More

    ಹರೀಶ್ ಹಳ್ಳಿ ಸಾವಿನ ಪ್ರಕರಣ ಸಿಬಿಐ ತನಿಖೆಗೆ ವಹಿಸಲು ಆಗ್ರಹ

    ದಾವಣಗೆರೆ: ಚನ್ನಗಿರಿ ತಾಲೂಕಿನ ಕಬ್ಬಳ ಗ್ರಾಮದ ಸಾಮಾಜಿಕ ಕಾರ್ಯಕರ್ತ ಹರೀಶ್‌ಹಳ್ಳಿ ಸಾವಿನ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಹರೀಶ್‌ಹಳ್ಳಿ ಸ್ನೇಹಿತರ ಬಳಗದ ಮುಖಂಡ ಗುರುಪಾದಯ್ಯ ಮಠದ್ ಆಗ್ರಹಿಸಿದರು.
    ಧಾರವಾಡದ ಜಿಪಂ ಮಾಜಿ ಸದಸ್ಯ ಯೋಗೀಶಗೌಡ ಕೊಲೆ ಪ್ರಕರಣವನ್ನು ಸಿಬಿಐಗೆ ವಹಿಸಿದಾಗ ಆರೋಪಿಗಳ ಪತ್ತೆಯಾಯಿತು.ಪೊಲೀಸರೇ ನಡೆಸುವ ಸಿಐಡಿ ತನಿಖೆ ಬಗ್ಗೆ ನಮಗೆ ನಂಬಿಕೆ ಇಲ್ಲ. ಹರೀಶ್‌ಹಳ್ಳಿ ಸಾವಿನ ಹಿಂದಿನ ಸತ್ಯಾಂಶ ಹೊರಬರಲು ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
    ಪೊಲೀಸರ ಸುಪರ್ದಿಯಲ್ಲಿದ್ದಾಗಲೇ ಹರೀಶ್ ಸಾವಿಗೀಡಾಗಿದ್ದರ ಹಿಂದೆ ಷಡ್ಯಂತ್ರ ಅಡಗಿದೆ. ಇದು ಕೊಲೆ ಎಂಬುದಾಗಿ ಕುಟುಂಬದವರೂ ದೂರು ನೀಡಿದ್ದಾರೆ. ದಾಖಲೆ ಸಹಿತ ಸಾಕಷ್ಟು ಅವ್ಯವಹಾರ ಬಯಲಿಗೆಳೆದಿರುವ ಹರೀಶ್ ಧೈರ್ಯಶಾಲಿ. ವಂಚನೆ ಪ್ರಕರಣದಲ್ಲಿ ಮೇಲ್ಸೇತುವೆಯಿಂದ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಹೇಡಿಯಲ್ಲ ಎಂದು ಸಮರ್ಥಿಸಿಕೊಂಡರು.
    ಹರೀಶ್‌ಹಳ್ಳಿ ವಿರುದ್ಧ ದಾಖಲಾಗಿದ್ದ ವಂಚನೆ ಪ್ರಕರಣ ಸಿವಿಲ್ ವಿಷಯವಾಗಿತ್ತು. ಇಂತಹ ಪ್ರಕರಣಗಳನ್ನು ಪೊಲೀಸರು ತಲೆಕೆಡಿಸಿಕೊಳ್ಳಬಾರದು ಎಂದು ಕೋರ್ಟ್ ಆದೇಶಿಸಿದೆ. ಆದಾಗ್ಯೂ ಈ ಪ್ರಕರಣದಲ್ಲಿ ಒಂದು ಕರೆ ಮಾಡಿದ್ದರೂ ಹರೀಶ್‌ಹಳ್ಳಿ ಠಾಣೆಗೆ ಬರುತ್ತಿದ್ದ. ಹಗಲಲ್ಲಿಯೂ ಬಂಧಿಸಬಹುದಿತ್ತು. ಮಧ್ಯರಾತ್ರಿ ಆತನನ್ನು ಕರೆತರುವ ಅಗತ್ಯವೇನಿತ್ತು? ಎಂದು ಪ್ರಶ್ನಿಸಿದರು.
    ಘಟನಾ ಸ್ಥಳಕ್ಕೆ ನಾವು ಹೋಗಿ ನೋಡಿದ್ದು, ಯಾವುದೇ ವ್ಯಕ್ತಿ ಮೇಲ್ಸೇತುವೆಯಿಂದ ಬಿದ್ದರೆ ಸ್ಲಲ್ಪ ದೂರದಲ್ಲಿ ಬೀಳಬೇಕಿತ್ತು. ಆದರೆ ಸೇತುವೆ ಪಕ್ಕವೇ ಶವ ಬಿದ್ದಿದೆ. ಇದು ಯಾರೋ ಎತ್ತಿಹಾಕಿದ ಥರಹದ್ದಾಗಿದೆ ಎಂದು ಶಂಕಿಸಿದರು. ಅಲ್ಲದೆ ಸಾಮಾನ್ಯರು ಕೊಲೆ ಪ್ರಕರಣದಲ್ಲಿ ಸಿಕ್ಕಿ ಹಾಕಿಕೊಂಡಿದ್ದರೆ ಬಂಧಿಸಲಾಗಿರುತ್ತಿತ್ತು. ಆದರೆ ಈ ಗಂಭೀರ ಪ್ರಕರಣದ ಆರೋಪಿ ಸ್ಥಾನದಲ್ಲಿರುವ ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ, ಇದುವರೆಗೆ ಬಂಧಿಸಲಾಗಿಲ್ಲ ಎಂದು ಹೇಳಿದರು.
    ಸಾಮಾಜಿಕ ಕಾರ್ಯಕರ್ತ ಎಂ.ಜಿ.ಶ್ರೀಕಾಂತ್ ಮಾತನಾಡಿ ಅನಾಥ ಶವಗಳ ಮಾರಾಟ ಮಾಫಿಯಾ ಅಲ್ಲದೆ ಕೆಲವು ಶೈಕ್ಷಣಿಕ ಸಂಸ್ಥೆಗಳು, ಅಧಿಕಾರಸ್ಥರ ಅಕ್ರಮಗಳನ್ನು ಬಯಲಿಗೆಳೆವ ಕೆಲಸ ಮಾಡಿದ್ದ ಹರೀಶ್‌ಹಳ್ಳಿ, ಅನೇಕ ಮೊಕದ್ದಮೆಗಳನ್ನು ಎದುರಿಸಿದ್ದರು. ಅನಾಥ ಶವಗಳ ಮಾರಾಟ ದಂಧೆ ಕುರಿತಂತೆ ನಾಲ್ಕು ವರ್ಷದ ಹಿಂದೆ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದರೂ ಕ್ರಮವಾಗಿಲ್ಲ. ಈ ಪ್ರಕರಣಗಳನ್ನು ನ್ಯಾಯಾಂಗ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿದರು.
    ಪರಿಸರಪ್ರೇಮಿ ದೇವರಮನಿ ಗಿರೀಶ್ ಮಾತನಾಡಿ ಪೊಲೀಸರ ವಶದಲ್ಲಿದ್ದಾಗಲೇ ಹೋರಾಟಗಾರನ ಸಾವು ಆಗಿದೆ ಎಂದರೆ ಹೋರಾಟ ಮಾಡುವವರು ಕೂಡ ಮುಂದಿನ ದಿನಗಳಲ್ಲಿ ಹಿಂದೆ ಸರಿಯಬಹುದು. ಕೂಡಲೆ ಸಾವಿನ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಆಗ್ರಹಿಸಿ ಸಿಎಂ ಹಾಗೂ ರಾಷ್ಟ್ರಪತಿಗೆ ಪತ್ರ ಬರೆಯಲಾಗುವುದು. ಗೃಹ ಸಚಿವ ಪರಮೇಶ್ವರ್, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಕೂಡ ಈ ಬಗ್ಗೆ ಗಮನ ಹರಿಸಬೇಕು ಎಂದು ಆಗ್ರಹಿಸಿದರು.
    ಸುದ್ದಿಗೋಷ್ಠಿಯಲ್ಲಿ ಕೆ.ಟಿ.ಗೋಪಾಲಗೌಡ, ಬಲ್ಲೂರು ರವಿಕುಮಾರ್, ನಾಗರಾಜ ಸುರ್ವೆ, ಮಲ್ಲಿಕಾರ್ಜುನ ಇಂಗಳೇಶ್ವರ, ವೀರಾಚಾರ್, ಚೇತನ್ ಇದ್ದರು.
    ——

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts