More

    ಹೊಸಕೋಟೆ ಬ್ರಹ್ಮರಥೋತ್ಸವಕ್ಕೆ ಅದ್ಧೂರಿ ಸಿದ್ಧತೆ, ನಗರದಾದ್ಯಂತ ಸಿಸಿ ಕ್ಯಾಮರಾ ಕಣ್ಗಾವಲು, ಜಾತ್ರೆ ವ್ಯಾಪಾರಿಗಳು ಮೊಕ್ಕಾಂ

    ಹೊಸಕೋಟೆ: ತಿಂಗಳಿಂದ ಸದ್ದು ಮಾಡುತ್ತಿರುವ ನಗರದ ಶ್ರೀ ಅವಿಮುಕ್ತೇಶ್ವರ ಸ್ವಾಮಿ ಬ್ರಹ್ಮರಥೋತ್ಸವಕ್ಕೆ ದಿನಗಣನೆ ಆರಂಭವಾಗಿದೆ. ಮೇ 16 ರಂದು ನಡೆಯಲಿರುವ ರಥೋತ್ಸವ ಹಾಗೂ ದೌಪದಮ್ಮ ದೇವಿ ಕರಗ ಮಹೋತ್ಸವಕ್ಕೆ ಭರದ ಸಿದ್ಧತೆ ನಡೆಯುತ್ತಿದೆ. ಈ ಬಾರಿ ಲಕ್ಷಾಂತರ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ್‌ಗೆ ಸಿದ್ಧವಾಗಿದೆ.

    ಕರೊನಾ ಕಾರಣದಿಂದ ಎರಡು ವರ್ಷ ಸಾರ್ವಜನಿಕರ ಪ್ರವೇಶವಿಲ್ಲದೆ ಸಂಪ್ರದಾಯದಂತೆ ದೇವಾಲಯದ ಆವರಣದಲ್ಲಿ ಸರಳವಾಗಿ ಆಚರಿಸಲಾಗಿತ್ತು, ಈ ಬಾರಿ ಹಿಂದಿನ ಉತ್ಸವಗಳಿಗಿಂಥ ಮತ್ತಷ್ಟು ಅದ್ದೂರಿಯಾಗಿ ಆಚರಿಸಲು ಸಕಲ ಸಿದ್ಧತೆ ನಡೆಸಲಾಗಿದೆ.

    ಕಂಟ್ರೋಲ್ ರೂಂ: ಸುರಕ್ಷತೆ ದೃಷ್ಟಿಯಿಂದ ಪೊಲೀಸರು ನಗರದಾದ್ಯಂತ 800 ಸಿಸಿ ಕ್ಯಾಮರಾ ಅಳವಡಿಸಿದ್ದಾರೆ. ಉತ್ಸವ ನಡೆಯುವ ಅಷ್ಟೂ ಪ್ರದೇಶದ ದೃಶ್ಯ ಸೆರೆಯಾಗುವಂತೆ ಕ್ಯಾಮರಾ ಕಾರ್ಯನಿರ್ವಹಿಸಲಿವೆ. ಪೊಲೀಸ್ ಠಾಣೆಯ ಕಂಟ್ರೋಲ್ ರೂಂನಿಂದಲೇ ಎಲ್ಲ ದೃಶ್ಯ ವೀಕ್ಷಣೆ ಮಾಡಬಹುದಾಗಿದೆ. ಪೊಲೀಸ್ ಸಹಾಯವಾಣಿ 080-27931570, 9480802432, 9480802445 ಸಂಖ್ಯೆಗೆ ಸಂಪರ್ಕಿಸಲು ಹೊಸಕೋಟೆ ವೃತ್ತ ನಿರೀಕ್ಷಕ ಮಂಜುನಾಥ್ ತಿಳಿಸಿದ್ದಾರೆ.

    ವ್ಯಾಪಾರಿಗಳು ಮೊಕ್ಕಾಂ: ರಸ್ತೆ ಬದಿಗಳಲ್ಲಿ ಆಟಿಕೆ ಮಾರಾಟ ಮಾಡುವವರು ಈಗಾಗಲೇ ಮುಕ್ಕಾಂ ಹೂಡಿದ್ದಾರೆ. ತೇರು ನಿರ್ಮಾಣ ಕಾರ್ಯ ಅಂತಿಮ ಹಂತದಲ್ಲಿದೆ, ತೇರಿನ ಅಲಂಕಾರ ಮಾತ್ರ ಬಾಕಿ ಉಳಿದಿದ್ದು ದೌಪದಮ್ಮ ದೇವಿ ದೇವಾಲಯ ಅವಿಮುಕ್ತೇಶ್ವರ ದೇವಾಲಯಗಳಲ್ಲಿ ಹೂವಿನ ಅಲಂಕಾರ, ಬಣ್ಣ ಬಣ್ಣದ ದೀಪಗಳ ಅಲಂಕಾರ ಆರಂಭವಾಗಿದೆ.

    ಜನಪ್ರತಿನಿಧಿಗಳ ಕರೆ: ರಥೋತ್ಸವದ ಸಂಚಾಲಕರಾಗಿ ತಹಸೀಲ್ದಾರ್ ಮಹೇಶ್‌ಕುಮಾರ್ ಕಾರ್ಯನಿರ್ವಹಿಸಲಿದ್ದು, ಜಾತ್ರಾ ಉತ್ಸವವನ್ನು ಎಲ್ಲರೂ ಒಗ್ಗೂಡಿ ಸಡಗರ ಸಂಭ್ರಮದಿಂದ ಆಚರಿಸುವಂತೆ ಸಚಿವ ಎಂಟಿಬಿ ನಾಗರಾಜ್ ಹಾಗೂ ಶಾಸಕ ಶರತ್‌ಬಚ್ಚೇಗೌಡ ಜನರಲ್ಲಿ ಮನವಿ ಮಾಡಿದ್ದಾರೆ.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts