More

    ಹಳಿಯಾಳ ಎಪಿಎಂಸಿ ಮತ್ತೆ ಕಾಂಗ್ರೆಸ್ ತೆಕ್ಕೆಗೆ, ಬಿಜೆಪಿಯ ಒಂದು ಮತ ಪಡೆದು ಮರು ಆಯ್ಕೆ

    ವಿಜಯವಾಣಿ ಸುದ್ದಿಜಾಲ ಹಳಿಯಾಳ: ತೀವ್ರ ಕುತೂಹಲ ಕೆರಳಿಸಿದ್ದ ಹಳಿಯಾಳ ಎಪಿಎಂಸಿ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಕಾಂಗ್ರೆಸ್ ಕೈ ಮೇಲಾಗಿದೆ. ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಶ್ರೀನಿವಾಸ ಘೊಟ್ನೇಕರ ಅವರು ಬಿಜೆಪಿ ಬೆಂಬಲಿತನೊಬ್ಬನ ಒಂದು ಮತ ಪಡೆದು ಅಲ್ಪ ಮೇಲುಗೈ ಸಾಧಿಸುವ ಮೂಲಕ 3ನೇ ಬಾರಿ (20 ತಿಂಗಳ ಕಾಲಾವಧಿಗೆ) ಪುನರಾಯ್ಕೆಯಾಗಿದ್ದಾರೆ. ಇದೇ ರೀತಿ ಉಪಾಧ್ಯಕ್ಷರಾಗಿ ಸಂತೋಷ ಮಿರಾಶಿ ಆಯ್ಕೆಯಾಗಿದ್ದಾರೆ.

    ಎಪಿಎಂಸಿ ಸಭಾಂಗಣದಲ್ಲಿ ಬುಧವಾರ ಜರುಗಿದ ಚುನಾವಣೆಯಲ್ಲಿ ನಿರ್ದೇಶಕ ಮಂಡಳಿಯ 16 ಸದಸ್ಯರಲ್ಲಿ ನಾಪತ್ತೆಯಾಗಿದ್ದ ರಾಮನಗರದ ಕಾಂಗ್ರೆಸ್ ಬೆಂಬಲಿತ ಸದಸ್ಯ ವಸಂತ ಸಗುಣ ಹರಿಜನ ಗೈರಾಗಿದ್ದರು. ಆದರೆ, ನಾಪತ್ತೆಯಾಗಿದ್ದ ಇನ್ನೊಬ್ಬ ಸದಸ್ಯ ಬಿಜೆಪಿ ಬೆಂಬಲಿತ ಕೃಷ್ಣಮೂರ್ತಿ ಪಾಟೀಲ ಚುನಾವಣೆಯಲ್ಲಿ ಹಾಜರಾದರು.

    ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಶ್ರೀನಿವಾಸ ಘೊಟ್ನೇಕರ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ ಸಂತೋಷ ಮಿರಾಶಿ ತಲಾ 8 ಮತ ಪಡೆದರು. ಬಿಜೆಪಿ ಬೆಂಬಲಿತ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಸೋನಪ್ಪ ಸುಣಕಾರ ಹಾಗೂ ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿ ಗೀತಾ ಮೊರಿ ತಲಾ 7 ಮತ ಪಡೆದರು.

    ಸದಸ್ಯರ ಬಲಾಬಲ: ಎಪಿಎಂಸಿಯಲ್ಲಿ ಕಾಂಗ್ರೆಸ್ ಬೆಂಬಲಿತರ ಸಂಖ್ಯೆ 8 ಹಾಗೂ ಬಿಜೆಪಿ ಬೆಂಬಲಿತರ ಸಂಖ್ಯೆ 5 ಮತ್ತು ನಾಮನಿರ್ದೇಶಿತ ಮೂವರು ಸದಸ್ಯರು ಸೇರಿ ಎರಡೂ ಪಕ್ಷಗಳು ತಲಾ 8 ಸದಸ್ಯರನ್ನು ಹೊಂದಿದ್ದವು. ನಾಪತ್ತೆಯಾಗಿದ್ದ ಬಿಜೆಪಿ ಬೆಂಬಲಿತ ಅಭ್ಯರ್ಥಿ ಬೆಳವಟಗಿಯ ಕೃಷ್ಣಮೂರ್ತಿ ರಾಮಚಂದ್ರ ಪಾಟೀಲ ಚುನಾವಣೆ ವೇಳೆ ಕಾಂಗ್ರೆಸ್ ಪಾಳಯ ಸೇರಿದರು. ಇದರಿಂದ ಕಾಂಗ್ರೆಸ್ ಬೆಂಬಲಿತ ಸದಸ್ಯರ ಸಂಖ್ಯೆ 9ಕ್ಕೇರಿತು.

    ಇನ್ನೊಂದೆಡೆ ಕಾಂಗ್ರೆಸ್ ಬೆಂಬಲಿತ ಸದಸ್ಯ ರಾಮನಗರದ ವಸಂತ ಸಗುಣ ಹರಿಜನ ಕೂಡ ನಾಪತ್ತೆಯಾಗಿದ್ದರು. ಅಲ್ಲದೆ, ಚುನಾವಣೆ ವೇಳೆ ಅವರು ಗೈರಾಗಿದ್ದರು. ತಹಸೀಲ್ದಾರ್ ವಿದ್ಯಾಧರ ಗುಳಗುಳೆ ಚುನಾವಣೆ ಪ್ರಕ್ರಿಯೆ ನಡೆಸಿದರು. ಶಿರಸ್ತೇದಾರ್ ಅನಂತ ಚಿಪ್ಪಲಗಟ್ಟಿ, ಎಪಿಎಂಸಿ ಕಾರ್ಯದರ್ಶಿ ಸುಮಿತ್ರಾ ಹಾವಣ್ಣನವರ ಇದ್ದರು.

    ದಾಂಡೇಲಿ ಡಿವೈಎಸ್ಪಿ ಮೋಹನಪ್ರಸಾದ, ಹಳಿಯಾಳ ಸಿಪಿಐ ಬಿ.ಎಸ್. ಲೋಕಾಪುರ, ಪಿಎಸ್​ಐ ಯಲ್ಲಾಲಿಂಗ ಕೊನ್ನೂರ, ದಾಂಡೇಲಿ ಹಾಗೂ ಜೊಯಿಡಾ ಸಿಪಿಐ ಹಾಗೂ ಪೊಲೀಸ್ ಸಿಬ್ಬಂದಿ ಬಂದೋಬಸ್ತ್ ಮಾಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts