More

    ತಮಿಳುನಾಡಿನ 14ರ ಬಾಲೆ ಆತ್ಮಹತ್ಯೆಯ ನಾಟಕ ಆಡಿದ್ದು ಏಕೆ?

    ಚೆನ್ನೈ: ಚಿಂದಿ ಆಯ್ದುಕೊಂಡು ಪುಟಾಣಿ ಗುಡಿಸಲಿನಲ್ಲಿ ಜೀವನ ನಡೆಸುತ್ತಿದ್ದು, ಮದ್ಯವ್ಯಸನಿ ಪಾಲಕರ ನಿತ್ಯದ ಜಗಳ-ಬಡಿದಾಟದಿಂದ ಬೇಸತ್ತ 14 ವರ್ಷದ ಬಾಲಕಿ ಆತ್ಮಹತ್ಯೆಯ ನಾಟಕವಾಡಿದ್ದಾಳೆ. ಅಲ್ಲದೆ, ತನ್ನ ತಾಯಿ ಸತ್ತುಹೋಗಿದ್ದು, ಅಪ್ಪ ಲೈಂಗಿಕ ಕಿರುಕುಳ ನೀಡುತ್ತಿದ್ದ ಎಂದು ಕಥೆ ಕಟ್ಟಿದ್ದಾಳೆ. ಕೊನೆಗೆ ವಿಚಾರಣೆಯಲ್ಲಿ ಸಿಕ್ಕಿಬಿದ್ದ ಆಕೆ, ತನಗೆ ಮತ್ತು ತನ್ನ ಐವರು ಸಹೋದರ-ಸಹೋದರಿಯರಿಗೆ ಸುರಕ್ಷಿತ ಆಶ್ರಯ ಪಡೆದುಕೊಳ್ಳುವ ಸಲುವಾಗಿ ಈ ನಾಟಕ ಆಡಿದ್ದಾಗಿ ಹೇಳಿದ್ದಾಳೆ.

    ಕೆ.ವಿ. ಕುಪ್ಪಂನ ಕಲಸಾಮಂಗಳ ಪ್ರದೇಶದಲ್ಲಿ ತನ್ನ ಐವರು ಸಹೋದರ-ಸಹೋದರಿಯರು ಹಾಗೂ ಪಾಲಕರೊಂದಿಗೆ ಚಿಕ್ಕ ಗುಡಾರದಲ್ಲಿ 14ರ ಬಾಲಕಿ ವಾಸವಾಗಿದ್ದಳು. ಮದ್ಯವ್ಯಸನಿಯಾಗಿದ್ದ ಪಾಲಕರು ನಿತ್ಯವೂ ಕುಡಿದು ಬಂದು ಜಗಳವಾಡಿಕೊಂಡು ಬಡಿದಾಡಿಕೊಳ್ಳುತ್ತಿದ್ದಳು. ಇದರಿಂದಾಗಿ ಓದನ್ನು ಮೊಟಕುಗೊಳಿಸಿದ್ದ ಆಕೆ, ತನಗೆ ಮತ್ತು ತನ್ನ ಸಹೋದರ-ಸಹೋದರಿಯರಿಗೆ ಸುರಕ್ಷಿತ ಆಶ್ರಯ ಪಡೆದುಕೊಳ್ಳಲು ನಿರ್ಧರಿಸಿದಳು.

    ಕಲಸಾಮಂಗಳಂನಿಂದ ಕಾಟ್ಪಾಡಿಗೆ ಶನಿವಾರ ಬಂದ ಆಕೆ, ಬಾವಿಯ ಮೇಲೆ ನಿಂತುಕೊಂಡು ಅದರೊಳಗೆ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುವ ರೀತಿ ನಾಟಕ ಆಡಿದಳು. ಇದನ್ನು ನಂಬಿದ ಜನರು ಆಕೆಯನ್ನು ರಕ್ಷಿಸಿದರು. ತನ್ನ ತಾಯಿ ತೀರಿಹೋಗಿದ್ದು, ಅಪ್ಪ ತನಗೆ ಲೈಂಗಿಕ ಕಿರುಕುಳ ಕೊಡುತ್ತಿದ್ದ. ಹಾಗಾಗಿ ತಾನು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದಾಗಿ ಹೇಳಿದಳು. ತಕ್ಷಣವೇ ಸ್ಥಳೀಯ ಪೊಲೀಸರ ಮೂಲಕ ಸಮಾಜಕಲ್ಯಾಣ ಇಲಾಖೆಯ ಅಧಿಕಾರಿಗಳ ವಶಕ್ಕೆ ಒಪ್ಪಿಸಲಾಯಿತು.

    ಇದನ್ನೂ ಓದಿ: ಬ್ಯಾಂಕ್​ ಕಳವು ಮಾಡಲು ಬಂದ, ಆಕಸ್ಮಿಕವಾಗಿ ತನ್ನ ಕತ್ತನ್ನೇ ಕೊಯ್ದುಕೊಂಡ

    ಸಮಾಜಕಲ್ಯಾಣ ಇಲಾಖೆಯ ಅಧಿಕಾರಿಗಳ ಬಳಿಯೂ ಆಕೆ ತನ್ನ ಕಟ್ಟುಕಥೆಯನ್ನೇ ಅರುಹಿದಳು. ಆದರೆ, ಇದನ್ನು ನಂಬದಾದ ಅಧಿಕಾರಿಗಳು ಈ ಕುರಿತು ತನಿಖೆ ನಡೆಸಲು ನಿರ್ಧರಿಸಿದರು. ಅವರು ತನಿಖೆ ನಡೆಸಿದಾಗ ಆಕೆಯ ಪಾಲಕರು ಮತ್ತು ಇತರೆ ಐವರು ಸಹೋದರ-ಸಹೋದರಿಯರು ಪತ್ತೆಯಾದರು. ಅಲ್ಲದೆ, ಆಕೆಯ ತಾಯಿ 7ನೇ ಮಗುವಿಗೆ ಗರ್ಭಿಣಿಯಾಗಿರುವುದು ಗೊತ್ತಾಯಿತು.

    ಆಕೆಯ ಬಳಿ ಬಂದ ಅಧಿಕಾರಿಗಳು ತನಿಖೆಯ ವೇಳೆ ತಾವು ಪತ್ತೆ ಮಾಡಿದ ಸಂಗತಿಗಳನ್ನು ಹೇಳಿ ಸತ್ಯವನ್ನು ಹೇಳುವಂತೆ ತಿಳಿಸಿದಾಗ, ಆಕೆ, ತನಗೆ ಮತ್ತು ತನ್ನ ಸಹೋದರ-ಸಹೋದರಿಯರಿಗೆ ಸುರಕ್ಷಿತ ಆಶ್ರಯ ಪಡೆದುಕೊಳ್ಳಲು ಈ ನಾಟಕ ಆಡಿದ್ದಾಗಿ ತಿಳಿಸಿದಳು. ಇದೀಗ ಆಕೆ ಮತ್ತು ಆಕೆಯ ಸಹೋದರ-ಸಹೋದರಿಯರಿಗೆ ವಸತಿ ವ್ಯವಸ್ಥೆ ಕಲ್ಪಿಸುವ ಜತೆಗೆ ಶಿಕ್ಷಣದ ವ್ಯವಸ್ಥೆ ಮಾಡಲು ಸಮಾಜಕಲ್ಯಾಣ ಅಧಿಕಾರಿಗಳು ಮುಂದಾಗಿದ್ದಾರೆ.

    ಧಾರಾಕಾರ ಮಳೆಯಲ್ಲಿ ತೆರೆದ ಮ್ಯಾನ್​ಹೋಲ್​ ಬಳಿ 7 ತಾಸು ನಿಂತ ಈ ಮಹಿಳೆಗೊಂದು ಸೆಲ್ಯೂಟ್…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts