More

    ಹೆಲ್ಮೆಟ್ ಧರಿಸದಿದ್ದರೆ ಜುಲ್ಮಾನೆ ವಿಧಿಸಬೇಡಿ, ಸಂಚಾರ ವಿಭಾಗದ ಎಸಿಪಿಗೆ ಮನವಿ, ಕುಂದುಕೊರತೆ ಆಲಿಕೆ ಸಭೆಯಲ್ಲಿ ಆಗ್ರಹ

    ದೇವನಹಳ್ಳಿ: ಪಟ್ಟಣದ ವ್ಯಾಪ್ತಿಯಲ್ಲಿ ಪ್ರತಿನಿತ್ಯ ಹತ್ತಾರು ಬಾರಿ ಕೆಲಸಕಾರ್ಯಗಳಿಗೆ ಓಡಾಡುವಾಗ ಹೆಲ್ಮೆಟ್ ಧರಿಸದ ವಾಹನಗಳ ೆಟೋ ಸೆರೆಹಿಡಿಯುವ ಸಂಚಾರ ವಿಭಾಗದ ಪೊಲೀಸರು ಜುಲ್ಮಾನೆ ವಿಧಿಸುತ್ತಿದ್ದಾರೆ. ಇದಕ್ಕೆ ತಡೆ ನೀಡಬೇಕು ಎಂದು ಎಸಿಪಿ ಎಂ.ಎಸ್. ಅಶೋಕ್ ಅವರಿಗೆ ಪಟ್ಟಣ ಸಾರ್ವಜನಿಕರು ಮನವಿ ಸಲ್ಲಿಸಿದರು.

    ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸಂಚಾರ ವಿಭಾಗಕ್ಕೆ ಸಂಬಂಧಿಸಿದಂತೆ ಬುಧವಾರ ಏರ್ಪಡಿಸಿದ್ದ ಕುಂದುಕೊರತೆ ಆಲಿಕೆ ಸಭೆಯಲ್ಲಿ ಈ ಬಗ್ಗೆ ಹಲವರು ಸಮಸ್ಯೆ ಬಗ್ಗೆ ಅಧಿಕಾರಿಗಳ ಗಮನ ಸೆಳೆದರು.

    ಒಂದೇ ದ್ವಿಚಕ್ರವಾಹನಕ್ಕೆ ಒಂದೇ ದಿನ ಐದು ನಿಮಿಷದ ಅಂತರದಲ್ಲಿ ನಾಲ್ಕಾರು ಕೇಸ್ ಹಾಕಲಾಗಿದೆ. ಇನ್ನೊಂದೆಡೆ ಪಟ್ಟಣದ ಒಳಗಿನ ರಸ್ತೆ ದಾಟಿ ಶುದ್ಧಕುಡಿಯುವ ನೀರು ಅಥವಾ ತರಕಾರಿ ತರಲು ಇಲ್ಲವೇ ಪಕ್ಕದ ಬೀದಿಯಲ್ಲಿರುವ ಅಂಗಡಿಮುಂಗಟ್ಟುಗಳಿಗೆ ವಾಹನ ಸವಾರರು ಹೋಗುತ್ತಿರುತ್ತಾರೆ. ಹೆಲ್ಮೆಟ್ ಹಾಕಿಲ್ಲವಾದರೆ, ಪೋಟೋ ತೆಗೆದು ದಂಡ ವಿಧಿಸಲಾಗುತ್ತಿದೆ. ಸರ್ವೀಸ್ ರಸ್ತೆಯಲ್ಲಿ ತೋಟಕ್ಕೆ ಹೋಗುವ ರೈತರ ವಾಹನಗಳಿಗೂ ದಂಡ ವಿಧಿಸಲಾಗುತ್ತಿದೆ. ಪ್ರತಿ ವಾಹನದ ಮೇಲೆ 5 ರಿಂದ 10 ಸಾವಿರ ರೂ.ವರೆಗೂ ಜುಲ್ಮಾನೆ ಬಾಕಿವುಳಿಯುತ್ತಿದೆ. ಇದನ್ನು ಪಾವತಿಸಲು ಜನರು ತಾವು ದುಡಿದಿರುವ ಹಣವನ್ನು ವ್ಯಯಿಸಬೇಕಾಗುತ್ತದೆ ಎಂದು ಹಿಂದುಳಿದ ಒಕ್ಕೂಟದ ಅಧ್ಯಕ್ಷ ಸಿ.ಮುನಿರಾಜು ತಿಳಿಸಿದರು.

    ವಾಹನ ನಿಲುಗಡೆ ವ್ಯವಸ್ಥೆ ಕಲ್ಪಿಸಿ: ಹಳೇ ಬಸ್ ನಿಲ್ದಾಣದಿಂದ ತಾಲೂಕು ಕಚೇರಿವರೆಗೆ ರಸ್ತೆಯ ಎರಡೂ ಬದಿಗಳಲ್ಲಿ ಕಾರುಗಳನ್ನು ನಿಲ್ಲಿಸಲಾಗುತ್ತದೆ. ಅಡ್ಡಾದಿಡ್ಡಿ ಪಾರ್ಕಿಂಗ್‌ನಿಂದ ಇತರ ವಾಹನಗಳ ಸಂಚಾರಕ್ಕೆ ಅಡಚಣೆ ಆಗುತ್ತಿದೆ. ಆದ್ದರಿಂದ, ವಾಹನ ನಿಲುಗಡೆಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದು ರೈತ ಸಂಘದ ಅಧ್ಯಕ್ಷ ವೆಂಕಟೇಶ್ ಮನವಿ ಮಾಡಿಕೊಂಡರು.

    ಅರಿವು ಮೂಡಿಸುವ ಉದ್ದೇಶ: ಹೆಲ್ಮೆಟ್ ಧರಿಸಿಲ್ಲ ಎಂದು ಜುಲ್ಮಾನೆ ವಿಧಿಸುವ ಹಿಂದೆ ಸಾರ್ವಜನಿಕರಿಗೆ ತೊಂದರೆ ಕೊಡುವ ಉದ್ದೇಶವಿಲ್ಲ. ಆಮೂಲಕವಾದರೂ ಸಂಚಾರ ನಿಯಮಗಳ ಬಗ್ಗೆ ಅರಿವು ಮೂಡಲಿ ಎಂಬ ಉದ್ದೇಶ ಇದೆ. ಹಾಗಾಗಿ ನಿಮ್ಮನ್ನು ತಡೆಯದೆ, ಹಿಂಬದಿಯಿಂದ ೆಟೋ ತೆಗೆದು, ಜುಲ್ಮಾನೆ ವಿಧಿಸಲಾಗುತ್ತಿದೆ. ಇನ್ಮುಂದೆ ಮುಂಬದಿಯಿಂದಲೇ ೆಟೋ ತೆಗೆಯುವಂತೆ ನಮ್ಮ ಸಿಬ್ಬಂದಿಗೆ ಸೂಚಿಸುವೆ. ಇದಕ್ಕೆ ಎಲ್ಲರೂ ಸಹಕರಿಸಬೇಕು ಎಂದು ಎಸಿಪಿ ಎಂ.ಎಸ್. ಅಶೋಕ್ ಹೇಳಿದರು.

    ಸಂಚಾರ ನಿಯಮ ಉಲ್ಲಂಘನೆಗೆ ವಿಧಿಸಿರುವ ದಂಡದ ಮೊತ್ತವನ್ನು ಕಡಿತಗೊಳಿಸಲು ಅಥವಾ ಮನ್ನಾ ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲ. ಇನ್ಮುಂದೆ ಪ್ರತಿ ತಿಂಗಳು ಎರಡನೇ ಶನಿವಾರ ಪೊಲೀಸ್ ಠಾಣೆ ಎದುರು ಕುಂದುಕೊರತೆ ಆಲಿಕೆ ಸಭೆ ನಡೆಸಲಾಗುವುದು ಎಂದು ಎಸಿಪಿ ತಿಳಿಸಿದರು.

    ತಹಸೀಲ್ದಾರ್ ಶಿವರಾಜ್, ತಾಪಂ ಇಒ ವಸಂತಕುಮಾರ್, ಕಾನೂನು ಸುವ್ಯವಸ್ಥೆಯ ಎಸಿಪಿ ಸಿ. ಬಾಲಕೃಷ್ಣ, ಸಂಚಾರ ಇನ್‌ಸ್ಪೆಕ್ಟರ್ ಮುನಿರಾಜು, ಜೆಡಿಎಸ್ ಜಿಲ್ಲಾಧ್ಯಕ್ಷ ಬಿ. ಮುನೇಗೌಡ, ತಾಲೂಕು ಪ್ರಧಾನ ಕಾರ್ಯದರ್ಶಿ ಜಿ.ಎ. ರವೀಂದ್ರ ಮತ್ತಿತರರಿದ್ದರು.

    ಪ್ರಾಣರಕ್ಷಣೆಗಾಗಿ ಹೆಲ್ಮೆಟ್ ಧರಿಸುವುದನ್ನು ಸರ್ಕಾರ ಕಡ್ಡಾಯಗೊಳಿಸಿದೆ. ಆದರೆ, ಬೇಸಿಗೆ ಇರುವ ಕಾರಣ ಟೌನ್ ವ್ಯಾಪ್ತಿಯಲ್ಲಿ ಹೆಲ್ಮೆಟ್ ಧರಿಸದೆ ಸಂಚರಿಸಲು ವಿನಾಯಿತಿ ನೀಡಲು ಅವಕಾಶವಿದ್ದರೆ ಅಧಿಕಾರಿಗಳು ಈ ಬಗ್ಗೆ ಚಿಂತನೆ ನಡೆಸಬಹುದು. ದೇವನಹಳ್ಳಿ ಪಟ್ಟಣವನ್ನು ನಗರ ಪೋಲಿಸ್ ವ್ಯಾಪ್ತಿಯಿಂದ ಬೇರ್ಪಡಿಸಿ ಗ್ರಾಮಾಂತರ ಠಾಣೆಯಾಗಿ ಮಾಡುವಂತೆ ಅಧಿವೇಶನದಲ್ಲಿ ಪ್ರಸ್ತಾಪಿಸಿದ್ದೇನೆ. ಗ್ರಾಮಾಂತರ ಠಾಣೆಯಾದಲ್ಲಿ, ಜನರ ಒಂದಿಷ್ಟು ಸಮಸ್ಯೆಗಳು ಪರಿಹಾರವಾಗುವ ನಿರೀಕ್ಷೆಯಿದೆ.
    ನಿಸರ್ಗ ನಾರಾಯಣಸ್ವಾಮಿ, ಶಾಸಕ

    ಒಂದೇ ದಿನ, ಒಂದೇ ವಾಹನಕ್ಕೆ ಹಲವು ಬಾರಿ ದಂಡ ವಿಧಿಸಲು ಅವಕಾಶವಿಲ್ಲ. ವ್ಯತ್ಯಾಸವಾಗಿದ್ದರೆ ಗಮನಿಸುವೆ. ಸುಪ್ರೀಂಕೋರ್ಟ್ ನಿದೇರ್ಶನದಂತೆ ಹೆಲ್ಮೆಟ್‌ರಹಿತರಿಗೆ ದಂಡ ವಿಧಿಸಲಾಗುತ್ತದೆ. ನಿಮ್ಮ ಸುರಕ್ಷತೆಗಾಗಿ ಈ ನಿಯಮ ಪಾಲನೆ ಕಡ್ಡಾಯವಾಗಿದೆ.
    ಎಂ.ಎಸ್. ಅಶೋಕ್, ಎಸಿಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts