More

    ಹಾರ್ಟಿ ಕ್ಲಿನಿಕ್​ಗೆ ಹಣದ ಕೊರತೆ

    ಶಿರಸಿ: ತೋಟಗಾರಿಕೆ ಬೆಳೆಗಾರರ ಆಪದ್ಬಾಂಧವವಾಗಿ ಕಾರ್ಯ ನಿರ್ವಹಿಸುತ್ತಿರುವ ಹಾರ್ಟಿ ಕ್ಲಿನಿಕ್​ಗಳಿಗೆ ರಾಜ್ಯ ಸರ್ಕಾರ ಈ ಬಾರಿ ಅನುದಾನ ಬಿಡುಗಡೆ ಮಾಡಿಲ್ಲ. ಇದು ಹಾರ್ಟಿ ಕ್ಲಿನಿಕ್ ತಜ್ಞರೊಂದಿಗೆ ಬೆಳೆ ಹಾಗೂ ಬೆಳೆಗಾರರ ಸಮಸ್ಯೆಗೆ ಕಾರಣವಾಗಿದೆ.

    2010-11ನೇ ಸಾಲಿನಲ್ಲಿ ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಆರಂಭಿಸಿದ್ದ ಹಾರ್ಟಿ ಕ್ಲಿನಿಕ್ ನಿರ್ವಹಣೆಗೆ ಈಗ ಅನುದಾನ ಕೊರತೆ ಎದುರಾಗಿದೆ. ಸಂಕಷ್ಟದಲ್ಲಿದ್ದ ರೈತರಿಗೆ, ತೋಟಗಾರಿಕೆ ಬೆಳೆಗಾರರಿಗೆ ಮಾರ್ಗದರ್ಶನ ಮಾಡುತ್ತಿದ್ದ ಈ ಕ್ಲಿನಿಕ್​ಗಳು ಈಗ ಅನುದಾನ ಕೊರತೆಯಿಂದ ರೈತರಿಂದ ದೂರವಾಗುತ್ತಿವೆ. ಹಲವೆಡೆ ಸೂಕ್ತ ಕಾಲಕ್ಕೆ ಉತ್ತಮ ಮಾಹಿತಿ ನೀಡಿ ರೋಗಗಳಿಂದ ಬೆಳೆ ರಕ್ಷಿಸುತ್ತಿದ್ದ, ಹೊಸ ಸಲಹೆಗಳಿಂದ ಇಳುವರಿ ಹೆಚ್ಚಿಸುತ್ತಿದ್ದ ತಜ್ಞರ ಮಾರ್ಗದರ್ಶನವಿಲ್ಲದೆ ರೈತರು ಕಂಗಾಲಾಗಿದ್ದಾರೆ.

    ರಾಜ್ಯದ ಎಲ್ಲ ಜಿಲ್ಲೆಗಳ ತೋಟಗಾರಿಕೆ ಇಲಾಖೆ ಪ್ರಧಾನ ಕಚೇರಿ ಆವರಣದಲ್ಲಿ ಹಾರ್ಟಿ ಕ್ಲಿನಿಕ್ ಆರಂಭಿಸಲಾಗಿತ್ತು. ಈ ಕ್ಲಿನಿಕ್​ಗಳು ರೈತರ ಹಿತ ಕಾಯುತ್ತ, ಅವರಿಗೆ ಮಾರ್ಗದರ್ಶನ ಮಾಡುತ್ತ ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸುತ್ತಿವೆ. ಆಯಾ ಜಿಲ್ಲೆಯಲ್ಲಿ ಕೃಷಿ ಪದವಿ ಓದಿದ ವಿಷಯ ತಜ್ಞರನ್ನು ಸರ್ಕಾರವು ಮಾಸಿಕ 20 ಸಾವಿರ ರೂಪಾಯಿ ನೀಡಿ ನೇಮಕ ಮಾಡಿಕೊಂಡಿತ್ತು. ಸಂಶೋಧನೆ ಹಾಗೂ ರೈತ, ಇಲಾಖೆ ಹಾಗೂ ರೈತರ ನಡುವೆ ಕೊಂಡಿಯಾಗಿದ್ದ ಪ್ರತಿ ಹಾರ್ಟಿ ಕ್ಲಿನಿಕ್​ಗೆ ಸರ್ಕಾರ ವಾರ್ಷಿಕ ಅಂದಾಜು 2 ಲಕ್ಷ ರೂಪಾಯಿ ಅನುದಾನ ಬಿಡುಗಡೆ ಮಾಡುತ್ತಿತ್ತು. ಈ ಮೊತ್ತದಲ್ಲಿ ಅಡಕೆ, ಕಾಳು ಮೆಣಸು, ಅನಾನಸ್, ಮಾವು, ತೆಂಗು, ಬಾಳೆ, ಮಲ್ಲಿಗೆ, ವೀಳ್ಯದೆಲೆ, ಪಪ್ಪಾಯ, ದ್ರಾಕ್ಷಿ ಸೇರಿ ಅನೇಕ ತೋಟಗಾರಿಕೆ ಬೆಳೆ ಬೆಳೆಯುವ ರೈತರಿಗೆ ಯಾವ ಕಾಲಕ್ಕೆ ಯಾವ ಗೊಬ್ಬರ ಹಾಕಬೇಕು? ಯಾವ ರೋಗಕ್ಕೆ ಯಾವ ಔಷಧ ಹಾಕಬೇಕು? ಎಂಬಿತ್ಯಾದಿ ಮಾಹಿತಿ ಹಾರ್ಟಿ ಕ್ಲಿನಿಕ್ ತಜ್ಞರು ನೀಡುತ್ತಿದ್ದರು. ವರ್ಷದಲ್ಲಿ ನೂರಾರು ತರಬೇತಿ ಶಿಬಿರಗಳನ್ನು ನಡೆಸಿ ರೈತರ ಯಶಸ್ಸಿಗೆ ಕಾರಣರಾಗುತ್ತಿದ್ದರು. ಕ್ಷೇತ್ರ ಭೇಟಿ ಮಾಡಿ ಮಾಹಿತಿ ಪಡೆಯುತ್ತಿದ್ದ ತಜ್ಞರು ಆ ಕ್ಷೇತ್ರದ ಅಭಿವೃದ್ಧಿಗೆ ಬೇಕಾದ ಸೂಕ್ತ ಪರಿಹಾರೋಪಾಯಗಳನ್ನೂ ನೀಡುತ್ತಿದ್ದರು. ಇದು ತೋಟಗಾರಿಕೆ ಬೆಳೆಗಾರರ ಸಮಸ್ಯೆ ನಿವಾರಣೆಗೆ ಉತ್ತಮ ವೇದಿಕೆ ಕೂಡ ಆಗಿತ್ತು. ಆದರೆ, ಅನುದಾನ ಕೊರತೆಯಿಂದ ಈ ಎಲ್ಲ ಚಟುವಟಿಕೆಗಳು ಇಂದು ಮಂಕಾಗಿವೆ.

    ಅನುದಾನ ಬಿಡುಗಡೆಯಾಗಿಲ್ಲ: ಹೊಸ ಆರ್ಥಿಕ ವರ್ಷದ ಆರಂಭದೊಂದಿಗೆ ಅನುದಾನ ಕೂಡ ಬಿಡುಗಡೆ ಮಾಡಲಾಗುತ್ತಿತ್ತು. ಆದರೆ, ಈ ಬಾರಿ ಕರೊನಾ ಕಾರಣವೊಡ್ಡಿ ಈವರೆಗೆ ನಯಾ ಪೈಸೆ ಬಿಡುಗಡೆ ಮಾಡಿಲ್ಲ. ರಾಜ್ಯದ 28 ಜಿಲ್ಲೆ ಹಾಗೂ ಬೆಂಗಳೂರು ಲಾಲ್​ಬಾಗ್ ಸೇರಿ ಒಟ್ಟು 29 ವಿಷಯ ತಜ್ಞರಿಗೆ ಆರ್ಥಿಕ ನೆಪವೊಡ್ಡಿ ಕಳೆದೆರಡು ತಿಂಗಳಿನಿಂದ ಸಂಬಳ ನೀಡಿಲ್ಲ. ಸರ್ಕಾರದ ಈ ನಡೆಯಿಂದ ತಮ್ಮ ದೈನಂದಿನ ಕಾರ್ಯಚಟುವಟಿಕೆ ನಡೆಸಲು ಕ್ಲಿನಿಕ್ ತಜ್ಞರು ಕಷ್ಟಪಡುತ್ತಿದ್ದಾರೆ. ಪ್ರಸಕ್ತ ವರ್ಷ ಅತಿವೃಷ್ಟಿಯಾದ ಕಾರಣ ಹಲವು ಬೆಳೆಗಳು ನಾಶವಾಗಿವೆ. ಜತೆಗೆ ವಿವಿಧ ಬೆಳೆಗಳಿಗೆ ಮಳೆಗಾಲದಲ್ಲಿ ಬರುವ ರೋಗಗಳು ಕಾಣಿಸಿಕೊಳ್ಳುತ್ತಿವೆ. ರೈತರಿಗೆ ಆಸರೆಯಾಗಿದ್ದ ಕ್ಲಿನಿಕ್​ಗಳು ಕಾರ್ಯ ನಿರ್ವಹಿಸಲು ಆಗದ ಸ್ಥಿತಿ ತಲುಪಿವೆ. ಇದು ರೈತರನ್ನು ಧೃತಿಗೆಡುವಂತೆ ಮಾಡಿದೆ.

    ರೈತ ಹೋರಾಟದ ಮೂಲಕ ಮುಖ್ಯಮಂತ್ರಿ ಆದವರ ಸರ್ಕಾರ ರೈತರ ಹಿತ ಮರೆತಿದೆ. ವರ್ಷದ ಹಿಂದೆ ತೋಟಗಾರಿಕೆ ಸಮಗ್ರ ಮಾಹಿತಿ ನೀಡುವ ತಜ್ಞರ ನೇಮಕವನ್ನೇ ರದ್ದುಗೊಳಿಸಿ, ರೈತರ ಒತ್ತಾಯದ ನಂತರ ತಮ್ಮ ನಿರ್ಧಾರದಿಂದ ಹಿಂದೆ ಸರಿಯಲಾಗಿತ್ತು. ಇದೀಗ ಹಾರ್ಟಿ ಕ್ಲಿನಿಕ್​ಗೆ ಅನುದಾನ ಬಿಡುಗಡೆ ಮಾಡದೆ ಕ್ಲಿನಿಕ್ ಕಾರ್ಯಚಟುವಟಿಕೆ ನಡೆಸದಂತೆ ಪರೋಕ್ಷವಾಗಿ ಪ್ರಹಾರ ಮಾಡುತ್ತಿರುವುದು ಖಂಡನೀಯ. ತಕ್ಷಣ ಅನುದಾನ ಬಿಡುಗಡೆ ಮಾಡಬೇಕು.

    | ದೀಪಕ ದೊಡ್ಡೂರು

    ಉತ್ತರ ಕನ್ನಡ ಕಾಂಗ್ರೆಸ್ ಜಿಲ್ಲಾ ವಕ್ತಾರ

    ಹಾಲಿ ಪ್ರತಿ ಹಾರ್ಟಿ ಕ್ಲಿನಿಕ್​ಗೆ ಅಂದಾಜು 2 ಲಕ್ಷ ರೂಪಾಯಿ ವಾರ್ಷಿಕ ಅನುದಾನ ನೀಡಲಾಗುತ್ತಿದೆ. ಆದರೆ, ವರ್ಷದಿಂದ ವರ್ಷಕ್ಕೆ ಹಾರ್ಟಿ ಕ್ಲಿನಿಕ್ ನಿರ್ವಹಣೆ ದುಬಾರಿಯಾಗುತ್ತಿದೆ. ಹೀಗಾಗಿ ಅನುದಾನ ಪ್ರಮಾಣ 10 ಲಕ್ಷಕ್ಕೆ ಹೆಚ್ಚಿಸಬೇಕು. ಪ್ರತಿ ವರ್ಷ ಹೊಸ ಆರ್ಥಿಕ ವರ್ಷದ ಆರಂಭದೊಂದಿಗೆ ಅನುದಾನ ಬಿಡುಗಡೆ ಮಾಡಬೇಕು.

    | ಹೆಸರು ಹೇಳಲಿಚ್ಛಿಸದ ಹಾರ್ಟಿ ಕ್ಲಿನಿಕ್ ತಜ್ಞ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts