More

    ಹತ್ತಿರದಲ್ಲೇ ಇದೆ ಡಾಣಕಶಿರೂರ, ಹೆದರುತ್ತಿದೆ ಹೊಳೆಆಲೂರ

    ಹೊಳೆಆಲೂರ: ರೋಣ ಪಟ್ಟಣದ ಕೃಷ್ಣಾಪುರದಲ್ಲಿ ಗರ್ಭಿಣಿಗೆ ಕರೊನಾ ಸೋಂಕು ದೃಢಪಟ್ಟಿರುವ ಪ್ರಕರಣದ ಮೂಲ ಬದಾಮಿ ತಾಲೂಕಿನ ಡಾಣಕಶಿರೂರ ಗ್ರಾಮ. ಈ ಗ್ರಾಮದಿಂದಲೇ ಗರ್ಭಿಣಿಯು ತನ್ನ ತವರ ಮನೆ ಇರುವ ಕೃಷ್ಣಾಪುರಕ್ಕೆ ಬಂದಿದ್ದು. ಈಗ ಬುಧವಾರ ಒಂದೇ ದಿನ ಡಾಣಕಶಿರೂರ ಗ್ರಾಮದಲ್ಲಿ 12 ಪ್ರಕರಣ ಪಾಸಿಟಿವ್ ಬಂದಿರುವುದು ಹೊಳೆಆಲೂರ ಹೋಬಳಿಯ ಹಲವು ಗ್ರಾಮಗಳಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ.

    ಡಾಣಕಶಿರೂರ ಗ್ರಾಮವು ಅಧಿಕೃತವಾಗಿ ಬಾದಾಮಿ ತಾಲೂಕಿನಲ್ಲಿದ್ದರೂ, ಹೊಳೆಆಲೂರ ಹೋಬಳಿಯ ಬಿ.ಎಸ್. ಬೇಲೇರಿ, ಬಸರಕೋಡ, ಹೊಳೆಹಡಗಲಿ, ಅಮರಗೋಳ, ಕುರವಿನಕೊಪ್ಪ, ಮಾಡಲಗೇರಿ, ನೈನಾಪೂರ ಗ್ರಾಮಗಳು ಕೇವಲ 1 ರಿಂದ 5 ಕಿ.ಮೀ. ಅಂತರದಲ್ಲಿವೆ. ಹಾಲು, ಮೊಸರು ಮಾತ್ರವಲ್ಲ, ರೈತರು ತಮ್ಮ ಹೊಲದಲ್ಲಿ ಬೆಳೆದ ತರಕಾರಿ ಇತ್ಯಾದಿ ಮಾರಾಟ ಮಾಡಲು ಕೇವಲ 10 ಕಿ.ಮೀ. ದೂರದಲ್ಲಿರುವ ಹೊಳೆಆಲೂರಿಗೆ ಬರುವುದು ಮಾಮೂಲು. ಅಲ್ಲದೆ, ಆಯಾ ಗ್ರಾಮದ ರೈತ ಕಾರ್ವಿುಕರು, ಸಾರ್ವಜನಿಕರು ದುಡಿಯಲು ಹಾಗೂ ತಮ್ಮ ಅಗತ್ಯ ವಸ್ತುಗಳ ಖರೀದಿಗೆ, ಹುಟ್ಟುವಳಿ ಮಾರಾಟಕ್ಕೆ, ನಿತ್ಯ ವಹಿವಾಟಿಗೆ ಅಲ್ಲಿನ ಜನರು ಹೊಳೆಆಲೂರಿಗೆ ಆಗಮಿಸುವುದು ಮಾಮೂಲಾಗಿದೆ. ಎರಡು ದಿನಗಳ ಹಿಂದೆ ಆರಂಭವಾಗಿರುವ ಮದ್ಯ ಖರೀದಿಸಲು ನೂರಾರು ಜನರು ಹೊಳೆಆಲೂರಿಗೆ ಬಂದು ಹೋಟೆಲ್​ಗಳಲ್ಲಿ ತಿಂಡಿ ತಿಂದು ಹೋಗಿದ್ದಾರೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.

    ಸಾರ್ವಜನಿಕರಲ್ಲಿ ಭಯದ ವಾತಾವರಣ ಮೂಡುತ್ತಲೇ ರೋಣ ತಹಸೀಲ್ದಾರ್ ಜಿ.ಬಿ. ಜಕ್ಕನಗೌಡ್ರ, ಸಿಪಿಐ ಸುನೀಲ ಸವದಿ, ಗಡಿ ಗ್ರಾಮಗಳಿಗೆ ಬುಧವಾರ ಮಧ್ಯಾಹ್ನ ಭೇಟಿ ನೀಡಿ, ಡಾಣಕಶಿರೂರ ಗ್ರಾಮಕ್ಕೆ ಸಂಪರ್ಕ ಇರುವ ಗ್ರಾಮಗಳಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತೆ ಕ್ರಮಗಳ ಕುರಿತು ಆಯಾ ಗ್ರಾಪಂ ಪಿಡಿಒ ಹಾಗೂ ಆರೋಗ್ಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

    ಡಾಣಕಶಿರೂರ ಗ್ರಾಮದಿಂದ ಅನೇಕರು ಎರಡು ದಿನಗಳ ಹಿಂದೆ ಬಿ.ಎಸ್. ಬೇಲೇರಿ ಹಾಗೂ ಮಾಡಲಗೇರಿ ಗ್ರಾಮಕ್ಕೆ ಬಂದು ಹೋಗಿದ್ದಾರೆ ಎಂಬ ಮಾಹಿತಿ ಇದೆ. ಇಂತಹ ಮನೆಗಳನ್ನು ಪತ್ತೆ ಹಚ್ಚಲು ಮತ್ತು ಆಯಾ ಮನೆಗಳ ಸದಸ್ಯರ ಆರೋಗ್ಯ ತಪಾಸಣೆಗೆ ಆರೋಗ್ಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts