More

    9 ತಿಂಗಳಲ್ಲಿ 470 ಕೋಟಿ ಸೈಬರ್ ಕಳ್ಳರ ಪಾಲು; ಅತೀ ಹೆಚ್ಚು ಯಾವ ರೀತಿ ವಂಚನೆ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ 9 ತಿಂಗಳ ಅವಧಿಯಲ್ಲಿ ಬರೋಬ್ಬರಿ 470 ಕೋಟಿ ರೂ. ಸೈಬರ್ ಕಳ್ಳರ ಜೇಬು ಸೇರಿದೆ.
    ಆನ್‌ಲೈನ್‌ನಲ್ಲಿ ನೌಕರಿ ಕೊಡಿಸುವ ನೆಪದಲ್ಲಿಯೇ ಅತೀ ಹೆಚ್ಚು (204 ಕೋಟಿ ರೂ.) ಹಣ ವಂಚನೆ ಆಗಿದ್ದು, ಆನಂತರದಲ್ಲಿ ಡೆಬಿಟ್/ಕ್ರೆಡಿಟ್ ಕಾರ್ಡ್(60.86 ಕೋಟಿ ರೂ.) ಮತ್ತು ಹೊಸ ಉದ್ಯಮ ಹೆಸರಿನಲ್ಲಿ(60.53 ಕೋಟಿ ರೂ.) ಸೈಬರ್ ಖದೀಮರು ಮೋಸ ಮಾಡಿರುವುದು ಬೆಳಕಿಗೆ ಬಂದಿದೆ.

    ಬುಧವಾರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ನಗರ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್, ಸೈಬರ್ ಕ್ರೈಂ ಅಪರಾಧಗಳ ಕುರಿತು ಮಾಹಿತಿ ನೀಡಿದರು. ಸೈಬರ್ ವಂಚನೆಗೆ ಒಳಗಾಗದ ಸಂತ್ರಸ್ತರು, ಸಿಇಎನ್ ಠಾಣೆ ಅಲ್ಲದೆ ಸಿವಿಲ್ ಪೊಲೀಸ್ ಠಾಣೆಗಳಲ್ಲಿಯೂ ದೂರು ದಾಖಲಿಸಲು ಅವಕಾಶ ನೀಡಲಾಗಿದೆ. ಇದರ ಪರಿಣಾಮ ದಿನೇ ದಿನೆ ಹೆಚ್ಚು ಹೆಚ್ಚು ಸೈಬರ್ ಕ್ರೈಂ ಪ್ರಕರಣಗಳು ದಾಖಲಾಗುತ್ತಿದ್ದು, ವಿಶ್ಲೇಷಣೆ ಮಾಡಿ ತಡೆಗಟ್ಟುವ ಬಗ್ಗೆ ಕ್ರಮ ತೆಗೆದುಕೊಳ್ಳಲು ಅನುಕೂಲವಾಗಿದೆ. 2023ರ ಜನವರಿಯಿಂದ ಸೆಪ್ಟೆಂಬರ್ ನಡುವೆ 18 ವಿವಿಧ ಬಗೆಯ 12,615 ಸೈಬರ್ ಕ್ರೈಂವಂಚನೆ ಪ್ರಕರಣಗಳು ದಾಖಲಾಗಿವೆ. 470 ಕೋಟಿ ರೂ. ಮೊತ್ತ ವಂಚನೆ ಆಗಿರುವುದು ಬೆಳಕಿಗೆ ಬಂದಿದೆ. ಮಾಹಿತಿ ಬಂದ ಕೂಡಲೇ ಆರೋಪಿತರ ಬ್ಯಾಂಕ್ ಖಾತೆ, ವ್ಯಾಲೆಟ್ ಸೇರಿದಂತೆ ವಿವಿಧೆಡೆ 201 ಕೋಟಿ ರೂ. ಜಪ್ತಿ ಮಾಡಲಾಗಿದೆ. 28.40 ಕೋಟಿ ರೂ. ಹಿಂಪಡೆದು ಕಾನೂನು ಪ್ರಕಾರ ವಾರಸುದಾರರಿಗೆ 27.68 ಕೋಟಿ ಹಿಂತಿರುಗಿಸಲಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.

    ಸೈಬರ್ ಅಪರಾಧಗಳನ್ನು ವಿಶ್ಲೇಷಣೆ ಮಾಡಿದಾಗ ಆನ್‌ಲೈನ್‌ನಲ್ಲಿ ಅರೆಕಾಲಿಕ ನೌಕರಿ, ಕೈತುಂಬ ಸಂಬಳ ಕೊಡುವ ಕೆಲಸ ಕೊಡಿಸುವುದಾಗಿ ಆಮಿಷವೊಡ್ಡಿ ಅರ್ಜಿ ಶುಲ್ಕ, ಪೂರ್ವಪರ ಪರಿಶೀಲನೆ ಇನ್ನಿತ್ತರ ನೆಪದಲ್ಲಿ ಹಣ ಸುಲಿಗೆ ಮಾಡುತ್ತಿದ್ದಾರೆ. ಇಂತಹ 3346 ಪ್ರಕರಣಗಳು ದಾಖಲಾಗಿದ್ದು, ಅಮಾಯಕರಿಂದ 204 ಕೋಟಿ ರೂ. ವಂಚನೆ ಮಾಡಿದ್ದಾರೆ.

    ಇದಾದ ಮೇಲೆ ಕ್ರೆಡಿಟ್/ಡೆಬಿಟ್ ಕಾರ್ಡ್ ಮಾಹಿತಿ ಪಡೆದು ಕನ್ನ ಹಾಕುತ್ತಿರುವ ಸಂಬಂಧ 3102 ಪ್ರಕರಣಗಳು ದಾಖಲಾಗಿದ್ದು, 60.86 ಕೋಟಿ ರೂ. ವಂಚನೆ ಮಾಡಿರುವುದು 2ನೇ ಸ್ಥಾನದಲ್ಲಿದೆ. ಸೈಬರ್ ಅಪರಾಧ ತಪ್ಪಿಸುವ ಸಲುವಾಗಿ ಪೊಲೀಸ್ ಇಲಾಖೆಯಿಂದ ಸಾಮಾಜಿಕ ಜಾಲತಾಣ ಸೇರಿದಂತೆ ವಿವಿಧ ವೇದಿಕೆಯಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ತನಿಖೆಗೆ ಕಾಲಮಿತಿ ನಿಗದಿ :

    ಸೈಬರ್ ಕ್ರೈಂ ಕುರಿತು ಕೇವಲ ಸಿಇಎನ್ ಠಾಣೆ ಸೇರಿದಂತೆ ಎಲ್ಲ ಸಿವಿಲ್ ಪೊಲೀಸ್ ಠಾಣೆಗಳಲ್ಲೂ ಪ್ರಕರಣ ದಾಖಲಾಗುತ್ತಿವೆ. ಇದರಿಂದ ಹಂತ ಹಂತವಾಗಿ ಸಿವಿಲ್ ಠಾಣೆಗಳಲ್ಲಿನ ಸಿಬ್ಬಂದಿಗೂ ಸೈಬರ್ ಕ್ರೈಂ ತನಿಖೆ ನಡೆಸುವ ಕುರಿತು ತರಬೇತಿ ಕೊಟ್ಟು ಅದಕ್ಕೆ ಬೇಕಾದ ಉಪಕರಣಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗಿದೆ. ಇದಲ್ಲದೆ, ಕಾನೂನು ಪ್ರಕಾರ ಎ್ಐಆರ್ ದಾಖಲಾದ 60 ದಿನಗಳ ಒಳಗೆ ತನಿಖೆ ಪ್ರಕರಣ ಪೂರ್ಣ ಮಾಡಬೇಕು. ಇಲ್ಲವಾದರೆ, ಎಸಿಪಿ, ಡಿಸಿಪಿ ಅನುಮತಿ ಕೋರುವುದು ಅಗತ್ಯ. ಅದಕ್ಕಾಗಿ ನಿಗದಿತ ಸಮಯದಲ್ಲಿ ಸೈಬರ್ ಕ್ರೈಂ ಪ್ರಕರಣದ ತನಿಖೆ ಪೂರ್ಣ ಮಾಡುವಂತೆ ತಾಕೀತು ಮಾಡುವುದಾಗಿ ಪೊಲೀಸ್ ಕಮಿಷನರ್ ದಯಾನಂದ್ ಸ್ಪಷ್ಟಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts