More

    ಸ್ತಬ್ಧವಾಗಿದ್ದ ನಗರದಲ್ಲಿ ಜನ ಸಂಚಾರ

    ಧಾರವಾಡ: ಕರೊನಾ ಪ್ರಕರಣಗಳನ್ನು ಆಧರಿಸಿ ರಾಜ್ಯ ಸರ್ಕಾರ ಧಾರವಾಡ ಜಿಲ್ಲೆಯನ್ನು ಕಿತ್ತಳೆ ವಲಯ ಎಂದು ಗುರುತಿಸಿದೆ. ಹುಬ್ಬಳ್ಳಿ ನಗರ ಹೊರತುಪಡಿಸಿ ಇತರ ತಾಲೂಕುಗಳಲ್ಲಿ ಅಗತ್ಯ ಸೇವೆಗಳ ಅಂಗಡಿಗಳನ್ನು ತೆರೆಯಲು ಜಿಲ್ಲಾಡಳಿತ ಅವಕಾಶ ನೀಡಿತ್ತು. ಈ ಹಿನ್ನೆಲೆಯಲ್ಲಿ ಸ್ತಬ್ಧವಾಗಿದ್ದ ನಗರದಲ್ಲಿ ಗುರುವಾರ ಜನ ಹಾಗೂ ವಾಹನಗಳ ಸಂಚಾರ ಕಂಡುಬಂತು.

    ಕಿತ್ತಳೆ ವಲಯಗಳಲ್ಲಿ ಆಯಾ ಜಿಲ್ಲಾ ಉಸ್ತುವಾರಿ ಸಚಿವರು ಸೂಕ್ತ ನಿರ್ಣಯ ಕೈಗೊಳ್ಳಲು ಮುಖ್ಯಮಂತ್ರಿ ಯಡಿಯೂರಪ್ಪ ಸೂಚಿಸಿದ್ದರು. ಅದರಂತೆ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಲಾಕ್​ಡೌನ್ ನಿಯಮಾವಳಿ ಸಡಿಲಿಸಿ ಬುಧವಾರ ಆದೇಶಿಸಿದ್ದರು. ಸೋಮವಾರದಿಂದ ಗುರುವಾರದವರೆಗೆ ಬೆಳಗ್ಗೆ 10ರಿಂದ ಸಂಜೆ 6ರವರೆಗೆ ಅಂಗಡಿ ಮತ್ತು ಮುಂಗಟ್ಟುಗಳ ಕಾಯ್ದೆ (ಶಾಪ್ಸ್ ಮತ್ತು ಎಸ್ಟಾಬ್ಲಿಷ್​ವೆುಂಟ್ ಆಕ್ಟ್) ಪ್ರಕಾರ ನೋಂದಣಿಯಾಗಿರುವ ಕೃಷಿ ಮತ್ತು ಕೈಗಾರಿಕೆ ಪೂರಕವಾಗಿರುವ ವ್ಯಾಪಾರ ವಹಿವಾಟುಗಳನ್ನು ಕೈಗೊಳ್ಳಲು ಅವಕಾಶ ಕಲ್ಪಿಸಲಾಗಿತ್ತು.

    ಜಿಲ್ಲಾಡಳಿತ ಸುರಕ್ಷತಾ ಕ್ರಮಗಳೊಂದಿಗೆ ವ್ಯಾಪಾರ, ವಹಿವಾಟು ನಡೆಸಲು ಆದೇಶಿಸಿದ್ದರಿಂದ 5 ವಾರಗಳ ನಂತರ ನಗರದ ಅಂಗಡಿಗಳು ತೆರೆದವು. ಸ್ಟೇಷನರಿ ಮತ್ತು ಬುಕ್​ಸ್ಟಾಲ್, ಇಲೆಕ್ಟ್ರಿಕಲ್ ರಿಪೇರಿ, ಪ್ಲಬಿಂಗ್, ಪೇಂಟ್, ನಿರ್ಮಾಣ ಕಾಮಗಾರಿಗೆ ಸಂಬಂಧಿಸಿದ ಅಂಗಡಿಗಳು, ಮರಳು, ಇಟ್ಟಿಗೆ, ಸಿಮೆಂಟ್, ಕಬ್ಬಿಣ, ಇತರ ನಿರ್ಮಾಣ ಕಾಮಗಾರಿಗಳ ವಹಿವಾಟು ನಡೆಯಿತು. ರಿಪೇರಿ ಮತ್ತು ಸರ್ವಿಸ್ ಸೆಂಟರ್​ಗಳು, ಟೈಲ್ಸ್ ಅಂಗಡಿಗಳು, ಜೆರಾಕ್ಸ್ ಮತ್ತು ಪ್ರಿಂಟಿಂಗ್, ಅಪ್ಟಿಕಲ್ಸ್, ಅಕ್ಕಿ, ಹಿಟ್ಟು, ಅಡುಗೆ ಎಣ್ಣೆ ಮಿಲ್​ಗಳು ಟೈರ್ ಮತ್ತು ಟ್ಯೂಬ್ ಅಂಗಡಿಗಳು, ಪಂಕ್ಚರ್ ಅಂಗಡಿಗಳು, ಮೊಬೈಲ್​ಫೋನ್ ರಿಪೇರಿ, ಗ್ಯಾಸ್ ಮತ್ತು ಸ್ಟೌ ರಿಪೇರಿ ಅಂಗಡಿಗಳು ಕಾರ್ಯನಿರ್ವಹಿಸಿದವು.

    ಮುಗಿಬಿದ್ದ ಜನತೆ

    ಲಾಕ್​ಡೌನ್ ಜಾರಿಯಾದಾಗಿನಿಂದ ಮನೆಯಲ್ಲಿದ್ದ ಜನತೆ, ಗುರುವಾರ ಕೊಂಚ ನಿರಾಳರಾಗಿ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದರು. ಇನ್ನು 5 ವಾರಗಳಿಂದ ನಗರಕ್ಕೆ ಬಾರದ ಗ್ರಾಮೀಣ ಪ್ರದೇಶದ ಜನರು, ಕೃಷಿ ಉಪಕರಣ, ಬೀಜ, ರಸಗೊಬ್ಬರ ಅಂಗಡಿಗಳಿಗೆ ಮುಗಿಬಿದ್ದು ಅಗತ್ಯ ವಸ್ತುಗಳನ್ನು ಖರೀದಿಸಿದರು. ಮುಂಗಾರು ಹಂಗಾಮಿನ ಬಿತ್ತನೆಗೆ ಕೃಷಿ ಚಟುವಟಿಕೆ ಆರಂಭಗೊಂಡಿದ್ದು, ಅಗತ್ಯ ವಸ್ತುಗಳ ಖರೀದಿ ಮಾಡಿದರು. ನಿರ್ಮಾಣ ಕಾಮಗಾರಿಗೆ ಅಗತ್ಯ ಮರಳು, ಸಿಮೆಂಟ್, ಪೇಂಟ್ಸ್, ಟೈಲ್ಸ್ ಸಿಗದೆ ಸಂಕಷ್ಟಕ್ಕೆ ಸಿಲುಕಿದ್ದವರು ನಿಟ್ಟುಸಿರು ಬಿಟ್ಟು ಸಾಮಗ್ರಿಗಳ ಖರೀದಿಯಲ್ಲಿ ನಿರತರಾಗಿದ್ದರು.

    ನಿರ್ಬಂಧ ಮುಂದುವರಿಕೆ

    ಕರೊನಾ ನಿಯಂತ್ರಣಕ್ಕಾಗಿ ಕೇಂದ್ರ ಗೃಹ ಮಂತ್ರಾಲಯ ಘೊಷಿಸಿರುವ ಲಾಕ್​ಡೌನ್ ಮೇ 3ರವರೆಗೆ ಯಥಾಸ್ಥಿತಿ ಮುಂದುವರಿಯಲಿದೆ. ಶಿಕ್ಷಣ ತರಬೇತಿ, ಕೋಚಿಂಗ್ ಕ್ಲಾಸ್​ಗಳು, ಆಟೋರಿಕ್ಷಾ, ಸೈಕಲ್ ರಿಕ್ಷಾ ಸೇರಿ ಟ್ಯಾಕ್ಸಿ, ಕ್ಯಾಬ್ ಸೇವೆ ಇರಲಿಲ್ಲ. ಸಿನಿಮಾ ಟಾಕೀಸ್, ಮಾಲ್, ಶಾಪಿಂಗ್ ಕಾಂಪ್ಲೆಕ್ಸ್, ಜಿಮ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್, ಈಜುಗೊಳ, ಮನರಂಜನಾ ಪಾರ್ಕ್, ಬಾರ್​ಗಳು, ಸಭಾಂಗಣಗಳಲ್ಲಿ ಚಟುವಟಿಕೆಗಳ ಮೇಲೆ ನಿರ್ಬಂಧ ಮುಂದುವರಿದಿತ್ತು. ಸಾಮಾಜಿಕ, ರಾಜಕೀಯ, ಕ್ರೀಡಾ, ಮನರಂಜನೆ, ಶೈಕ್ಷಣಿಕ, ಸಾಂಸ್ಕೃತಿಕ, ಧಾರ್ವಿುಕ ಕಾರ್ಯಕ್ರಮಗಳು ನಡೆಯಲಿಲ್ಲ. ಮಾರ್ಕೆಟ್ ಕಾಂಪ್ಲೆಕ್ಸ್​ಗಳು ಮುಚ್ಚಿದ್ದವು.

    ಸಂಚಾರ ವ್ಯವಸ್ಥೆ ಬಂದ್

    ಲಾಕ್​ಡೌನ್ ಜಾರಿಯಿಂದ ಸಾರ್ವಜನಿಕ ಸಾರಿಗೆ ಸೌಲಭ್ಯಕ್ಕೆ ನಿರ್ಬಂಧ ಮುಂದುವರಿದಿತ್ತು. ಪಬ್, ಬಾರ್, ರೆಸ್ಟೋರೆಂಟ್, ಮಾಲ್, ಶಾಪಿಂಗ್ ಕಾಂಪ್ಲೆಕ್ಸ್, ಸಿನೆಮಾ ಮಂದಿರ, ಕಲ್ಯಾಣ ಮಂಟಪ, ಧಾರ್ವಿುಕ ಪ್ರಾರ್ಥನಾ ಮಂದಿರಗಳನ್ನು ತೆರೆಯಲು ನಿರ್ಬಂಧವಿತ್ತು. ಹೋಟೆಲ್​ಗಳಲ್ಲಿ ಪಾರ್ಸೆಲ್ ವಿತರಣೆಗೆ ಮಾತ್ರ ಅವಕಾಶ ನೀಡಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts