More

    5 ವರ್ಷದಿಂದ ನಡೆದಿಲ್ಲ ಬಡ್ತಿ ಪ್ರಕ್ರಿಯೆ

    ಸುಭಾಸ ಧೂಪದಹೊಂಡ ಕಾರವಾರ: ಉತ್ತರ ಕನ್ನಡ ಶೈಕ್ಷಣಿಕ ಜಿಲ್ಲೆಯ ಪ್ರಾಥಮಿಕ ಶಾಲಾ ಶಿಕ್ಷಕರ ಬಡ್ತಿಗೆ ಗ್ರಹಣ ಹಿಡಿದಿದೆ.

    ಪದವಿ, ಬಿಎಡ್ ಓದಿದ (1 ರಿಂದ 5ನೇ ತರಗತಿ) ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಪ್ರೌಢಶಾಲೆ ಸಹ ಶಿಕ್ಷಕರು ಗ್ರೇಡ್ 2 ಹುದ್ದೆಗೆ ಬಡ್ತಿ ನೀಡಲು ಅವಕಾಶವಿದೆ. ಪ್ರೌಢಶಾಲೆಗಳಲ್ಲಿ ಖಾಲಿಯಾದ ವಿಷಯವಾರು ಹುದ್ದೆಗಳನ್ನು ಆಧರಿಸಿ ಶೇ. 50ರಷ್ಟು ಹುದ್ದೆಗಳನ್ನು ನೇಮಕಾತಿ ಮೂಲಕ, ಶೇ. 50ರಷ್ಟು ಹುದ್ದೆಗಳನ್ನು ಬಡ್ತಿಯ ಮೂಲಕ ತುಂಬಬೇಕು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಸುತ್ತೋಲೆ ಹೇಳುತ್ತದೆ. ಆದರೆ, ಉತ್ತರ ಕನ್ನಡ ಶೈಕ್ಷಣಿಕ ಜಿಲ್ಲೆಯಲ್ಲಿ ಮಾತ್ರ 2014-15ರ ನಂತರ ಯಾವುದೇ ಬಡ್ತಿ ಪ್ರಕ್ರಿಯೆಯೇ ನಡೆದಿಲ್ಲ. ಇದರಿಂದ ಇಲ್ಲಿ ಯಾವುದೋ ಕಾಣದ ಕೈಗಳ ಕೈವಾಡ ಅಥವಾ ಲಾಬಿ ಕೆಲಸ ಮಾಡುತ್ತಿದೆಯೇ ಎಂಬ ಅನುಮಾನ ಅರ್ಹ ಶಿಕ್ಷಕರಲ್ಲಿ ಬರಲಾರಂಭಿಸಿದೆ.

    ಜಿಲ್ಲೆಗೆ ಮಾತ್ರ ಏಕಿಲ್ಲ…?: ರಾಜ್ಯದ ವಿವಿಧೆಡೆ ಬಡ್ತಿ ಪ್ರಕ್ರಿಯೆ ನಿರಂತರವಾಗಿ ನಡೆದಿದೆ. 2019-20ರಲ್ಲಿ ಶಿರಸಿ ಶೈಕ್ಷಣಿಕ ಜಿಲ್ಲೆ, ಹಾವೇರಿ, ಧಾರವಾಡ ಸೇರಿ ರಾಜ್ಯದ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಈ ಬಡ್ತಿ ನೀಡಲಾಯಿತು. ಆದರೆ, ಉತ್ತರ ಕನ್ನಡದಲ್ಲಿ ಮಾತ್ರ ಕೌನ್ಸೆಲಿಂಗ್ ನಡೆದಿಲ್ಲ. 2019ರ ಡಿಸೆಂಬರ್​ನಲ್ಲಿ ಒಮ್ಮೆ, 2020ರ ಮಾರ್ಚ್​ನಲ್ಲಿ ಒಮ್ಮೆ ಈ ಬಡ್ತಿ ನೀಡಲು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಕಮಿಷನರ್ ಅವರಿಂದ ಗಡುವು ನೀಡಲಾಯಿತು. ಆದರೆ, ಆಗಲೂ ಈ ಪ್ರಕ್ರಿಯೆ ಮಾತ್ರ ನಡೆದಿಲ್ಲ. ಡಿಸೆಂಬರ್​ನಲ್ಲಿ ಮಾಡಿಲ್ಲ. ಮಾರ್ಚ್​ನಲ್ಲಿ ಕರೊನಾ ಬಂದು ಎಲ್ಲ ಕಾರ್ಯಗಳೂ ನಿಲ್ಲುವಂತಾಯಿತು. ಎಲ್ಲ ಜಿಲ್ಲೆಗಳಲ್ಲೂ ಆಗುವ ಪ್ರಕ್ರಿಯೆ ಜಿಲ್ಲೆಗೆ ಮಾತ್ರ ಏಕಿಲ್ಲ ಎಂಬುದು ಅರ್ಹ ಶಿಕ್ಷಕರ ಪ್ರಶ್ನೆ.

    ಒಂದೇ ಬಡ್ತಿ: ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬಡ್ತಿಯ ಅವಕಾಶ ಇದೊಂದೆ. ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಒಟ್ಟಾರೆ ನೂರಕ್ಕೂ ಅಧಿಕ ಅರ್ಹ ಶಿಕ್ಷಕರು ಜಿಲ್ಲೆಯಲ್ಲಿದ್ದಾರೆ. ಆಗಾಗ ಕೆಲ ವಿಷಯಗಳಿಗೆ ಹುದ್ದೆಗಳೂ ಸೃಷ್ಟಿಯಾಗುತ್ತಿವೆ. ಆದರೆ, ಅಧಿಕಾರಿಗಳ ನಿರ್ಲಕ್ಷ್ಯ ಅಥವಾ ಸ್ವಜನ ಪಕ್ಷಪಾತದಿಂದಲೋ ಬಡ್ತಿ ಪ್ರಕ್ರಿಯೆ ನಡೆಯುತ್ತಿಲ್ಲ. ಶಿಕ್ಷಕರು ಅವಕಾಶದಿಂದ ವಂಚಿತರಾಗುತ್ತಿದ್ದಾರೆ. ಈ ಬಗ್ಗೆ ಶಿಕ್ಷಕರ ಸಂಘಕ್ಕೋ, ಅಧಿಕಾರಿಗಳಿಗೋ ಮನವಿ ಮಾಡಿಕೊಂಡರೂ ಪ್ರಯೋಜನವಾಗುತ್ತಿಲ್ಲ ಎಂದು ಶಿಕ್ಷಕರು ಬೇಸರ ವ್ಯಕ್ತಪಡಿಸುತ್ತಾರೆ.

    ಜಿಲ್ಲೆಯ ವಿವಿಧ ಸರ್ಕಾರಿ ಹೈಸ್ಕೂಲ್​ಗಳಲ್ಲಿ ಖಾಲಿ ಇರುವ ಹುದ್ದೆಗಳ ಪಟ್ಟಿಯನ್ನು ಪಡೆಯಲಾಗಿದೆ. ಕೆಲವು ಬಿಆರ್​ಪಿ, ಸಿಆರ್​ಪಿಗಳಾಗಿ ಹೋಗಿದ್ದು, ಅಂಥ ಹುದ್ದೆಗಳನ್ನು ಪರಿಗಣಿಸಿ ಶೀಘ್ರ ಬಡ್ತಿ ಕೌನ್ಸೆಲಿಂಗ್ ನಡೆಸಲಾಗುವುದು. | ಹರೀಶ ಗಾಂವಕರ್ ಡಿಡಿಪಿಐ

    ಬೇರೆ ಜಿಲ್ಲೆಗಳಂತೆ ಜಿಲ್ಲೆಯಲ್ಲಿ ಪ್ರೌಢಶಾಲಾ ಸಹ ಶಿಕ್ಷಕ ಹುದ್ದೆಗಳು ಖಾಲಿಯಾಗುತ್ತಿಲ್ಲ. ಇದ್ದವರೇ ಹೆಚ್ಚುವರಿಯಾಗಿದ್ದಾರೆ. ಇದ್ದಷ್ಟು ಹುದ್ದೆಗಳಿಗಾದರೂ ನಿಯಮಾವಳಿಯಂತೆ ಬಡ್ತಿ ನೀಡಲು ಡಿಡಿಪಿಐ ಅವರ ಬಳಿ ಮನವಿ ಮಾಡಿದ್ದೇನೆ. ಆನಂದು ಗಾಂವಕರ್ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ

    ಹುದ್ದೆಗಳು ಖಾಲಿಯಾದ ನಂತರ ಮೊದಲು ಬಡ್ತಿ ಪ್ರಕ್ರಿಯೆ ನಡೆಸಿ ನಂತರ ವರ್ಗಾವಣೆಗೆ ಖಾಲಿ ಹುದ್ದೆ ತೋರಿಸಬೇಕು. ಆದರೆ, ನಮ್ಮ ಶೈಕ್ಷಣಿಕ ಜಿಲ್ಲೆಯಲ್ಲಿ ಹಾಗೆ ಮಾಡದೇ ನೇರವಾಗಿ ಹೊರ ಜಿಲ್ಲೆಗಳಿಂದ ವರ್ಗಾವಣೆಗೆ ಅವಕಾಶ ಕಲ್ಪಿಸುತ್ತಿರುವುದರಿಂದ ಜಿಲ್ಲೆಯ ಶಿಕ್ಷಕರಿಗೆ ಅನ್ಯಾಯವಾಗುತ್ತಿದೆ. | ಹೆಸರು ಹೇಳಲಿಚ್ಛಿಸದ ಪ್ರಾಥಮಿಕ ಶಾಲಾ ಶಿಕ್ಷಕರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts