More

    ಹುಬ್ಬಳ್ಳಿ ಅಂಚೆ ಕಚೇರಿಗೆ ನಿಧಾನವೇ ಪ್ರಧಾನ

    ಹುಬ್ಬಳ್ಳಿ: ಹೆಸರಿಗೆ ಇದು ಹುಬ್ಬಳ್ಳಿ ಪ್ರಧಾನ ಅಂಚೆ ಕಚೇರಿ. ಆದರೆ, ಇಲ್ಲಿ ನಡೆಯುವ ಕೆಲಸ ಮಾತ್ರ ನಿಧಾನ. ಎಷ್ಟು ನಿಧಾನವೆಂದರೆ, ಸಾರ್ವಜನಿಕರು ತಮ್ಮ ಕೆಲಸಗಳಿಗೆ ಅಮೂಲ್ಯವಾದ 3-4 ಗಂಟೆ ಸಮಯ ವ್ಯಯಿಸಬೇಕಾದ ಪರಿಸ್ಥಿತಿ ನಿರ್ವಣವಾಗಿದೆ.

    ವಿವಿಧ ಕೆಲಸ ನಿಮಿತ್ತ ನಿತ್ಯ ನೂರಾರು ಜನ ಸ್ಟೇಶನ್ ರಸ್ತೆ ಅಂಬೇಡ್ಕರ್ ಪ್ರತಿಮೆ ಬಳಿಯಿರುವ ಪ್ರಧಾನ ಅಂಚೆ ಕಚೇರಿಗೆ ಬರುತ್ತಾರೆ. ಶನಿವಾರ(ನ. 21)ದಂದು ಬೆಳಗ್ಗೆ 10ರಿಂದ ಮಧ್ಯಾಹ್ನ 1ರ ವರೆಗೆ 8 ಕೌಂಟರ್​ಗಳ ಮೂಲಕ ಕೇವಲ 105 ಜನರ ಕೆಲಸ ನಿರ್ವಹಿಸಲಾಗಿದೆ. ವಿಳಂಬಕ್ಕೆ ಬೇಸತ್ತು ನಾಳೆ (ಸೋಮವಾರ) ಬಂದರಾಯಿತು ಎಂದು ವಾಪಸ್ ಹೋದ ಬಹಳಷ್ಟು ಜನ ಸೇರಿದ್ದಾರೆ. ಸಾರ್ವಜನಿಕರು ಬೇಸತ್ತು ಸಿಬ್ಬಂದಿಯೊಂದಿಗೆ ವಾಗ್ವಾದ ಸಹ ನಡೆಸಿದರು. ಆದಷ್ಟು ಬೇಗ ಸುಧಾರಿಸದಿದ್ದರೆ ಮುಂದಿನ ದಿನಗಳಲ್ಲಿ ಸಾರ್ವಜನಿಕರು ರೊಚ್ಚಿಗೇಳುವುದೊಂದೇ ಬಾಕಿ.

    ಅರ್ಧ ದಿನ ಕೆಲಸದ ನಿಮಿತ್ತ ಶನಿವಾರ 1 ಗಂಟೆಗೆ ಕಚೇರಿ ಬಂದ್ ಆಗಬೇಕಿತ್ತು. ಆದರೆ, ಆ ವೇಳೆಗೆ ಟೋಕನ್ ಪಡೆದಿದ್ದ ಇನ್ನೂ 30-40 ಜನ ಕಚೇರಿಯಲ್ಲಿ ಇದ್ದರು. ವಿಳಂಬವಾದರೂ ಅವರೆಲ್ಲರ ಕೆಲಸ ಮಾಡಿಕೊಟ್ಟಿದ್ದೇವೆ ಎಂದು ಅಂಚೆ ಕಚೇರಿ ಹೇಳಿದೆ.

    ತಾಂತ್ರಿಕ ಸಮಸ್ಯೆ: ಸರ್ವರ್ ಸಮಸ್ಯೆಯೇ ವಿಳಂಬಕ್ಕೆ ಕಾರಣ ಎಂದು ಅಂಚೆ ಕಚೇರಿ ಸಿಬ್ಬಂದಿ ಹೇಳುತ್ತಾರೆ. ಇದು ಇಂದು-ನಿನ್ನೆಯ ಸಮಸ್ಯೆಯಲ್ಲ. ಒಂದೆರಡು ವರ್ಷಗಳಿಂದ ಇಲ್ಲಿ ನಿಧಾನವಾಗಿಯೇ ಕೆಲಸ ನಡೆಯುತ್ತದೆ. ಆದರೆ, ಸರ್ವರ್ ಬಲಪಡಿಸುವ ಕೆಲಸವನ್ನು ಮೇಲಧಿಕಾರಿಗಳು ಮಾಡಿಲ್ಲ. ಸಾರ್ವಜನಿಕರಿಗೆ ಗೋಳು ತಪ್ಪಿಲ್ಲ. ಹುಬ್ಬಳ್ಳಿಯಂಥ ನಗರದಲ್ಲಿ ಪ್ರಧಾನ ಅಂಚೆ ಕಚೇರಿಯೊಂದು ಇಷ್ಟು ನಿಧಾನವಾಗಿರುವುದು ಶೋಭೆ ತರುವಂಥದಲ್ಲ. ಜನಪ್ರತಿನಿಧಿಗಳು ಈ ಕುರಿತು ಗಮನ ಹರಿಸಬೇಕಿದೆ.

    ಇಲ್ಲಿಯ ಕೆಲಸ -ಕಾರ್ಯಗಳಿಗೆ ಟೋಕನ್ ವ್ಯವಸ್ಥೆ ಮಾಡಲಾಗಿದೆ. ಕಚೇರಿಗೆ ಬರುವ ಸಾರ್ವಜನಿಕರು ಬಟನ್ ಒತ್ತಿ ಮುದ್ರಿತ ಟೋಕನ್ ಪಡೆದು ತಮ್ಮ ಪಾಳಿ ಬರುವವರೆಗೆ ಕಾಯಬೇಕು. ಪಾಸ್ ಬುಕ್ ಎಂಟ್ರಿ, ಅಂಚೆ ಪತ್ರ ಕಳುಹಿಸಲು, ಅಂಚೆ ಚೀಟಿ ಖರೀದಿಸಲು ಟೋಕನ್ ಬೇಕಾಗಿಲ್ಲ. ಪಾರ್ಸಲ್, ಆರ್​ಡಿ, ಸಣ್ಣ ಉಳಿತಾಯ ಪತ್ರ, ಸಂಧ್ಯಾ ಸುರಕ್ಷಾ, ಪೋಸ್ಟ್ ಲೈಫ್ ಇನ್ಸುರೆನ್ಸ್ ಇತ್ಯಾದಿ ಸೇವೆಗಳಿಗೆ ಟೋಕನ್ ಪಡೆದು ಗಂಟೆಗಟ್ಟಲೇ ಕಾಯಬೇಕು. ಕೆಲವು ಸೇವೆಗಳು ಮಾತ್ರ ಆನ್​ಲೈನ್​ನಲ್ಲಿವೆ. ಆದರೆ, ಕೆಲವು ಸೇವೆಗಳಿಗೆ ಅಂಚೆ ಕಚೇರಿಗೆ ಬರಲೇಬೇಕಾದ ಅನಿವಾರ್ಯತೆ ಸಾರ್ವಜನಿಕರದ್ದು. ವಿಚಿತ್ರವೆಂದರೆ, ಇಲ್ಲಿ ಅಂಗವಿಕಲರು, ಹಿರಿಯ ನಾಗರಿಕರಿಗೆ ಪ್ರತ್ಯೇಕ ವ್ಯವಸ್ಥೆಯೇ ಇಲ್ಲ. ಅವರು ಸಹ 2-3 ತಾಸು ಕಾಯಬೇಕು!

    2-3 ದಿನ ಬಿಟ್ಟು ಬನ್ನಿ: ಮಾಸಿಕ ಆರ್​ಡಿ ಸಂದಾಯ ಮಾಡಿದರೆ ಪಾಸ್​ಬುಕ್​ನಲ್ಲಿ ಅದೇ ದಿನ ಎಂಟ್ರಿ ಆಗುವುದಿಲ್ಲ. ಮಾರನೇ ದಿನ ಎಂಟ್ರಿ ಮಾಡಲು ಮತ್ತೆ ಅಂಚೆ ಕಚೇರಿಗೆ ಎಡತಾಕಬೇಕು. ಎನ್​ಎಸ್​ಸಿ ಪಾಸ್​ಬುಕ್ ಪಡೆಯಬೇಕಾದರೆ 2-3 ದಿನ ಬಿಟ್ಟು ಬರಬೇಕು. ಇಷ್ಟು ನಿಧಾನವಾಗಿರುವ ಅಂಚೆ ಕಚೇರಿ ಅಪ್​ಡೇಟ್ ಆಗದಿದ್ದರೆ ಬಿಎಸ್​ಎನ್​ಎಲ್​ನಂತೆ ಅಸ್ತಿತ್ವಕ್ಕೆ ಧಕ್ಕೆ ತಂದುಕೊಳ್ಳುವ ಅಪಾಯವಿದೆ.

    ಹುಬ್ಬಳ್ಳಿಯಲ್ಲಿ ಕರೊನಾ ಸೋಂಕು ತೀವ್ರವಾಗಿದ್ದಾಗ ಅಂಚೆ ಕಚೇರಿ ಒಳಗೆ ಸಾರ್ವಜನಿಕರು ಜಮಾಯಿಸುವಂತಿರಲಿಲ್ಲ. ಕಚೇರಿ ಹೊರಗೆ ಸರದಿ ಸಾಲಿನಲ್ಲಿ ನಿಂತು ಒಬ್ಬೊಬ್ಬರಾಗಿ ಒಳಗೆ ಹೋಗಬೇಕಿತ್ತು. ಇದೀಗ ಕರೊನಾ ಹಾವಳಿ ಕಡಿಮೆಯಾಗಿದ್ದರೂ ಕಚೇರಿಯೊಳಗೆ ಏಕಕಾಲಕ್ಕೆ 70-80 ಜನ 2-3 ತಾಸು ಜಮಾಯಿಸುವುದು ಅಪಾಯಕಾರಿಯೂ ಹೌದು.

    ಇಲ್ಲಿ ಸರ್ವರ್ ಸಮಸ್ಯೆ ಜತೆಗೆ, ಸಿಬ್ಬಂದಿಯ ಕಾರ್ಯನಿರ್ವಹಣೆಯೂ ಪ್ರಶ್ನಾರ್ಹವಾಗಿದೆ. ಇವರು ಆಗಾಗ ಎದ್ದು ಹೋಗಿ ಸಾರ್ವಜನಿಕರನ್ನು 10-15 ನಿಮಿಷ ಕಾಯಿಸುತ್ತಾರೆ. ಪ್ರಶ್ನೆ ಮಾಡಿದರೆ ನಾನಾ ಸಬೂಬು ಹೇಳುತ್ತಾರೆ. ಸಿಬ್ಬಂದಿ ಕಾರ್ಯನಿರ್ವಹಣೆ ಬಗ್ಗೆ ನಿಗಾ ವಹಿಸಬೇಕಾದ ಕಚೇರಿಯ ಮುಖ್ಯಸ್ಥರು (ಉಪ ಅಂಚೆ ಅಧೀಕ್ಷಕ, ಪೋಸ್ಟ್ ಮಾಸ್ಟರ್) ಚೇಂಬರ್ ಬಿಟ್ಟು ಹೊರಗೆ ಬರುವುದಿಲ್ಲ ಎಂಬ ದೂರುಗಳಿವೆ.

    ಎನ್​ಎಸ್​ಸಿ, ಆರ್​ಡಿಯಂಥ ಸಣ್ಣ ಉಳಿತಾಯಕ್ಕಾಗಿ ನಾವು ಇಲ್ಲಿಗೆ ಬರುತ್ತೇವೆ. ವಾರ್ಷಿಕ ಕೇವಲ ಶೇ. 6-7 ರಷ್ಟು ಬಡ್ಡಿ ಪಡೆಯಲು ಪ್ರತಿ ಬಾರಿ 2-3 ತಾಸು ಕಾಯಬೇಕಾದ ದುಸ್ಥಿತಿ ನಮ್ಮದು. ಯಾವಾಗಲೂ ಸರ್ವರ್ ಸಮಸ್ಯೆ ಎಂದು ಹೇಳಿ ಅಧಿಕಾರಿಗಳು ಜಾರಿಕೊಳ್ಳುತ್ತಾರೆ.
    ರವಿಕುಮಾರ ಸೊಟ್ಟಪ್ಪನವರ್, ಸಾರ್ವಜನಿಕ

    ಸರ್ವರ್ ಸಮಸ್ಯೆಯಿಂದ ಅಂಚೆ ಕಚೇರಿ ಕೆಲಸ ಕಾರ್ಯಗಳಲ್ಲಿ ವಿಳಂಬವಾಗುತ್ತಿದೆ. ಈ ತಾಂತ್ರಿಕ ಸಮಸ್ಯೆಯನ್ನು ಬಗೆಹರಿಸುವಂತೆ ಅಂಚೆ ಅಧೀಕ್ಷಕ(ಧಾರವಾಡ)ರ ಗಮನಕ್ಕೆ ತಂದಿದ್ದೇವೆ. ವಿಳಂಬವಾದರೂ ಟೋಕನ್ ಪಡೆದ ಎಲ್ಲರ ಕೆಲಸವನ್ನು ಮಾಡುತ್ತೇವೆ. ಯಾರನ್ನೂ ವಾಪಸ್ ಕಳುಹಿಸುವುದಿಲ್ಲ.
    ಶಿವಪ್ಪ ಸೊರಟೂರ, ಪೋಸ್ಟ್ ಮಾಸ್ಟರ್ ಹುಬ್ಬಳ್ಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts