More

    276 ಪೌರ ಕಾರ್ಮಿಕರ ಸೇವೆ ಕಾಯಂ

    ತುಮಕೂರು : ಸ್ಥಳೀಯ ಸಂಸ್ಥೆಗಳಲ್ಲಿ ಸ್ವಚ್ಛತಾ ಕಾರ್ಯ ನಿರ್ವಹಿಸುತ್ತಿರುವ ಜಿಲ್ಲೆಯ 276 ಪೌರ ಕಾರ್ಮಿಕರನ್ನು ವಿಶೇಷ ನೇರ ನೇಮಕಾತಿಯಡಿ ಕಾಯಂಗೊಳಿಸಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.

    ನಗರದ ಕೇಂದ್ರ ಗ್ರಂಥಾಲಯ ಸಭಾಂಗಣದಲ್ಲಿ ಶುಕ್ರವಾರ 208 ಪೌರಕಾರ್ಮಿಕರಿಗೆ ಕಾಯಂ ನೇಮಕಾತಿ ಆದೇಶ ವಿತರಿಸಿ ಮಾತನಾಡಿದರು. ದಾಖಲಾತಿಗಳನ್ನು ಸಲ್ಲಿಸದಿರುವ 68 ಪೌರ ಕಾರ್ಮಿಕರಿಗೆ ನೇಮಕಾತಿ ಪತ್ರ ನೀಡುವುದು ಬಾಕಿ ಉಳಿದಿದೆ. ಸಿಂಧುತ್ವ ಹಾಗೂ ಇತರ ಪ್ರಮಾಣ ಪತ್ರ ಸಲ್ಲಿಸುವ ಪೌರ ಕಾರ್ಮಿಕರಿಗೆ ಮುಂದಿನ ದಿನಗಳಲ್ಲಿ ಕಾಯಂ ಮಾಡಲಾಗುವುದು ಎಂದರು.

    ಸಮಾಜಕ್ಕಾಗಿ ದುಡಿಯುವ ಜನರೇ ಪೌರಕಾರ್ಮಿಕರು. ನಗರ ಮತ್ತು ಪಟ್ಟಣ ಸ್ವಚ್ಛತಾ ಕಾರ್ಯದಲ್ಲಿ ಯಾವುದೇ ಕೀಳರಿಮೆ ಮನಸ್ಸಿನಲ್ಲಿ ಇಟ್ಟುಕೊಳ್ಳದೆ, ನಾವುಗಳು ಈ ಕೆಲಸವನ್ನು ಮಾಡಬೇಕೆ ಅಥವಾ ಮಾಡಬಾರದೆ ಎನ್ನುವಂತಹ ಯಾವುದೇ ಭಾವನೆಗಳಿಲ್ಲದೆ, ನಗರವನ್ನು ಸ್ವಚ್ಛವಾಗಿಡುವುದಕ್ಕೆ ತಮ್ಮನ್ನು ತಾವು ಮುಡಿಪಾಗಿಟ್ಟಿರುವ ಪೌರಕಾರ್ಮಿಕರನ್ನು ವಿಶೇಷವಾಗಿ ಅಭಿನಂದಿಸುವುದಾಗಿ ತಿಳಿಸಿದರು.

    ತುಮಕೂರು ಪಾಲಿಕೆಯ 121 ಪೌರ ಕಾರ್ಮಿಕರಿಗೆ ಒಂದು ಹೊಸ ಜೀವನ ಆರಂಭವಾಗುತ್ತಿದೆ ಎಂದು ನಾನು ಭಾವಿಸುತ್ತೇನೆ. ಅದರಲ್ಲೂ ವಿಶೇಷವಾಗಿ ಪಾಲಿಕೆಯ 79 ಜನ ಸಿಂಧುತ್ವ ಪ್ರಮಾಣ ಹಾಗೂ ಎಲ್ಲ ಬೇಕಾದಂತಹ ಕಾಗದ ಪತ್ರಗಳನ್ನು ಕೊಟ್ಟು ಅವರ ನೌಕರಿಯನ್ನು ಕಾಯಂ ಮಾಡುವಂತಹ ಆದೇಶ ನೀಡಿದ್ದೇನೆ ಎಂದರು.

    ಎರಡು ವರ್ಷಗಳ ಹಿಂದೆ ಮೈಸೂರು ನಗರವನ್ನು ಸ್ವಚ್ಛ ನಗರ ಎಂದು ಘೋಷಿಸಿ ಪ್ರಶಸ್ತಿ ನೀಡಲಾಯಿತು. ತುಮಕೂರು ಸಹ 2ನೇ ಸ್ಥಾನ ಪಡೆದಿದೆ. ಇದನ್ನೆಲ್ಲಾ ಮಾಡುವವರು ಪೌರ ಕಾರ್ಮಿಕರು. ಇಂತಹ ಕಾರ್ಮಿಕರಿಗೆ ತಿಂಗಳಿಗೆ 5 ರಿಂದ 8 ಸಾವಿರ ರೂ. ಸಂಬಳ ಕೊಟ್ಟು ಜೀವನ ಮಾಡಿ ಎಂದು ಹೇಳುವುದು ಯಾವ ನ್ಯಾಯ. ಇವರಿಗೆ ಗೌರವಯುತವಾಗಿ ವೇತನ ಪಾವತಿಸುವುದೂ ಸರ್ಕಾರದ ಕರ್ತವ್ಯ ಎಂದರು.

    ಶಾಸಕ ಜಿ.ಬಿ. ಜ್ಯೋತಿಗಣೇಶ್ ಮಾತನಾಡಿ, ಪೌರಕಾರ್ಮಿಕರನ್ನು ನಾವು ಗೌರವಯುತವಾಗಿ ನಡೆಸಿಕೊಳ್ಳುವ ಕುರಿತು ನಾವು ಆತ್ಮ ವಿಮರ್ಶೆ ಮಾಡಿಕೊಳ್ಳಬೇಕಿದೆ. ಪೌರ ಕಾರ್ಮಿಕರು ಕೈಗವಸು, ಶೂ, ಕೋಟು, ಮಾಸ್ಕ್, ಏಪ್ರಾನ್, ಮುಂತಾದ ಸುರಕ್ಷತಾ ಪರಿಕರ ಧರಿಸಿ ಕೆಲಸ ಮಾಡಬೇಕು. ಪೌರ ಕಾರ್ಮಿಕರಿಗೆ ಸಿಗಬೇಕಾದ ಎಲ್ಲ ಸವಲತ್ತುಗಳನ್ನು ಯಾವುದೇ ಸರ್ಕಾರ ಬರಲಿ ನೀಡಬೇಕಾಗುತ್ತದೆ ಎಂದರು.

    ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು, ಜಿಲ್ಲಾ ಪೊಲೀಸ್​​​ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪೂರ್‌ವಾಡ್ ಮತ್ತಿತರರು ಇದ್ದರು.

    ‘ನನ್ನ ಕಸ ನನ್ನ ಹೊಣೆ’ ಎಂಬ ಮನೋಭಾವನೆ ನಾಗರಿಕರಾದ ನಮ್ಮಲ್ಲಿ ಮೂಡಬೇಕು. ಪಾಲಿಕೆಗೆ 507 ಪೌರ ಕಾರ್ಮಿಕ ಹುದ್ದೆಗಳು ಮಂಜೂರಾಗಿದ್ದು, ಸದ್ಯ 107 ಕಾಯಂ ಪೌರ ಕಾರ್ಮಿಕರು, 335 ಮಂದಿ ನೇರ ಪಾವತಿ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪಾಲಿಕೆಯ 121 ಪೌರಕಾರ್ಮಿಕರ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಿದೆ. ದಾಖಲೆಗಳನ್ನು ಸಲ್ಲಿಸಿರುವ 78 ಮಂದಿ ಹಾಗೂ 1 ಸಾಮಾನ್ಯ ಅಭ್ಯರ್ಥಿಗೆ ಇಂದು ನೇಮಕಾತಿ ಆದೇಶ ಪ್ರತಿ ನೀಡಲಾಗಿದೆ. | ಬಿ.ವಿ.ಅಶ್ವಿಜ, ಆಯುಕ್ತೆ.

    ತುಮಕೂರು ಮಹಾನಗರ ಪಾಲಿಕೆ ಹಂದಿ ಸಾಕಾಣಿಕೆ ಕಸುಬಾಗಿತ್ತು. ಆದರೆ, ಮಹಾನಗರ ಪಾಲಿಕೆ ಸೂಚನೆ ಮೇರೆಗೆ ಸಾಕುವುದನ್ನು ಬಿಟ್ಟು ಮೇಕೆ, ಕುರಿ, ಕೋಳಿ ಸಾಕಿ ಜೀವನ ನಡೆಸುತ್ತಿದ್ದೇವೆ. ಕೆಲವರು ಹಂದಿ ಸಾಕಾಣಿಕೆಯನ್ನೆ ಮುಂದಿಟ್ಟು ನಮ್ಮಗೆ ಪುನರ್ ವಸತಿಗೊಳಿಸಲು ಬಂದ ಸರ್ಕಾರಿ ಅಧಿಕಾರಿಗಳ ದಿಕ್ಕು ತಪ್ಪಿಸುವ ಹುನ್ನಾರ ಮಾಡುತ್ತಿದ್ದಾರೆ. | ಚಿಕ್ಕಗಂಗಮ್ಮ, ಹಂದಿಜೋಗಿ ಸಮುದಾಯದ ಪ್ರಮುಖರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts