More

    ಹೊಲದಲ್ಲೇ ಕೊಳೆಯುತ್ತಿದೆ ಉಳ್ಳಾಗಡ್ಡಿ

    ಡಂಬಳ: ನಿರಂತರವಾಗಿ ಸುರಿಯುತ್ತಿರುವ ಮಳೆ ಮತ್ತು ವಾತಾವರಣದಲ್ಲಾದ ಬದಲಾವಣೆಯಿಂದಾಗಿ ಉಳ್ಳಾಗಡ್ಡಿ ಬೆಳೆಗೆ ಕೊಳೆ ರೋಗ ತಗುಲಿದ್ದು ಜಮೀನಿನಲ್ಲೇ ಕೊಳೆಯುತ್ತಿದೆ.

    ಮಸಾರಿ ಭೂಮಿ ಹೊಂದಿರುವ ಹೋಬಳಿ ವ್ಯಾಪ್ತಿಯ ಡೋಣಿ, ಡಂಬಳ, ಹಿರೇವಡ್ಡಟ್ಟಿ, ಅತ್ತಿಕಟ್ಟಿ, ಪೇಠಾಲೂರ, ಜಂತ್ಲಿ ಶಿರೂರು, ದಿಂಡೂರು, ಸೇರಿದಂತೆ 2500 ಹೆಕ್ಟೇರ್ ಪ್ರದೇಶದಲ್ಲಿ ಉಳ್ಳಾಗಡ್ಡಿ ಬೆಳೆಯಲಾಗಿದೆ. ಸದ್ಯ ಮಾರುಕಟ್ಟೆಯಲ್ಲಿ ಕ್ವಿಂಟಾಲ್ ಉಳ್ಳಾಗಡ್ಡಿಗೆ 4000 ರಿಂದ 5000 ರೂ. ಬೆಲೆಯಿದೆ. ಆದರೆ, ಉತ್ತಮ ಇಳುವರಿ ಇಲ್ಲದಂತಾಗಿದೆ. 1 ಎಕರೆ ಜಮೀನಿನಲ್ಲಿ ಪ್ರತಿವರ್ಷ 50-60 ಕ್ವಿಂಟಾಲ್ ಉಳ್ಳಾಗಡ್ಡಿ ಬೆಳೆ ಬರುತ್ತಿತ್ತು. ಇದೀಗ ಸತತ ಮಳೆಯಿಂದ ತೇವಾಂಶ ಹೆಚ್ಚಳವಾಗಿ ಕೊಳೆ ರೋಗ ಬಿದ್ದಿದ್ದು, ಎಕರೆಗೆ 4 ರಿಂದ 5 ಕ್ವಿಂಟಾಲ್ ಫಸಲು ಬರುತ್ತಿದೆ ಎನ್ನುತ್ತಾರೆ ರೈತರು. ಮಳೆಯಿಂದಾಗಿ ಮುಂಡರಗಿ, ಡಂಬಳ ಹೋಬಳಿ ರೈತರು ತೋಟಗಾರಿಕೆ ಬೆಳೆಗಾರರಿಗೆ ಸಾಕಷ್ಟು ಬೆಳೆ ಹಾನಿಯಾಗಿದ್ದು, ನಷ್ಟ ಅನುಭವಿಸಿದ್ದ ರೈತರಿಗೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎನ್ನುವುದು ರೈತರ ಆಗ್ರಹವಾಗಿದೆ.

    ಮುಂಡರಗಿ ತಾಲೂಕಿನಲ್ಲೇ ಹೆಚ್ಚಾಗಿ ಡಂಬಳ, ಡೋಣಿ, ಪೇಠಾಲೂರು, ಶಿರೂರ, ಡೋಣಿ ತಾಂಡಾ ಸೇರಿ 2500 ಹೆಕ್ಟೇರ್ ಪ್ರದೇಶದಲ್ಲಿ ಉಳ್ಳಾಗಡ್ಡಿ ಬೆಳೆಯಲಾಗಿದೆ. ಮಳೆಯಿಂದಾಗಿ ಈ ಭಾಗದಲ್ಲಿ ಉಳ್ಳಾಗಡ್ಡಿ ಸೇರಿದಂತೆ ವಿವಿಧ ಬೆಳೆಗಳಿಗೆ ಹಳದಿ ರೋಗ, ಕೊಳೆ ರೋಗ ಬಿದ್ದು ನಷ್ಟ ಉಂಟಾಗಿದೆ. ಮಳೆಯಿಂದ ಹಾನಿಯಾದ ರೈತರ ಜಮೀನಿಗೆ ಹೋಗಿ ಬೆಳೆ ಹಾನಿ ಸಮೀಕ್ಷೆ ಮಾಡಲಾಗುತ್ತಿದ್ದು, ಉಳ್ಳಾಗಡ್ಡಿ ಹಾನಿಯಾದ ರೈತರು ಇಲಾಖೆಗೆ ಅರ್ಜಿ ಸಲ್ಲಿಸಬೇಕು.
    | ವೈ. ಎಚ್. ಜಾಲವಾಡಗಿ, ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ, ಮುಂಡರಗಿ

    ಸತತ ಮಳೆಯಿಂದಾಗಿ ಉಳ್ಳಾಗಡ್ಡಿ ಬೆಳೆಗೆ ಕೊಳೆ ರೋಗ ಬಿದ್ದು ಜಮೀನಿನಲ್ಲೇ ಕೊಳೆಯುವಂತಾಗಿದೆ. ಲಾಭದ ನಿರೀಕ್ಷೆಯಿಂದಾಗಿ 90 ಸಾವಿರ ರೂಪಾಯಿ ಖರ್ಚು ಮಾಡಿ 3 ಎಕರೆ ಉಳ್ಳಾಗಡ್ಡಿ ಬಿತ್ತನೆ ಮಾಡಲಾಗಿದೆ. ಬೆಳೆಗೆ ಮಾಡಿದ ಖರ್ಚು ಕೂಡ ವಾಪಸ್ ಬಾರದಂತಾಗಿದೆ.
    | ಈರಣ್ಣ ಶೆಟ್ಟರ್ ಡಂಬಳ ಗ್ರಾಮದ ರೈತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts