More

    ಸ್ಥಳೀಯ ಭಾಷೆಗೂ ಹೆಚ್ಚಿನ ಅವಕಾಶ ಸೃಷ್ಟಿ: ಟಿ.ಜಿ.ಶ್ರೀನಿಧಿ

    ಮೈಸೂರು: ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಸಂಶೋಧನೆಗಳಿಂದ ಭವಿಷ್ಯದಲ್ಲಿ ಸ್ಥಳೀಯ ಭಾಷೆಗಳಿಗೂ ಹೆಚ್ಚಿನ ಅವಕಾಶ ಸೃಷ್ಟಿಯಾಗಲಿವೆ ಎಂದು ಡಿಜಿಟಲ್ ಸಂವಹನ ತಜ್ಞ ಟಿ.ಜಿ.ಶ್ರೀನಿಧಿ ಹೇಳಿದರು.

    ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ವತಿಯಿಂದ ಮುಕ್ತಗಂಗೋತ್ರಿಯ ಘಟಿಕೋತ್ಸವ ಭವನದಲ್ಲಿ ಶನಿವಾರ ಆಯೋಜಿಸಿದ್ದ ಅಖಿಲ ಕರ್ನಾಟಕ 14ನೇ ವಿಜ್ಞಾನ ಸಮ್ಮೇಳನದಲ್ಲಿ ‘ನಿತ್ಯ ಬದುಕಿನಲ್ಲಿ ಮಾಹಿತಿ ತಂತ್ರಜ್ಞಾನ’ ಕುರಿತ ಗೋಷ್ಠಿಯಲ್ಲಿ ವಿಷಯ ಮಂಡಿಸಿದರು.

    ಐಟಿ ಕ್ಷೇತ್ರದಲ್ಲಿ ಇಂಗ್ಲಿಷ್ ಭಾಷೆ ಹೆಚ್ಚಿನ ಆದ್ಯತೆ ದೊರೆಯುತ್ತಿದೆ ಎಂಬುದು ನಿಜ. ಆದರೀಗ ಸ್ಥಳೀಯ ಭಾಷೆಗಳಿಗೂ ಒತ್ತು ನೀಡಲಾಗುತ್ತಿದೆ. ಪ್ರತಿಯೊಂದು ವಸ್ತು, ತಂತ್ರಜ್ಞಾನವೂ ಸ್ಥಳೀಯ ಭಾಷೆಯಲ್ಲಿ ಸಂವಹನಗೊಳ್ಳುತ್ತಿದೆ. ಆದ್ದರಿಂದ ಉದ್ಯೋಗಾವಕಾಶಗಳೂ ಅಧಿಕವಾಗಲಿವೆ. ಇದನ್ನು ಸದ್ಬಳಕೆ ಮಾಡಿಕೊಳ್ಳಲು ಮುಂದಾಗಬೇಕು ಎಂದರು.

    ತೆರೆದುಕೊಂಡ ಹೊಸ ಅವಕಾಶ:
    ಐಟಿ ಕ್ಷೇತ್ರ ಭಾರತದಲ್ಲಿ ಕ್ಷಿಪ್ರಗತಿಯಲ್ಲಿ ಪರಿವರ್ತನೆಯಾಗುತ್ತಿದೆ. ಇದಕ್ಕೆ ಏಕೀಕೃತ ಪಾವತಿ ವ್ಯವಸ್ಥೆ(ಯುಪಿಐ) ಉತ್ತಮ ನಿದರ್ಶನ. ಜಗತ್ತಿನಲ್ಲಿ ಯಾವುದೇ ದೇಶದಲ್ಲೂ ಇದು ದೊಡ್ಡ ಬದಲಾವಣೆಗೆ ಕಾರಣವಾಗಿಲ್ಲ. ಆದರೆ, ಭಾರತದಲ್ಲಿ ಇದು ಎಲ್ಲರಿಗೂ ಕೈಗೆಟುಗುವಂತೆ ಮಾಡಲಾಗಿದೆ. ಮೊಬೈಲ್ ಮೂಲಕ ಕ್ಷಣಾರ್ಧದಲ್ಲೇ ಹಣ ಪಾವತಿಗೆ ವೇದಿಕೆ ಕಲ್ಪಿಸಿಕೊಟ್ಟಿದೆ. ಅಲ್ಲದೆ, 2025ರ ಹೊತ್ತಿಗೆ ಇನ್ನಷ್ಟು ಹೊಸ ಆವಿಷ್ಕಾರಗಳು ಪರಿಚಯವಾಗಲಿವೆ. ಇದು ಕಂಪ್ಯೂಟರ್ ಇಂಜಿನಿಯರ್‌ಗಳಿಗೆ ಅಷ್ಟೇ ಅಲ್ಲ, ಬೇರೆ ಬೇರೆ ಕ್ಷೇತ್ರದಲ್ಲೂ ಹೊಸ ಅವಕಾಶಗಳ ಬಾಗಿಲು ತೆರೆದುಕೊಳ್ಳಲಿದೆ ಎಂದು ಶ್ರೀನಿಧಿ ಹೇಳಿದರು.

    ನಿಜಕ್ಕೂ ಬದಲಾವಣೆ ಒಳ್ಳೆಯದು. ಇದು ಹೊಸ ಅವಕಾಶಗಳನ್ನು ನೀಡಲಿದೆ. ನಾವುಗಳು ಕಲಿಯುವುದನ್ನು ನಿಲ್ಲಿಸದಿದ್ದರೆ ಸಾಕು. ಹೊಸತನವನ್ನು ಕಲಿತು ಅಳವಡಿಸಿಕೊಳ್ಳಲು ಮುಂದಾದರೆ ಅದುವೇ ನಮ್ಮನ್ನು ಮುಂದಕ್ಕೆ ಕರೆದುಕೊಂಡು ಹೋಗುತ್ತದೆ. ಇಲ್ಲವಾದರೆ, ಇರುವಲ್ಲೇ ಇರಬೇಕಾಗುತ್ತದೆ. ಕಲಿಕೆ ನಿತ್ಯ ನೂತನವಾಗಿದ್ದರೆ ಯಾವುದೂ ಕಷ್ಟಕರವಾಗಲ್ಲ ಎಂದು ಶ್ರೀನಿಧಿ ಹೇಳಿದರು.

    ಅಂತರ್ಜಾಲದ ಮೂಲಕ ಮಾಹಿತಿ ಮಹಾಪ್ರವಾಹವೇ ಹರಿದು ಬರುತ್ತಿದೆ. ಇದರಲ್ಲಿ ಅಗತ್ಯ ಮಾಹಿತಿಯನ್ನಷ್ಟೇ ಪಡೆದುಕೊಳ್ಳಬೇಕು. ಸುಳ್ಳು ಮಾಹಿತಿ ಹೆಚ್ಚು ಇರುತ್ತವೆ. ಈ ಕುರಿತು ಎಚ್ಚರಿಕೆ ವಹಿಸಬೇಕು ಎಂದರು. ಪರಿಷತ್‌ನ ಜಿಲ್ಲಾಧ್ಯಕ್ಷ ಡಾ.ಆರ್.ಶೇಖರ್‌ನಾಯಕ್ ಇದ್ದರು.
    ‘ಕೃತಕ ಬುದ್ಧಿಮತ್ತೆಯಿಂದ ಮಾನವ ಸಮುದಾಯದ ಪ್ರಗತಿ’ ಕುರಿತು ಡಿಜಿಟಲ್ ವಿಷಯ ತಜ್ಞ ಶಶಿಧರ್ ಡೋಂಗ್ರೆ ವಿಷಯ ಮಂಡಿಸಿದರು. ಹಿರಿಯ ವಿಜ್ಞಾನಿ ಡಾ.ಟಿ.ತಿಪ್ಪೇಸ್ವಾಮಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts