More

    ಹೊಲವಳ್ಳಿಯಲ್ಲಿ ಹಾರುವ ಹಲ್ಲಿ ಪ್ರತ್ಯಕ್ಷ

    ಕುಮಟಾ: ತಾಲೂಕಿನ ಸಾಂತಗಲ್ ಸನಿಹದ ಹೊಲವಳ್ಳಿಯ ತಮ್ಮ ತೋಟದಲ್ಲಿ ಪತ್ತೆಯಾದ ಹಾರುವ ಹಲ್ಲಿಯನ್ನು ಲೋಕೇಶ ಪೂಜಾರಿ ಅವರು ಅರಣ್ಯ ಇಲಾಖೆ ಸಹಕಾರದಲ್ಲಿ ಪುನಃ ಅರಣ್ಯಕ್ಕೆ ಸುರಕ್ಷಿತವಾಗಿ ಬಿಟ್ಟಿದ್ದಾರೆ.

    ದಟ್ಟ ಅರಣ್ಯ ಪ್ರದೇಶದಲ್ಲಿ ಕಂಡುಬರುವ ಹಾರುವ ಹಲ್ಲಿಗಳ ಮುಂಗಾಲಿನಿಂದ ಹಿಂಗಾಲಿನವರೆಗೆ ಎರಡೂ ಪಕ್ಕೆಗಳಲ್ಲಿ ರೆಕ್ಕೆಯಂತಹ ತೆಳುವಾದ ಪೊರೆ ಇರುತ್ತವೆ. ಇವನ್ನು ರೆಕ್ಕೆಯಂತೆ ಬಡಿಯಲಾಗದು. ಹೀಗಾಗಿ, ಇವು ನಾಲ್ಕೂ ಕಾಲುಗಳನ್ನು ಹೊರಚಾಚಿ ಪೊರೆಯನ್ನು ಅಗಲಿಸಿ, ಎತ್ತರದಿಂದ ತಗ್ಗಿನೆಡೆಗೆ ಗಾಳಿಯ ಒತ್ತಡವನ್ನು ಬಳಸಿ ತೇಲಿಕೊಂಡು ಸಾಗುತ್ತವೆ. ಕೆಲವು ದಶಕಗಳ ಹಿಂದೆ ಪಶ್ಚಿಮಘಟ್ಟದ ಎಲ್ಲ ಪ್ರದೇಶಗಳಲ್ಲಿ ಕಂಡುಬರುತ್ತಿದ್ದ ಈ ಜೀವಿ, ಇತ್ತೀಚಿನ ದಿನಗಳಲ್ಲಿ ಸ್ವಲ್ಪ ವಿರಳವಾಗಿದ್ದರೂ ವಿನಾಶದ ಅಂಚಿಗೆ ಸೇರಿಲ್ಲ. ಥಟ್ಟನೆ ಕಣ್ಣಿಗೆ ಕಾಣಿಸದ ಈ ಜೀವಿಯನ್ನು ಕಂಡ ಖುಷಿಯಲ್ಲಿ ಲೋಕೇಶ ಪೂಜಾರಿ ಅದನ್ನು ಹಿಡಿದು ಅರಣ್ಯ ಅಧಿಕಾರಿಗಳನ್ನು ಸಂರ್ಪಸಿದ್ದಾರೆ.

    ಈ ಕುರಿತು ವಿಜಯವಾಣಿಗೆ ಪ್ರತಿಕ್ರಿಯಿಸಿದ ಕುಮಟಾ ಆರ್​ಎಫ್​ಒ ಪ್ರವೀಣಕುಮಾರ ನಾಯಕ, ‘ದಟ್ಟ ಅರಣ್ಯದಲ್ಲಿ ಇಂಥ ಹಾರುವ ಹಲ್ಲಿಗಳು ಸಾಮಾನ್ಯವಾಗಿ ಕಂಡುಬರುವಂಥದ್ದಾಗಿದ್ದು ಅಪರೂಪವೇನಲ್ಲ. ಲೋಕೇಶ ಪೂಜಾರಿ ಅವರಿಗೆ ದೊರೆತ ಹಾರುವ ಹಲ್ಲಿಯನ್ನು ಪುನಃ ಅರಣ್ಯಕ್ಕೆ ಬಿಡಲಾಗಿದೆ’ ಎಂದರು. ಹಾರುವ ಹಲ್ಲಿ ದೊರೆತ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಅದರ ಚಿತ್ರಣವನ್ನು ಹರಿಬಿಟ್ಟ ಲೋಕೇಶ ಪೂಜಾರಿ, ‘ಸಾಹಿತಿ ಪೂರ್ಣಚಂದ್ರ ತೇಜಸ್ವಿ ಅವರ ಕರ್ವಾಲೋ ಕಾದಂಬರಿಯ ನಿಗೂಢ ನಾಯಕ ಕೊನೆಗೂ ಪತ್ತೆ’ ಎಂಬ ಶೀರ್ಷಿಕೆ ನೀಡಿರುವುದು ಸಾಕಷ್ಟು ಕುತೂಹಲ, ಪ್ರಚಾರ ಪಡೆದುಕೊಂಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts