More

    ಹನುಮಂತನ ಹೆಸರು ಇಟ್ಟುಕೊಂಡರೆ ಆಂಜನೇಯ ಆಗಲ್ಲ

    ಹನುಮಂತನ ಹೆಸರು ಇಟ್ಟುಕೊಂಡವರೆಲ್ಲ ಆಂಜನೇಯ ಆಗಲು ಸಾಧ್ಯವಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿರುಗೇಟು ನೀಡಿದರು.

    ನಗರದ ಚಾಮುಂಡಿಬೆಟ್ಟಕ್ಕೆ ಗುರುವಾರ ಭೇಟಿ ನೀಡಿ ದೇವರ ದರ್ಶನದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಬಜರಂಗ ದಳಕ್ಕೂ, ಆಂಜನೇಯನಿಗೂ ವ್ಯತ್ಯಾಸ ಇಲ್ವೇ? ಬಜರಂಗದಳ ಒಂದು ರಾಜಕೀಯ ಪಕ್ಷದ ವಿಭಾಗ. ಬಜರಂಗದಳದವರು ನೈತಿಕ ಪೊಲೀಸ್‌ಗಿರಿ ಮಾಡುತ್ತಿದ್ದಾರೆ. ಹನುಮಂತನ ಹೆಸರು ಇಟ್ಟುಕೊಂಡವರೆಲ್ಲ ಆಂಜನೇಯ ಆಗಲ್ಲ ಎಂದು ಕುಟುಕಿದರು.

    ಕಾಂಗ್ರೆಸ್ ಪ್ರಣಾಳಿಕೆ ನೋಡಿ ಬಿಜೆಪಿಯವರು ಗಾಬರಿ ಆಗಿದ್ದು, ದೇವರ ಹೆಸರನ್ನು ರಾಜಕೀಯವಾಗಿ ಬಳಸಿಕೊಳ್ಳಲು ಯತ್ನಿಸುತ್ತಿದ್ದಾರೆ. ಬಿಜೆಪಿಯವರು ಒಂದಾದರೂ ಆಂಜನೇಯ ದೇಗುಲ ಕಟ್ಟಿದ್ದಾರೆಯೇ ಎಂದು ಪ್ರಶ್ನಿಸಿದರು.

    ರಾಜ್ಯದಲ್ಲಿ ಆಂಜನೇಯ ಹುಟ್ಟಿದ್ದಕ್ಕೆ ಸಾಕ್ಷಿ ಇದೆ. ನಾವು ಅಧಿಕಾರಕ್ಕೆ ಬಂದರೆ ಆಂಜನೇಯ ದೇಗುಲ ಅಭಿವೃದ್ಧಿಗೆ ಒತ್ತು ನೀಡಲಾಗುವುದು. ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗೆ ವಿಶೇಷ ಮಂಡಳಿ ಮಾಡಲಾಗುವುದು. ಯುವಕರಲ್ಲಿ ಆಂಜನೇಯ ಸಿದ್ಧಾಂತ ಬೆಳೆಸಲು ಪ್ರತ್ಯೇಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.

    ಕೆ.ಎಸ್. ಈಶ್ವರಪ್ಪ ಕಾಂಗ್ರೆಸ್ ಪ್ರಣಾಳಿಕೆ ಪ್ರತಿಯನ್ನು ಸುಟ್ಟ ವಿಚಾರ ಕುರಿತು ಪ್ರತಿಕ್ರಿಯಿಸಿದ ಶಿವಕುಮಾರ್, ಬಿಜೆಪಿಯವರು ಕೆ.ಎಸ್.ಈಶ್ವರಪ್ಪರನ್ನೇ ಸುಟ್ಟಿ ಹಾಕಿದ್ದಾರೆ. ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಈಶ್ವರಪ್ಪರನ್ನೇ ಸುಟ್ಟಿ ಹಾಕಿದರು. ಇದರೊಂದಿಗೆ ಆ ಕಾರ್ಯಕರ್ತನ ಆತ್ಮಕ್ಕೆ ಶಾಂತಿ ಸಿಕ್ಕಿತು ಎಂದು ವ್ಯಂಗ್ಯವಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts