More

    ಒಂದೇ ದಿನ ಆಸ್ಪತ್ರೆಯಿಂದ 25 ಮಂದಿ ಬಿಡುಗಡೆ ; ತುಮಕೂರು ಜಿಲ್ಲೆಯಲ್ಲಿವೆ 349 ಸಕ್ರಿಯ ಪ್ರಕರಣ

    ತುಮಕೂರು: ಜಿಲ್ಲೆಯಲ್ಲಿ ಕರೊನಾ ಆರ್ಭಟ ಸ್ವಲ್ಪಮಟ್ಟಿಗೆ ತಗ್ಗಿದೆ. ಐವರು ಪೊಲೀಸರು ಸೇರಿ 37 ಮಂದಿಗೆ ಸೋಂಕು ದೃಢಪಟ್ಟಿದ್ದು, 25 ಮಂದಿ ಸಂಪೂರ್ಣ ಗುಣಮುಖರಾಗಿ ಜಿಲ್ಲಾ ಆಸ್ಪತ್ರೆಯಿಂದ ಬಿಡಗುಡೆ ಹೊಂದಿದ್ದಾರೆ. ಆದರೆ, ಕರೊನಾಕ್ಕೆ ಮತ್ತಿಬ್ಬರು ಬಲಿಯಾಗಿದ್ದು ಸಾವಿನ ಸಂಖ್ಯೆ 28ಕ್ಕೇರಿದೆ.

    ತುಮಕೂರು 20, ಶಿರಾ 6, ಪಾವಗಡ 3, ಗುಬ್ಬಿ3, ಕುಣಿಗಲ್ 2, ತಿಪಟೂರು 2, ಮಧುಗಿರಿಯಲ್ಲಿ ಒಬ್ಬರಿಗೆ ಸೋಂಕು ಕಾಣಿಸಿಕೊಂಡಿದ್ದು, ಮಂಗಳವಾರ ಒಟ್ಟು 37 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಸೋಂಕಿತರ ಸಂಖ್ಯೆ 813ಕ್ಕೇರಿಕೆಯಾಗಿದೆ. ಜಿಲ್ಲಾಸ್ಪತ್ರೆಯಿಂದ ಒಂದೇ ದಿನ 25 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದು, ಈವರೆಗೆ 436 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 349 ಸಕ್ರಿಯ ಪ್ರಕರಣಗಳಿವೆ.

    ಕರೊನಾಕ್ಕೆ ಜಿಲ್ಲೆಯಲ್ಲಿ ಮತ್ತಿಬ್ಬರು ಬಲಿಯಾಗಿದ್ದಾರೆ. ತುಮಕೂರು ನಗರದ ಬನಶಂಕರಿಯ 76 ವರ್ಷದ ವೃದ್ಧೆ ಜ್ವರ, ಉಸಿರಾಟ, ನ್ಯುಮೋನಿಯಾದಿಂದ ಬಳಲುತ್ತಿದ್ದು, ಭಾನುವಾರ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಿಸದೆ ಮಂಗಳವಾರ ಮೃತಪಟ್ಟಿದ್ದು ಅವರಲ್ಲಿ ಸೋಂಕು ಇರುವುದು ದೃಢವಾಗಿದೆ. ಗುಬ್ಬಿ ತಾಲೂಕು ನಿಟ್ಟೂರಿನ 52 ವರ್ಷದ ವ್ಯಕ್ತಿ ಜ್ವರ, ಕೆಮ್ಮಿನಿಂದ ಬಳಲುತ್ತಿದ್ದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದು ಕೋವಿಡ್ ಮಾರ್ಗಸೂಚಿಯನ್ವರ ಅಂತ್ಯಕ್ರಿಯೆ ನೆರವೇರಿಸಲಾಗಿದೆ.

    6 ಮಂದಿಗೆ ಸೋಂಕು : ಶಿರಾ ತಾಲೂಕಿನಲ್ಲಿ 6 ಮಂದಿಗೆ ಸೋಂಕು ತಗುಲಿದೆ. ಇದೇ ಪ್ರಥಮ ಬಾರಿಗೆ ಸ್ಥಳೀಯ ಆರೋಗ್ಯ ಕೇಂದ್ರದ ಮಟ್ಟದಲ್ಲಿ ಆಂಟಿಜನ್ ಟೆಸ್ಟ್ ಕಿಟ್ ಮೂಲಕ ಸೋಂಕಿನ ಪತ್ತೆ ನಡೆಸಲಾಗುತ್ತಿದ್ದು, ಮೊದಲ ದಿನ ಪರೀಕ್ಷಿಸಿದ್ದ 22 ಜನರ ಪೈಕಿ, ಹುಳಿಗೆರೆಯ ಇಬ್ಬರಲ್ಲಿ ಸೋಂಕು ಇರುವುದು ದೃಢಪಟ್ಟಿದೆ. ಬೆಂಗಳೂರು ಪ್ರಯಾಣ ಹಿನ್ನೆಲೆಯ ಹುಳಿಗೆರೆಯ 35 ವರ್ಷದ ಮಹಿಳೆ, 39 ವರ್ಷದ ವ್ಯಕ್ತಿಗೆ ಸೋಂಕು ತಗುಲಿದೆ. ವಿದ್ಯಾನಗರ ಬಡಾವಣೆಯ 32 ವರ್ಷದ ಆಸ್ಪತ್ರೆ ಸಹಾಯಕ ಸಿಬ್ಬಂದಿ, ಬೆಂಗಳೂರು ಪ್ರಯಾಣ ಹಿನ್ನೆಲೆಯ ಚಿಕ್ಕಸಂದ್ರಕಾವಲ್‌ನ 44 ವರ್ಷದ ವ್ಯಕ್ತಿ, ಜವನಪಾಳ್ಯದ 33 ವರ್ಷದ ವ್ಯಕ್ತಿ ಹಾಗೂ ನೇರಳಗುಡ್ಡ ಆರೋಗ್ಯ ಕೇಂದ್ರ ವ್ಯಾಪ್ತಿಯ 55 ವರ್ಷದ ಮಹಿಳೆಗೆ ಸೋಂಕು ಕಾಣಿಸಿಕೊಂಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts