More

    ಆಯ್ಕೆ ಗೊಂದಲದಲ್ಲಿ ಭಾರತ; 2ನೇ ಆರಂಭಿಕ, ವಿಕೆಟ್ ಕೀಪರ್ ಸ್ಥಾನ ನಿರ್ಧಾರವಾಗಿಲ್ಲ

    ಅಡಿಲೇಡ್: ಎರಡು ತ್ರಿದಿನ ಅಭ್ಯಾಸ ಪಂದ್ಯಗಳನ್ನು ಆಡುವ ಮೂಲಕ ಭಾರತ ತಂಡ ಆತಿಥೇಯ ಆಸ್ಟ್ರೇಲಿಯಾ ವಿರುದ್ಧದ ಮಹತ್ವದ ಟೆಸ್ಟ್ ಸರಣಿಗೆ ಭರ್ಜರಿ ಸಿದ್ಧತೆ ನಡೆಸಿದೆ. ಆದರೂ, ಗುರುವಾರ ಅಡಿಲೇಡ್‌ನಲ್ಲಿ ಆರಂಭವಾಗಲಿರುವ ಮೊದಲ ಟೆಸ್ಟ್‌ಗೆ ಮುನ್ನ ಭಾರತ ತಂಡದ ಆಡುವ ಹನ್ನೊಂದರ ಬಳಗದ ಆಯ್ಕೆಯಲ್ಲಿ ಕೆಲ ಗೊಂದಲಗಳು ಮುಂದುವರಿದಿವೆ. ಮಧ್ಯಮ ಕ್ರಮಾಂಕದಲ್ಲಿ ಚೇತೇಶ್ವರ ಪೂಜಾರ, ನಾಯಕ ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ ಮತ್ತು ಹನುಮ ವಿಹಾರಿಗೆ ಸ್ಥಾನ ನಿಶ್ಚಿತವೆನಿಸಿದ್ದರೆ, ಜಸ್‌ಪ್ರೀತ್ ಬುಮ್ರಾ ಮತ್ತು ಮೊಹಮದ್ ಶಮಿ ಇಬ್ಬರು ಮೊದಲ ಆಯ್ಕೆಯ ವೇಗಿಗಳಾಗಿರುತ್ತಾರೆ. ಸ್ಪಿನ್ನರ್ ಸ್ಥಾನವನ್ನು ಆರ್. ಅಶ್ವಿನ್ ಮತ್ತು ಮೊದಲ ಆರಂಭಿಕನ ಸ್ಥಾನವನ್ನು ಕನ್ನಡಿಗ ಮಯಾಂಕ್ ಅಗರ್ವಾಲ್ ತುಂಬುವುದು ಬಹುತೇಕ ನಿಶ್ಚಿತವೆನಿಸಿದ್ದು, ಉಳಿದ 3 ಸ್ಥಾನಗಳಿಗೆ ಆರೋಗ್ಯಕರ ಪೈಪೋಟಿ ಏರ್ಪಟ್ಟಿದೆ.

    ಪೃಥ್ವಿ ಷಾ-ಶುಭಮಾನ್ ಗಿಲ್ ಪೈಪೋಟಿ
    ಭಾರತ ಪರ ಇದುವರೆಗೆ ಆಡಿರುವ 11 ಟೆಸ್ಟ್‌ಗಳಲ್ಲಿ 3 ಶತಕ ಸಿಡಿಸಿರುವ ಮತ್ತು ಅಭ್ಯಾಸ ಪಂದ್ಯದಲ್ಲೂ ಮಿಂಚಿರುವ ಮಯಾಂಕ್ ಅಗರ್ವಾಲ್‌ಗೆ ಆರಂಭಿಕನ ಸ್ಥಾನ ನಿಶ್ಚಿತ. ಆದರೆ ರೋಹಿತ್ ಶರ್ಮ ಗೈರಿನಲ್ಲಿ ಅವರಿಗೆ ಯಾರು ಜತೆಯಾಗಲಿದ್ದಾರೆ ಎಂಬ ಬಗ್ಗೆ ಸ್ವಲ್ಪ ಗೊಂದಲವಿದೆ. ಮುಂಬೈ ಬ್ಯಾಟ್ಸ್‌ಮನ್ ಪೃಥ್ವಿ ಷಾ ನೆಚ್ಚಿನ ಆಕಾಂಕ್ಷಿ ಎನಿಸಿದ್ದರೂ, ಅಭ್ಯಾಸ ಪಂದ್ಯದ ನೀರಸ ನಿರ್ವಹಣೆ ಅವರಿಗೆ ಹಿನ್ನಡೆಯಾಗಿದೆ. ಅಭ್ಯಾಸ ಪಂದ್ಯಗಳ 4 ಇನಿಂಗ್ಸ್‌ಗಳಲ್ಲಿ 0, 19, 40, 3 ರನ್‌ಗಳನ್ನಷ್ಟೇ ಗಳಿಸಿದ್ದಾರೆ. ಹೀಗಾಗಿ ಶುಭಮಾನ್ ಗಿಲ್‌ಗೆ ಟೆಸ್ಟ್ ಪದಾರ್ಪಣೆಯ ಅವಕಾಶ ಹೆಚ್ಚಾಗಿದೆ. ಮೊದಲ ಅಭ್ಯಾಸ ಪಂದ್ಯದಲ್ಲಿ (0, 29) ವಿಫಲರಾದರೂ, 2ನೇ ಪಂದ್ಯದಲ್ಲಿ (43, 65) ಮಿಂಚಿರುವುದು 21 ವರ್ಷದ ಗಿಲ್‌ಗೆ ವರದಾನವಾಗಬಹುದು.

    ವಿಕೆಟ್ ಕೀಪರ್ ಸ್ಥಾನಕ್ಕೆ ಸಾಹ-ಪಂತ್ ಸ್ಪರ್ಧೆ
    ಅನುಭವಿ ವೃದ್ಧಿಮಾನ್ ಸಾಹ ಇತ್ತೀಚೆಗಿನ ವರ್ಷಗಳಲ್ಲಿ ಟೆಸ್ಟ್ ತಂಡಕ್ಕೆ ಮೊದಲ ಆದ್ಯತೆಯ ವಿಕೆಟ್ ಕೀಪರ್ ಆಗಿದ್ದಾರೆ. ಆದರೆ ಯುವ ಆಟಗಾರ ರಿಷಭ್ ಪಂತ್ ಅಹರ್ನಿಶಿ ಅಭ್ಯಾಸ ಪಂದ್ಯದಲ್ಲಿ ಬಿರುಸಿನ ಶತಕ ಸಿಡಿಸುವ ಮೂಲಕ ವಿಕೆಟ್ ಕೀಪರ್ ಆಯ್ಕೆಯ ಬಗ್ಗೆ ಸ್ವಲ್ಪ ಗೊಂದಲ ಸೃಷ್ಟಿಸಿದ್ದಾರೆ. 36 ವರ್ಷದ ಸಾಹ ಅತ್ಯುತ್ತಮ ಕೀಪಿಂಗ್ ಕೌಶಲ ಹೊಂದಿದ್ದರೆ, ಬ್ಯಾಟಿಂಗ್‌ನಲ್ಲಿ ಅವರಿಗಿಂತ 23 ವರ್ಷದ ಪಂತ್ ಉತ್ತಮವೆನಿಸಿದ್ದಾರೆ. ಪಂತ್ ಆಸೀಸ್, ಇಂಗ್ಲೆಂಡ್‌ನಲ್ಲಿ ಟೆಸ್ಟ್ ಶತಕಗಳನ್ನೂ ಸಿಡಿಸಿದ್ದಾರೆ. ಆದರೆ ಮೊದಲ ಅಭ್ಯಾಸ ಪಂದ್ಯದಲ್ಲಿ ಸಾಹ ಸಿಡಿಸಿದ ಅರ್ಧಶತಕವನ್ನೂ ಕಡೆಗಣಿಸುವಂತಿಲ್ಲ. ಇದರಿಂದಾಗಿ ಭಾರತ ತಂಡ ಸೋಲಿನ ಭೀತಿಯಿಂದಲೂ ಪಾರಾಗಿತ್ತು. ಆದರೆ ಪಂತ್ 2ನೇ ಪಂದ್ಯದಲ್ಲಿ ಶತಕ ಸಿಡಿಸಿದಾಗ ಭಾರತ ಅದಾಗಲೇ ಸದೃಢ ಸ್ಥಿತಿಯಲ್ಲಿತ್ತು. ಹೀಗಾಗಿ ಸದ್ಯಕ್ಕೆ 37 ಟೆಸ್ಟ್ ಪಂದ್ಯಗಳ ಅನುಭವಿ ಸಾಹ ಅವರೇ ಮೊದಲ ಅವಕಾಶ ಪಡೆಯಬಹುದು. ಆದರೆ ಅವರಿಂದ ನಿರೀಕ್ಷಿತ ನಿರ್ವಹಣೆ ಬರದಿದ್ದರೆ ಪಂತ್‌ಗೆ ಅವಕಾಶ ಒಲಿಯಬಹುದು.

    ಮೂರನೇ ವೇಗಿ ಯಾರು?
    ಬುಮ್ರಾ-ಶಮಿ ಹೊಸ ಚೆಂಡು ಹಂಚಿಕೊಳ್ಳುವುದು ಖಚಿತ. ಅವರೊಂದಿಗೆ 3ನೇ ವೇಗಿಯಾಗಿ ಯಾರು ಸಾಥ್ ನೀಡುವರು ಎಂಬ ಗೊಂದಲವಿದೆ. ಹಿರಿಯ ವೇಗಿ ಇಶಾಂತ್ ಶರ್ಮ ಗಾಯದಿಂದಾಗಿ ಅಲಭ್ಯರಾಗಿರುವುದು ಇದಕ್ಕೆ ಕಾರಣ. ಸದ್ಯಕ್ಕೆ 3ನೇ ವೇಗಿಯ ಸ್ಥಾನಕ್ಕೆ ಉಮೇಶ್ ಯಾದವ್ ನೆಚ್ಚಿನ ಸ್ಪರ್ಧಿಯಾಗಿದ್ದಾರೆ. ಆದರೆ ಅವರಿಗೆ ಯುವ ವೇಗಿಗಳಾದ ನವದೀಪ್ ಸೈನಿ ಮತ್ತು ಮೊಹಮದ್ ಸಿರಾಜ್ ಪೈಪೋಟಿ ಒಡ್ಡುತ್ತಿದ್ದಾರೆ. ಅಭ್ಯಾಸ ಪಂದ್ಯದಲ್ಲಿ ಮಿಂಚಿರುವ ಇವರಿಬ್ಬರು ಇನ್ನಷ್ಟೇ ಟೆಸ್ಟ್ ಪದಾರ್ಪಣೆ ಮಾಡಬೇಕಾಗಿದೆ. ಕನ್‌ಕಷನ್‌ನಿಂದ ರವೀಂದ್ರ ಜಡೇಜಾ ಅಲಭ್ಯರಾಗಿರುವುದರಿಂದ ಮತ್ತು ಎಡಗೈ ಸ್ಪಿನ್ನರ್ ಕುಲದೀಪ್ ಯಾದವ್ ಅಭ್ಯಾಸ ಪಂದ್ಯದಲ್ಲಿ ವಿಲರಾಗಿರುವುದರಿಂದ ಸ್ಪಿನ್ನರ್ ಸ್ಥಾನಕ್ಕೆ ಆರ್. ಅಶ್ವಿನ್ ನಿಶ್ಚಿತವೆನಿಸಿದ್ದಾರೆ. ಆದರೆ ಆಸೀಸ್ ನೆಲದ ಅಹರ್ನಿಶಿ ಟೆಸ್ಟ್‌ಗಳಲ್ಲಿ ಸ್ಪಿನ್ನರ್‌ಗಳು ಇದುವರೆಗೆ ಯಾವುದೇ ಪರಿಣಾಮ ಬೀರದಿರುವುದರಿಂದ ಭಾರತ ತಂಡ ಸ್ಪಿನ್ನರ್ ಕೈಬಿಟ್ಟು, ನಾಲ್ವರು ವೇಗಿಗಳೊಂದಿಗೆ ಕಣಕ್ಕಿಳಿದರೂ ಅಚ್ಚರಿ ಪಡಬೇಕಾಗಿಲ್ಲ.

    ಪ್ರಧಾನಿ ನರೇಂದ್ರ ಮೋದಿಗಿಂತ ವಿರಾಟ್ ಕೊಹ್ಲಿ ಪ್ರಭಾವಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts