More

    ಹುಲ್ಲತ್ತಿ ಗ್ರಾಮಸ್ಥರಿಂದ ಪ್ರತಿಭಟನೆ

    ರಟ್ಟಿಹಳ್ಳಿ: ಹುಲ್ಲತ್ತಿ ಗ್ರಾಮಕ್ಕೆ ವಿವಿಧ ಸೌಲಭ್ಯ ಒದಗಿಸುವಂತೆ ಆಗ್ರಹಿಸಿ ಉತ್ತರ ಕರ್ನಾಟಕ ರೈತ ಸಂಘದ ಸದಸ್ಯರು ಹಾಗೂ ಗ್ರಾಮಸ್ಥರು ತಾ.ಪಂ. ಕಚೇರಿ ಆವರಣದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

    ರೈತ ಸಂಘದ ಜಿಲ್ಲಾಧ್ಯಕ್ಷ ಹನುಮಂತಪ್ಪ ದೀವಗಿಹಳ್ಳಿ ಮಾತನಾಡಿ, 2012ರಲ್ಲಿ ಗ್ರಾಮದಲ್ಲಿ ನಿರ್ವಿುಸಲಾದ ಮನೆಗಳಿಗೆ ಗಟಾರ, ಕುಡಿಯುವ ನೀರು ಸೇರಿದಂತೆ ಮೂಲ ಸೌಕರ್ಯಗಳನ್ನು ಒದಗಿಸಬೇಕು. ಹುಲ್ಲತ್ತಿ ಗ್ರಾ.ಪಂ.ನಲ್ಲಿ 14ನೇ ಹಣಕಾಸು ಯೋಜನೆಯಡಿ ನಡೆದಿರುವ ಭ್ರಷ್ಟಚಾರದ ಕುರಿತು ಉನ್ನತ ಮಟ್ಟದ ತನಿಖೆಯಾಗಬೇಕು. 15ನೇ ಹಣಕಾಸು ಯೋಜನೆಯ ಹಣವನ್ನು ಕುಡಿಯುವ ನೀರಿಗೆ ಅವಶ್ಯವಿರುವ ಕಡೆ ಬಳಕೆ ಮಾಡಬೇಕು. ಬೇರೆ ಉದ್ದೇಶಗಳಿಗೆ ಬಳಸಬಾರದು ಎಂದು ಒತ್ತಾಯಿಸಿದರು.

    ಹುಲ್ಲತ್ತಿ ಗ್ರಾ.ಪಂ.ನಲ್ಲಿ 2016ರಿಂದ ಕೆಲಸ ಮಾಡುತ್ತಿರುವ ಬಸವರಾಜ ಮಾವಿನತೋಪ ಅವರಿಗೆ 16 ತಿಂಗಳಿನಿಂದ ಸಂಬಳ ನೀಡಿಲ್ಲ. ಕೂಡಲೆ ಅವರಿಗೆ ವೇತನ ಮಂಜೂರು ಮಾಡಬೇಕು. 5 ವರ್ಷಗಳ ಹಿಂದೆ ನಿರ್ವಿುಸಿದ 50 ಸಾವಿರ ಲೀಟರ್ ಸಾಮರ್ಥ್ಯದ ಓವರ್​ಹೆಡ್ ಟ್ಯಾಂಕ್​ಗೆ ಕುಡಿಯುವ ನೀರು ತುಂಬಿಸಿ, ಗ್ರಾಮಕ್ಕೆ ಪೂರೈಸಬೇಕು. ಅಂಬೇಡ್ಕರ್ ಓಣಿಯಲ್ಲಿ ಮನೆಗಳು ಕುಸಿದು ಬಿದ್ದಿದ್ದು, ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಬೇಕು ಎಂದು ಆಗ್ರಹಿಸಿದರು.

    25 ದಿನಗಳ ಹಿಂದೆ ಹುಲ್ಲತ್ತಿ ಗ್ರಾ.ಪಂ. ಆವರಣದಲ್ಲಿ ಪ್ರತಿಭಟನೆ ನಡೆಸಿ ರಟ್ಟಿಹಳ್ಳಿ ತಾ.ಪಂ. ಇ.ಒ.ಗೆ ಮನವಿ ಸಲ್ಲಿಸಲಾಗಿತ್ತು. ಆ ವೇಳೆ 1 ವಾರದಲ್ಲಿ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ್ದರು. ಆದರೆ, ಈತನಕ ಭರವಸೆ ಈಡೇರಿಸಿಲ್ಲ ಎಂದು ಆರೋಪಿಸಿದರು.

    ನಂತರ ಹಿರೇಕೆರೂರ ತಾ.ಪಂ. ಇ.ಒ. ಶ್ರೀನಿವಾಸ ಅವರಿಗೆ ಮನವಿ ಸಲ್ಲಿಸಲಾಯಿತು. ರೈತ ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಫಕೀರೇಶ ಕಾಳೆ, ಜಗದೀಶ ಕುಸಗೂರ, ಮಂಜಪ್ಪ ಮುದಿಯಪ್ಪನವರ, ಈರಣ್ಣ ಮುದಿಯಪ್ಪನವರ, ಸುರೇಶ ಎರೆಳ್ಳಿ, ಸಿದ್ದಣ್ಣ ನೂಲಗೇರಿ, ಹುಚ್ಚಪ್ಪ ಮೈದೂರ, ಪರಮೇಶ್ವರಯ್ಯ ಹಿರೇಮಠ, ಸೋಮಪ್ಪ ಉಪ್ಪಾರ, ಹನುಮಂತಪ್ಪ ಕರಿಯಣ್ಣನವರ, ನಾಗನಗೌಡ ಪಾಟೀಲ, ನಾಗಪ್ಪ ಯರಳ್ಳಿ, ಕಾಳಪ್ಪ ಯರಳ್ಳಿ, ನಾಗರಾಜ ಯರಳ್ಳಿ, ನಾಗಪ್ಪ ಉಕ್ಕುಂದ, ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts