More

    ಹೈನುಗಾರರನ್ನು ತಲುಪದ ಪಶುಭಾಗ್ಯ, ಬಿಡುಗಡೆಯಾಗದ ಅನುದಾನ

    ಶಿಡ್ಲಘಟ್ಟ: ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿದ್ದಾಗ ಜಾರಿಗೊಳಿಸಿದ್ದ ಪಶುಭಾಗ್ಯ ಯೋಜನೆಗೆ ಅನುದಾನ ಲಭ್ಯವಾಗದ ಕಾರಣ ಹೈನುಗಾರಿಕೆಯನ್ನೇ ನಂಬಿಕೊಂಡಿದ್ದವರು ಸಂಕಷ್ಟಕ್ಕೆ ಸಿಲುಕಿದ್ದಾರೆ.

    ಸಣ್ಣ ರೈತರು, ಕಾರ್ಮಿಕರು, ನಿರ್ಗತಿಕರು ಸ್ವತಂತ್ರವಾಗಿ ಬದುಕು ಕಟ್ಟಿಕೊಳ್ಳಬೇಕೆಂಬ ಉದ್ದೇಶದಿಂದ ಕುರಿ, ಮೇಕೆ ಸಾಕಾಣಿಕೆಗೆ ಸರ್ಕಾರದಿಂದ ಸಹಾಯಧನ ನೀಡಲಾಗುತ್ತಿತ್ತು. ಪ್ರಸಕ್ತ ಸಾಲಿನಲ್ಲಿ ಸರ್ಕಾರ ಅನುದಾನ ನೀಡದಿರುವ ಪರಿಣಾಮ ಯೋಜನೆಗೆ ಹಿನ್ನಡೆಯಾಗಿದೆ.

    ಅರ್ಜಿ ಸಲ್ಲಿಸಲು ಕಚೇರಿಗಳಿಗೆ ಬರುವ ರೈತರು: ಗ್ರಾಮೀಣ ಜನರು ಪಶುಭಾಗ್ಯ ಯೋಜನೆಗೆ ಅರ್ಜಿ ನೀಡಲು ನಿತ್ಯ ಪಶು ಸಂಗೋಪನಾ ಇಲಾಖೆಗೆ ಭೇಟಿ ನೀಡುತ್ತಿದ್ದಾರೆ. ಆದರೆ ಸರ್ಕಾರದಿಂದ ಯೋಜನೆಗೆ ಅನುದಾನ ಲಭ್ಯವಾಗದ ಹಿನ್ನೆಲೆಯಲ್ಲಿ ಅಧಿಕಾರಿಗಳು ಅರ್ಜಿ ಸ್ವೀಕರಿಸುತ್ತಿಲ್ಲ. ಬಯಲು ಸೀಮೆ ಭಾಗದ ಬಹುತೇಕ ಜನರಿಗೆ ಯೋಜನೆ ಸಾಕಷ್ಟು ಅನುಕೂಲವಾಗಿತ್ತು. ಇದರಿಂದ ಸಾಕಷ್ಟು ಮಂದಿ ಬದುಕು ರೂಪಿಸಿಕೊಂಡಿದ್ದರು. ಪಶುಭಾಗ್ಯ ಯೋಜನೆಗೆ ರಾಜ್ಯ ಸರ್ಕಾರ ಕೂಡಲೇ ಅನುದಾನ ನೀಡಿದಲ್ಲಿ ರೈತ ಸಮುದಾಯಕ್ಕೆ ಅನುಕೂಲವಾಗಲಿದೆ.

    ರೈತರಿಗೆ ಸಿಗುತ್ತಿದ್ದ ಸಬ್ಸಿಡಿ ಪ್ರಮಾಣ: ಯೋಜನೆಯಡಿಯಲ್ಲಿ ಎಮ್ಮೆ, ಹಸು, ಕುರಿ, ಮೇಕೆ, ಕೋಳಿ ಖರೀದಿಸಲು ಸಬ್ಸಿಡಿ ನೀಡಲಾಗುತ್ತಿತ್ತು. ಎಮ್ಮೆ, ಆಕಳು ಖರೀದಿಗೆ 1.20 ಲಕ್ಷ ರೂ., ಕುರಿ, ಮೇಕೆ ಖರೀದಿಗೆ 60 ಸಾವಿರ ರೂ. ನಿಗದಿಪಡಿಸಲಾಗಿತ್ತು. ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಫಲಾನುಭವಿಗಳಿಗೆ ಶೇ.50 ಹಾಗೂ ಸಾಮಾನ್ಯ ವರ್ಗಕ್ಕೆ ಶೇ.25 ಸಬ್ಸಿಡಿ ಸಿಗುತ್ತಿದ್ದು ಉಳಿದ ಹಣವನ್ನು ಬ್ಯಾಂಕ್‌ನಿಂದ ಸಾಲದ ರೂಪದಲ್ಲಿ ಫಲಾನುಭವಿಗಳು ಪಡೆದುಕೊಳ್ಳುತ್ತಿದ್ದರು.

    2019-20ನೇ ಸಾಲಿನಲ್ಲಿ ಪಶುಭಾಗ್ಯ ಯೋಜನೆಯಡಿ ಸುಮಾರು 35 ಫಲಾನುಭವಿಗಳು ಸೌಲಭ್ಯ ಪಡೆದುಕೊಂಡಿದ್ದರು. ಪ್ರಸಕ್ತ 2020-21ನೇ ಸಾಲಿಗೆ ಪಶುಭಾಗ್ಯ ಯೋಜನೆಯಡಿ ಯಾವುದೇ ಅನುದಾನ ಬಿಡುಗಡೆಯಾಗದ ಕಾರಣ ರೈತರಿಂದ ಯಾವುದೇ ಅರ್ಜಿ ಸ್ವೀಕರಿಸುತ್ತಿಲ್ಲ.
    ರವಿಚಂದ್ರ, ಸಹಾಯಕ ನಿರ್ದೇಶಕ, ಪಶು ಸಂಗೋಪನಾ ಇಲಾಖೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts