More

    ಜನಮಾನಸದಲ್ಲಿ ಚಿರಸ್ಥಾಯಿಯಾಗಿರುವ ರಾಜೇಂದ್ರ ಶ್ರೀ

    ನಂಜನಗೂಡು: ಮಾನವೀಯ ಅಂತಃಕರಣದ ಪ್ರತೀಕವಾಗಿದ್ದ ಡಾ.ಶಿವರಾತ್ರಿ ರಾಜೇಂದ್ರ ಸ್ವಾಮೀಜಿ, ತಮ್ಮ ಸೇವಾ ಕೈಂಕರ್ಯಗಳ ಮೂಲಕ ಸರ್ವಕಾಲಕ್ಕೂ ಜನಮಾನಸದಲ್ಲಿ ಚಿರಸ್ಥಾಯಿಯಾಗಿ ಉಳಿಯುತ್ತಾರೆ ಎಂದು ಜೆಎಸ್‌ಎಸ್ ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ.ಹೊನ್ನೇಗೌಡ ಹೇಳಿದರು.

    ದೇವೀರಮ್ಮನಹಳ್ಳಿ ಬಡಾವಣೆಯಲ್ಲಿರುವ ಜೆಎಸ್‌ಎಸ್ ಕಾಲೇಜಿನ ಸಭಾಂಗಣದಲ್ಲಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಕಪಿಲ ಶಾಖೆ ವತಿಯಿಂದ ಭಾನುವಾರ ಆಯೋಜಿಸಿದ್ದ ಡಾ.ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರ 108ನೇ ಜಯಂತಿ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಶಿವರಾತ್ರಿ ರಾಜೇಂದ್ರ ಶ್ರೀಗಳ ದಿವ್ಯಶಕ್ತಿ ಬಗ್ಗೆ ಮಂತ್ರ ಮಹರ್ಷಿಗಳಿಗೆ ಅಪಾರವಾದ ಜ್ಞಾನವಿತ್ತು. ಈ ಕಾರಣಕ್ಕಾಗಿಯೇ ಅವರನ್ನು ತಮ್ಮ ಉತ್ತರಾಧಿಕಾರಿಯನ್ನಾಗಿ ನಿಯೋಜಿಸಿಕೊಂಡರು. ಮಂತ್ರಮಹರ್ಷಿಗಳ ಎಲ್ಲ ಆಶೋತ್ತರಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ರಾಜೇಂದ್ರ ಶ್ರೀಗಳು ಶಿಕ್ಷಣ, ದಾಸೋಹ ಹಾಗೂ ಆಶ್ರಯದ ಮೂಲಕ ಅಸಂಖ್ಯಾತ ಬಡ ಮಕ್ಕಳ ಕಲ್ಯಾಣಕ್ಕಾಗಿ ಶ್ರಮಿಸಿದ ಕಾಯಕ ಯೋಗಿಗಳಾದರು. ಶ್ರೀಗಳ ಸಮಾಜಮುಖಿ ಚಿಂತನೆ ಹಾಗೂ ಕಾರ್ಯ ತತ್ಪರತೆಯನ್ನು ಕಂಡು ಅವರಿಗೆ ‘ರಾಜಗುರು ತಿಲಕ’ ಎಂಬ ಬಿರುದು ನೀಡಿ ಗೌರವಿಸಿರುವುದು ಅವರ ಶ್ರೇಷ್ಠ ಸಾಧನೆಗೆ ಹಿಡಿದ ಕನ್ನಡಿಯಾಗಿದೆ ಎಂದು ಬಣ್ಣಿಸಿದರು.

    12ನೇ ಶತಮಾನದ ಶರಣ ಪರಂಪರೆಯನ್ನು 19ನೇ ಶತಮಾನದಲ್ಲಿ ತ್ರಿವಿಧ ದಾಸೋಹದ ಮೂಲಕ ಅನುಷ್ಠಾನಕ್ಕೆ ತಂದ ಕೀರ್ತಿ ಶಿವರಾತ್ರಿ ರಾಜೇಂದ್ರ ಶ್ರೀಗಳಿಗೆ ಸಲ್ಲುತ್ತದೆ. ಈ ಕಾರಣಕ್ಕಾಗಿಯೇ ಅವರು ನಮ್ಮ ಪರಂಪರೆಯ ಅಸ್ಮಿತೆಯಾಗಿ ಜನಮಾನಸದಲ್ಲಿ ಚಿರಸ್ಥಾಯಿಯಾಗಿದ್ದಾರೆ. ಮನುಷ್ಯರಾಗಿ ಹುಟ್ಟಿ ಮನುಷ್ಯತ್ವ ಉಳಿಸಿಕೊಂಡು ಜೀವಿಸುವುದು ತುಂಬಾ ಕಷ್ಟ. ಆದರೆ ರಾಜೇಂದ್ರ ಶ್ರಿಗಳು ಜೀವಮಾನವಿಡೀ ಮನುಷ್ಯತ್ವ, ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಜೀವಿಸಬಹುದು ಎಂಬುದಕ್ಕೆ ಜ್ವಲಂತ ನಿದರ್ಶನರಾಗಿದ್ದಾರೆ. ಸಾಮಾನ್ಯರ ಮಧ್ಯೆ ಅಸಾಮಾನ್ಯರಾಗಿ ಬೆಳೆದು ಧಾರ್ಮಿಕ, ಆಧ್ಯಾತ್ಮಿಕ ಪರಿಮಳವನ್ನು ಜಗತ್ತಿಗೆ ಬಿಟ್ಟು ಹೋದವರ ಸಾಲಿನಲ್ಲಿ ರಾಜೇಂದ್ರ ಶ್ರೀಗಳು ಅಗ್ರಮಾನ್ಯರು ಎಂದು ಹೇಳಿದರು.

    ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ನಂಜನಗೂಡು ಶಾಖೆಯ ಅಧ್ಯಕ್ಷ ಆರ್.ವಿ.ರೇವಣ್ಣ ಮಾತನಾಡಿ, ಡಾ.ಶಿವರಾತ್ರಿ ರಾಜೇಂದ್ರ ಶ್ರೀಗಳು ಹಾಕಿಕೊಟ್ಟ ಬುನಾದಿ ಶತ ಶತಮಾನಗಳು ಕಳೆದರೂ ಅಳಿಯುವುದಿಲ್ಲ ಎನ್ನುವುದಕ್ಕೆ ಪ್ರಸ್ತುತ ವಿದ್ಯಮಾನಗಳೇ ಸಾಕ್ಷಿಯಾಗಿವೆ. ಯೋಗ, ಆಧ್ಯಾತ್ಮ, ಧ್ಯಾನವನ್ನು ಜನಸಾಮಾನ್ಯರಿಗೆ ಮುಟ್ಟಿಸಬೇಕೆಂಬ ನಮ್ಮ ಒತ್ತಾಸೆಗೆ ಬೆನ್ನುಲುವಾಗಿ ನಿಂತಿರುವ ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಅವರು ನಮ್ಮ ಸಮಿತಿಗೆ ಆಶ್ರಯ ಹಾಗೂ ಮಾರ್ಗದರ್ಶನ ನೀಡುವ ಮೂಲಕ ಪ್ರೋತ್ಸಾಹಿಸುತ್ತಾ ಬಂದಿದ್ದಾರೆ. ಹೀಗಾಗಿ ಕಳೆದ 15 ವರ್ಷಗಳಿಂದ ಉಚಿತವಾಗಿ ನಾಗರಿಕರಿಗೆ ಯೋಗವನ್ನು ಪಸರಿಸಲು ಸಾಧ್ಯವಾಗಿದೆ ಎಂದರು.

    ಹೊನ್ನಲಗೆರೆ ಮಠದ ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಡಾ.ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರು ಕೇವಲ ಮನುಕುಲದ ಕಲ್ಯಾಣವನ್ನಷ್ಟೇ ಬಯಸಲಿಲ್ಲ. ಸಕಲ ಜೀವರಾಶಿಗಳಿಗೂ ಒಳಿತಾಗಬೇಕು ಎಂಬುದು ಅವರ ಇರಾದೆಯಾಗಿತ್ತು. ಪ್ರಾಣಿ, ಪಕ್ಷಿಗಳ ಬಗ್ಗೆಯೂ ಅಪಾರ ಕಾಳಜಿ ಹೊಂದಿದ್ದರು. ಮನುಷ್ಯರಲ್ಲಿ ಮಾನವೀಯ ಮೌಲ್ಯಗಳು ಗಟ್ಟಿಯಾದಾಗ ಇಡೀ ಜೀವರಾಶಿಗಳಿಗೆ ಒಳಿತಾಗುತ್ತದೆ ಎಂಬುದನ್ನು ಅರಿತಿದ್ದ ಅವರು, ಶಿಕ್ಷಣ, ದಾಸೋಹಕ್ಕೆ ಒತ್ತು ನೀಡಿದ್ದರು. ಸತ್ಪ್ರಜೆಗಳನ್ನು ಜಗತ್ತಿಗೆ ಕೊಡುಗೆಯಾಗಿ ನೀಡಬೇಕೆಂಬುದು ಅವರ ಮೂಲಧ್ಯೇಯವಾಗಿತ್ತು ಎಂದು ಸ್ಮರಿಸಿದರು.
    ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು ವಚನ ಗಾಯನ ನಡೆಸಿಕೊಟ್ಟರು. ಉಚಿತವಾಗಿ ವಚನ ಶಾಲೆ ನಡೆಸುತ್ತಿರುವ ಪವಿತ್ರಾ ನಂದೀಶ್ ಹಾಗೂ ಜಿಲ್ಲಾ ಸರ್ಕಾರಿ ಅಭಿಯೋಜಕಿಯಾಗಿ ಬಡ್ತಿ ಪಡೆದ ಸವಿತಾ ಅವರನ್ನು ಸನ್ಮಾನಿಸಲಾಯಿತು. ಯೋಗ ಶಿಕ್ಷಣದಲ್ಲಿ ಡಿಪ್ಲೊಮಾ ಹಾಗೂ ಸ್ನಾತಕೋತ್ತರ ಡಿಪ್ಲೊಮಾದಲ್ಲಿ ಉತ್ತೀರ್ಣರಾದ ಯೋಗಬಂಧುಗಳನ್ನು ಗೌರವಿಸಲಾಯಿತು.

    ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಕಾರ್ಯದರ್ಶಿ ಎನ್.ಆರ್.ಗಣೇಶ್‌ಮೂರ್ತಿ, ಪ್ರಧಾನ ಯೋಗ ಶಿಕ್ಷಕ ಪ್ರಕಾಶ್ ಜಿ.ಉಡಿಗಾಲ, ನಂಜನಗೂಡು ಯೋಗ ಫೌಂಡೇಷನ್ ಅಧ್ಯಕ್ಷ ಡಿಗ್ಗೇನಹಳ್ಳಿ ಪ್ರಕಾಶ್, ಕಪಿಲ ಶಾಖೆಯ ಪ್ರಭುಸ್ವಾಮಿ, ಹಂಡುವಿನಹಳ್ಳಿ ರಾಜು, ಕೆ.ಪಿ.ಮಹದೇವಸ್ವಾಮಿ, ಶಿವಸ್ವಾಮಿ, ರಾಜೇಂದ್ರಪ್ರಸಾದ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts