 12 ಕ್ವಿಂಟಾಲ್ ಅನ್ನ, ಸಾರು, ಬದನೆಕಾಯಿ ಪಲ್ಲೆ ತಯಾರಿಸಿತ್ತು. ಚಿದಾನಂದ ಮಠದ ಆವರಣದಲ್ಲಿ ಊಟದ ವ್ಯವಸ್ಥೆ ಕಲ್ಪಿಸಲಾಗಿತ್ತು. ಸಾವಿರಾರು ಜನರು ಭೋಜನ ಸವಿದು ಸಂತೃಪ್ತರಾದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts