More

    ಅದೃಷ್ಟ ಪರೀಕ್ಷೆಗಿಳಿದ 3,585 ಅಭ್ಯರ್ಥಿಗಳು

    ಹಾವೇರಿ: ಜಿಲ್ಲೆಯ 104 ಗ್ರಾಮ ಪಂಚಾಯಿತಿಗಳ ಸದಸ್ಯರ ಆಯ್ಕೆಗೆ ಮಂಗಳವಾರ ಮತದಾನ ನಡೆಯಲಿದ್ದು, ಮತದಾನ ಸಮಯದಲ್ಲಿ ಶಾಂತಿ ಹಾಗೂ ಸುವ್ಯವಸ್ಥೆ ಕಾಪಾಡಲು ಜಿಲ್ಲಾಡಳಿತ ಸನ್ನದ್ಧಗೊಂಡಿದೆ.

    ಮೊದಲ ಹಂತದಲ್ಲಿ ಜಿಲ್ಲೆಯ ನಾಲ್ಕು ತಾಲೂಕು ವ್ಯಾಪ್ತಿಯ ಒಟ್ಟು 104 ಗ್ರಾಪಂಗಳ 1,506 ಸದಸ್ಯ ಸ್ಥಾನಗಳಲ್ಲಿ ಈಗಾಗಲೇ 149 ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದೆ. ಉಳಿದ 1,357 ಸದಸ್ಯರ ಆಯ್ಕೆಗೆ ಮತದಾನ ನಡೆಯಲಿದೆ. 3,585 ಅಭ್ಯರ್ಥಿಗಳು ಅದೃಷ್ಟ ಪರೀಕ್ಷೆಗಿಳಿದಿದ್ದು, ಒಟ್ಟು 5,74,494 ಮತದಾರರು ಈ ಅಭ್ಯರ್ಥಿಗಳ ಭವಿಷ್ಯವನ್ನು ಮಂಗಳವಾರ ಬೆಳಗ್ಗೆ 7ರಿಂದ ಸಂಜೆ 5 ಗಂಟೆಯವರೆಗೆ ನಿರ್ಧರಿಸಲಿದ್ದಾರೆ.

    ಜಿಲ್ಲೆಯ 104 ಗ್ರಾಮ ಪಂಚಾಯಿತಿಗಳ ಮತದಾನ ಸಮಯದಲ್ಲಿ ಶಾಂತಿ ಹಾಗೂ ಸುವ್ಯವಸ್ಥೆ ಕಾಪಾಡಲು ಜಿಲ್ಲಾಡಳಿತ ಸನ್ನದ್ಧಗೊಂಡಿದೆ.

    ಈ ಚುನಾವಣೆಗಳು ರಾಜಕೀಯ ಪಕ್ಷದ ಚಿಹ್ನೆಯಡಿ ನಡೆಯದೇ ಇದ್ದರೂ ಜಿಲ್ಲೆಯಲ್ಲಿ ಪ್ರಮುಖವಾಗಿರುವ ಬಿಜೆಪಿ ಹಾಗೂ ಕಾಂಗ್ರೆಸ್ ಬೆಂಬಲಿತರು ಎಲ್ಲ ಕಡೆಗಳಲ್ಲಿ ಅಖಾಡಕ್ಕಿಳಿದಿದ್ದಾರೆ. ಹೀಗಾಗಿ, ಕೈ- ಕಮಲ ಪಕ್ಷಗಳೆರಡು ಈ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿ ಬೆಂಬಲಿತ ಅಭ್ಯರ್ಥಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಗೊಳಿಸಲು ನಾನಾ ಕಸರತ್ತು ನಡೆಸಿವೆ. ಪಕ್ಷಗಳ ಮುಖಂಡರಿಂದ ಆಯಾ ಗ್ರಾಮದಲ್ಲಿ ಚುನಾವಣೆ ಖರ್ಚಿಗೆಂದು ಒಬ್ಬೊಬ್ಬ ಅಭ್ಯರ್ಥಿಗೆ 5 ರಿಂದ 10 ಸಾವಿರ ರೂ. ನೀಡಿರುವ ಮಾಹಿತಿಯಿದೆ. ಇದಲ್ಲದೆ, ಆಯಾ ಗ್ರಾಪಂ ವ್ಯಾಪ್ತಿಗೆ ಬರುವ ಜಿಪಂ ಕ್ಷೇತ್ರದ ಆಕಾಂಕ್ಷಿ ಅಭ್ಯರ್ಥಿಗಳು ಗ್ರಾಮಕ್ಕೆ 10 ಸಾವಿರ ರೂಪಾಯಿಯಂತೆ ಹಣವನ್ನು ಚುನಾವಣೆ ವೆಚ್ಚಕ್ಕಾಗಿ ನೀಡುತ್ತಿದ್ದಾರೆ. ತಾಲೂಕಿನ ಅಗಡಿ ಗ್ರಾಪಂ ವ್ಯಾಪ್ತಿಯ ಕೆಲ ವಾರ್ಡ್​ಗಳಲ್ಲಿ ಅಭ್ಯರ್ಥಿಗಳು 25 ಕೆಜಿ ಅಕ್ಕಿ ಪಾಕೀಟು ಸೇರಿ ದಿನಸಿ ಸಾಮಗ್ರಿಗಳನ್ನು ಮತಬೇಟೆಗಾಗಿ ಹಂಚಿಕೆ ಮಾಡಿದ್ದಾರೆ. ಕೆಲ ಗ್ರಾಪಂಗಳಲ್ಲಿ ಬೆಳ್ಳಿಯ ನಾಣ್ಯಗಳನ್ನು ಕೂಡ ಹಂಚಲಾಗಿದೆ.

    ಮಸ್ಟರಿಂಗ್: ಹಾವೇರಿ ತಾಲೂಕಿನ 33 ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಇಲ್ಲಿನ ಶಿವಲಿಂಗೇಶ್ವರ ಮಹಿಳಾ ಕಾಲೇಜ್​ನ ಮಸ್ಟರಿಂಗ್ ಕೇಂದ್ರದಿಂದ ಅಗತ್ಯ ಸಾಮಗ್ರಿಗಳೊಂದಿಗೆ ಸಿಬ್ಬಂದಿಯು ಚುನಾವಣೆ ಕಾರ್ಯಕ್ಕೆ ಸೋಮವಾರ ತೆರಳಿದರು.

    ಅರಳಬಹುದು ಕಮಲ

    ಮಂಗಳವಾರ ಚುನಾವಣೆ ನಡೆಯುವ ನಾಲ್ಕು ತಾಲೂಕುಗಳ ವ್ಯಾಪ್ತಿಯಲ್ಲಿ ಕಮಲ ಬೆಂಬಲಿತ ಅಭ್ಯರ್ಥಿಗಳು ಸ್ವಲ್ಪ ಮಟ್ಟಿಗೆ ಮುನ್ನಡೆಯಲ್ಲಿರುವ ಲಕ್ಷಣಗಳು ಕಾಣುತ್ತಿವೆ. ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಗ್ರಾಪಂನಲ್ಲಿಯೂ ಬಿಜೆಪಿ ಬೆಂಬಲಿತರು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾದರೆ ಅಭಿವೃದ್ಧಿ ಯೋಜನೆಗಳನ್ನು ತರಲು ಅನುಕೂಲವಾಗಲಿದೆ ಎಂದು ಬಿಜೆಪಿ ಬೆಂಬಲಿತರು ಪ್ರಚಾರಕ್ಕಿಳಿದಿರುವುದು ಅವರಿಗೆ ಸ್ವಲ್ಪ ಮಟ್ಟಿಗೆ ಪ್ಲಸ್ ಆಗುವ ಸಾಧ್ಯತೆಗಳಿವೆ.

    ಕೈ ಹರಸಾಹಸ

    ಕಾಂಗ್ರೆಸ್​ನ ಮೂಲ ಬೇರುಗಳು ಹಳ್ಳಿಗಳಲ್ಲಿದ್ದು, ಅದನ್ನು ಉಳಿಸಿಕೊಳ್ಳಲು ಮುಖಂಡರು ಹರಸಾಹಸ ಮಾಡುತ್ತಿದ್ದಾರೆ. ಪಕ್ಷದಲ್ಲಿ ಬೇರು ಮಟ್ಟದಲ್ಲಿ ಸಂಘಟನೆಯ ಕೊರತೆಯಿಂದ ಈ ಬಾರಿ ಕಾಂಗ್ರೆಸ್ ಸ್ವಲ್ಪ ಹಿನ್ನಡೆ ಅನುಭವಿಸುವ ಸಾಧ್ಯತೆಗಳು ಗೋಚರಿಸುತ್ತಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts