More

    ಹಾವೇರಿ ಜಿಲ್ಲೆಯ ರೈತರು ಕಂಗಾಲು

    ಹಾವೇರಿ: ಮಂಗಳವಾರ ಸುರಿದ ಧಾರಾಕಾರ ಮಳೆಯಿಂದಾಗಿ ಜಿಲ್ಲೆಯ ರೈತರು ಕಂಗಾಲಾಗಿದ್ದಾರೆ. ಕಟಾವಿಗೆ ಬಂದಿದ್ದ ಬೆಳೆಗಳೆಲ್ಲ ನೀರು ಪಾಲಾಗಿದ್ದು, ರೈತರು ಕಣ್ಣೀರಲ್ಲಿ ಕೈ ತೊಳೆಯುವಂತಹ ಸ್ಥಿತಿ ನಿರ್ವಣವಾಗಿದೆ.

    ಹೊಲಗದ್ದೆಗಳಲ್ಲಿ ನೀರು ನಿಂತಿದೆ. ಕಟಾವು ಹಂತದಲ್ಲಿರುವ ಶೇಂಗಾ, ಸೋಯಾಬೀನ್, ಬಿಟಿಹತ್ತಿ, ಉಳ್ಳಾಗಡ್ಡಿ, ಮೆಕ್ಕೆಜೋಳ, ಬಾಳೆ, ಟೊಮ್ಯಾಟೊ, ಮೆಣಸಿನಕಾಯಿ, ಭತ್ತ, ಚೆಂಡು, ಸೇವಂತಿಗೆ ಹೂ ಬೆಳೆ ಸಂಪೂರ್ಣ ನೀರುಪಾಲಾಗಿದೆ. ಕೆಲವು ಕಡೆ ಕಟಾವು ಮಾಡಿ ಒಣಗಿಸಿಟ್ಟ ಫಸಲು ಕೂಡ ಮಳೆಗೆ ತೋಯ್ದು ಪ್ರಯೋಜನಕ್ಕೆ ಬಾರದಂತಾಗಿದೆ. ತಾಲೂಕಿನ ನೆಗಳೂರು, ಗುತ್ತಲ, ಅಗಡಿ, ಕರ್ಜಗಿ ಸೇರಿದಂತೆ ವಿವಿಧೆಡೆ ಅಪಾರ ಪ್ರಮಾಣದಲ್ಲಿ ಫಸಲು ಹಾಳಾಗಿದೆ.

    ಒಣಗಿಸಲು ಹೊಲದಲ್ಲೇ ರಾಶಿ ಹಾಕಿದ್ದ ಉಳ್ಳಾಗಡ್ಡಿ ಕೊಳೆತು ಹೋಗಿದೆ. ವಾರದ ಹಿಂದೆಯೂ ನಿರಂತರವಾಗಿ ಸುರಿದ ಮಳೆಗೆ ಕೃಷಿ ಮತ್ತು ತೋಟಗಾರಿಕೆ ಬೆಳೆಗಳು ಹಾನಿಗೊಳಗಾಗಿದ್ದವು.

    ಮಂಗಳವಾರ ರಾತ್ರಿ ಸುರಿದ ಮಳೆಗೆ ನಗರದ ಶಿವಬಸವನಗರ, ಗೂಗಿಕಟ್ಟೆ, ಎಂಜಿ ರಸ್ತೆ, ಹಾನಗಲ್ಲ ರಸ್ತೆ, ಬಸ್ ನಿಲ್ದಾಣದ ಸುತ್ತಮುತ್ತಲಿನ ಅಂಗಡಿಗಳಿಗೆ ನೀರು ನುಗ್ಗಿತ್ತು. ಕಿರಾಣಿ, ಬಟ್ಟೆ ಮುಂತಾದ ಅಂಗಡಿಗಳಲ್ಲಿ ಅಪಾರ ಪ್ರಮಾಣದ ಸಾಮಗ್ರಿ ನೀರುಪಾಲಾಗಿದೆ. ನಗರಸಭೆಯವರು ಚರಂಡಿ ಸ್ವಚ್ಛಗೊಳಿಸದಿರುವುದೇ ಇಷ್ಟೆಲ್ಲ ಅವಾಂತರಕ್ಕೆ ಕಾರಣ ಎಂದು ವ್ಯಾಪಾರಸ್ಥರು ದೂರಿದರು.

    ಮಳೆ ವಿವರ: ಬುಧವಾರ ಬೆಳಗಿನ 24ಗಂಟೆವರೆಗಿನ ಅವಧಿಯಲ್ಲಿ ಹಾವೇರಿ ತಾಲೂಕಿನಲ್ಲಿ 88.5ಮಿಮೀ ಮಳೆಯಾಗಿದ್ದರೆ, ರಾಣೆಬೆನ್ನೂರ 23.2, ಬ್ಯಾಡಗಿ 51ಮಿಮೀ, ಹಿರೇಕೆರೂರು 5.4, ಸವಣೂರು 49.1, ಶಿಗ್ಗಾಂವಿ 21.6 ಹಾಗೂ ಹಾನಗಲ್ಲ ತಾಲೂಕಿನಲ್ಲಿ 8.1ಮಿಮೀ ಮಳೆಯಾದ ವರದಿಯಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts