More

    ಓವಲ್ ಟೆಸ್ಟ್‌ನಲ್ಲಿ ಹಿನ್ನಡೆ ಕಂಡರೂ, 2ನೇ ಇನಿಂಗ್ಸ್‌ನಲ್ಲಿ ಭಾರತ ದಿಟ್ಟ ಆರಂಭ

    ಲಂಡನ್: ವೇಗಿ ಉಮೇಶ್ ಯಾದವ್ (76ಕ್ಕೆ 3) ಸಾರಥ್ಯದಲ್ಲಿ ಭಾರತ ತಂಡ ಸಂಘಟಿತ ಬೌಲಿಂಗ್ ದಾಳಿ ನಡೆಸಿದರೂ, ಒಲಿ ಪೋಪ್ (81 ರನ್, 159 ಎಸೆತ, 6 ಬೌಂಡರಿ) ಏಕಾಂಗಿ ಹೋರಾಟದಿಂದ ಇಂಗ್ಲೆಂಡ್ ತಂಡ 4ನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಅಮೂಲ್ಯ ಮುನ್ನಡೆ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಪ್ರತಿಯಾಗಿ ಭಾರತ ತಂಡ 2ನೇ ಇನಿಂಗ್ಸ್‌ನಲ್ಲಿ ದಿಟ್ಟ ಆರಂಭ ಕಂಡಿದ್ದು, ಆತಿಥೇಯರಿಗೆ ತಿರುಗೇಟು ನೀಡುವತ್ತ ಹೆಜ್ಜೆ ಇಟ್ಟಿದೆ.

    ಓವಲ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಶುಕ್ರವಾರ 3 ವಿಕೆಟ್‌ಗೆ 53 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿದ ಇಂಗ್ಲೆಂಡ್, ಚಹಾ ವಿರಾಮದ ಬಳಿಕ 290 ರನ್‌ಗೆ ಆಲೌಟ್ ಆಯಿತು. ಇದರಿಂದ ಇಂಗ್ಲೆಂಡ್ ಮೊದಲ ಇನಿಂಗ್ಸ್‌ನಲ್ಲಿ 99 ರನ್ ಮುನ್ನಡೆ ಸಾಧಿಸಿತು. ಬಳಿಕ ಭಾರತ ತಂಡ ರೋಹಿತ್ ಶರ್ಮ (20*), ಕೆಎಲ್ ರಾಹುಲ್ (22*) ಎಚ್ಚರಿಕೆ ಆಟದಿಂದ 2ನೇ ದಿನದಂತ್ಯಕ್ಕೆ 2ನೇ ಇನಿಂಗ್ಸ್‌ನಲ್ಲಿ ವಿಕೆಟ್ ನಷ್ಟವಿಲ್ಲದೆ 43 ರನ್ ಗಳಿಸಿದೆ. ಭಾರತ ಸದ್ಯ 56 ರನ್ ಹಿನ್ನಡೆಯಲ್ಲಿದೆ.

    ಪೋಪ್ ದಿಟ್ಟ ಪ್ರತಿರೋಧ
    ಇಂಗ್ಲೆಂಡ್ ತಂಡ 62 ರನ್‌ಗೆ 5 ವಿಕೆಟ್ ಕಳೆದುಕೊಂಡು ಇನಿಂಗ್ಸ್ ಹಿನ್ನಡೆ ಕಾಣುವ ಭೀತಿ ಎದುರಿಸಿದಾಗ ಒಲಿ ಪೋಪ್ ದಿಟ್ಟ ಹೋರಾಟ ತೋರಿ ಭಾರತದ ಬೌಲರ್‌ಗಳನ್ನು ಕಾಡಿದರು. 6ನೇ ವಿಕೆಟ್‌ಗೆ ಜಾನಿ ಬೇರ್‌ಸ್ಟೋ (37) ಜತೆಗೆ 89 ರನ್ ಸೇರಿಸಿದ ಪೋಪ್, ಬಳಿಕ ಮೊಯಿನ್ ಅಲಿ (35) ಜತೆಗೂಡಿ 7ನೇ ವಿಕೆಟ್‌ಗೆ ಮತ್ತೆ 71 ರನ್ ಜತೆಯಾಟವಾಡಿದರು. ಬೇರ್‌ಸ್ಟೋ ಅವರನ್ನು ಸಿರಾಜ್ ಎಲ್‌ಬಿ ಬಲೆಗೆ ಬೀಳಿಸಿದಾಗ ಭಾರತ ಇನ್ನೂ ಮುನ್ನಡೆಯಲ್ಲಿತ್ತು. ಆದರೆ ಮೊಯಿನ್ ಅಲಿ ಜತೆಗೂಡಿ ಮತ್ತೊಂದು ಅರ್ಧಶತಕದ ಜತೆಯಾಡಿದ ಪೋಪ್, ಭಾರತಕ್ಕೆ ಮುನ್ನಡೆಯ ಅವಕಾಶ ತಪ್ಪಿಸಿದರು.

    ಚಹಾ ವಿರಾಮಕ್ಕೆ ಮುನ್ನ ಈ ಜತೆಯಾಟವನ್ನು ಬೇರ್ಪಡಿಸುವಲ್ಲಿ ಭಾರತ ಯಶಸ್ವಿಯಾಯಿತು. ಮೊಯಿನ್ ಅಲಿಗೆ ಜಡೇಜಾ ಪೆವಿಲಿಯನ್ ದಾರಿ ತೋರಿಸಿದರು. ಚಹಾ ವಿರಾಮದ ಬಳಿಕ ಪೋಪ್ ಅವರನ್ನು ಶಾರ್ದೂಲ್ ಠಾಕೂರ್ ಬೌಲ್ಡ್ ಮಾಡಿದರು. ಆದರೆ ಆಂಗ್ಲರು ಆಗಲೇ 50 ಪ್ಲಸ್ ರನ್ ಮುನ್ನಡೆ ಸಾಧಿಸಿದ್ದರು. ಜೋಸ್ ಬಟ್ಲರ್ ಗೈರಿನಲ್ಲಿ ಸರಣಿಯ ಮೊದಲ ಪಂದ್ಯವಾಡುವ ಅವಕಾಶ ಪಡೆದ ಒಲಿ ಪೋಪ್, ಆಂಗ್ಲರಿಗೆ ಅಮೂಲ್ಯ ಮುನ್ನಡೆ ಒದಗಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು.

    ಕೊನೇ ಹಂತದಲ್ಲಿ ಕ್ರಿಸ್ ವೋಕ್ಸ್ (50 ರನ್, 60 ಎಸೆತ, 11 ಬೌಂಡರಿ) ಬಿರುಸಿನ ಆಟವಾಡುವ ಮೂಲಕ ಆಂಗ್ಲರ ಮುನ್ನಡೆ ಹಿಗ್ಗಿಸಿದರು. ಕೊನೇ ವಿಕೆಟ್‌ಗೆ ಆಂಡರ್‌ಸನ್ (1) ಜತೆಗೂಡಿ 35 ರನ್ ಸೇರಿಸುವ ಮೂಲಕ ಕ್ರಿಸ್ ವೋಕ್ಸ್ ಆಂಗ್ಲರ ಮುನ್ನಡೆಯನ್ನು 100ರ ಸನಿಹ ತಲುಪಿಸಿದರು.

    ಆಂಗ್ಲರಿಗೆ ಉಮೇಶ್ ಆಘಾತ
    ಡೇವಿಡ್ ಮಲಾನ್ ಮತ್ತು ಕ್ರೇಗ್ ಓವರ್‌ಟನ್ ಕ್ರಮವಾಗಿ 26 ಮತ್ತು 1 ರನ್‌ನಿಂದ ದಿನದಾಟ ಆರಂಭಿಸಿದರು. ದಿನದ 2ನೇ ಓವರ್‌ನಲ್ಲೇ ನೈಟ್ ವಾಚ್‌ಮನ್ ಓವರ್‌ಟನ್‌ಗೆ (1) ಉಮೇಶ್ ಯಾದವ್ ಪೆವಿಲಿಯನ್ ದಾರಿ ತೋರಿದರು. ಇದರ ಬೆನ್ನಲ್ಲೇ ಡೇವಿಡ್ ಮಲಾನ್ (31) 2ನೇ ಸ್ಲಿಪ್‌ನಲ್ಲಿದ್ದ ರೋಹಿತ್ ಶರ್ಮ ಹಿಡಿದ ಅದ್ಭುತ ಕ್ಯಾಚ್‌ಗೆ ಔಟಾದರು. ಈ ವಿಕೆಟ್ ಕೂಡ ಉಮೇಶ್ ಯಾದವ್ ಪಾಲಾಯಿತು. ಇದರಿಂದ ಭಾರತಕ್ಕೆ ಮೊದಲ ಇನಿಂಗ್ಸ್ ಮುನ್ನಡೆ ಸಾಧಿಸುವ ಆಸೆ ಚಿಗುರಿತ್ತು. ಉಮೇಶ್ ಯಾದವ್ ಟೆಸ್ಟ್ ಕ್ರಿಕೆಟ್‌ನಲ್ಲಿ 150ಕ್ಕಿಂತ ಹೆಚ್ಚು ವಿಕೆಟ್ ಕಬಳಿಸಿದ ಭಾರತದ 6ನೇ ವೇಗಿ ಎನಿಸಿದರು. ಅವರು 49 ಟೆಸ್ಟ್‌ಗಳಲ್ಲಿ ಈ ಸಾಧನೆ ಮಾಡಿ ಭಾರತದ 4ನೇ ಅತಿವೇಗದ ಸಾಧಕ ಎನಿಸಿದರು.

    ಮಿಂಚಿದ ಬದಲಿಗರು!
    ಉಭಯ ತಂಡಗಳು ಪಂದ್ಯಕ್ಕೆ ತಲಾ 2 ಬದಲಾವಣೆ ಮಾಡಿಕೊಂಡಿತ್ತು. ಬದಲಿಗರಾಗಿ ಕಣಕ್ಕಿಳಿದ ಈ ನಾಲ್ವರೂ ಆಟಗಾರರೂ ಪಂದ್ಯದಲ್ಲಿ ಮಿಂಚಿದ್ದು ಗಮನಾರ್ಹ. ಭಾರತ ಪರ ಶಾರ್ದೂಲ್ ಠಾಕೂರ್ ಮತ್ತು ಉಮೇಶ್ ಯಾದವ್ ಬ್ಯಾಟಿಂಗ್-ಬೌಲಿಂಗ್‌ನಲ್ಲಿ ಅಮೂಲ್ಯ ಕೊಡುಗೆ ನೀಡಿದರೆ, ಇಂಗ್ಲೆಂಡ್‌ಗೂ ಕ್ರಿಸ್ ವೋಕ್ಸ್, ಒಲಿ ಪೋಪ್ ಇನಿಂಗ್ಸ್ ಮುನ್ನಡೆಯಲ್ಲಿ ಪ್ರಮುಖ ಪಾತ್ರ ವಹಿಸಿದರು.

    ಈ ಸಲ ಕಪ್ ನಮ್ದೇ ಎನ್ನುತ ಆರ್‌ಸಿಬಿ ಬೆಂಬಲಕ್ಕೆ ನಿಂತ ಇಂಗ್ಲೆಂಡ್ ಮಹಿಳಾ ಕ್ರಿಕೆಟರ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts