More

    ಶ್ವಾನ, ಬೆಕ್ಕುಗಳಿಗೆ ಮನಸೋತ ಪ್ರಾಣಿ ಪ್ರಿಯರು

    ಶಿವಮೊಗ್ಗ: ಎನ್​ಇಎಸ್ ಮೈದಾನ ಭಾನುವಾರ ಪ್ರಾಣಿ ಪ್ರಿಯರಿಗೆ ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು. ಅದರಲ್ಲೂ ಶ್ವಾನ ಮತ್ತು ಬೆಕ್ಕುಗಳನ್ನು ಸಾಕುವವರಿಗಂತೂ ಎಲ್ಲಿಲ್ಲದ ಸಂಭ್ರಮ. ನೆಚ್ಚಿನ ನಾಯಿ ಮತ್ತು ಬೆಕ್ಕುಗಳನ್ನು ಮುದ್ದಾಡಿ ಖುಷಿ ಪಟ್ಟರು.

    ಸ್ಮಾರ್ಟ್​ಸಿಟಿ ಶಿವಮೊಗ್ಗ ಕೆನಲ್ ಕ್ಲಬ್ ಆಯೋಜಿಸಿದ್ದ 2ನೇ ರಾಜ್ಯಮಟ್ಟದ ಶ್ವಾನ ಮತ್ತು ಬೆಕ್ಕುಗಳ ಪ್ರದರ್ಶನ ಪ್ರಾಣಿ ಪ್ರಿಯರಿಗೆ ವಾರಾಂತ್ಯದ ರಸದೌತಣ ಒದಗಿಸಿತು. ಹತ್ತಾರು ಬಗೆಯ ಶ್ವಾನ ಹಾಗೂ ಆರು ಬಗೆಯ ಬೆಕ್ಕುಗಳನ್ನು ಕಣ್ತುಂಬಿಕೊಂಡು, ಎತ್ತಿ ಮುದ್ದಾಡಿದರು. ನೆಚ್ಚಿನ ನಾಯಿ ಮತ್ತು ಬೆಕ್ಕಿನ ಜತೆ ಫೋಟೊ, ಸೆಲ್ಪಿ ಕ್ಲಿಕ್ಕಿಸಿಕೊಂಡು ಸಂತಸಪಟ್ಟರು.

    ಥೈಲ್ಯಾಂಡ್ ಮೂಲದ ಬಾರ್ಸಿ ಸೇರಿ 34 ಬಗೆಯ 300 ಶ್ವಾನಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಶಿವಮೊಗ್ಗ, ಬೆಂಗಳೂರು, ಮೈಸೂರು, ಧಾರವಾಡ, ಹಾವೇರಿ, ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು ಸೇರಿ ರಾಜ್ಯದ ಹಲವು ಜಿಲ್ಲೆ ಹಾಗೂ ಕೇರಳ, ಮಧ್ಯಪ್ರದೇಶ, ತಮಿಳುನಾಡು, ಹೈದ್ರಾಬಾದ್​ನಿಂದಲೂ ನಾಯಿಗಳನ್ನು ಸ್ಪರ್ಧೆಗೆ ಕರೆತಂದಿದ್ದು ವಿಶೇಷವಾಗಿತ್ತು.

    ಪ್ರಮುಖ ತಳಿಯ ನಾಯಿ, ಬೆಕ್ಕುಗಳು: ಶ್ವಾನ ಪ್ರದರ್ಶನದಲ್ಲಿ ಚಿಹೋವಾ, ಬಿಶಾನ್ ಫ್ರೖೆಜ್, ಫ್ರೆಂಚ್ ಬುಲ್ಡಾಗ್, ಲಾಸ ಅಪ್ಸೋ, ಪಗ್, ಕಾರಾಸ್ಟ್ಯಾನಿಯಲ್, ಗ್ರೇಟ್ ಡೆನ್, ರಾಟ್​ವೀಲರ್, ಜರ್ಮನ್ ಶೆಫರ್ಡ್, ಗೋಲ್ಡನ್ ರಿಟ್ರೖೆವಲ್, ಪಮೋರಿಯನ್, ಡ್ಯಾಶೆಂಟ್, ಕೆನಿನ್​ಲ್ಯಾಮ್ ಬಾಕ್ಸರ್, ಬಾರ್ಸಿ, ಅಮೇರಿಕನ್ ಬುಲೆನ್, ಬೀಗಲ್, ಲ್ಯಾಬ್ರೀಡರ್, ಸೈಬೀರಿಯನ್ ಹಸ್ಕಿ, ಮುದೋಳ್, ಬೆಲ್ಜೀನಿಯನ್ ಶಫರ್ಡ್, ನೆಪೋಲಿಯನ್ ಮಸ್ತಿಫ್, ಡಾಬರ್​ವುನ್, ಪಶ್ಮಿ ಸೇರಿ 34 ತಳಿಯ ಮುಂತಾದ ಶ್ವಾನ ತಳಿಗಳು ಭಾಗವಹಿಸಿದ್ದವು. ಇತ್ತ ಬೆಕ್ಕಿನ ಪ್ರದರ್ಶನದಲ್ಲಿ ಪರ್ಶಿಯನ್, ಬೆಂಗಾಲ್, ಹಿಮಾಲಯನ್, ಸ್ಥಳೀಯ ಇಂಡಿಮೋ, ಕ್ಲಾಸಿಕ್ ತಳಿಯ 65 ಬೆಕ್ಕುಗಳು ಪ್ರದರ್ಶನದಲ್ಲಿ ಪಾಲ್ಗೊಂಡಿದ್ದವು.

    ಮಾಲೀಕರ ಆಜ್ಞೆ ಪಾಲಿಸಿದ ಶ್ವಾನಗಳು: ಮಾಲೀಕನ ಆಜ್ಞೆಯನುಸಾರ ನಡೆದುಕೊಳ್ಳುವ ಶ್ವಾನಗಳು ನಮಸ್ಕರಿಸಿ, ನೆಲದಲ್ಲಿ ತೆವಳಿಕೊಂಡು ನಡೆದು ಹಾಗೂ ಸೂಚನೆಗೆ ಅನುಸಾರವಾಗಿ ನಡೆದು ನೋಡುಗರ ಗಮನ ಸೆಳೆದವು. ವಿವಿಧ ವಿಭಾಗಗಳಲ್ಲಿ ನಡೆದ ಸ್ಪರ್ಧೆಗಳಲ್ಲಿ ಬುದ್ದಿವಂತಿಕೆಯಲ್ಲಿ ನಾವೇನೂ ಕಡಿಮೆಯಿಲ್ಲ ಎಂಬುದನ್ನು ಶ್ವಾನಗಳು ತೋರಿಸಿ ತಮ್ಮಲ್ಲಿದ್ದ ಪ್ರತಿಭೆ ಅನಾವರಣಗೊಳಿಸುವ ಮೂಲಕ ಅಚ್ಚರಿ ಮೂಡಿಸಿದವು.

    ಪ್ರದರ್ಶನ ವೀಕ್ಷಿಸಲು ಜನಜಂಗುಳಿ: ನಾಯಿ ಮತ್ತು ಬೆಕ್ಕಿನ ಪ್ರದರ್ಶನ ವೀಕ್ಷಿಸಲು ಶಿವಮೊಗ್ಗ ಜಿಲ್ಲೆ ಮಾತ್ರವಲ್ಲದೆ ಹೊರ ಜಿಲ್ಲೆಗಳಿಂದಲೂ ಪ್ರಾಣಿ ಪ್ರೀಯರು ಬಂದಿರುವುದು ವಿಶೇಷವಾಗಿತ್ತು. ಒಂದು ದಿನ ಸ್ಪರ್ಧೆಯಲ್ಲಿ 500ಕ್ಕೂ ಅಧಿಕ ನಾಯಿಗಳು ಹಾಗೂ 70ಕ್ಕೂ ಅಧಿಕ ಬೆಕ್ಕುಗಳು ಪಾಲ್ಗೊಂಡಿದ್ದವು. ಎರಡೂ ಪ್ರದರ್ಶನಕ್ಕೂ ಆಯೋಜಕರು ಪ್ರತ್ಯೇಕ ವ್ಯವಸ್ಥೆ ಕಲ್ಪಿಸಿದ್ದರು. ವಾರಾಂತ್ಯವಾಗಿದ್ದರಿಂದ ನೂರಾರು ಜನರು ಕುಟುಂಬ ಸಮೇತರಾಗಿ ಬಂದು ಪ್ರದರ್ಶನ ವೀಕ್ಷಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts