More

    2ಎ ಮೀಸಲಾತಿ ಕೊಡದಿದ್ದರೆ 13ರಂದು ಸಿಎಂ ಮನೆ ಮುಂದೆ ಧರಣಿ

    ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ

    ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಜ. 12ರೊಳಗೆ ಕೊಡದಿದ್ದರೆ, ಜ.13ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಶಿಗ್ಗಾಂವಿಯಲ್ಲಿನ ಮನೆ ಎದುರು ಪ್ರತಿಭಟನೆ ಆರಂಭಿಸಬೇಕಾಗುತ್ತದೆ ಎಂದು ಪಂಚಮಸಾಲಿ ಕೂಡಲಸಂಗಮ ಪೀಠದ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

    ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2 ಎ ಮೀಸಲಾತಿಗಾಗಿ ನಾವು ಎರಡು ವರ್ಷದಿಂದ ಹೋರಾಟ ಮಾಡುತ್ತಿದ್ದೇವೆ. ಇದಕ್ಕೆ ರ್ತಾಕ ಅಂತ್ಯ ಕಾಣಿಸಲು ಡಿ. 22ರಂದು ಬೆಳಗಾವಿಯಲ್ಲಿ ಬೃಹತ್ ಸಮಾವೇಶ ಮಾಡಲಾಗಿತ್ತು. ಆಗ ಸಿಎಂ ಬಸವರಾಜ ಬೊಮ್ಮಾಯಿ ಅವರು ಪರಿಪರಿಯಾಗಿ ಬೇಡಿ ಕೊಂಡು, ಆಣೆ, ಪ್ರಮಾಣ, ಮಾಡಿ ಗಡುವು ಪಡೆದಿದ್ದರು ಎಂದು ತಿಳಿಸಿದರು.

    ಅಂದು ನಮ್ಮ ಸಮುದಾಯಕ್ಕೆ ಮೀಸಲಾತಿ ಸಿಗುತ್ತದೆ ಎಂದು ಕನಸು ಇಟ್ಟುಕೊಂಡಿದ್ದೆವು. ಆದರೆ ಸಚಿವ ಸಂಪುಟವನ್ನು ನಡೆಸಿ ಹೊಸದಾಗಿ 2ಡಿ ರಚನೆ ಮಾಡುವುದಾಗಿ ಸಿಎಂ ಕಾನೂನು ಸಚಿವರಿಂದ ಹೇಳಿಸಿದ್ದರು. ಡಿ. 29ರಂದು ಕೈಗೊಂಡ ನಿರ್ಣಯ ಅಸ್ಪಷ್ಟವಾಗಿದೆ. ಡಿ ಪ್ರವರ್ಗ ಹೊಸದಾಗಿ ರಚನೆ ಮಾಡಲು ಸಾಧ್ಯವಿಲ್ಲ. ಈ ಸಂಬಂಧ ಕಾನೂನು ತಜ್ಞರ ಸಲಹೆ ಪಡೆದುಕೊಳ್ಳಲಾಗಿದೆ. ಯಾವಾಗ ನೀತಿ ಸಂಹಿತೆ ಬರುತ್ತದೆ ಗೊತ್ತಿಲ್ಲ. ಆದ್ದರಿಂದ ಜ. 12ರೊಳಗೆ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಘೊಷಣೆ ಮಾಡಿ, ಅಧಿಸೂಚನೆ ಹೊರಡಿಸಬೇಕು ಎಂದು ಒತ್ತಾಯಿಸಿದರು.

    2ಡಿ ಪ್ರವರ್ಗದಲ್ಲಿ ಏನಿದೆ ಎಂಬುದನ್ನು ನಮಗೆ ತಿಳಿಸುವ ಕೆಲಸ ಸರ್ಕಾರ ಮಾಡಬೇಕು. ತಮ್ಮದೇ ಸಚಿವರಿಂದ ಸ್ಪಷ್ಟನೆ ಕೊಡಿಸಲಿ. ಸಂಕ್ರಮಣ ಒಂದು ದಿನ ಮುಂಚೆ ನಾವು ಹೋರಾಟ ಆರಂಭ ಮಾಡುತ್ತೇವೆ. ನಾವೆಲ್ಲರೂ ಸಂಕ್ರಮಣವನ್ನು ಸಿಎಂ ಮನೆ ಎದುರು ಮಾಡೋಣ. ಇದು ಬೇವು ಬೆಲ್ಲದ ಸಂಕ್ರಾಂತಿ ಆಗುವುದಿಲ್ಲ, ಹೋರಾಟದ ಸಂಕ್ರಾಂತಿ ಆಗಲಿದೆ. ಜಾತ್ರೆ, ಸಮಾರಂಭ ನಮಗೆ ಮುಖ್ಯ ಅಲ್ಲ. ನಮ್ಮ ಸಮುದಾಯಕ್ಕೆ ಮೀಸಲಾತಿ ಘೊಷಣೆ ಮುಖ್ಯ ಎಂದರು.

    ಈ ಹೋರಾಟವನ್ನು ‘ಪಂಚಮಸಾಲಿ ನಡಿಗೆ ಶಿಗ್ಗಾಂವಿ ಕಡೆಗೆ’ ಎಂಬ ಘೊಷ ವಾಖ್ಯದೊಂದಿಗೆ ಆರಂಭಿಸುತ್ತೇವೆ. 2ಎ ಪ್ರವರ್ಗದಲ್ಲಿ ಯಾವ ಮೀಸಲಾತಿ ಸಿಗುತ್ತದೆಯೋ, ಅದೇ ಮೀಸಲಾತಿ ನಮ್ಮ ಸಮುದಾಯಕ್ಕೆ ಕೊಡಬೇಕು. ನಮ್ಮ ಮೀಸಲಾತಿ ಪ್ರಮಾಣ ಎಷ್ಟು ಎಂಬುದು ಬಹಿರಂಗ ಪಡಿಸಬೇಕು ಎಂದು ಆಗ್ರಹಿಸಿದರು.

    ಕಾನೂನು ತಜ್ಞರೇ 2ಡಿ ಪ್ರವರ್ಗದಡಿ ಮೀಸಲಾತಿ ಕೊಡಲು ಬರುವುದಿಲ್ಲ ಎನ್ನುತ್ತಿದ್ದಾರೆ. ಲಿಂಗಾಯತ ಸಮುದಾಯದ ಒಳಜಾತಿಗಳ ಎಲ್ಲರನ್ನೂಗೊಂಡ ಮೀಸಲಾತಿ ನೀಡುತ್ತೀರೋ? ಅಥವಾ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡಲಾಗುತ್ತಿದಿಯೋ ? ಎಂಬುದು ಸರ್ಕಾರ ಸ್ಪಷ್ಟ ಪಡಿಸಿಸಲಿ. ಮೀಸಲಾತಿ ಘೊಷಣೆ ಮಾಡಿದ್ದು ಗೊಂದಲ ಆಗಿದೆ. ನಮಗೂ ಮೀಸಲಾತಿ ಘೊಷಣೆಯ ಆದೇಶ ಪತ್ರವನ್ನು ನೀಡಿ. ನಂತರ ಮೀಸಲಾತಿ ಸ್ವಾಗತ ಮಾಡಬೇಕೋ, ತಿರಸ್ಕರಿಸಬೇಕೋ ಎಂಬ ತೀರ್ಮಾನ ಮಾಡುತ್ತೇವೆ ಎಂದು ಹೇಳಿದರು.

    ಈ ಹಿಂದೆ ಬಿ.ಎಸ್. ಯಡಿಯೂರಪ್ಪ ಅವರು ಎರಡು ಬಾರಿ ಗಡುವು ನೀಡಿದ್ದರು. ಬಸವರಾಜ ಬೊಮ್ಮಾಯಿ ಐದು ಬಾರಿ ಗಡುವು ನೀಡಿದ್ದಾರೆ. ರಾಣೆಬೆನ್ನೂರಿನ ಶಾಸಕ ಯಾರದೋ ಒತ್ತಡಕ್ಕೆ ಮಣಿದು ನಮ್ಮ ವಿರುದ್ಧ ಹೋರಾಟ ಮಾಡುತ್ತೇವೆಂದು ಹೇಳಿದ್ದಾರೆ. ಅವರ ಮನವೊಲಿಸಿ ನಮ್ಮೊಂದಿಗೆ ಹೋರಾಟಕ್ಕೆ ಕೈ ಜೋಡಿಸುವಂತೆ ಹೇಳುತ್ತೇನೆ ಎಂದರು.

    ಸಮಾಜದ ಮುಖಂಡರಾದ ವಿಜಯ ಕುಲಕರ್ಣಿ, ವೀರೇಶ ಉಂಡಿ, ಬಾಪೂಗೌಡ ಪಾಟೀಲ, ಜಿ.ಜಿ. ದ್ಯಾವನಗೌಡ್ರ, ಮೈಲಾರಿ ಧಾರವಾಡ ಇತರರು ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts