More

    ಹೆಣ್ಣು ಮಕ್ಕಳು ಉತ್ತಮ ವಿದ್ಯಾಭ್ಯಾಸ ಪಡೆಯಲಿ

    ಮುದ್ದೇಬಿಹಾಳ: ಹೆಣ್ಣು ಮಕ್ಕಳು ನೈಸರ್ಗಿಕವಾಗಿಯೇ ನಾಯಕತ್ವದ ಗುಣಗಳನ್ನು ಹೊಂದಿರುತ್ತಾರೆ. ಅವರೇ ನಿಜವಾದ ನಾಯಕರು. ಸಾಧನೆಗಾಗಿ ಮನೆಯಿಂದ ಹೊರಗೆ ಬಂದು ಉತ್ತಮ ವಿದ್ಯಾಭ್ಯಾಸ ಪಡೆದುಕೊಳ್ಳಬೇಕು ಎಂದು ಸಚಿವ ಶಿವಾನಂದ ಪಾಟೀಲರ ಪುತ್ರಿ, ಡಿಸಿಸಿ ಬ್ಯಾಂಕ್ ನಿರ್ದೇಶಕಿ ಸಂಯುಕ್ತಾ ಪಾಟೀಲ ಹೇಳಿದರು.

    ಕುಂಟೋಜಿಯ ಬಸವೇಶ್ವರ ದೇವಸ್ಥಾನ ಆವರಣದಲ್ಲಿ ಚನ್ನವೀರ ದೇವರ ಗುರು ಪಟ್ಟಾಧಿಕಾರ ಮಹೋತ್ಸವ ಹಿನ್ನೆಲೆಯಲ್ಲಿ ನಡೆಯುತ್ತಿರುವ ಮಹಾದಾಸೋಹಿ ಕಲಬುರಗಿಯ ಶರಣಬಸವೇಶ್ವರ ಪುರಾಣ ಪ್ರವಚನದಲ್ಲಿ ಭಾನುವಾರ ರಾತ್ರಿ ಏರ್ಪಡಿಸಿದ್ದ ಮಹಿಳಾ ಸಂಪದ- ಗೃಹಲಕ್ಷ್ಮೀಯರ ಸಮಾವೇಶದಲ್ಲಿ ಅವರು ಮಾತನಾಡಿದರು.

    ಹೆಣ್ಣು ಮಕ್ಕಳದ್ದು ಬಹಳ ವಿಚಿತ್ರ ಪರಿಸ್ಥಿತಿ. ಆಕೆಗೆ ತಂದೆ ಮನೆಯವರೂ ಆಸ್ತಿ ಮಾಡಲ್ಲ. ಗಂಡನ ಮನೆಯವರೂ ಆಸ್ತಿ ಮಾಡಲ್ಲ. ಎಲ್ಲವನ್ನೂ ಕಳೆದುಕೊಳ್ಳುವುದು, ತ್ಯಾಗ ಮಾಡುವುದೇ ಆಕೆಯ ಸ್ವಭಾವವಾಗಿದೆ. ವರದಕ್ಷಿಣೆಯಾಗಿ ಕೊಟ್ಟ ಹಣ ಕಳೆದುಕೊಳ್ಳಬಹುದು, ಆದರೆ ಕಲಿತ ವಿದ್ಯೆ ಎಂದಿಗೂ ವ್ಯರ್ಥ್ಯವಾಗುವುದಿಲ್ಲ. ಏನೂ ಇಲ್ಲದಂತಾದಾಗ ವಿದ್ಯೆ ಕೈಹಿಡಿಯುತ್ತದೆ. ಇದಕ್ಕಾಗಿಯಾದರೂ ಹೆಣ್ಣು ಮಕ್ಕಳಿಗೆ ವಿದ್ಯೆ ಕಲಿಸಬೇಕು ಎಂದರು.

    ಸರ್ಕಾರ ಮನೆಯೊಡತಿಗೆ 2000 ರೂ. ಹಾಕುವ ಹಿಂದಿನ ಉದ್ದೇಶ ಆಕೆ ಮನೆಯನ್ನು ನಡೆಸುವ ಶಕ್ತಿ ಪಡೆದುಕೊಳ್ಳಲಿ, ಸಮಾಜಮುಖಿಯಾಗಿ, ಕುಟುಂಬ ಮುಖಿಯಾಗಿ ಮುಂದುವರಿಯುವ ಶಕ್ತಿ ಆಕೆಗೆ ಬರಲಿ, ಕುಟುಂಬ ಮುಂದೆ ಒಯ್ಯಲಿ ಎನ್ನುವ ಉದ್ದೇಶ ಇದರಲ್ಲಿದೆ ಎಂದರು.


    ವಿಜಯಪುರದ ಸ್ವಯಂಭೂ ಆರ್ಟ ೌಂಡೇಷನ್ ಸಂಸ್ಥಾಪಕಿ, ಖ್ಯಾತ ಭರತನಾಟ್ಯ ಪ್ರವೀಣೆ ದೀಕ್ಷಾ ಭಿಸೆ ಮಾತನಾಡಿ, ಹೆಣ್ಣು ಮಕ್ಕಳಿಗೆ ವಿದ್ಯೆಯ ಜತೆಗೆ ಕಲೆ, ಸಂಸ್ಕೃತಿಯನ್ನೂ ಕಲಿಸಿಕೊಡಬೇಕು. ನಮ್ಮ ಸಂಸ್ಥೆಯಲ್ಲಿ ಬಡ, ಅನಾಥ ಮಕ್ಕಳಿಗೆ ಭರತನಾಟ್ಯದ ಉಚಿತ ತರಬೇತಿ ನೀಡುತ್ತಿದ್ದೇನೆ. ನಾವು ಕಲಿತ ವಿದ್ಯೆ, ಕಲೆ ನಮಗೆ ಸ್ವತಂತ್ರ ಬದುಕು ನಡೆಸಲು ಅವಕಾಶ ಕಲ್ಪಿಸಿಕೊಡುತ್ತದೆ. ದಕ್ಷಿಣ ಕರ್ನಾಟಕದ ಪ್ರತಿಯೊಂದು ಮನೆಯಲ್ಲಿ ಒಬ್ಬ ಕಲೆಗಾರರು ಇರುತ್ತಾರೆ. ಅದರಂತೆ ಉತ್ತರ ಕರ್ನಾಟಕದಲ್ಲಿಯೂ ಮನೆಗೊಬ್ಬರು ಕಲಾವಿದ, ಕಲೆಗಾರ ಇರುವಂತೆ ಆಗಬೇಕು ಎಂದರು.

    ಕೆ.ಸೂಗೂರಿನ ರುದ್ರಮುನೀಶ್ವರ ಮಠದ ಚನ್ನರುದ್ರಮುನಿ ಶಿವಾಚಾರ್ಯರು, ಹಾವಗಿ ಶಾಂತಲಿಂಗೇಶ್ವರಮಠದ ಶಾಂತವೀರ ಶಿವಾಚಾರ್ಯರು ಆಶೀರ್ವಚನ ನೀಡಿದರು. ಚನ್ನವೀರ ದೇವರು ಸಾನ್ನಿಧ್ಯ ವಹಿಸಿದ್ದರು. ಗ್ರಾಪಂ ಉಪಾಧ್ಯಕ್ಷೆ ನಂದಾ ಬಾಗೇವಾಡಿ, ತಾಪಂ ಮಾಜಿ ಅಧ್ಯಕ್ಷೆ ಇಂದಿರಾಬಾಯಿ ಪಾಟೀಲ, ಯಶಸ್ವಿನಿ ಮಹಿಳಾ ಸಂಘದ ಅಧ್ಯಕ್ಷೆ ಸಿದ್ದಮ್ಮ ಒಣರೊಟ್ಟಿ ಹಾಗೂ ಗುರುಪಟ್ಟಾಧಿಕಾರ ಸಮಿತಿ ಪದಾಧಿಕಾರಿಗಳು, ಊರಿನ ದೈವ ಮಂಡಳಿ, ಭಕ್ತರು ಇದ್ದರು. ಎಲ್ಲ ಗಣ್ಯರನ್ನು ಸಮಿತಿ ವತಿಯಿಂದ ಸನ್ಮಾನಿಸಲಾಯಿತು.

    ಮಂಗಳಾರತಿಯೊಂದಿಗೆ ಸಮಾರೋಪ ನಡೆಯಿತು. ಕಾರ್ಯಕ್ರಮಕ್ಕೂ ಮುನ್ನ ಶಾಂತವೀರ ಶಿವಾಚಾರ್ಯರು 14ನೇ ದಿನದ ಪುರಾಣ ಪ್ರವಚನ ನಡೆಸಿಕೊಟ್ಟರು. ರೇಖಾ ಹೂಗಾರ ಸ್ವಾಗತಿಸಿದರು. ಮಂಜುಳಾ ಸಜ್ಜನ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts