More

    ಹೆಣ್ಣುಮಕ್ಕಳಿಗೆ ಪ್ರಾಶಸ್ತ್ಯ ಅತ್ಯಗತ್ಯ  – ಜಿಪಂ ಸಿಇಒ ಸುರೇಶ್ ಬಿ. ಇಟ್ನಾಳ್ ಹೇಳಿಕೆ -ಲಿಂಗತ್ವ ದೌರ್ಜನ್ಯ ಜಾಗೃತಿ ಜಾಥಾ

    ದಾವಣಗೆರೆ: ಹೆಣ್ಣುಮಕ್ಕಳಿಗೆ ಮನೆಗಳಲ್ಲಿ ಮೊದಲ ಪ್ರಾಶಸ್ತ್ಯ ನೀಡಿದಾಗ ಮಾತ್ರ ಸಮಾಜ ಬದಲಾವಣೆ ಆಗಲಿದೆ ಎಂದು ಜಿಪಂ ಸಿಇಒ ಸುರೇಶ್ ಬಿ. ಇಟ್ನಾಳ್ ಹೇಳಿದರು.
    ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಎನ್.ಆರ್.ಎಲ್.ಎಂ. ಯೋಜನೆಯಡಿ ರಚಿಸಲ್ಪಟ್ಟ ಸ್ವಸಹಾಯ ಸಂಘಗಳ ಸಹಯೋಗದೊಂದಿಗೆ ನಗರದ ಜಯದೇವ ವೃತ್ತದಲ್ಲಿ ಶನಿವಾರ ಆಯೋಜಿಸಿದ್ದ ಲಿಂಗತ್ವ ದೌರ್ಜನ್ಯ ಅಭಿಯಾನದ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.
    ಪುರುಷ ಪ್ರಧಾನವಾದ ದೇಶದಲ್ಲಿ ತಾಯಂದಿರಿಗೆ ಗಂಡು ಮಕ್ಕಳೆಂದರೆ ಎಲ್ಲಿಲ್ಲದ ಆಸಕ್ತಿ. ಹೀಗಾಗಿ ಇಂದಿಗೂ ಹೆಣ್ಣು ಭ್ರೂಣ ಹತ್ಯೆ ನಡೆಯುತ್ತಲೇ ಇವೆ. ಹುಟ್ಟಿನಿಂದ ಸಾಯುವವರೆಗೂ ಗಂಡು ಮಕ್ಕಳಿಗೆ ವಿಶೇಷ ಪ್ರಾತಿನಿಧ್ಯ ನೀಡುವುದು ಹೆಚ್ಚಿದೆ. ಹೆಣ್ಣು-ಗಂಡು ಇಬ್ಬರಿಗೂ ಸಮಾನ ಅವಕಾಶ ಕಲ್ಪಿಸುವ ಜತೆಗೆ ಜಾಗೃತಿ ಮೂಡಿಸಬೇಕಿದೆ ಎಂದರು.
    ಶಿಕ್ಷಣ, ರಾಜಕೀಯ, ಉದ್ಯೋಗ ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಸಮಾನ ಅವಕಾಶ ಕಲ್ಪಿಸಬೇಕು. ಹೆಣ್ಣು ಮಕ್ಕಳಿಗೆ ಅನ್ವಯಿಸುವಂತೆ ಹಲವಾರು ಕಾಯ್ದೆ, ಕಾನೂನುಗಳು ಜಾರಿಯಲ್ಲಿವೆ. ಹೀಗಾಗಿ ನಾವು ಕೈಗೊಂಡ ಪ್ರತಿಜ್ಞಾವಿಧಿ ಒಂದು ದಿನಕ್ಕೆ ಸೀಮಿತವಾಗದೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ಇದೇ ವೇಳೆ ಪ್ರತಿಜ್ಞಾವಿಧಿ ಬೋಧಿಸಲಾಯಿತು.
    ನಂತರ ಅಂಬೇಡ್ಕರ್ ವೃತ್ತ, ವಿದ್ಯಾರ್ಥಿಭವನ, ಚಿಗಟೇರಿ ಆಸ್ಪತ್ರೆ ರಸ್ತೆ ಮೂಲಕ ಸಾಗಿದ ಜಾಥಾವು ಗುಂಡಿ ಮಹದೇವಪ್ಪ ವೃತ್ತದಲ್ಲಿ ಅಂತ್ಯಗೊಂಡಿತು. ಲಿಂಗ ತಾರತಮ್ಯ ತೊರೆಯಲಿ ಸಮಾನತೆ ಬೆಳೆಯಲಿ, ನಮ್ಮ ನಡೆ ಸಮಾನತೆಯ ಕಡೆ, ಶಿಕ್ಷಣ ಎಲ್ಲರ ಹಕ್ಕು, ಹೆಣ್ಣು ಭ್ರೂಣಹತ್ಯೆ ಮಾಡದಿರಿ ಎಂಬ ಘೋಷ ವಾಕ್ಯಗಳು ಜಾಥಾದಲ್ಲಿ ಮೊಳಗಿದವು. ಮಹಿಳಾ ಹಕ್ಕುಗಳ ಕುರಿತಾದ ವಿವಿಧ ಫಲಕಗಳು ಪ್ರದರ್ಶಿತವಾದವು.
    ಜಿಪಂ ಯೋಜನಾಧಿಕಾರಿ ಮಲ್ಲ್ಲಾನಾಯ್ಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ವಾಸಂತಿ ಉಪ್ಪಾರ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರಾಜಕುಮಾರ್, ಜಿಪಂ ವ್ಯವಸ್ಥಾಪಕ ಬಸವರಾಜ್, ಸ್ವಸಹಾಯ ಸಂಘಗಳ ಮಹಿಳೆಯರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts