More

    2024 ಜನಾದೇಶದ ವರ್ಷ: ಲೋಕಸಭೆಗೆ ಮಹಾ ಚುನಾವಣೆ, 8 ರಾಜ್ಯಗಳಿಗೂ ನಡೆಯಲಿದೆ ಎಲೆಕ್ಷನ್

    ನವದೆಹಲಿ: ಜಗತ್ತು ಹೊಸ ವರ್ಷ 2024ಕ್ಕೆ ಕಾಲಿಟ್ಟಿದ್ದು, ಈ ವರ್ಷ ಪೂರ್ತಿ ಪ್ರಜಾಪ್ರಭುತ್ವದ ಮತ ಕಹಳೆ ಮೊಳಗಲಿರುವುದು ವಿಶೇಷ. ಭಾರತದಲ್ಲಿ ಬಹುನಿರೀಕ್ಷಿತ ಲೋಕಸಭಾ ಚುನಾವಣೆ ಜತೆಗೆ 8 ರಾಜ್ಯಗಳ ವಿಧಾನಸಭೆಗಳಿಗೂ ಚುನಾವಣೆ ನಡೆಯಲಿದೆ. ಅಷ್ಟೇ ಅಲ್ಲ, ನೆರೆಯ ಪಾಕಿಸ್ತಾನ, ದೂರದ ಅಮೆರಿಕ, ರಷ್ಯಾ, ಬ್ರಿಟನ್​ಗಳಲ್ಲೂ ಚುನಾವಣೆ ನಡೆಯಬೇಕಿದ್ದು, ಜಾಗತಿಕವಾಗಿ 40ಕ್ಕೂ ಹೆಚ್ಚು ರಾಷ್ಟ್ರಗಳು ಪ್ರಜಾಪ್ರಭುತ್ವದ ಹಬ್ಬವನ್ನು ಆಚರಿಸಲಿವೆ.

    ಈ ಚುನಾವಣೆಗಳು ಜಗತ್ತಿನ ರಾಜಕೀಯ ನಕಾಶೆ ಮೇಲೆ ಮಹತ್ವದ ಪರಿಣಾಮ ಬೀರುವ ಸಾಧ್ಯತೆಯಿದೆ. ರಾಜಕೀಯ ವಿಶ್ಲೇಷಕರು, ಚುನಾವಣಾ ಪಂಡಿತರು ಮತ್ತು ದತ್ತಾಂಶ-ಪ್ರೇರಿತ ವಿಶ್ಲೇಷಕರು ಜಗತ್ತಿನ ಕೆಲವು ಬಲಿಷ್ಠ ರಾಜಕೀಯ ಪಕ್ಷಗಳು ಮತ್ತು ವ್ಯಕ್ತಿಗಳ ಭವಿಷ್ಯವನ್ನು ಹೇಳುವಲ್ಲಿ ನಿರತರಾಗಿರುತ್ತಾರೆಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ವಾಸ್ತವವಾಗಿ ಸಂಭಾವ್ಯ ಚುನಾವಣೆಗಳ ನೈಜ ಚಿತ್ರಣ ಬರುವವರೆಗೆ ಏನನ್ನೂ ನಿಖರವಾಗಿ ಹೇಳಲಾಗದಿದ್ದರೂ ಈ ವರೆಗಿನ ವಿದ್ಯಮಾನ ಹಾಗೂ ಪ್ರವೃತ್ತಿಗಳ ಆಧಾರದಲ್ಲಿ ಹಲವು ರಾಷ್ಟ್ರಗಳ ಚಿತ್ರಣವನ್ನು ಇಲ್ಲಿ ನೀಡಲಾಗಿದೆ. ಸ್ಪರ್ಧೆಗಳು ಸಮೀಪಿಸುತ್ತಿರುವುದರಿಂದ ಪ್ರಸಕ್ತ ಸಮೀಕ್ಷೆ ಮತ್ತು ಹಾಲಿ ರಾಜಕೀಯ ವಾತಾವರಣವೂ ಈ ಭವಿಷ್ಯಕ್ಕೆ ಆಧಾರವಾಗಿದೆ.

    ಭಾರತದಲ್ಲಿ ಲೋಕಸಭೆ ಚುನಾವಣೆಯ ಮಹಾ ಪರ್ವ ಈ ವರ್ಷ ನಡೆಯಲಿದೆ. ಏಪ್ರಿಲ್-ಮೇ ತಿಂಗಳಲ್ಲಿ ಚುನಾವಣೆ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಸತತ 3ನೇ ಬಾರಿ ಅಧಿಕಾರದ ಗದ್ದುಗೆ ಮೇಲೆ ದೃಷ್ಟಿ ನೆಟ್ಟಿದ್ದಾರೆ. ಜವಾಹರಲಾಲ್ ನೆಹರೂ ಮತ್ತು ಇಂದಿರಾ ಗಾಂಧಿ ನಂತರ ಅತಿ ದೀರ್ಘಾವಧಿಗೆ ಪ್ರಧಾನಿಯಾದ ದಾಖಲೆಗೆ ಭಾಜನರಾಗುವ ಹಂಬಲ ಮೋದಿಯವರದ್ದಾಗಿದೆ. ಇದೇ ವೇಳೆ, ಬಿಜೆಪಿಯ ಜಯದ ನಾಗಾಲೋಟಕ್ಕೆ ತಡೆಯೊಡ್ಡಲು ಹಾಗೂ ಮೈತ್ರಿಯನ್ನು ಗಟ್ಟಿಗೊಳಿಸಿಕೊಳ್ಳಲು ಪ್ರತಿಪಕ್ಷಗಳು ಸಮಯದೊಂದಿಗೆ ಸ್ಪರ್ಧೆ ನಡೆಸುತ್ತಿವೆ. ಏನಿದ್ದರೂ ಸದ್ಯದ ಭವಿಷ್ಯದ ಪ್ರಕಾರ ಆಳುವ ಪಕ್ಷದ ಪರವಾಗಿಯೇ ಭವಿಷ್ಯದ ಲೆಕ್ಕಾಚಾರವಿದೆ. ಎಬಿಪಿ-ಸಿವೋಟರ್ ನಡೆಸಿದ ಈಚಿನ ಅಭಿಮತ ಸಂಗ್ರಹದ ಪ್ರಕಾರ 2024ರ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಅಧಿಕಾರವನ್ನು ಉಳಿಸಿಕೊಳ್ಳಲಿದೆ. 2019ರಲ್ಲಿ ಗೆದ್ದ ರೀತಿಯಲ್ಲೇ ಸ್ಥಾನಗಳನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳಲಿದೆ ಎಂದು ಸಮೀಕ್ಷೆ ಹೇಳಿದೆ.

    ಬಿಜೆಪಿಗೆ 335 ಸ್ಥಾನ: ಎಬಿಪಿ-ಸಿವೋಟರ್ ಸಮೀಕ್ಷೆ ಹೇಳುವಂತೆ, ಲೋಕಸಭೆಯ 543 ಸ್ಥಾನಗಳ ಪೈಕಿ ಬಿಜೆಪಿ ನೇತೃತ್ವದ ಎನ್​ಡಿಎ ಕೂಟ 295ರಿಂದ 335 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ. ಪ್ರತಿಪಕ್ಷ ಕಾಂಗ್ರೆಸ್ ಮತ್ತು ಅದರ ಐಎನ್​ಡಿಐಎ (ಇಂಡಿಯಾ) ಮಿತ್ರ ಪಕ್ಷಗಳು 165-205 ಸ್ಥಾನಗಳಲ್ಲಿ ಗೆಲುವು ಸಾಧಿಸಲಿವೆ. 2019ರ ಚುನಾವಣೆಗಳಲ್ಲಿ ಬಿಜೆಪಿಯೊಂದೇ 303 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿತ್ತು. ಅದೇ ರೀತಿ ದಿ ಇಕನಾಮಿಸ್ಟ್ ಪ್ರಕಟಿಸಿರುವ ಸಮೀಕ್ಷೆಯೊಂದರ ಪ್ರಕಾರ ಬಿಜೆಪಿ 299ರಿಂದ 335 ಸ್ಥಾನಗಳನ್ನು ಗೆಲ್ಲಲಿದೆ ಎಂದು ಶೇ.47 ಜನರು ಅಭಿಪ್ರಾಯ ಪಟ್ಟಿದ್ದಾರೆ. ಚುನಾವಣಾ ಭವಿಷ್ಯ ನುಡಿಯುವ ಸಂಸ್ಥೆ ಗುಡ್ ಜಡ್ಜ್​ಮೆಂಟ್ ಈ ಸಮೀಕ್ಷೆ ನಡೆಸಿತ್ತು.

    ವಿವಿಧ ರಾಜ್ಯಗಳಲ್ಲೂ ಎಲೆಕ್ಷನ್ ಜ್ವರ: ಹೊಸ ವರ್ಷದಲ್ಲಿ ಕನಿಷ್ಠ 8 ರಾಜ್ಯಗಳಲ್ಲಿ ವಿಧಾನಸಭೆಯ ಅವಧಿ ಮುಗಿಯಲಿದೆ. ಆಂಧ್ರಪ್ರದೇಶ, ಅರುಣಾಚಲ ಪ್ರದೇಶ, ಒಡಿಶಾ, ಸಿಕ್ಕಿಂ, ಜಮ್ಮ ಮತ್ತು ಕಾಶ್ಮೀರ, ಹರಿಯಾಣ, ಮಹಾರಾಷ್ಟ್ರ ಹಾಗೂ ಜಾರ್ಖಂಡ್​ನಲ್ಲಿ ಚುನಾವಣೆ ನಿಗದಿಯಾಗಲಿದೆ.

    ಅಮೆರಿಕ ಅಧ್ಯಕ್ಷೀಯ ಚುನಾವಣೆ: ಅಮೆರಿಕದ ಅಧ್ಯಕ್ಷೀಯ ಚುನಾವಣೆ 2024ರ ನವೆಂಬರ್​ನಲ್ಲಿ ನಡೆಯಲಿದೆ. ಇದು ವಿಶ್ವದಲ್ಲಿ ಅತಿ ಹೆಚ್ಚು ಕಾತರದಿಂದ ನಿರೀಕ್ಷಿಸುವ ರಾಜಕೀಯ ಸ್ಪರ್ಧೆಯಾಗಿರಲಿದೆ. ಯಾಕೆಂದರೆ 2020ರಂತೆ ಇದು ಕೂಡ ತುಂಬಾ ಜಿದ್ದಾಜಿದ್ದಿನ ಸ್ಪರ್ಧೆಯಾಗಿರುವ ಎಲ್ಲ ಲಕ್ಷಣಗಳು ಈಗಾಗಲೇ ಕಾಣಿಸಿಕೊಂಡಿವೆ. ರೇಸ್ ಟು ದ ಡಬ್ಲ್ಯುಎಚ್ (ಶ್ವೇತಭವನ) ಮತ್ತು ರಿಯಲ್ಕ್ಲಿಯರ್ ಪಾಲಿಟಿಕ್ಸ್​ವರೆಗೆ ಹಲವು ಸಂಸ್ಥೆಗಳು ನಡೆಸಿದ ಸಮೀಕ್ಷೆ ಪ್ರಕಾರ ಹಾಲಿ ಅಧ್ಯಕ್ಷ ಜೋ ಬಿಡೆನ್​ಗಿಂತ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸ್ಪಷ್ಟ ಮುನ್ನಡೆಯಲ್ಲಿದ್ದಾರೆ. ರೇಸ್ ಟು ದ ಡಬ್ಲ್ಯುಎಚ್ ಹೇಳುವಂತೆ ಟ್ರಂಪ್ ಗೆಲುವಿನ ಸಾಧ್ಯತೆ ಶೇಕಡ 45.1 ಇದೆ. ಬಿಡೆನ್ ಜಯದ ಸಾಧ್ಯತೆಯಿರುವುದು ಶೇ.43.8. ರಿಯಲ್ಕ್ಲಿಯರ್​ಪಾಲಿಟಿಕ್ಸ್ ಹೇಳುವಂತೆ ಟ್ರಂಪ್ ಜಯದ ಅವಕಾಶ ಶೇ.46.8 ಹಾಗೂ ಬಿಡೆನ್ ಅಧಿಕಾರ ಉಳಿಸಿಕೊಳ್ಳುವ ಸಾಧ್ಯತೆ ಶೇ.44.5 ಆಗಿದೆ. ದಿ ಇಕನಾಮಿಸ್ಟ್​ನಲ್ಲಿ ಪ್ರಕಟವಾಗಿರುವ ಸಮೀಕ್ಷೆ ಅನ್ವಯ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಗೆಲ್ಲುವ ಸಾಧ್ಯತೆ ಶೇ.63 ಆಗಿದ್ದು ರಿಪಬ್ಲಿಕನ್ ಅಭ್ಯರ್ಥಿಯ ಜಯದ ಸಾಧ್ಯತೆ ಕೇವಲ ಶೇ.10 ಆಗಿದೆ.

    ಪಾಕಿಸ್ತಾನ ಚುನಾವಣೆ: ನೆರೆಯ ಪಾಕಿಸ್ತಾನದಲ್ಲಿ ಕೂಡ 2024ರಲ್ಲಿ ಸಂಸತ್ತಿಗೆ ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಮಾಜಿ ಪ್ರಧಾನಿಗಳೂ ಕಡು ರಾಜಕೀಯ ವೈರಿಗಳೂ ಆದ ನವಾಜ್ ಷರೀಫ್ ಮತ್ತು ಇಮ್ರಾನ್ ಖಾನ್ ಇಬ್ಬರೂ ಅಧಿಕಾರಕ್ಕೆ ಮರಳುವ ಹಂಬಲದಲ್ಲಿದ್ದಾರೆ. ಮಾಜಿ ಕ್ರಿಕಟಿಗ ಇಮ್ರಾನ್ ಖಾನ್ ಭ್ರಷ್ಟಾಚಾರ ಆರೋಪದಲ್ಲಿ ಜೈಲಿನಲ್ಲಿದ್ದರೂ ಜನಪ್ರಿಯತೆಯಲ್ಲಿ ಹಿಂದುಳಿದಿಲ್ಲ. ಅವರ ಬೆಂಬಲದ ಕೋಟೆಯನ್ನು ಮುರಿದು ಮುನ್ನಡೆ ಸಾಧಿಸುವ ಗುರಿಯನ್ನು ಷರೀಫ್ ಇಟ್ಟುಕೊಂಡಿದ್ದಾರೆ.

    ರಷ್ಯಾ ಅಧ್ಯಕ್ಷೀಯ ಚುನಾವಣೆ: ರಷ್ಯಾದಲ್ಲೂ 2024 ಮಾರ್ಚ್​ನಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ. ವ್ಲಾದಿಮಿರ್ ಪುತಿನ್ ಐದನೇ ಸಲ ಅಧ್ಯಕ್ಷ ಪಟ್ಟದ ಮೇಲೆ ಕಣ್ಣು ನೆಟ್ಟಿದ್ದಾರೆ. ಸದ್ಯ ಅವರಿಗೆ ಬೆಂಬಲ ಮಟ್ಟ ತುಂಬಾ ಎತ್ತರದಲ್ಲಿದೆ. ಎರಡು ವರ್ಷದಿಂದ ಉಕ್ರೇನ್ ವಿರುದ್ಧ ನಡೆಯುತ್ತಿರುವ ಸುದೀರ್ಘ ಯುದ್ಧದಿಂದ ಪುತಿನ್ ವ್ಯಕ್ತಿತ್ವ ಸ್ವಲ್ಪಮಟ್ಟಿಗೆ ಕುಂದಿದ್ದರೂ ಜನಪ್ರಿಯತೆ ಅಷ್ಟೊಂದು ಕುಸಿದಿಲ್ಲ.

    ಬಾಂಗ್ಲಾದೇಶ: ದಕ್ಷಿಣ ಏಷ್ಯಾ ರಾಷ್ಟ್ರ ಬಾಂಗ್ಲಾದೇಶ ಕೂಡ 2024ರಲ್ಲಿ ಚುನಾವಣೆಗೆ ಸಜ್ಜಾಗಿದೆ.

    ಎಲೆಕ್ಷನ್ ನಡೆಯಲಿರುವ ರಾಜ್ಯಗಳು

    * ಆಂಧ್ರಪ್ರದೇಶ

    * ಅರುಣಾಚಲ ಪ್ರದೇಶ

    * ಒಡಿಶಾ

    * ಸಿಕ್ಕಿಂ (ಏಪ್ರಿಲ್​ನಲ್ಲಿ)

    * ಜಮ್ಮು ಮತ್ತು ಕಾಶ್ಮೀರ (ಸೆಪ್ಟೆಂಬರ್​ನಲ್ಲಿ)

    * ಹರಿಯಾಣ

    * ಮಹಾರಾಷ್ಟ್ರ (ಅಕ್ಟೋಬರ್)

    * ಜಾರ್ಖಂಡ್ (ಡಿಸೆಂಬರ್)

    ಪ್ರಮುಖ ದೇಶಗಳು

    * ಪಾಕಿಸ್ತಾನ

    * ಬಾಂಗ್ಲಾದೇಶ

    * ಅಮೆರಿಕ

    * ಬ್ರಿಟನ್

    * ರಷ್ಯಾ

    * ಯುಕ್ರೇನ್

    * ಇಂಡೋನೇಷ್ಯಾ

    * ಇರಾನ್

    * ದಕ್ಷಿಣ ಆಫ್ರಿಕಾ

    * ತೈವಾನ್

    * ಮೆಕ್ಸಿಕೋ

    * ವೆನೆಝುುವೆಲಾ

    * ಯುರೋಪ್​ನ 9 ದೇಶಗಳಲ್ಲಿ ಎಲೆಕ್ಷನ್.

    ರಾಜ್ಯದಲ್ಲೂ ಸಾಲುಸಾಲು ಚುನಾವಣೆ
    ಬೆಂಗಳೂರು: ರಾಜ್ಯದಲ್ಲೂ 2024ರಲ್ಲಿ ಅನೇಕ ಚುನಾವಣೆಗಳು ನಡೆಯಬೇಕಾಗಿದೆ. ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ, ಬಿಬಿಎಂಪಿ, ಮೈಸೂರು ಪಾಲಿಕೆ ಸಹಿತ ಕೆಲ ಸ್ಥಳೀಯ ಸಂಸ್ಥೆಗಳಿಗೆ ಎಲೆಕ್ಷನ್ ನಡೆಸಬೇಕಾಗಿದೆ. ಬಿಬಿಎಂಪಿ ಹಾಗೂ ಜಿಪಂ ಮತ್ತು ತಾಪಂಗಳಿಗೆ ಎರಡು ಮೂರು ವರ್ಷಗಳಿಂದ ಚುನಾವಣೆ ನಡೆದಿಲ್ಲ. ಈ ವರ್ಷವಾದರೂ ಚುನಾವಣೆ ನಡೆಯುವುದೇ ಎಂಬುದನ್ನು ನೋಡಬೇಕಾಗಿದೆ. ಇದಲ್ಲದೆ ರಾಜ್ಯಸಭೆಯ ಸದಸ್ಯರಾದ ರಾಜೀವ್ ಚಂದ್ರಶೇಖರ್, ಡಾ.ಎಲ್. ಹನುಮಂತಯ್ಯ, ಜಿ.ಸಿ. ಚಂದ್ರಶೇಖರ್, ಸಯ್ಯದ್ ನಾಸೀರ್ ಹುಸೇನ್ ಏ.2 ರಂದು ನಿವೃತ್ತರಾಗಲಿದ್ದಾರೆ. ವಿಧಾನಸಭೆಯಿಂದ ಈ 4 ಸ್ಥಾನಗಳಿಗೆ ಆಯ್ಕೆಯಾಗಬೇಕಾಗಿದೆ. ವಿಧಾನಸಭೆಯಿಂದ ವಿಧಾನ ಪರಿಷತ್​ಗೆ ಆಯ್ಕೆಯಾಗಿರುವ 11 ಸ್ಥಾನಗಳು ಜೂ.17ರಂದು ಖಾಲಿಯಾಗಲಿದ್ದು, ಆ ಸ್ಥಾನಗಳಿಗೆ ಶಾಸಕರು ಮತದಾನ ಮಾಡಿ ಆಯ್ಕೆ ಮಾಡಬೇಕಾಗಿದೆ. ಪರಿಷತ್​ನ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ತಲಾ 3 ಸ್ಥಾನಗಳು ಜೂ.21 ರಂದು ಖಾಲಿಯಾಗಲಿದ್ದು, ಚುನಾವಣಾ ಪ್ರಕ್ರಿಯೆ ಆರಂಭವಾಗಿವೆ.

    ಖ್ಯಾತ ನಟರ ಜತೆ ಅಫೇರ್! ಶ್ರೀರಾಮಚಂದ್ರನ ಬೆಡಗಿ ಮೋಹಿನಿ ಬಿಚ್ಚಿಟ್ಟ ಅಸಲಿ ಸಂಗತಿ​ ಇದು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts