More

    ದೇವಿ ಹೆಸರಲ್ಲಿ 27 ಕೋಟಿ ರೂ. ಮೋಸ: ಮೈಮೇಲೆ ಸೊಲ್ಲಾಪುರದ ದೇವಿ ಬಂದಂತೆ ನಟಿಸಿ ಕೃತ್ಯ

    ಬೆಂಗಳೂರು: ಕುಟುಂಬಕ್ಕೆ ಬಂದೊದಗಿರುವ ಸಂಕಷ್ಟಗಳನ್ನು ಪರಿಹರಿಸುವುದಾಗಿ ಮಹಿಳೆಯನ್ನು ನಂಬಿಸಿದ್ದ ಮಂತ್ರವಾದಿಯೊಬ್ಬ, ಮೈಮೇಲೆ ಸೊಲ್ಲಾಪುರದ ದೇವಿ ಬಂದಂತೆ ನಟಿಸಿ ಪೂಜೆ ನೆಪದಲ್ಲಿ 5 ಕೋಟಿ ರೂ. ನಗದು ಸೇರಿ ಒಟ್ಟು 27 ಕೋಟಿ ರೂ. ದೋಚಿದ್ದಾನೆ. ಸಾಲದಕ್ಕೆ ನಿವೇಶನವನ್ನೂ ತನ್ನ ಹೆಸರಿಗೆ ಮಾಡಿಕೊಂಡು ಪರಾರಿಯಾಗಿದ್ದಾನೆ.

    ರಾಮಮೂರ್ತಿ ನಗರದ ಎನ್​ಆರ್​ಐ ಲೇಔಟ್ ನಿವಾಸಿ 48 ವರ್ಷದ ಮಹಿಳೆ ವಂಚನೆಗೆ ಒಳಗಾದವರು. ಈ ಬಗ್ಗೆ ಅವರು ಕೊಟ್ಟ ದೂರಿನ ಅನ್ವಯ ಬಂಗಾರಪೇಟೆ ಮೂಲದ ಮಂತ್ರವಾದಿ ನಾಗರಾಜ್ ಹಾಗೂ ಆತನ ಪತ್ನಿ ಲಕ್ಷ್ಮಮ್ಮ, ಸಂಬಂಧಿಕ ಪೆರುಮಾಳ್, ಸಹಚರರಾದ ದೇವರಾಜ್, ಹೊಸೂರು ಮಂಜು ಹಾಗೂ ಸಾಯಿಕೃಷ್ಣ ಎಂಬುವರ ವಿರುದ್ಧ ಮೌಢ್ಯ ನಿಷೇಧ ಕಾಯ್ದೆ ಮತ್ತು ವಂಚನೆ ಆರೋಪದಡಿ ರಾಮಮೂರ್ತಿನಗರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

    ಏನಿದು ಪ್ರಕರಣ?: ಸಂತ್ರಸ್ತೆ ಈ ಹಿಂದೆ ಪತಿ ಮತ್ತು ಮೂವರು ಮಕ್ಕಳ ಜತೆ ಬಿಟಿಎಂ ಲೇಔಟ್​ನಲ್ಲಿ ವಾಸವಿದ್ದರು. 2009ರಲ್ಲಿ ಪತಿ ಮೃತಪಟ್ಟಿದ್ದರು. ಬಳಿಕ ರಾಜೇಶ್ ಎಂಬ ಯುವಕ ಪತಿಯ 2ನೇ ಹೆಂಡತಿಯ ಪುತ್ರ, ತನಗೆ ಆಸ್ತಿಯಲ್ಲಿ ಪಾಲು ಬೇಕೆಂದು ಕೋರ್ಟ್ ಮೆಟ್ಟಿಲೇರಿದ್ದ. ಇದರಿಂದ ಬೇಸತ್ತ ಮಹಿಳೆ ತನ್ನ ಮೂವರು ಮಕ್ಕಳ ಜತೆ ರಾಮಮೂರ್ತಿನಗರದಲ್ಲಿ ಬಾಡಿಗೆ ಮನೆ ಮಾಡಿಕೊಂಡು ನೆಲೆಸಿದ್ದರು. ಅಲ್ಲಿಗೂ ಹೋಗುತ್ತಿದ್ದ ರಾಜೇಶ್ ಆಸ್ತಿ ವಿಚಾರವಾಗಿ ಗಲಾಟೆ ಮಾಡುತ್ತಿದ್ದ. ಈ ವಿಚಾರವನ್ನು ಬೇತಮಂಗಲದ ತನ್ನ ಜಮೀನಿನಲ್ಲಿ ಕೆಲಸಕ್ಕಿದ್ದ ಮುನಿಯಮ್ಮ ಎಂಬಾಕೆಯ ಬಳಿ ಸಂತ್ರಸ್ತೆ ಹೇಳಿಕೊಂಡಿದ್ದರು. ಆಕೆ ತನಗೆ ಗೊತ್ತಿರುವ ಮಂತ್ರವಾದಿ ಬಳಿ ಹೋದರೆ ಸಂಕಷ್ಟ ದೂರಾಗುತ್ತದೆ ಎಂದು ಹೇಳಿದ್ದಳು. ಅದರಂತೆ ಬಂಗಾರಪೇಟೆ ಮೂಲದ ನಾಗರಾಜ್​ನನ್ನು ಸಂತ್ರಸ್ತೆಗೆ ಪರಿಚಯಿಸಿದ್ದಳು. ಮಹಿಳೆಯ ಮನೆಗೆ ಹೋದ ನಾಗರಾಜ್, ಸೊಲ್ಲಾಪುರದಮ್ಮ ದೇವಸ್ಥಾನದ ಪೂಜಾರಿಯಾಗಿದ್ದು, ಪ್ರತಿ ಮಂಗಳವಾರ ಮತ್ತು ಶುಕ್ರವಾರ ತಾಯಿ ಮೈಮೇಲೆ ಬರುತ್ತಾಳೆ. ಆಕೆ ಹೇಳಿದಂತೆ ಕೇಳಿದರೆ ಸಂಕಷ್ಟಗಳು ದೂರಾಗುತ್ತವೆ. ಇಲ್ಲವಾದರೆ ವಂಶವೇ ಸರ್ವನಾಶವಾಗುವುದಾಗಿ ಬೆದರಿಸಿದ್ದ.

    ತಿಂಗಳಿಗೊಮ್ಮೆ ಪೂಜೆ: ಪ್ರತಿ ತಿಂಗಳ ಮೊದಲ ಶುಕ್ರವಾರ ಮಹಿಳೆಯ ಮನೆಗೆ ಹೋಗುತ್ತಿದ್ದ ಪೂಜಾರಿ ನಾಗರಾಜ್ ಶಾಂತಿ ಪೂಜೆ ಮಾಡುತ್ತಿದ್ದ. ಬಳಿಕ ದೇವಿ ಮೈಮೇಲೆ ಬಂದಂತೆ ನಟಿಸುತ್ತಿದ್ದ. ಮೊದಲ ಪೂಜೆಯಲ್ಲಿ ‘ನಿಮ್ಮ ಆಸ್ತಿ ವಿಚಾರವಾಗಿ ಮೂರು ಮಕ್ಕಳಿಗೂ ಗಂಡಾಂತರವಿದೆ. ಮನೆಯಲ್ಲಿ ಚಿನ್ನದ ಗಟ್ಟಿಗಳಿವೆ. ಮೂರು ಮಕ್ಕಳ ಹೆಸರಿನಲ್ಲಿ ತಲಾ ಒಂದು ಚಿನ್ನದ ಗಟ್ಟಿ ಕೊಡುವಂತೆ ಹೇಳಿ ತಲಾ 1 ಕೆಜಿ ತೂಕದ 3 ಚಿನ್ನದ ಗಟ್ಟಿಗಳನ್ನು ಪಡೆದುಕೊಂಡಿದ್ದ. 2ನೇ ವಾರದ ಪೂಜೆ ವೇಳೆ ‘ಜಮೀನು ಹಾಗೂ ಸ್ಥಿರಾಸ್ತಿಯಿಂದ ಕಂಟಕವಿದೆ. ಅದನ್ನು ತಾನು ಸೂಚಿಸಿದವರಿಗೆ ಮಾರಾಟ ಮಾಡಿ, ಹಣವನ್ನು ನನಗೆ ಕೊಡಿ. ಅದನ್ನು ದ್ವಿಗುಣಗೊಳಿಸುವುದಾಗಿ ನಂಬಿಸಿದ್ದ. ಬೇಗೂರು, ತಾವರೆಕೆರೆ ಗ್ರಾಮದಲ್ಲಿನ ಜಮೀನನ್ನು ನಿವೇಶನವಾಗಿ ಪರಿವರ್ತಿಸಿ, ಬಳಿಕ ತನ್ನ ಪತ್ನಿ ಲಕ್ಷ್ಮಮ್ಮ, ಸಂಬಂಧಿಕ ಪೆರುಮಾಳ್ ಹಾಗೂ ಸಹಚರರಾದ ದೇವರಾಜ್, ಹೊಸೂರು ಮಂಜು ಮತ್ತು ಸಾಯಿಕೃಷ್ಣ ಎಂಬುವರ ಮೂಲಕ 10ಕ್ಕೂ ಹೆಚ್ಚು ನಿವೇಶನಗಳನ್ನು ಮಾರಾಟ ಮಾಡಿಸಿ ಹಣ ಪಡೆದುಕೊಂಡಿದ್ದ. ಮನೆಯಲ್ಲಿದ್ದ 5 ಕೋಟಿ ರೂ. ನಗದನ್ನು ದೇವಿ ಹೆಸರಿನಲ್ಲಿ ಪಡೆದು ವಂಚಿಸಿರುವುದಾಗಿ ಸಂತ್ರಸ್ತೆ ದೂರಿನಲ್ಲಿ ವಿವರಿಸಿದ್ದಾರೆ.

    ಮಕ್ಕಳಿಗೆ ವಿಚಾರ ತಿಳಿಸಿರಲಿಲ್ಲ: ಮನೆಯಲ್ಲಿ ಪೂಜೆ ಮಾಡಿಸುತ್ತಿರುವ ವಿಚಾರವನ್ನು ಸಂತ್ರಸ್ತೆ ತನ್ನ ಪುತ್ರರಿಗೆ ತಿಳಿಸಿರಲಿಲ್ಲ. ಇತ್ತೀಚೆಗೆ ಹಣಕಾಸಿನ ತೊಂದರೆಯಾದಾಗ ತಾಯಿಯನ್ನು ಮಕ್ಕಳು ಪ್ರಶ್ನಿಸಿದ್ದರು. ಆಗ ಮಂತ್ರವಾದಿಯ ವಂಚನೆ ಬಯಲಾಗಿದೆ. ಆತನಿಗೆ ನಗದು, ಚಿನ್ನಾಭರಣ ಕೊಟ್ಟಿದ್ದೂ ಸೇರಿ ಎಲ್ಲ ವಿವರಗಳನ್ನು ಸಂತ್ರಸ್ತೆ ಡೈರಿಯಲ್ಲಿ ಬರೆದಿಟ್ಟಿದ್ದರು. ಅದನ್ನು ನೋಡಿದ ಬಳಿಕ ಪುತ್ರರು ತಾಯಿ ಜತೆ ಬಂದು ದೂರು ಕೊಟ್ಟಿದ್ದಾಗಿ ಪೊಲೀಸರು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts