More

    ಜಿಲ್ಲೆಯಲ್ಲಿ 2 ಗ್ಯಾಸ್ ಇನ್ಸುಲೇಟೆಡ್ ಸಬ್‌ಸ್ಟೇಷನ್

    ಉಡುಪಿ: ಜಿಲ್ಲೆಯ ಉದ್ಯಾವರ ಹಾಗೂ ಕೋಟದಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಜಿಐಎಸ್ (ಗ್ಯಾಸ್ ಇನ್ಸುಲೇಟೆಡ್) ಸಬ್‌ಸ್ಟೇಷನ್ ನಿರ್ಮಾಣಕ್ಕೆ ಮೆಸ್ಕಾಂ ಮುಂದಾಗಿದ್ದು, ಇದರಿಂದ ಜಿಲ್ಲೆಯ ವಿದ್ಯುತ್ ಬೇಡಿಕೆಗೆ ತ್ವರಿತ ಸ್ಪಂದನೆ ಸಾಧ್ಯವಾಗಲಿದೆ.
    ಕೇಂದ್ರ ಸರ್ಕಾರದ ಸಮಗ್ರ ವಿದ್ಯುತ್ ಅಭಿವೃದ್ಧಿ ಯೋಜನೆಯಡಿ ಉದ್ಯಾವರದಲ್ಲಿ ಸುಮಾರು 13.5 ಕೋಟಿ ರೂ. ಹಾಗೂ ಕೋಟದಲ್ಲಿ ಸುಮಾರು 19 ಕೋಟಿ ರೂ. ವೆಚ್ಚದಲ್ಲಿ ಸಬ್‌ಸ್ಟೇಷನ್‌ಗಳು ನಿರ್ಮಾಣವಾಗಲಿವೆ. ಕಾಮಗಾರಿಯ ಟೆಂಡರ್ ಪ್ರಕ್ರಿಯೆಗಳು ಪೂರ್ಣಗೊಂಡಿದ್ದು, 2021ಕ್ಕೆ ಜಿಲ್ಲೆಯಲ್ಲಿ ಸಬ್‌ಸ್ಟೇಷನ್‌ಗಳು ಕಾರ್ಯಾರಂಭ ಮಾಡಲಿವೆ.

    ಐಜಿ ಸ್ಟೇಷನ್ ವಿಶೇಷ: ವಿದ್ಯುತ್ ಸಬ್‌ಸ್ಟೇಷನ್‌ಗಳಲ್ಲಿ ಸಾಮಾನ್ಯವಾಗಿ ಏರ್ ಇನ್ಸುಲೇಟೆಡ್ ವಿಧಾನ (ಎಐಎಸ್) ಅಳವಡಿಸಲಾಗುತ್ತದೆ. ಹೈ ವೋಲ್ಟೇಜ್ ವಿದ್ಯುತ್ ಪ್ರಸರಣವಾಗುವ ಕಾರಣ ವಿದ್ಯುತ್ ತಂತಿಗಳ ಮಧ್ಯೆ ಸಾಕಷ್ಟು ಅಂತರ ಅಗತ್ಯ. ಹಾಗಾಗಿ ಸಬ್‌ಸ್ಟೇಷನ್‌ಗೆ ಸುಮಾರು ಅರ್ಧ ಎಕರೆಗಿಂತಲೂ ಹೆಚ್ಚು ಜಾಗ ಬೇಕು. ಇದನ್ನು ನಿವಾರಿಸಲು ಜಪಾನ್‌ನಲ್ಲಿ ಪ್ರಥಮವಾಗಿ ಗ್ಯಾಸ್ ಇನ್ಸುಲೇಟೆಡ್ ವಿಧಾನ ಅಭಿವೃದ್ಧಿ ಪಡಿಸಲಾಗಿತ್ತು. ಸಲ್ಫರ್ ಹೆಕ್ಸಾಫ್ಲೂರಿಡ್ ಗ್ಯಾಸ್ ಕವಚದಲ್ಲಿ ಮುಚ್ಚಿಡುವ ವಿಧಾನದಿಂದ ಬ್ರೇಕರ್, ಟ್ರಾನ್ಸ್‌ಫಾರ್ಮರ್ ಯಾರ್ಡ್ ಸಣ್ಣ ಕಂಟ್ರೋಲ್ ರೂಂನಿಂದ ನಿಯಂತ್ರಿಸಬಹುದು. ಇದರ ನಿರ್ಮಾಣ ವೆಚ್ಚ ದುಬಾರಿಯಾದರೂ ನಿರ್ವಹಣೆ ಕಡಿಮೆ. 30/40 ಚದರ ಅಡಿ ಜಾಗದಲ್ಲಿ ಈ ಸಬ್‌ಸ್ಟೇಷನ್ ನಿರ್ಮಿಸಬಹುದು.

    ಜಿಲ್ಲೆಗೆ 13 ಹೊಸ ಗ್ರಿಡ್‌ಗಳು: ಜಿಲ್ಲೆಯ ಕೇಮಾರಿನಲ್ಲಿ ಈಗಾಗಲೇ 220 ಕೆ.ವಿ.ಯ ಒಂದು ಗ್ರಿಡ್ ಕಾರ್ಯನಿರ್ವಹಿಸುತ್ತಿದ್ದು, ಮತ್ತೊಂದು ನಿರ್ಮಾಣ ಹಂತದಲ್ಲಿದೆ. 11 ಕಡೆ 110 ಕೆ.ವಿ.ಗ್ರಿಡ್ ಇದೆ. 6 ಕಡೆ ಹೆಚ್ಚುವರಿಯಾಗಿ ನಿರ್ಮಾಣವಾಗಲಿದೆ. 33 ಕೆ.ವಿ.ಯ 7 ಗ್ರಿಡ್‌ಗಳಿದ್ದು, 6 ಕಡೆ ನಿರ್ಮಾಣವಾಗುತ್ತಿದೆ. ಸುಮಾರು 80 ಕೋಟಿ ರೂ. ವೆಚ್ಚದಲ್ಲಿ ಹೆಗ್ಗುಂಜೆಯಲ್ಲಿ 220 ಕೆ.ವಿ.ಗ್ರಿಡ್‌ಗೆ ನಿರ್ಮಿಸಲಾಗುತ್ತಿದೆ.

    ಜಿಲ್ಲೆಯ ವಿದ್ಯುತ್ ಬೇಡಿಕೆ ಪರಿಗಣಿಸಿ ಉದ್ಯಾವರ ಹಾಗೂ ಕೋಟದಲ್ಲಿ ಎರಡು ಹೊಸ ಸಬ್‌ಸ್ಟೇಷನ್‌ಗಳು ನಿರ್ಮಾಣವಾಗಲಿವೆ. ಈಗಾಗಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಕಾಮಗಾರಿ ಪ್ರಾರಂಭವಾಗಿದೆ. 2021ರ ವೇಳೆಗೆ ಹೊಸ ಸ್ಟೇಷನ್‌ಗಳು ಕಾರ್ಯಾರಂಭ ಮಾಡಲಿವೆ.
    ನರಸಿಂಹ ಪಂಡಿತ್, ಮೆಸ್ಕಾಂ ಸೂಪರಿಟೆಂಡೆಂಟ್ ಇಂಜಿನಿಯರ್, ಉಡುಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts