More

    ಆಡಳಿತ, ವಿಪಕ್ಷಗಳ ಸ್ವಪ್ರತಿಷ್ಠೆಗೆ 21 ದಿನಗಳ ಅಧಿವೇಶನ ಬಲಿ: ಆಯನೂರು ಮಂಜುನಾಥ್ ವಾಗ್ದಾಳಿ

    ಶಿವಮೊಗ್ಗ: ಆಡಳಿತ ಮತ್ತು ಪ್ರತಿಪಕ್ಷದ ಸ್ವಪ್ರತಿಷ್ಠೆಯಿಂದ 21 ದಿನಗಳ ಅಧಿವೇಶನ ವ್ಯರ್ಥವಾಗಿದ್ದು, ಯಾವುದೇ ಚರ್ಚೆ ನಡೆಯದೆ ಬಜೆಟ್ ಪಾಸ್ ಮಾಡಿದ್ದು ಖಂಡನೀಯ ಎಂದು ಮಾಜಿ ಎಂಎಲ್‌ಸಿ ಆಯನೂರು ಮಂಜುನಾಥ್ ದೂರಿದರು.

    ರಾಜಕಾರಣಿಗಳನ್ನು ಕರೆತರಲು ಐಎಎಸ್ ಅಧಿಕಾರಿಗಳನ್ನು ನೇಮಿಸಿದ ವಿಚಾರವನ್ನು ಇಟ್ಟುಕೊಂಡು ಆಡಳಿತ ಮತ್ತು ಪ್ರತಿಪಕ್ಷಗಳು ಅಧಿವೇಶನವನ್ನು ವ್ಯರ್ಥಗೊಳಿಸಿದ್ದು ಸರಿಯಲ್ಲ. ಸದನ ನಡೆಸಲು ಎಲ್ಲ ಶಾಸಕರೂ ವಿಫಲರಾಗಿದ್ದಾರೆ ಎಂದು ಸೋಮವಾರ ಕಿಡಿಕಾರಿದರು.
    ಸದನಕ್ಕೆ ತನ್ನದೇ ಆದ ಗೌರವ, ಸಿದ್ಧಾಂತ, ನಿಯಮಗಳಿವೆ. ಹಾಗೆಯೇ ಸಭಾಪತಿಗಳ ಪೀಠಕ್ಕೆ ತನ್ನದೇ ಆದ ಗೌರವವಿದೆ. ಅದನ್ನು ಕಾಪಾಡಬೇಕಾದ ಹೊಣೆ ಎಲ್ಲ ಶಾಸಕರದ್ದೂ. ಸದನದಲ್ಲಿ ಸಭಾಪತಿಗಳು ತೆಗೆದುಕೊಂಡ ನಿರ್ಧಾರವೇ ಅಂತಿಮ. ರಾಜ್ಯಪಾಲರೂ ಅದನ್ನು ಪ್ರಶ್ನಿಸುವಂತಿಲ್ಲ. ನ್ಯಾಯಾಲಯಗಳು ಕೂಡ ಅದನ್ನು ಗೌರವಿಸುತ್ತವೆ. ಆದರೆ ಬಿಜೆಪಿ ನಾಯಕರು ಅಲ್ಲಿ ತೆಗೆದುಕೊಂಡ ನಿರ್ಧಾರದ ವಿರುದ್ಧ ಸದನದ ಹೊರಗೆ ಪ್ರಶ್ನೆ ಮಾಡುವಂತಿಲ್ಲ. ಆದರೂ ಬಿಜೆಪಿ ನಾಯಕರು ಪ್ರತಿಭಟನೆ ಮಾಡುತ್ತಿರುವುದು ಸರಿಯಲ್ಲ ಎಂದು ದೂರಿದರು.
    ಪ್ರತಿಪಕ್ಷದ ನಾಯಕನೇ ಇಲ್ಲದ ಬಿಜೆಪಿಯವರು ತಮ್ಮ ಮನಸ್ಸಿಗೆ ಬಂದಂತೆ ನಿರ್ಧಾರ ತೆಗೆದುಕೊಂಡಿದ್ದಾರೆ. ರಾಜ್ಯಪಾಲರ ಬಳಿ ಹೋಗಿದ್ದಾರೆ. ಆದರೆ ಅಲ್ಲಿ ಸಭಾಧ್ಯಕ್ಷರ ವಿರುದ್ಧ ಮಾತನಾಡಿಲ್ಲ. ಬೇರೆ ವಿಷಯ ಮಾತನಾಡಿಕೊಂಡು ಹೊರಗೆ ಬಂದು ಪ್ರತಿಭಟನೆ ಮಾಡುತ್ತಿರುವುದು ಸರಿಯಲ್ಲ. ಬಿಜೆಪಿಯಲ್ಲಿ ಹಿರಿಯರಾದ ಡಿ.ಎಚ್.ಶಂಕರಮೂರ್ತಿ, ಬಿ.ಎಸ್.ಯಡಿಯೂರಪ್ಪ ಅಂಥವರಿದ್ದು ಇವರ‌್ಯಾರೂ ಆ ಬಗ್ಗೆ ಮಾತನಾಡಿಲ್ಲ. ಕೆಲವರು ಸ್ವಪ್ರತಿಷ್ಠೆಗೆ ಅಧಿವೇಶನ ವಿಫಲಗೊಳಿಸಿದ್ದು, ಹಲವು ಬಾರಿ ಆಯ್ಕೆಯಾದ ಶಾಸಕರೂ ಪೀಠಕ್ಕೆ ಅಗೌರವ ತೋರಿರುವುದು ಸರಿಯಲ್ಲ ಎಂದರು.
    ಆಡಳಿತ ಪಕ್ಷವೂ ದುಡುಕಿನ ನಿರ್ಧಾರ ತೆಗೆದುಕೊಂಡಿದೆ. ಒಟ್ಟಾರೆ ಈ ಇಬ್ಬರ ಆರ್ಭಟಕ್ಕೆ ಇಡೀ ಸದನ ಯಶಸ್ವಿಯಾಗಿ ಸಾಗದೆ ಕೇವಲ ಪ್ರತಿಷ್ಠೆಯ ಅಧಿವೇಶನವಾಯಿತು. ಜನರ ಧ್ವನಿಯನ್ನು ಸದನ ಪ್ರತಿನಿಧಿಸಲಿಲ್ಲ. ವಿಧಾನಸಭಾಧ್ಯಕ್ಷರು ರಾಜಕೀಯ ಪಕ್ಷಗಳು ಆಯೋಜಿಸಿದ್ದ ಔತಣಕೂಟಕ್ಕೆ ಹೋಗಿದ್ದೂ ತಪ್ಪು. ಸಭಾಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸುವ ಮೊದಲು ಅವರು ರಾಜಕೀಯ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಕೊಟ್ಟಿರುತ್ತಾರೆ. ಹೀಗಿರುವಾಗ ರಾಜಕೀಯ ಪಕ್ಷಗಳು ಆಯೋಜಿಸಿದ್ದ ಔತಣಕೂಟಕ್ಕೆ ಹೋಗಿದ್ದು ಸರಿಯಲ್ಲ ಎಂದು ತಿಳಿಸಿದರು.
    ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್, ದೀಪಕ್ ಸಿಂಗ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts