More

    ಸ್ಮಶಾನಕ್ಕಾಗಿ ಕೋಳಿವಾಡ ಗ್ರಾಮಸ್ಥರ ಪ್ರತಿಭಟನೆ

    ಹುಬ್ಬಳ್ಳಿ: ತಾಲೂಕಿನ ಕೋಳಿವಾಡ ಗ್ರಾಮದಲ್ಲಿ ಯಾರಾದರೂ ಸಾವನ್ನಪ್ಪಿದರೆ ಅಂತ್ಯಕ್ರಿಯೆ ಮಾಡಲು ಸ್ಮಶಾನವಿಲ್ಲದೆ ಹಳ್ಳದಲ್ಲಿ ಹೂಳಲಾಗುತ್ತಿದೆ. ಮಳೆ ಬಂದ ಕಾರಣ ಸದ್ಯ ಅಂತ್ಯಕ್ರಿಯೆಗೆ ಜಾಗವೇ ಇಲ್ಲದಂತಾಗಿದೆ. ಹಾಗಾಗಿ, ಶಾಶ್ವತವಾಗಿ ಸ್ಮಶಾನಕ್ಕೆ ಜಾಗ ಕೊಡುವಂತೆ ಆಗ್ರಹಿಸಿ ಗ್ರಾಮಸ್ಥರು ಸೋಮವಾರ ಗ್ರಾಮ ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

    ತಂದೆ ಸಾವನ್ನಪ್ಪಿದ್ದರಿಂದ ಮಾನಸಿಕವಾಗಿ ನೊಂದಿದ್ದ ಗ್ರಾಮದ ಯುವಕ ಈರಪ್ಪ ತಿರಕಪ್ಪ ಜಂತ್ಲಿ (34) ಎಂಬಾತ ಸೋಮವಾರ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದ. ಶವ ಪರೀಕ್ಷೆಗೆಂದು ಕಿಮ್ಸ್​ಗೆ ರವಾನಿಸಲಾಗಿತ್ತು. ಆದರೆ, ಅಂತ್ಯಕ್ರಿಯೆ ಮಾಡಲು ಗ್ರಾಮದಲ್ಲಿ ಜಾಗವೇ ಇರಲಿಲ್ಲ…!

    ಗ್ರಾಮದ ಹಳ್ಳದ ಪಕ್ಕದಲ್ಲಿ ಇರುವ 20 ಗುಂಟೆ ಖರಾಬು ಜಾಗದಲ್ಲಿ ಶವ ಹೂಳಲಾಗುತ್ತಿತ್ತು. ಮಳೆ ಬಂದ ಕಾರಣ ಆ ಜಾಗದಲ್ಲಿ ಪ್ರವಾಹ ಉಂಟಾಗಿದೆ. ಹೀಗಾಗಿ, ಶವ ಹೂಳುವುದು ಎಲ್ಲಿ ಎಂಬ ಪ್ರಶ್ನೆ ಉದ್ಭವಿಸಿದೆ. ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಗ್ರಾಪಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು. ಕೂಡಲೇ ಗ್ರಾಮದಲ್ಲಿ ಸ್ಮಶಾನದ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು.

    ಎರಡು ವರ್ಷಗಳಿಂದ ಸ್ಮಶಾನ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಲಾಗುತ್ತಿದೆ. ಈ ಕುರಿತು ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಅವರು ಸರ್ಕಾರದ ಗಮನಕ್ಕೆ ತಂದಿದ್ದಾರೆ. ಶೀಘ್ರದಲ್ಲೇ ಶಾಶ್ವತ ಪರಿಹಾರ ಸಿಗಲಿದೆ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಭರವಸೆ ನೀಡಿದ ಬಳಿಕ ಪ್ರತಿಭಟನೆ ಕೈಬಿಟ್ಟು ಮೃತನ ಜಮೀನಿನಲ್ಲಿ ಅಂತ್ಯಕ್ರಿಯೆ ನೆರವೇರಿಸಿದರು.

    ಸ್ಮಶಾನಕ್ಕಾಗಿ 2.36 ಎಕರೆ ಜಮೀನು ಗುರುತಿಸಲಾಗಿದ್ದು, ಜಮೀನು ಮಾಲೀಕರು ಮಾರಾಟಕ್ಕೆ ಒಪ್ಪಿದ್ದಾರೆ. ಈ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಎರಡು ತಿಂಗಳಲ್ಲಿ ಸಮಸ್ಯೆ ಬಗೆಹರಿಯಲಿದೆ.
    | ಫಕ್ಕೀರಪ್ಪ ತೋಟದ, ಪಿಡಿಒ, ಕೋಳಿವಾಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts