More

    2ನೇ ಡೋಸ್ ನೀಡಲು ಜಿಲ್ಲಾಡಳಿತ ಸುಸ್ತು: ವ್ಯಾಕ್ಸಿನ್ ಹಾಕಿಸಿಕೊಳ್ಳದ 1,19,568 ಮಂದಿ, ವಿಶೇಷ ಲಸಿಕಾ ಅಭಿಯಾನಕ್ಕಿಲ್ಲ ಸ್ಪಂದನೆ

    ಬೆಂಗಳೂರು ಗ್ರಾಮಾಂತರ:  ಕರೊನಾ ಮೊದಲ ಡೋಸ್ ವಿತರಣೆಯಲ್ಲಿ ಶೇ.93.02 ಸಾಧನೆ ಮಾಡಿರುವ ಜಿಲ್ಲಾಡಳಿತ ಎರಡನೇ ಡೋಸ್ ವಿತರಣೆಯಲ್ಲಿ ಹಿಂದುಳಿದಿದೆ. ಕರೊನಾ ಎರಡನೇ ಅಲೆ ನಿಯಂತ್ರಣಕ್ಕೆ ಬರುತ್ತಿದ್ದಂತೆ ಎರಡನೇ ಡೋಸ್ ವಿತರಣೆಯಲ್ಲಿ ಜಿಲ್ಲಾಡಳಿತ ನಿರ್ಲಕ್ಷ್ಯವಹಿಸಿತೇ ಎಂಬುದು ಚರ್ಚೆಗೆ ಗ್ರಾಸವಾಗಿದೆ.

    ಹೌದು! ಜಿಲ್ಲೆಯಲ್ಲಿ ಕರೊನಾ ಸೋಂಕು ಹರಡುವಿಕೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವಲ್ಲಿ ಸೈ ಎನಿಸಿಕೊಂಡ ಜಿಲ್ಲಾಡಳಿತ ಆರಂಭದಲ್ಲಿ ಕರೊನಾ ಮೊದಲ ಡೋಸ್ ವಿತರಣೆಗೆ ಹೆಚ್ಚಿನ ಉತ್ಸಾಹ ತೋರಿಸಿತ್ತು. ಆದರೆ ಎರಡನೇ ಅಲೆ ಪ್ರಕರಣ ತಗ್ಗುತ್ತಿದ್ದಂತೆ ಎರಡನೇ ಡೋಸ್ ವಿತರಣೆ ಬಗ್ಗೆ ಅಸಕ್ತಿ ಕಳೆದುಕೊಂಡಿತು. ಅರಂಭದಲ್ಲಿ ವಾರದಲ್ಲಿ ನಾಲ್ಕು ದಿನ ವಿಶೇಷ ಕರೊನಾ ಲಸಿಕಾ ಅಭಿಯಾನ ನಡೆಸುವ ಮೂಲಕ ಪ್ರತಿ ಹಳ್ಳಿಯ ಮೂಲೆ ಮೂಲೆಯಲ್ಲೂ ವ್ಯಾಕ್ಸಿನ್ ವಿತರಣೆಗೆ ಹರಸಾಹಸ ನಡೆಸಿತಾದರೂ ಬಳಿಕ ಅಭಿಯಾನವನ್ನು ಮೊಟಕುಗೊಳಿಸಿತು. ಪರಿಣಾಮವಾಗಿ ರಾಜ್ಯದಲ್ಲೇ ಎರಡನೇ ಡೋಸ್ ವಿತರಣೆಯಲ್ಲಿ ಹಿಂದೆ ಬಿದ್ದಿರುವ ಜಿಲ್ಲೆಗಳ ಸಾಲಿನಲ್ಲಿ ಗ್ರಾಮಾಂತರ ಜಿಲ್ಲೆಯೂ ಸೇರ್ಪಡೆಯಾಗಿದೆ.

    ಶೇ.78.70 ಪ್ರಗತಿ: ಇದುವರೆಗೆ ಜಿಲ್ಲೆಯಲ್ಲಿ ಶೇ.78.70 ಮಂದಿಗೆ ಎರಡೂ ಡೋಸ್ ವಿತರಣೆಯಾಗಿದ್ದು, ಇನ್ನೂ 1,19,568 ಫಲಾನುಭವಿಗಳು ಎರಡನೇ ಡೋಸ್ ಲಸಿಕೆ ಪಡೆಯದೆ ಬಾಕಿ ಉಳಿದಿದ್ದಾರೆ. ಮೊದಲನೇ ಡೋಸ್ ವಿತರಣೆಯಲ್ಲಿ ಶೇ. 93.02 ಸಾಧನೆಯಾಗಿದ್ದರೂ ಇನ್ನೂ 59,767 ಫಲಾನುಭವಿಗಳು ಮೊದಲನೇ ಡೋಸ್ ಪಡೆದಿಲ್ಲ.

    ಜಿಲ್ಲಾಡಳಿತಕ್ಕೆ ಸವಾಲು: ದೇವನಹಳ್ಳಿ ತಾಲೂಕಿನಲ್ಲಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕರೊನಾ ನಿರ್ವಹಣೆ ಜಿಲ್ಲಾಡಳಿತಕ್ಕೆ ಸವಾಲಾಗಿ ಪರಿಣಮಿಸಿದೆ. ಮೊದಲ ಹಾಗೂ ಎರಡನೇ ಅಲೆ ವೇಳೆ ದೇಶವಿದೇಶಗಳಿಂದ ಬಂದಿಳಿದ ಪ್ರಯಾಣಿಕರನ್ನು ತಪಾಸಣೆಗೊಳಪಡಿಸಿ ಸೋಂಕಿತರನ್ನು ಕ್ವಾರಂಟೈನ್‌ಗೊಳಪಡಿಸುವುದು, ಚಿಕಿತ್ಸೆಗೆ ರವಾನಿಸುವುದು ಸೇರಿ ಇನ್ನಿತರ ತುರ್ತು ವ್ಯವಸ್ಥೆ ಕಲ್ಪಿಸುವಲ್ಲಿ ಹೆಣಗಾಡಿದ ಜಿಲ್ಲಾಡಳಿತ ಉತ್ತಮ ನಿರ್ವಹಣೆ ಮೂಲಕ ಸೈ ಎನಿಸಿಕೊಂಡಿತ್ತು. ಅದೇ ರೀತಿ ಈಗ ಮತ್ತೊಂದು ಸವಾಲಿಗೆ ಎದೆಯೊಡ್ಡಿದ್ದು, ಕರೊನಾ ಹೊಸ ಪ್ರಭೇದ ಒಮಿಕ್ರಾನ್ ನಿಯಂತ್ರಣಕ್ಕೆ ಹರಸಾಹಸ ನಡೆಸುತ್ತಿದೆ. ಜಿಲ್ಲಾ ವೈದ್ಯಾಧಿಕಾರಿಗಳ ತಂಡವೇ ವಿಮಾನನಿಲ್ದಾಣದಲ್ಲಿ ಬೀಡು ಬಿಟ್ಟು ಕರೊನಾ ನಿಯಂತ್ರಣಕ್ಕೆ ಶ್ರಮಿಸುತ್ತಿದ್ದು, ಲಸಿಕಾ ಅಭಿಯಾನದ ಕಡೆ ಗಮನ ಹರಿಸುವಲ್ಲಿ ಎಡವಿದೆಯೇ ಎಂಬ ಪ್ರಶ್ನೆ ಎದುರಾಗಿದೆ.

    ಜ.2ರವರೆಗೆ ಅಭಿಯಾನ: ಲಸಿಕೆ ಪಡೆಯದೇ ಬಾಕಿ ಉಳಿದಿರುವವರಿಗೆ ಲಸಿಕೆ ನೀಡುವ ಉದ್ದೇಶದಿಂದ ಜಿಲ್ಲೆಯಾದ್ಯಂತ ಡಿ. 27ರಿಂದ ಜನವರಿ 2ರವರೆಗೆ ತೀವ್ರ ತರಹದ ಕೋವಿಡ್ ಲಸಿಕಾಕರಣ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಈ ಅಭಿಯಾನದ ಮೂಲಕ ಶೇ.100 ಪ್ರಗತಿ ಸಾಧಿಸುವ ಗುರಿ ಹೊಂದಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಮೊದಲ ಹಾಗೂ 2ನೇ ಡೋಸ್ ಪಡೆಯದಿರುವವರು ಲಸಿಕಾ ಮೇಳದಲ್ಲಿ ಭಾಗವಹಿಸಿ, ಕಡ್ಡಾಯವಾಗಿ ಲಸಿಕೆ ಪಡೆಯಬೇಕು. ಜಿಲ್ಲೆಯಲ್ಲಿ ಶೇ.100 ಲಸಿಕಾಕರಣ ಸಾಧಿಸಲು ಸರ್ವ ಪ್ರಯತ್ನ ನಡೆಯುತ್ತಿದೆ. ಈಗಾಗಲೇ ಆರಂಭವಾಗಿರುವ ಲಸಿಕಾ ಅಭಿಯಾನದ ಯಶಸ್ಸಿಗೆ ಸಾರ್ವಜನಿಕರು ಸಹಕಾರ ನೀಡಬೇಕು.
    ಕೆ.ಶ್ರೀನಿವಾಸ್, ಜಿಲ್ಲಾಧಿಕಾರಿ

    ಕಡ್ಡಾಯವಾಗಿ ಕೋವಿಡ್ ಲಸಿಕೆ ಪಡೆಯುವ ಮೂಲಕ ಕರೊನಾ ಮಾರಿಯನ್ನು ಸಂಪೂರ್ಣವಾಗಿ ನಿಯಂತ್ರಿಸಬೇಕಿದೆ, ಜಿಲ್ಲಾಡಳಿತದೊಂದಿಗೆ ಸಾರ್ವಜನಿಕರು ಸಹಕರಿಸಬೇಕು, ತೀವ್ರತರ ಲಸಿಕಾಕರಣಕ್ಕೆ ವೈದ್ಯರ ತಂಡದೊಂದಿಗೆ ಅಧಿಕಾರಿಗಳು ಶ್ರಮಿಸುವಂತೆ ಸೂಚನೆ ನೀಡಲಾಗಿದೆ. ಖುದ್ದು ನಾವೂ ಸಹ ಅಭಿಯಾನದಲ್ಲಿ ಪಾಲ್ಗೊಂಡು ಜನರಲ್ಲಿ ಅರಿವು ಮೂಡಿಸಲು ಪ್ರಯತ್ನಿಸಲಾಗುತ್ತಿದೆ. ಡಾ.ತಿಪ್ಪೇಸ್ವಾಮಿಜಿಲ್ಲಾ ಆರೋಗ್ಯಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts