More

    ಹಿಂದುಳಿದವರಿಗೆ ಸೌಲಭ್ಯ ಕಲ್ಪಿಸಿ -ಡಾ. ಬಸವರಾಜ ದೇವರು ಹೇಳಿಕೆ-ಆಟೊ ಚಾಲಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ

    ದಾವಣಗೆರೆ: ಸಮಾಜದಲ್ಲಿ ಹಿಂದುಳಿದವರು ಹಾಗೂ ಸಂವಿಧಾನಬದ್ಧ ಹಕ್ಕುಗಳಿಂದ ವಂಚಿತರಾದವರಿಗೆ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸೌಲಭ್ಯ ಒದಗಿಸುವುದು ಅಗತ್ಯ ಹಾಗೂ ಅನಿವಾರ್ಯ ಎಂದು ಧಾರವಾಡ ಮನಸೂರು ಸುಕ್ಷೇತ್ರದ ಡಾ. ಬಸವರಾಜ ದೇವರು ಹೇಳಿದರು.
    ಇನ್ಸೈಟ್ಸ್ ಐಎಎಸ್ ಸಂಸ್ಥೆ, ವಿನಯ ಮಾರ್ಗ ಟ್ರಸ್ಟ್, ವಿನಯ್‌ಕುಮಾರ್ ಜಿ.ಬಿ. ಅಭಿಮಾನಿ ಬಳಗದ ಸಹಯೋಗದಲ್ಲಿ ನಗರದ ಅಭಿನವ ರೇಣುಕ ಮಂದಿರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಆಟೊ, ಲಾರಿ, ಗೂಡ್ಸ್ ಹಾಗೂ ಟ್ಯಾಕ್ಸಿ ಚಾಲಕರಿಗೆ ಸನ್ಮಾನ ಮತ್ತು ಅವರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.
    ನಾಡಿನಲ್ಲಿ ಬಸವಣ್ಣ, ಬುದ್ದ, ಕನಕದಾಸ, ಅಂಬೇಡ್ಕರ್ ಮೊದಲಾದವರು ಸಮಾನತೆಯ ಸಮಾಜ ನಿರ್ಮಾಣಕ್ಕೆ ನಿರಂತರ ಶ್ರಮಿಸುವ ಜತೆಗೆ ದುರ್ಬಲರಿಗೆ ಧ್ವನಿ ಕೊಡುವ ಕೆಲಸ ಮಾಡಿದ್ದಾರೆ. ಈ ನಿಟ್ಟಿನಲ್ಲಿ ವಿನಯಮಾರ್ಗ ಟ್ರಸ್ಟ್ ಹೆಜ್ಜೆ ಹಾಕಿರುವುದು ಶ್ಲಾಘನೀಯ ಎಂದು ತಿಳಿಸಿದರು.
    ದೇಶದಲ್ಲಿ ಇನ್ಸೈಟ್ಸ್ ಐಎಎಸ್ ಸಂಸ್ಥೆ ಸ್ಥಾಪಿಸುವ ಮೂಲಕ ಶೋಷಿತ ಸಮುದಾಯಗಳ ಮಕ್ಕಳು ಐಎಎಸ್, ಕೆಎಎಸ್‌ನಂತಹ ಉನ್ನತ ಹುದ್ದೆ ಪಡೆಯಲು ಮಾರ್ಗದರ್ಶನ ನೀಡುತ್ತಿರುವುದು ದೊಡ್ಡ ಕೆಲಸ. ಹಲವಾರು ಶೈಕ್ಷಣಿಕ ಹಾಗೂ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿರುವ ವಿನಯ್ ಅವರ ಕಾಳಜಿ ಮೆಚ್ಚುವಂಥದ್ದು. ವಾಹನ ಚಾಲಕರು ದೇಶ ಕಟ್ಟುವ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಎಂದರು.
    ಜಿ.ಬಿ.ವಿನಯಕುಮಾರ್ ಅವರು ಲೋಕಸಭೆಗೆ ಹೋಗಬೇಕು ಎಂಬುದು ನಾಡಿನ ಜನರ ಹಂಬಲವಾಗಿದ್ದು, ಪಾರ್ಲಿಮೆಂಟ್‌ನಲ್ಲಿ ವಿನಯ್‌ಕುಮಾರ್ ಕಂಬಳಿ ಬೀಸಲಿದ್ದಾರೆ.
    ಆವರಗೊಳ್ಳದ ಓಂಕಾರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಭವಿಷ್ಯದಲ್ಲಿ ನಾಯಕನಾಗುವ ವ್ಯಕ್ತಿ ಸೂಕ್ಷ್ಮಮತಿ, ಸಮಷ್ಠಿಪ್ರಜ್ಞೆ ಹಾಗೂ ಸಮತಾಭಾವ ಹೊಂದಿರಬೇಕು. ಇದು ವಿನಯ್‌ಕುಮಾರ್ ಅವರಲ್ಲಿದೆ. ಇನ್ಸೈಟ್ ಸಂಸ್ಥೆ ಸ್ಥಾಪಿಸಿ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡುತ್ತಿದ್ದಾರೆ. ಇಂತಹ ವ್ಯಕ್ತಿಗಳು ತಾಲೂಕಿಗೊಬ್ಬರು ಇದ್ದರೆ ಮನೆಗೊಬ್ಬ ಜಿಲ್ಲಾಧಿಕಾರಿ ಕಾಣಬಹುದು ಎಂದು ಹೇಳಿದರು.
    ಚಾಲಕರು ದುಶ್ಚಟಕ್ಕೆ ಒಳಗಾಗಿರುತ್ತಾರೆ ಎಂಬ ಮಾತಿದೆ. ಆದರೆ, ಎಲ್ಲರೂ ಆ ರೀತಿ ಇರುವುದಿಲ್ಲ. ಕೆಲ ವ್ಯಕ್ತಿಗಳ ಮದ್ಯಸೇವನೆ ಮೊದಲಾದ ದುಶ್ಚಟ ಬಿಡಿಸಿ ಭವಿಷ್ಯದ ಬಗ್ಗೆ ತಿಳಿಹೇಳಬೇಕು. ಇದರಿಂದ ಚಾಲಕ ಸಮೂಹಕ್ಕೆ ದೊಡ್ಡ ಶಕ್ತಿ ಬರಲಿದ್ದು ಜೀವನಕ್ಕೆ ಬೆಳಕು ನೀಡಿದಂತಾಗಲಿದೆ ಎಂದರು.
    ಇನ್ಸೈಟ್ಸ್ ಐಎಎಸ್ ಸಂಸ್ಥೆಯಿಂದ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಯುವ ಬ್ರಿಗೇಡ್ ಸ್ಥಾಪಿಸಿ ವ್ಯಕ್ತಿತ್ವ ವಿಕಸನ ಶಿಬಿರ ಆಯೋಜಿಸಬೇಕು ಎಂದು ಸಲಹೆ ನೀಡಿದರು. ಇದೇ ಸಂದರ್ಭದಲ್ಲಿ ಶೇ.70ಕ್ಕಿಂತ ಹೆಚ್ಚು ಅಂಕ ಪಡೆದ ವಾಹನ ಚಾಲಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ವಾಹನ ಚಾಲಕರನ್ನು ಸನ್ಮಾನಿಸಲಾಯಿತು.
    ಹದಡಿ ಚಂದ್ರಗಿರಿ ಮಠದ ಮುರುಳೀಧರ ಶ್ರೀ, ವಿನೋಬನಗರದ ಶಿವಾನಂದ ಶ್ರೀ, ಯಲವಟ್ಟಿಯ ಶ್ರೀ ಯೋಗಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಇನೈಟ್ಸ್ ಐಎಎಸ್ ಸಂಸ್ಥೆಯ ಸಂಸ್ಥಾಪಕ ನಿರ್ದೇಶಕ ಜಿ.ಬಿ. ವಿನಯಕುಮಾರ್ ವಿದ್ಯಾರ್ಥಿಗಳಿಗೆ ಐಎಎಸ್ ಪರೀಕ್ಷೆ ಕುರಿತು ಮಾರ್ಗದರ್ಶನ ನೀಡಿದರು.
    ಇದೇ ವೇಳೆ ಗಾನಕೋಗಿಲೆಗಳಾದ ಯುವರಾಜ್, ಸೌಮ್ಯ, ಕಾಸಿಂ ಅಲಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಪತ್ರಕರ್ತ ಪುರಂದರ್ ಲೋಕಿಕೆರೆ ಸ್ವಾಗತಿಸಿದರು, ಉಪನ್ಯಾಸಕಿ ಸುಮತಿ ಜಯಪ್ಪ ಕಾರ್ಯಕ್ರಮ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts